ಅಧಿಕ ಮಾಸವನ್ನು ಮಲ ಮಾಸ ಪುರುಷೋತ್ತಮ ಮಾಸ ಎಂದೆಲ್ಲಾ ಕರೆಯುತ್ತಾರೆ. ಪ್ರತಿ ತಿಂಗಳಿನಲ್ಲಿ 28 ದಿನಗಳು ಇರುತ್ತವೆ. ಕೆಲವೊಮ್ಮೆ ತಿಥಿ ಲೋಪವೂ ಆಗುತ್ತದೆ. ವರ್ಷದಲ್ಲಿ 11 ದಿನಗಳು ಅಧಿಕವಾಗಿ ಬಂದಿರುತ್ತವೆ ಹೀಗಾಗಿ 33 ತಿಂಗಳಿಗೆ ಒಮ್ಮೆ ಅಧಿಕ ಮಾಸವು ಬರುತ್ತದೆ. ಯಾವದೇ ತಿಂಗಳಿನಲ್ಲಿ ಅಧಿಕ ಮಾಸ ಬಂದರೂ ಅದು ಪುರುಷೋತ್ತಮ ಮಾಸವೇ ಏಕೆಂದರೆ ಆ ಮಾಸದ ಅಧಿಪತಿ ಪುರುಷೋತ್ತಮನಾಗಿರುತ್ತಾನೆ. "ಅಧಿಕಸ್ಯ ಅಧಿಕ ಫಲಂ:" ಎಂದು ಮಾತಿದೆ. ಅಧಿಕ ಮಾಸದಲ್ಲಿ ನಾವು ಏನನ್ನು ಮಾಡುತತೇವೆಯೋ ಅದು ನಮಗೆ ಅಧಿಕವಾಗಿ ದೊರೆಯುತ್ತದೆ. ದಾನ ಧರ್ಮ ಪೂಜೆ ಪುನಸ್ಕಾರಗಳಾದರೂ ಸರಿ ಮಾಡಬಾರದ ಕೆಟ್ಟ ಕೆಲಸಗಳಾದರೂ ಸರಿ, ಆದ್ದರಿಂದ ಉತ್ತಮವಾದ ಮಾಸದಲ್ಲಿ ಉತ್ತಮವಾದ ಕೆಲಸವನ್ನು ಅಧಿಕವಾಗಿ ಮಾಡಿ ಉತ್ತಮ ಫಲವನ್ನು ಪಡೆಯ ಬೇಕು.
ಅಧಿಕ ಮಾಸದಲ್ಲಿ ಚಿಂತಿಸಬೇಕಾದ ಮೂವತ್ತು ಮೂರು ದೇವತೆಗಳು 8 ಅಷ್ಟಾವಸುಗಳು, 11 ಏಕಾದಶ ರುದ್ರರು, 12 ದ್ವಾದಶ ಆದಿತ್ಯರು ಮತ್ತು ಅವರಲ್ಲಿಯ ಭಗವಂತನ ರೂಪವನ್ನು ಚಿಂತಿಸಿ ದಾನ ಪೂಜೆ ಮೊದಲಾದವುಗಳನ್ನು ಮಾಡಬೇಕು
ಅಷ್ಟಾವಸುಗಳು ಮತ್ತು ಅವರಲ್ಲಿಯ ಭಗವದ್ ರೂಪ: ದ್ರೋಣ (ವಿಷ್ಣು), ಧ್ರುವ (ಜಿಷ್ಣು), ದೋಷ (ಮಹಾ ವಿಷ್ಣು), ಅರ್ಕ (ಹರಿ), ಅಗ್ನಿ (ಕೃಷ್ಣ) ದ್ಯು (ಅಧೋಕ್ಷಜ), ಪ್ರಾಣ (ಕೇಶವ), ವಿಭಾವಸು (ಮಾಧವ)
ಏಕಾದಶ ರುದ್ರರು ಮತ್ತು ಅವರಲ್ಲಿಯ ಭಗವದ್ ರೂಪ: ಭೀಮ (ರಾಮ), ರೈವತ (ಅಚ್ಯುತ), ಓಜ (ಪುರುಷೋತ್ತಮ) ಅಜೈಕಪಾತ್ (ಗೋವಿಂದ) ಮಹಾನ್ (ವಾಮನ), ಬಹುರೂಪ (ಶ್ರೀಶ) ಭವ (ಶ್ರೀಕಂಠ), ವಾಮದೇವ (ವಿಶ್ವ ಸಾಕ್ಷಿ), ಉಗ್ರ (ನಾರಾಯಣ), ವೃಷಾಕಪಿ (ಮಧುರಿಪು), ಅಹಿರ್ಬುದ್ದಿ (ಅನಿರುದ್ಧ)
ದ್ವಾದಶ ಆದಿತ್ಯರು ಮತ್ತು ಅವರ ಭಗವದ್ ರೂಪಗಳು: ವಿವಸ್ವಾನ್ (ತ್ರಿವಿಕ್ರಮ), ಅರ್ಯಮ (ವಾಸುದೇವ), ಪೂಷಾ (ಜಗದ್ಯೋನಿ), ತ್ವಷ್ಟೃ (ಅನಂತ), ಸವಿತೃ (ಶೇಷಶಾಯಿ), ಭಗ (ಸಂಕರ್ಷಣ), ಧಾತೃ (ಪ್ರದ್ಯುಮ್ನ), ಪರ್ಜನ್ಯ (ದೈತ್ಯಾರಿ), ವರುಣ (ವಿಶ್ವತೋಮುಖ), ಮಿತ್ರ (ಜನಾರ್ದನ), ಶಕ್ರ (ಧರಾವಾಸ), ಉರುಕ್ರಮ (ದಾಮೋದರ), ಪ್ರಜಾಪತಿ (ಅಘಾರ್ಧನ) ವಷಟ್ಕಾರ (ಶ್ರೀಪತಿ) ಈ ಎಲ್ಲ ದೇವತೆಗಳ ಪುರುಷೋತ್ತಮ ನಾಮಕ ಪರಮಾತ್ಮನ ಪ್ರೀತಿಗಾಗಿ ಅಧಿಕಮಾಸದಲ್ಲಿ ವಿಶೇಷವಾದ ದಾನ, ವ್ರತ, ಜಪ, ಹೋಮಾದಿಗಳನ್ನು ಮಾಡಿ ಅವರ ಪ್ರೀತಿ ಪಾತ್ರರಾಗಬೇಕು.
ಅಧಿಕಮಾಸದಲ್ಲಿ ವಿಶೇಷವಾಗಿ ಕುಂಕುಮಾರ್ಚನೆ, ಪುಷ್ಪಾರ್ಚನೆ, ತುಳಸಿ ಅರ್ಚನೆ ಅಭಿಷೇಕ ಮೊದಲಾದವುಗಳನ್ನು ವಿಶೇಷವಾಗಿ ಮಾಡುತ್ತಾರೆ. ಜೊತೆಗೆ ನಕ್ತ ಭೋಜನ ಅಂದರೆ ರಾತ್ರಿ ಭೋಜನ (ಒಪ್ಪತ್ತು), ಧಾರಣೆ ಪಾರಣೆ (ಒಂದು ದಿನ ಊಟ ಒಂದು ದಿನ ಉಪವಾಸ), ಅಯಾಚಿತ ವ್ರತ ಅಂದರೆ ಒಂದು ತಿಂಗಳು ಯಾಚಿಸದೇ ದೊರೆತಂತ ಪದಾರ್ಥಗಳಲ್ಲಿಯೇ ಇರುವಷ್ಟೇ ಊಟ ಮಾಡುವುದು . ಪುಸ್ತಕದಾನ ಅಂದರೆ ಆಧ್ಯಾತ್ಮಿಕವಾದ ಜ್ಞಾನ ವೃದ್ಧಿಸುವ ಶಾಸ್ತ್ರದ, ಪುರಾಣಗಳ, ಅಥವಾ ಭಗವಂತನ ಮಹಿಮೆಯನ್ನು ಸಾರುವ ಪುಸ್ತಕಗಳ ದಾನವನ್ನು ಮಾಡುತ್ತಾರೆ, ಮೌನವ್ರತವನ್ನು ಕೂಡ ಮಾಡುತ್ತಾರೆ. ಮೌನವ್ರತ ಎಂದರೆ ಸಂಪೂರ್ಣ ಬಾಯಿಯನ್ನು ತೆರೆಯದೇ ಇರುವುದು ಎಂದಲ್ಲ ಹಾಡಿದರೆ ಮಾತನಾಡಿದರೆ ಕೇವಲ ಭಗವಂತನ ಕುರಿತಾಗಿ ಬಾಯಿ ತೆಗೆಯಬೇಕು ಇಲ್ಲವೇ ಮಾತನ್ನು ಆಡದೇ ಇರುವುದು ಈ ಕಲಿಯುಗದಲ್ಲಿ ಇಂತಹ ವ್ರತ ದುರ್ಲಭ. 33ರ ಲೆಕ್ಕದ ರಂಗೋಲಿ ಹಾಕುವುದು, (ಶಂಖ,ಚಕ್ರ, ಗದಾ ಪದ್ಮ ಲಕ್ಷ್ಮ ನಾರಾಯಣರ ಜೊತೆಗೆ, ದ್ವಾದಶ ಆದಿತ್ಯರು, ಏಕಾದಶ ರುದ್ರರು, ಅಷ್ಟ ವಸುಗಳು, ಸಸ್ತಿ ಪ್ರಜಾಪತಿಗಳು ಮತ್ತು ವಷಟ್ ಕಾರದೇವತೆಗಳು ಇರುತ್ತಾರೆ. ಅವರ ರಂಗೋಲಿಯನ್ನು ಅಥವಾ 33 ಪದ್ಮಗಳನ್ನು ಹಾಕುತ್ತಾರೆ.
ಇದೆಲ್ಲದರ ಜೊತೆಗೆ ಅಧಿಕ ಮಾಸದಲ್ಲಿ ಬಾಗಿಣ ಮತ್ತು 33 ಸಿಹಿ ತಿನಿಸು ಹಣ್ಣು ಹಂಪಲು, ಪುಸ್ತಕ ಮೊದಲಾದವುಗಳನ್ನು 33 ಸಂಖ್ಯೆಯಲ್ಲಿ ದಾನ ಕೊಡುವ ಪದ್ಧತಿ ಇರುತ್ತದೆ. ಈ ದಾನಗಳನ್ನು ಅಣ್ಣ ತಮ್ಮಂದಿರಿಗೆ, ಅಳಿಯನಿಗೆ ಆಚಾರ್ಯರಿಗೆ ಕೊಡುವ ಪದ್ಧತಿ ಇದೆ. ಆದರೆ ಕೇವಲ ಸಂಬಂಧಿಕರಿಗೆ ಕೊಡದೇ, ಶುದ್ಧವಾದ ಬ್ರಾಹ್ಮಣ್ಯ ದ ಆಚರಣೆ ಮಾಡುವವರಿಗೆ, ಅವಶ್ಯಕತೆ ಇರುವವರಿಗೆ ಮನೆಯಲ್ಲಿ ಮಕ್ಕಳು ಮೃದ್ಧರೂ ಎಲ್ಲರೂ ಸೇರಿ ಇರುವ ತುಂಬು ಸಂಸಾರದ ಹಿರಿಯರಿಗೆ ದಾನ ಕೊಡುವುದು ಶ್ರೇಷ್ಠವಾಗಿದೆ.
ಅಪೂಪ ಅಂದರೆ ಅನಾರಸ/ಅತ್ರಾಸ ಅಥವಾ ಕಜ್ಜಾಯ ಬಹಳ ಶ್ರೇಷ್ಠ ಅದನ್ನು ಬಿಟ್ಟರೆ ಬೇಸನ್ ಲಾಡು, ಬೇರೆ ಸಿಹಿ ಪದಾರ್ಥಗಳನ್ನು ಮಾಡಿಕೊಡುತ್ತಾರೆ. ಬೆಲ್ಲವೂ ಕೂಡ ವಿಶೇಷ ಅದನ್ನು ಕೂಡ ದಾನದ ರೂಪದಲ್ಲಿ ಕೊಡಬಹುದು. ನಾವು ಪದಾರ್ಥಗಳನ್ನು ಮಾಡುವಾಗ ಎಷ್ಟು ರಂಧ್ರಗಳು ಆಗುತ್ತಿರುತ್ತವೆಯೋ ಅಷ್ಟು ಪುಣ್ಯ ಎಂದು ಹೇಳುತ್ತಾರೆ. ಅಂತಹದ್ದೇ ಪದಾರ್ಥ ಕೊಡುವ ವಾಡಿಕೆಯೂ ಇದೆ.
ಅಧಿಕ ಮಾಸದಲ್ಲಿ ಪೂಜೆಗಳನ್ನು, ವ್ರತನೇಮ, ಹೋಮಾದಿ, ದಾನ ಧರ್ಮಗಳನ್ನು ಮಾಡಬಹದು ಆದರೆ ಷೋಡಶ ಸಂಸ್ಕಾರಗಳನ್ನು ಮಾಡಲು ಅಂದರೆ ಮದುವೆ ಮುಂಜೆ ಗೃಹಪ್ರವೇಶ ಮೊದಲಾದ ಶುಭ ಕಾರ್ಯಗಳನ್ನು ಮಾಡುವುದಿಲ್ಲ.
ಆದರೆ ನಿತ್ಯದ ಕರ್ಮಗಳಾದ ಶ್ರಾದ್ಧಗಳನ್ನು, ದಿನ ಕರ್ಮಗಳನ್ನು ನಿಲ್ಲಿಸ ಬಾರದು. ಅಧಿಕಮಾಸದಲ್ಲಿ ತೀರ್ಥ ಯಾತ್ರೆಗೂ ಹೋಗಬಾರದು. ಅಧಿಕ ಮಾಸ ಆರಂಭವಾಗುವ ಮೊದಲು ಕ್ಷೇತ್ರದಲ್ಲಿ ಹೋಗಿ ನೆಲೆಸಿ ತಿಂಗಳು ಮುಗಿದ ನಂತರ ಬರಬಹುದು.
ಅಧಿಕಮಾಸದಲ್ಲಿ ನಿಷಿದ್ಧ ಕಾರ್ಯಗಳು: ಕೆರೆ ಕಟ್ಟಿಸುವುದು, ಉಪನಯನ, ಸನ್ಯಾಸ ಸ್ವೀಕಾರ, ಜ್ಯೋತಿಷ್ಟೋಮಾದಿ ಕಾಮ್ಯಕರ್ಮಗಳು, ಮಗುವನ್ನು ಮೊದಲ ಬಾರಿಗೆ ಮನೆಯಿಂದ ಹೊರಗೆ ಕರೆದೊಯ್ಯುವುದು, ಪಟ್ಟಾಭಿಷೇಕ, ಚೌಲ, ಅನ್ನ ಪ್ರಾಶನ, ಗೃಹಾರಂಭ, ಗೃಹಪ್ರವೇಶ, ವಿವಾಹ ಇವುಗಳನ್ನು ಮಾಡುವುದಿಲ್ಲ.
ಮಾಡಬಹುದಾದ ಸಂಸ್ಕಾರಗಳು,
ಗರ್ಭಾದಾನ, ಸೀಮಂತ, ಜಾತಕರ್ಮ, ನಾಮಕರಣ, ನಿಷ್ಕ್ರಮಣ.
ಅಪೂಪದಾನ ಪ್ರತಿನಿತ್ಯ ಮಾಡತಕ್ಕದ್ದು. ಅಥವಾ ಈ ಕೆಲವು ಶ್ರೇಷ್ಠ ದಿನಗಳಲ್ಲಿ ಒಂದು ದಿನ ಮಾಡಿದರೆ ಶ್ರೇಷ್ಠ ಅಥವಾ ಯಾವುದಾದರೂ ಒಂದು ದಿನ ಮಾಡತಕ್ಕದ್ದು.
ಶ್ರೇಷ್ಠ ದಿನಗಳು– ಶುಕ್ಲ ಮತ್ತು ಕೃಷ್ಣ ದ್ವಾದಶಿ, ಪೌರ್ಣಿಮ, ಅಮಾವಾಸ್ಯೆ, ನವಮಿ, ಚತುರ್ದಶಿ, ವೈಧೃತಿ, ವ್ಯತೀಪಾತ ಯೋಗ, ಪುಷ್ಯಾರ್ಕ ಯೋಗ ಇರುವ ದಿನ ಕೊಡುವ ದಾನ ಶ್ರೇಷ್ಠ. ಮುತ್ತೈದೆಯರು ಹುಣ್ಣಿಮೆ ಬರುವ ಮೊದಲು ದಾನ ಕೊಡುತ್ತಾರೆ. ಪುರುಷರು, ವಿಧವೆಯರು ಕೃಷ್ಣ ಪಕ್ಷದಲ್ಲಿ ದಾನ ನೀಡುತ್ತಾರೆ.
ಅಧಿಕ ಮಾಸದಲ್ಲಿ ಊಟ ಹಾಕುವುದು, ದೀಪ ನೀರು ಯಾವುದೇ ಪದಾರ್ಥಗಳನ್ನು, ವಸ್ತ್ರದಾನ ಬಹಳ ಮಹತ್ವವನ್ನು ಪಡೆದಿದೆ. ಎಲ್ಲ ದಾನಗಳಿಗೂ ಒಂದೊಂದು ವಿಶೇಷವಾದ ಅರ್ಥ ಹಾಗೂ ಫಲವಿದೆ. ಅಧಿಕ ಮಾಸದಲ್ಲಿ ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಊಟಕ್ಕೆ ಹಾಕಿದರೆ ಅವರಲ್ಲಿಯ ಪರಮಾತ್ಮ ತೃಪ್ತನಾಗಿ ನಮಗೆ ಊಟ ಉಪಹಾರದ ಕೊರತೆಯಾಗದಂತೆ ಕಾಯುತ್ತಾನೆ. ವಸ್ತ್ರ ದಾನ ಮಾಡಿದರೆ ಅಧಿಕ ಮಾಸ ಬಂದಂತಹ ಕಾಲದಲ್ಲಿ ಉಪಯುಕ್ತವಾಗುವ ವಸ್ತ್ರಗಳನ್ನು ದಾನ ಮಾಡಿದರೆ ನಮಗೆ ಎಂದಿಗೂ ಬಟ್ಟೆಯ ಕೊರತೆ ಕಾಣುವುದಿಲ್ಲ, ನಮ್ಮ ಮಾರ್ಯಾದೆಯನ್ನು ಕಾಪಾಡಿಕೊಂಡು ಇರುತ್ತೇವೆ. ಇನ್ನು ದೀಪ ದನ ಮಾಡಿದರೆ ನಾವು ನಡೆಯುವ ಮಾರ್ಗದಲ್ಲಿ ಕತ್ತಲು ಆವರಿಸದೇ ಸರಿಯಾಗ ಮಾರ್ಗದಲ್ಲಿ ನಡೆಯುವ ಆಶೀರ್ವಾದವನ್ನು ದೇವರು ಮಾಡುತ್ತಾನೆ, ಇನ್ನು ಅರಿಶಿನ ಕುಂಕುಮದ ದಾನ ಮಡಿದರೆ ಸೌಭಾಗ್ಯ ವೃದ್ಧಿಸುತ್ತದೆ. ಅನುಕೂಲತೆಯ ಜೊತೆಗೆ ಮನಸ್ಸು ಇರುವವರು 33 ದಿನ ಆ ಮಾಸದ ದಿನಸಿಯನ್ನು ಕೂಡ ದಾನ ಮಾಡುತ್ತಾರೆ. ಎಣ್ಣೆ, ತುಪ್ಪ, ಬೆಲ್ಲ, ಸಕ್ಕರೆ, ಮೊದಲಾದ ಖಾದ್ಯ ಪದಾರ್ಥಗಳ ದಾನವನ್ನು ಬೇರೆ ಬೇರೆ ದಾನ ಮಾಡುವ ಅಭ್ಯಾಸವೂ ಇದೆ.
ಅಧಿಕ ಮಾಸದಲ್ಲಿ ಕೊಡಬಹುದಾದ ಇನ್ನಷ್ಟು ಪದಾರ್ಥಗಳು ಇವುಗಳನ್ನು 33 ಸಂಖ್ಯೆಯಲ್ಲಿ ಒಬ್ಬರಿಗೆ ಅಥವಾ ಒಬ್ಬರಿಗೆ ಒಂದರಂತೆ ತಮ್ಮ ಅನುಕೂಲತೆಗೆ ತಕ್ಕಂತೆ ನೀಡುತ್ತಾರೆ. ಅರಿಶಿನ ಕುಂಕುಮದ ಜೊತೆಗೆ ಲೋಹದ ಬಟ್ಟಲು (ಬೆಳ್ಳಿ, ಹಿತ್ತಾಳೆ, ಪಂಚಲೋಹ, ತಾಮ್ರ), ತುಳಸಿ ಪೂಜೆಯ ಸಾಮಗ್ರಿ, ಸಂಧ್ಯಾವಂದನೆಯ ಸಾಮಗ್ರಿ, ಸಾಲಿಗ್ರಾಮ ಅಥವಾ ದೇವರ ಪ್ರತಿಮೆಯ ಜೊತೆಗೆ ಪೂಜಾ ಸಾಮಗ್ರಿ, ತಟ್ಟೆಯೊಂದಿಗೆ ರವೆ ಉಂಡೆ, ಪಾಯಸದೊಂದಿಗೆ ಅದನ್ನು ಹಾಕಿ ಕೊಟ್ಟ ಪಾತ್ರೆ, ಅರಳು ಉಂಡೆ, ಗಂಡಸರ ಪಂಚಮುದ್ರೆ, ಹೆಣ್ಣು ಮಕ್ಕಳ ಗದಾ ನಾರಾಯಣ, ತೊಟ್ಟಿಲಿನೊಂದಿಗೆ ಕೃಷ್ಣ, ಸಕ್ಕರೆಯೊಂದಿಗೆ ಕೃಷ್ಣ, ಬೆಣ್ಣೆಯೊಂದಿಗೆ ಕೃಷ್ಣ, ತುಳಸಿ ಗಿಡದೊಂದಿಗೆ ಕೃಷ್ಣ, ಜನಿವಾರ, ಗೋಪಿ ಚಂದನ, ವಿಷ್ಣು ಪಾದ, ಸುದರ್ಶನ, ಜಾಗಟೆ, ತಾಳ, ಸಾಣೆಕಲ್ಲು ಗಂಧದ ಕೊರಡು, ದಂಪತಿಗಳಿಗೆ ತಾಂಬೂಲ, ಸೀರೆ ಪಂಚೆ, ಶಯ್ಯಾ ದಾನ, ಜೇನುತುಪ್ಪ+ತುಪ್ಪ, ಮಂದಾಸನ, ಗೋದಾನ, ಸುವರ್ಣದಾನ, ಗೃಹದಾನ, ಉದುಕುಂಭದಾನ, ಬೆಳ್ಳಿದಾನ (ಪೂಜಾ ಸಾಮಗ್ರಿಗಳು ಅಥವಾ ದೇವರ ಪ್ರತಿಮೆ), ಚಕ್ರಾಣಿಕೆ (ಚಕ್ರಾಂಕಿತ ದಾನ), ಆಸನ, ಪಾನಕ/ಮಜ್ಜಿಗೆ, ಮೊಸರನ್ನ (ಯಾವುದೇ ಆಹಾರ), ಕೊಡೆ, ಚಾಪೆ, ತುಳಸಿ ಮಣಿ, ಗೆಜ್ಜೆ ವಸ್ತ್ರ, ಹಾಲು-ಮೊಸರು), ನಾಣ್ಯ, ನೋಟು, ಭೂ ದಾನ ಕನ್ನಡಿ, ಕೈಕೋಲು, ವಾದ್ಯಗಳು, ಪುಸ್ತಕ+ ಪೆನ್ನು, ಪೆನ್ಸಿಲ್, ಇದೇ ರೀತಿ ದಿನ ನಿತ್ಯದ ಬಳಕೆಯ ಯೋಗ್ಯ ಪದಾರ್ಥಗಳನ್ನು ದಾನದಲ್ಲಿ ಕೊಡಬಹುದಾಗಿದೆ.
ಈ ಬಾರಿ ಜ್ಯೇಷ್ಠ ಅಧಿಕ, ಜ್ಯೇಷ್ಠ ಮಾಸದಲ್ಲಿ ದಶಹರಾ ಬರುವುದರಿಂದ ಮಾವಿನ ಹಣ್ಣು ಮುಗಿಯುವ ಕಾಲವಾದ್ದರಿಂದ ಮಾವಿನ ಹಣ್ಣು, ಬರ್ಫಿ, ಬೇಸನ್ ಲಾಡು, ಫೇಡಾ, ಬೆಲ್ಲ, ಅಥವಾ ಅನಾರಸ/ ಅಪೂಪ ಮಾಡಿ ದಾನವನ್ನು ನೀಡಿ ಯಾರಿಗೆ ದಾನವನ್ನು ನೀಡುತ್ತಿರುತ್ತದೆಯೋ ಅವರ ಪತ್ನಿಗೆ ಮರದ ಬಾಗಿಣ ನೀಡಿದರೆ ಶ್ರೇಷ್ಠ.
ದಾನ ಮಾಡಲು ಅನುಕೂಲ ಇಲ್ಲದೇ ಇರುವವರು ದೈಹಿಕ ಶ್ರಮದ ಪ್ರದಕ್ಷಿಣೆ ನಮಸ್ಕಾರ, ಮಾನಸಿಕವಾಗಿ ಸ್ತೋತ್ರ ಪಠಣ, ಯಾವುದೇ ಧಾರ್ಮಿಕ ಪುರಾಣಗಳ ಪಠಣ ಪಾರಾಯಣಗಳಿಂದ ಸೇವೆ ಮಾಡಬೇಕು.
ಅಧಿಕಮಾಸದ ಕಥೆ:
ಋಷಿ ಮುನಿಗಳು ಸೂತ ಪುರಾಣಿಕರಿಗೆ ಅಧಿಕಮಾಸದ ಕಥೆಯನ್ನು ನಮಗೆ ಶ್ರವಣ ಮಾಡಿಸಿರಿ ಮತ್ತು ಈ ಮಾಸಕ್ಕೆ *ಪುರುಷೋತ್ತಮ ಮಾಸ* ಎಂದು ಏಕೆ ಕರೆಯುತ್ತಾರೆ, ಈ ಮಾಸದಲ್ಲಿ ಮಾಡುವ ದಾನಧರ್ಮಗಳಿಗೆ ಮಹತ್ವ ಏಕೆ, ಎಲ್ಲವನ್ನೂ ಸವಿಸ್ತಾರವಾಗಿ ಹೇಳಿರಿ ಎಂದೂ ಪ್ರಾರ್ಥಿಸಿದಾಗ, ಸೂತರು ಹೇಳುತ್ತಾರೆ. ಹಿಂದೆ ಶ್ರೀ ಕೃಷ್ಣನು ಧರ್ಮರಾಜನಿಗೆ ಹೇಳಿದ ಕಥೆಯನ್ನೇ ಹೇಳುತ್ತೀನಿ ಕೇಳಿರಿ ಎನ್ನುವರು.
"ಹಿಂದೆ ಒಮ್ಮೆ ಅಧಿಕಮಾಸವು ತಾನು ಎಲ್ಲ ಮಾಸಗಳಿಗಿಂತ ಕೀಳು ಎಂದು ಭಾವಿಸಿ ವೈಕುಂಠಲೋಕಕ್ಕೆ ಹೋಗಿ ಪಿತಾಂಬರಧಾರಿಯೂ, ಶಂಖ ಚಕ್ರ ಗದಾಪದ್ಮಗಳಿಂದ ಅಲಂಕೃತನಾದ ವೈಕುಂಠಪತಿಗೆ ನಮಸ್ಕರಿಸಿ ತನ್ನ ವ್ಯಥೆ ಹೇಳಿಕೊಂಡಿತು. “ಹೇ ದೇವ ದೇವೋತ್ತಮಾ ವರ್ಷದ ಹನ್ನೆರಡು ತಿಂಗಳುಗಳಲ್ಲಿ ಏನಾದರೊಂದು ಹಬ್ಬ, ವೃತ, ನಿಯಮಗಳು ಇದ್ದು ಪ್ರತಿಯೊಂದಕ್ಕೂ ವಿಶೇಷತೆ ಇದೆ. ನನ್ನ ಮಾಸದಲ್ಲಿ ಒಂದು ಸಂಕ್ರಮಣವು ಇಲ್ಲದೇ ಮಲ ಮಾಸ ಎಂದೂ ಕರೆಸಿಕೊಳ್ಳುತ್ತಿದ್ದೇನೆ. ದೇವಾ ನನ್ನ ಮೇಲೆ ಕರುಣೆ ತೋರು” ಎಂದು ಪ್ರಾರ್ಥನೆ ಮಾಡಿತು. ಆಗ ವೈಕುಂಠಪತಿಯು ಅಧಿಕ ಮಾಸಕ್ಕೆ ಸಮಾಧಾನ ಪಡಿಸುತ್ತ, ಹೇ ಅಧಿಕ ಮಾಸವೇ ಇದೂ ವೈಕುಂಠ ಲೋಕ. ಇಲ್ಲಿ ಎಲ್ಲರೂ ಸಂತೋಷದಿಂದ ಇರುವರು. ದುಃಖದ ನೆರಳೂ ಇಲ್ಲಿ ಇಲ್ಲ. ಶ್ರೀಹರಿಯು ಹೇಳಿದನು– “ಎಲೈ ಅಧಿಕ ಮಾಸವೇ ಇನ್ನೂ ಮೇಲಿಂದ ನೀನು ದುಃಖಿಸುವ ಕಾರಣ ಇಲ್ಲ. ನಿನ್ನ ಮಾಸದಲ್ಲಿ ಸ್ವತಃ ನಾನೇ ಪುರುಷೋತ್ತಮ ರೂಪದಿಂದ ಇರುವೆ. ಅದಲ್ಲದೇ ನಿನ್ನ ಮಾಸದಲ್ಲಿ ಅಷ್ಟವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರು ಅದಲ್ಲದೇ ಪ್ರಜಾಪತಿ ಮತ್ತು ವಷಟ್ಕಾರರು ನಿನ್ನ ಮಾಸಕ್ಕೆ ಅಭಿಮಾನಿಗಳಾಗಿ ಇರುತ್ತಾರೆ.
ನಿನ್ನ ಮಾಸದಲ್ಲಿ ಯಾವ ಮಾನವ ನಮ್ಮೆಲ್ಲರ ಪ್ರೀತಿಗಾಗಿದಾನ ಧರ್ಮ ನೇಮ ಆಚರಣೆ ಮಾಡುವನೋ ಅವನಿಗೇ ಉಳಿದ ದಿನಗಳಿಗಿಂತ ಅಧಿಕ ಪುಣ್ಯ ದೊರಕಲಿ. ಎಂದೂ ವೈಕುಂಠಪತಿಯು ಹೀಗೆ ಅಧಿಕಮಾಸಕ್ಕೆ ಅನುಗ್ರಹ ಮಾಡಿ ಆ ಮಾಸಕ್ಕೆ ಪುರುಷೋತ್ತಮ ಮಾಸ ಎಂದೂ ಹೆಸರು ಬರಲೆಂದು” ಆಶೀರ್ವದಿಸಿ ಕಳಿಸಿದನು.
ಒಮ್ಮೆ ಜ್ಞಾನಿಯೂ ಜಿತೇಂದ್ರಿಯನೂ ಆದ ಕೌಶಿಕನೆಂಬ ಬ್ರಾಹ್ಮಣನೊಬ್ಬನಿದ್ದನು. ಅವನಿಗೆ ಮೈತ್ರೇಯನೆಂಬ ಕಾಮಾಂಧನಾದ ಸುತನಿದ್ದನು. ಒಮ್ಮೆ ಈ ಮೈತ್ರೇಯನು ಒಬ್ಬ ಬ್ರಾಹ್ಮಣನ ಕೊಂದು ಅವನ ಬಳಿಯಿದ್ದದ್ದೆಲ್ಲವನ್ನೂ ಅಪಹರಿಸಿದನು. ಅವನಿಗೆ ಮರಣಾನಂತರ ಬ್ರಹ್ಮಹತ್ಯಾ ದೋಷದಿಂದ ಯಮಲೋಕದಲ್ಲಿ ಘೋರ ನರಕವನ್ನು ಅನುಭವಿಸಿದನು. ಇದನ್ನು ತಿಳಿದ ಅವನ ತಂದೆ ಎಲ್ಲಾ ಜ್ಞಾನಿಗಳನ್ನು ಕೇಳಿ ತಿಳಿದು ಕೊನೆಗೆ ಅಧಿಕಮಾಸ ವ್ರತಾಚರಣೆ ಮಾಡಿ ಸಂಕಲ್ಪಪುರಸ್ಸರವಾಗಿ ಮೂವತ್ತಮೂರು ಅಪೂಪದಾನ ಯಥಾಶಕ್ತಿ ಮಾಡಿದನು, ಈ ಪುಣ್ಯ ಫಲದಿಂದ ಅವನ ಮಗನಿಗೆ ನರಕ ಶಿಕ್ಷೆಯು ತಪ್ಪಿತು ಹೀಗಾಗಿ ಅಧಿಕ ಮಾಸದಲ್ಲಿ ಮಾಡುವ ವ್ರತ, ನೇಮ, ದಾನ ಧರ್ಮಗಳಿಂದ
ನಮ್ಮ ಪಾಪ ಪರಿಹಾರ ಮಾಡಿ ಒಳ್ಳೆಯ ಲೋಕ ಪ್ರಾಪ್ತವಾಗುತ್ತದೆ.
- ಮಾಧುರಿ ದೇಶಪಾಂಡೆ, ಬೆಂಗಳೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


