ಕಥೆ: ನಿಯತ್ತು

Upayuktha
0


ವಿಷಮ ಸಂಖ್ಯೆ ಹದಿಮೂರು ಅವನ ಜನುಮ ತಾರೀಕು.

ಆ ದಿನ ರಾತ್ರೆ ಹನ್ನೆರಡು ಕಳೆದಿತ್ತು ಡ್ಯೂಟಿ ಮುಗಿಸಿ ಮನು ಮನೆಗೆ ಹೊರಡುವಾಗ. ಬೈಕ್ ಸ್ಟಾರ್ಟ್ ಮಾಡಿ ಹೊರಟವನಿಗೆ ಸಂಜೆ ಮಿನಿ ಕಾಲ್ ಮಾಡಿದ್ದು ಯಾಕೆಂದು ಕೇಳಲೂ ಸಮಯವಿಲ್ಲದೆ ಆಮೇಲೆ ಕಾಲ್ ಮಾಡುತ್ತೇನೆಂದು ಇಟ್ಟವನಿಗ ರಾತ್ರಿ ಬುಲೆಟ್ ಬೈಕ್ ಸ್ಟಾರ್ಟ್ ಮಾಡಿದಾಗ ನೆನಪಾಯಿತು. 

.

ಮನು ಬೈಕ್ ರೈಡ್ ಮಾಡುತ್ತಾ ಮಾತನಾಡುವ ಎಂದು ಬ್ಲೂಟೂತ್ ಕನೆಕ್ಟ್ ಮಾಡಿ ಕಾಲ್ ಬಟನ್ ಅದುಮಿದ. ಎರಡು ಮೂರು ಸಲ ಕಾಲ್ ಮಾಡಿದರೂ ಮಿನಿ ಕಾಲ್ ಎತ್ತಲಿಲ್ಲ.


ಡ್ಯೂಟಿಯಲ್ಲಿದ್ದವನಿಗೆ ಸಂಜೆ ಒಂದು ಚಹಾ ಬಿಟ್ಟರೆ ಮತ್ತೇನು ತಿನ್ನಲು ಆಗಲಿಲ್ಲ. ಹಸಿವಿನಲ್ಲಿ ಹೊಟ್ಟೆ ಚುರುಗುಡುತ್ತಿತ್ತು. 

ಮನೆಗೆ ಹೋಗುವ ದಾರಿಯಲ್ಲಿ ಶಂಕ್ರಣ್ಣನ ಗೂಡಂಗಡಿಯಿಂದ ಎಗ್ ರೈಸ್ ತಿಂದರಾಯಿತು ಎಂದು ಬೈಕ್ ಅನ್ನು ವಿಷಮ ಸಂಖ್ಯೆ ಹನ್ನೊಂದನೇ ಕ್ರಾಸ್ ನಲ್ಲಿ ತಿರುಗಿಸಿದ.


ಬೆಂಗಳೂರಿನ ಜನವರಿ ತಿಂಗಳಿನ ಹನ್ನೆರಡು ಗಂಟೆಯ ಚುಮುಚುಮು ಚಳಿಗೆ ಶಂಕ್ರಣ್ಣನ ಗೂಡಂಗಡಿಯ ಬಿಸಿ ಬಿಸಿ ಎಗ್ ರೈಸ್ ಗೆ ಗಿರಾಕಿಗಳ ಸಾಲು. 

ಬೈಕ್ ನಿಲ್ಲಿಸಿದವನಿಗೆ ಮಾಣಿ ಬಂದು ಮಾಮೂಲಿ ಎಗ್ ರೈಸ್ ಕೊಡ್ಲಾ ಸರ್ ಎಂದದಕ್ಕೆ ಮನು ಹಾಂ ಎಂದ. 


ಮನುವಿನ ಮನಸಲ್ಲಿ ಮಿನಿಯದ್ದೇ ಧ್ಯಾನ. ಯಾಕೆ ಫೋನ್ ಮಾಡಿದಳು, ಏನಾಯಿತು, ಕಾಲ್ ಮಾಡಿದರೆ ರಿಸೀವ್ ಮಾಡುತ್ತಿಲ್ಲ, ಎಲ್ಲಾ ರೀತಿಯ ಭಾವನೆಗಳ ಸಾಲು ತೇಲಿ ಬರುತಿತ್ತು.


ಮನು ಶಂಕ್ರಣ್ಣನ ಗೂಡಂಗಡಿಯ ಎಗ್ ರೈಸ್ ತಿನ್ನುವಾಗಲೂ ಒಂದೆರಡು ಬಾರಿ ಕಾಲ್ ಮಾಡಿದ ಮಿನಿ ಗೆ. ಎತ್ತಲಿಲ್ಲ. ದಿಗಿಲುಗೊಂಡ ಮನು ಬೇಗಬೇಗನೇ ತಿಂದು ಮುಗಿಸಿ ಮಿನಿ ಯ ಮನೆಗೆ ಹೊರಟ. ಬೈಕ್ ಅನ್ನು ಒಂದೇ ಸಮನೆ ಓಡಿಸಿ ಅವಳ ಮನೆಗೆ ತಲುಪಿದವನಿಗೆ ಬಾಗಿಲಲ್ಲಿ ಬೀಗ ಕಂಡಿತು.


‘ಛೇ ಈ ಹುಡುಗಿ ಎಲ್ಲಿ ಹೋದಳು ಒಂದು ಕಾಲ್ ರಿಸೀವ್ ಸಹ ಮಾಡುತ್ತಿಲ್ಲ’ ಎಂದು ದುಗುಡಗೊಂಡ ಮನು, ತಿರುಗಿ ಅವನ ಮನೆಗೆ ತಲುಪಿದ.

ಬಾಗಿಲು ತೆರೆದು ಒಳಗೆ ಹೋದವ ಮುಖ ತೊಳೆದು ಇನ್ನೊಮ್ಮೆ ಕಾಲ್ ಮಾಡುವ ಎಂದು ಡಯಲ್ ಮಾಡಿದ. 

.

ಧೊಪ್ಪನೆ ಹಿಂದಿಂದ ಒಂದು ಜೀವ ಅವನ ಮೇಲೆ ಎರಗಿತು. ಆ ಜೀವದ ಹೃದಯ ಡವ ಡವ ಅವನ ಬೆನ್ನಿಗೆ ಹೊಡೆಯುತ್ತಿತು. ಅದು ಕಿವಿ ಹತ್ತಿರ ಬಂದು “ನಿಮ್ಮ ಕರ್ತವ್ಯ ನಿಯತ್ತು ನನಗೆ ಚೆನ್ನಾಗಿ ಗೊತ್ತು, ಇನ್ನಾದರೂ ಪೊಲೀಸ್ ಯುನಿಫಾರ್ಮ್ ಬದಲಾಯಿಸಿ ನನ್ನ ತೆಕ್ಕೆಗೆ ಬರಬಾರದೆ, ಗಂಟೆ ಹನ್ನೆರಡು ಕಳೆಯಿತು, ಈಗ ಹದಿಮೂರು ತಾರಿಕು, ಹುಟ್ಟು ಹಬ್ಬದ ಶುಭಾಶಯ ನನ್ನ ಚಿನ್ನ” ಎನ್ನಲು ಮನು, ಹಿಂದಿದ್ದ ಮಿನಿ ಯನ್ನು ಸರಕ್ಕನೆ ಮುಂದೆ ತಂದು ಮುತ್ತಿಟ್ಟ.!


- ಸಚಿನ್ ಕುಳಮರ್ವ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top