ಬಳ್ಳಾರಿ: ಹಿಂದೂ ಧರ್ಮ ಪುನರುಜ್ಜೀವನಗೊಳಿಸಿದ ಆಧ್ಯಾತ್ಮ ಆದಿ
ಶಂಕರಾಚಾರ್ಯರು. ಸಮಾಜವನ್ನು ಸುಸ್ಥಿತಿಗೆ ಕೊಂಡೊಯ್ಯುವಲ್ಲಿ ಆದಿ ಶಂಕರಾಚಾರ್ಯರ ಪಾತ್ರ
ಅತ್ಯಂತ ಪ್ರಮುಖವಾಗಿದೆ. ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸುವ ಮೂಲಕ ವೇದಾಂತದ ಪುನರುಜ್ಜೀವನ
ಮತ್ತು ಹಿಂದೂ ಧರ್ಮದ ಏಕತೆಯನ್ನು ಬಲಪಡಿಸಿದವರು ಶಂಕರಾಚಾರ್ಯರು ಎಂದು ಡಾ.ಬಾಬು
ಜಗಜೀವನ್ರಾಂ ಚರ್ಮ ಕೈಗಾರಿಕಾ
ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ
ಮುಂಡರಗಿ ನಾಗರಾಜ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ
ಇವರ ಸಂಯುಕ್ತಾಶ್ರಯದಲ್ಲಿ ನಗರದ ಸಂಗನಕಲ್ಲು ರಸ್ತೆಯ
ಭಾರತಿ ತೀರ್ಥ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಆದ್ಯ ಗುರು ಶ್ರೀ
ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ
ಮಾತನಾಡಿ, ಮಾನವನಲ್ಲಿ ದೇವರನ್ನು ಕಾಣುವುದೇ ಕಷ್ಟವಿರುವ ಕಾಲದಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ಆತ್ಮದಲ್ಲೂ ಪರಮಾತ್ಮನಿದ್ದಾನೆ ಎಂದು ಸಾರಿದ ಆದಿ
ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಜಗತ್ತಿಗೆ ಶ್ರೇಷ್ಠ ಕೊಡುಗೆಯಾಗಿದೆ. ಮನುಷ್ಯ ಬದುಕಿರುವಾಗಲೇ ಸತ್ಸಂಗ ಮತ್ತು ನಿಸ್ಸಂಗದ ಮೂಲಕ ಮೋಹವನ್ನು ತೊರೆದು
ಜೀವನ ಮುಕ್ತಿಯನ್ನು ಪಡೆಯಬಹುದು ಎಂದು ಎಂಟನೇ ಶತಮಾನದಲ್ಲೇ
ಸಾರಿದ ಮಹಾನ್ ವ್ಯಕ್ತಿ ಶಂಕರಾಚಾರ್ಯರು. ಕರ್ನಾಟಕದ ಶೃಂಗೇರಿಯಲ್ಲಿ ಶಾರದಾ ಪೀಠವನ್ನು ಸ್ಥಾಪಿಸುವ ಮೂಲಕ ಅಧ್ಯಾತ್ಮದ ತಳಹದಿಯನ್ನು
ಬಲಪಡಿಸಿದರು ಎಂದು ಹೇಳಿದರು.
ಬಳ್ಳಾರಿ
ರಾಮಕೃಷ್ಣ ಆಶ್ರಮದ ಪೂಜ್ಯ ಶ್ರೀ ಸ್ವಾಮಿ ಮಂಗಳನಾಥಾನಂದಜಿ ಮಹಾರಾಜ್ ಮಾತನಾಡಿ,
ಕ್ರಿಸ್ತ ಶಕ 788 ರ ಸುಮಾರಿಗೆ ಕೇರಳದ
ಕಾಲಡಿಯಲ್ಲಿ ಶಿವಗುರು ಮತ್ತು ಆರ್ಯಾಂಬ ದಂಪತಿಗಳ ಪುತ್ರರಾಗಿ ಜನಿಸಿದ ಶಂಕರಾಚಾರ್ಯರು, ಬಾಲ್ಯದಲ್ಲೇ ಮೇಧಾವಿಗಳಾಗಿದ್ದರು. ಎಂಟನೇ ವಯಸ್ಸಿಗೆ ವೇದಗಳನ್ನು ಅಭ್ಯಾಸ ಮಾಡಿ ತಾಯಿಯ ಅನುಮತಿಯೊಂದಿಗೆ
ಸನ್ಯಾಸ ಸ್ವೀಕರಿಸಿದರು. ಭಜಗೋವಿಂದಂ, ವಿವೇಕ ಚೂಡಾಮಣಿ ಸೇರಿದಂತೆ ಉಪನಿಷತ್ತುಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಯ ಮೇಲೆ ಭಾಷ್ಯಗಳನ್ನು ಬರೆದಿದ್ದಾರೆ
ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮುದಾಯದವರನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು. ಬಳ್ಳಾರಿಯ ಕೆ.ಶಾಂತಶಾಸ್ತ್ರಿ ತಂಡ
ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಈ ವೇಳೆ ಬಳ್ಳಾರಿಯ
ಸಭಾಪತಿ ಬೀದಿಯ ಶ್ರೀ ಶೃಂಗೇರಿ ಶಂಕರಮಠದ
ಮಠಾಧಿಕಾರಿ ಕೆ.ರವಿಶಾಸ್ತ್ರಿ, ಮಹಾನಗರ
ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ
ಸಮಾಜದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


