ಯಕ್ಷಗಾನ ದಶಾವತಾರಿ ಸೂರಿ ಕುಮೇರು ಗೋವಿಂದ ಭಟ್ಟರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರದಾನ

Upayuktha
0


ಬಂಟ್ವಾಳ: ಮಂಗಳೂರು ವಿಶ್ವವಿದ್ಯಾಲಯದ ಮೊತ್ತಮೊದಲ ಬಾರಿ ಗೌರವ ಡಾಕ್ಟರೇಟ್ ಅನ್ನು ವಿಶೇಷ ಪರಿಗಣನೆಯೊಂದಿಗೆ ಇತ್ತೀಚೆಗೆ ನಮ್ಮನ್ನಗಲಿದ ಹಿರಿಯ ಯಕ್ಷಗಾನ ಕಲಾವಿದ ಗೋವಿಂದ ಭಟ್ ಅವರ ಕುಟುಂಬಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಎಲ್. ಧರ್ಮ ಅವರು ಸೋಮವಾರ ಸಂಜೆ ಹಸ್ತಾಂತರ ಮಾಡಿದರು.


ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ವತಿಯಿಂದ ಸೋಮವಾರ ನಡೆದ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ಪುರಸ್ಕೃತ, ಯಕ್ಷದಶಾವತಾರಿ ಡಾ.ಕೆ. ಗೋವಿಂದ ಭಟ್ಟ  ಸೂರಿಕುಮೇರು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಗೋವಿಂದ ಸ್ಮರಣೆ ಕಾರ್ಯಕ್ರಮದಲ್ಲಿ ಸೇರಿದ್ದ ನೂರಾರು ಅಭಿಮಾನಿಗಳ ಸಮ್ಮುಖ ಡಾಕ್ಟರೇಟ್ ಪದವಿ ಹಸ್ತಾಂತರ ಕಾರ್ಯಕ್ರಮ ನಡೆಯಿತು.


ಭಟ್ ಪುತ್ರರಾದ ಪ್ರಸನ್ನ ಕುಮಾರ್, ಶ್ಯಾಮಪ್ರಸಾದ್, ಸೂರ್ಯಪ್ರಕಾಶ್ ಅವರಿಗೆ ವಿಶ್ವವಿದ್ಯಾಲಯ ನೀಡುವ ಗೌರವ ಡಾಕ್ಟರೇಟ್ ಪದವಿಯನ್ನು ಹಸ್ತಾಂತರ ಮಾಡಿದರು. ಇದೇ ಸಂದರ್ಭ ಗೋವಿಂದ ಭಟ್ಟರ ಭಾವಚಿತ್ರಕ್ಕೆ ಗೌರವಾರ್ಪಣೆ ಮಾಡಿದರು.


ಈ ವೇಳೆ ಮಾತನಾಡಿದ ಕುಲಪತಿ ಡಾ. ಧರ್ಮ, ಮೊದಲ ಬಾರಿ ಮಂಗಳೂರು ವಿಶ್ವವಿದ್ಯಾನಿಲಯವು ಮರಣೋತ್ತರ ಡಾಕ್ಟರೇಟ್ ಪದವಿಯನ್ನು ವಿಶ್ವವಿದ್ಯಾನಿಲಯದ ಲಾಂಛನದೊಂದಿಗೆ ಕುಲಾಧಿಪತಿಗಳ ಅನುಮತಿಯೊಂದಿಗೆ ನೀಡಲಾಗುತ್ತಿದೆ ಎಂದರು.


ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಗೋವಿಂದ ಭಟ್ ಯಕ್ಷಜೀವನದ ಕುರಿತು ಸಂಶೋಧನಾ ಪುಸ್ತಕ ಹೊರಬರಬೇಕು ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ಭಟ್ಟರ ಜೊತೆಗಿನ ಒಡನಾಟ ಸ್ಮರಿಸಿದರು.


ರಿಜಿಸ್ಟ್ರಾರ್ ಪ್ರೊ.ಗಣೇಶ್ ಸಂಜೀವ್, ಪರೀಕ್ಷಾಂಗ ಕುಲಸಚಿವ ಡಾ.ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ, ಐಕ್ಯುಎಸಿ ನಿರ್ದೇಶಕಿ ಪ್ರೊ.ಮೋನಿಕಾ ಸದಾನಂದ ಮತ್ತು ಸಹಾಯಕ ಕುಲಸಚಿವೆ ಸುಚೇತಾ ಕೆ. ಪದವಿ ಹಸ್ತಾಂತರ ವೇಳೆ ಹಾಜರಿದ್ದರು.


ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶಾಮ ಭಟ್ ಅವರು ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಪರವಾಗಿ ಸ್ವಾಗತಿಸಿದರು. ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಗೋವಿಂದಾರ್ಪಣ ಯಕ್ಷಗಾನ ಕಾರ್ಯಕ್ರಮ ನಡೆಯಿತು.


ಗಣ್ಯರಿಂದ ಗೋವಿಂದ ಸ್ಮರಣೆ:

ಸೂರಿಕುಮೇರಿ ಗೋವಿಂದ ಭಟ್ಟರು ನಿರಂತರ ಎಪ್ಪತ್ತು ವರ್ಷಗಳ ತಿರುಗಾಟದ ಮೂಲಕ ದಾಖಲೆ ನಿರ್ಮಿಸಿದ ಸವ್ಯಸಾಚಿ ಕಲಾವಿದರು. ಯಕ್ಷಗಾನ ಕ್ಷೇತ್ರಕ್ಕೆ ಅವರ ಕೊಡುಗೆ ಅನನ್ಯವಾದುದು ಎಂದು ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಸೋಮವಾರ ನಡೆದ ಗೋವಿಂದ ಸ್ಮರಣೆ ಕಾರ್ಯಕ್ರಮದಲ್ಲಿ ಯಕ್ಷಗಾನ ಹಿರಿಯ ಕಲಾವಿದರು, ಗೋವಿಂದ ಭಟ್ಟರ ಒಡನಾಡಿಗಳು ಹಾಗೂ ಅಭಿಮಾನಿಗಳು ಬಣ್ಣಿಸಿದರು.


ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ವತಿಯಿಂದ ಯಕ್ಷಗಾನ ದಶಾವತಾರಿ ಡಾ.ಕೆ.ಗೋವಿಂದ ಭಟ್ ಅವರ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಗುಣಗಾನ ಮಾಡಿದ ಅಭಿಮಾನಿಗಳು ಕಲಾವಿದ ಶ್ರೇಷ್ಠರಾದರೂ ಎಲ್ಲರೊಡನೆ ಬೆರೆಯುತ್ತಿದ್ದ ಅವರ ಗುಣವನ್ನು ಸ್ಮರಿಸಿದರು.


ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ ಕಷ್ಟಗಳಿದ್ದರೂ ತೋರಿಸಿಕೊಳ್ಳದೆ ವೇಷ ಮಾಡಿದವರು ಅವರು ಎಂದರು.

ಹಿರಿಯ ವಿಮರ್ಶಕ, ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ ಮಾತನಾಡಿ, ನಿರಂತರ ಎಪ್ಪತ್ತೊಂದು ವರ್ಷಗಳ ತಿರುಗಾಟ ಮಾಡಿ ದಾಖಲೆ ಮೆರೆದವರು. ವೇಷ ವೈವಿಧ್ಯಗಳಲ್ಲಿ, ವಹಿಸಿದ ಪಾತ್ರಗಳಲ್ಲಿ ಯಕ್ಷಗಾನದ ಮೊದಲ ಹೆಜ್ಜೆಯಿಂದ ಕೊನೆಯ ಹೆಜ್ಜೆಯವರೆಗೆ ಹೇಗಿರಬೇಕು ಎಂದು ತೋರಿಸಿಕೊಟ್ಟವರು. ತೆಂಕುತಿಟ್ಟಿನ ಯಕ್ಷಗಾನ ಪರಿಪೂರ್ಣ ರೂಪ ಎಂದು ಕುಂಬಳೆ ಸುಂದರರಾಯರೇ ಹೇಳಿದ್ದಾರೆ. ಅವರ ಕುರಿತು ಸಂಶೋಧನಾತ್ಮಕ ಅಧ್ಯಯನ ಆಗಬೇಕು ಎಂದರು.


ಕಲಾವಿದ ಉಜಿರೆ ಅಶೋಕ ಭಟ್ ಮಾತನಾಡಿ, ಗೋವಿಂದ ಭಟ್ಟರು ಮಾರ್ಗದರ್ಶಿಯಾಗಿದ್ದರು ಎಂದು ಒಡನಾಟ ಸ್ಮರಿಸಿದರು. ಹಾದಿಗಲ್ಲು ಲಕ್ಷ್ಮೀನಾರಾಯಣ ರಾವ್ ಮಾತನಾಡಿ ಯಕ್ಷಗಾನ ಪೂರ್ಣಾವತಾರಿ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ ಶೆಟ್ಟಿ ಮಾತನಾಡಿ, ಕಲಾವಿದ ಎಷ್ಟೇ ಪಾಂಡಿತ್ಯವುಳ್ಳವನಾದರೂ ಎದುರಿದ್ದ ಪ್ರೇಕ್ಷಕ ಒಪ್ಪಿದಾಗ ಮಾತ್ರ ಪರಿಪೂರ್ಣ. ಗೋವಿಂದ ಭಟ್ಟರು ಅಂಥ ಪರಿಪೂರ್ಣ ಕಲಾವಿದರು ಎಂದರು.


ಗೋವಿಂದ ಭಟ್ಟರ ಒಡನಾಡಿ ಕಲಾವಿದರು ಮತ್ತು ವಿದ್ವಾಂಸರಾದ ಪಂಜ ಭಾಸ್ಕರ ಭಟ್, ಜಬ್ಬಾರ್ ಸಮೋ, ಆರ್.ಕೆ.ಭಟ್, ಸಂಜಯ ಕುಮಾರ್ ಶೆಟ್ಟಿ, ಶರವು ರಾಘವೇಂದ್ರ ಶಾಸ್ತ್ರಿ, ಜಿ.ಕೆ.ಭಟ್ ಸೇರಾಜೆ, ಭಾಸ್ಕರ ರೈ ಕುಕ್ಕುವಳ್ಳಿ, ರಾಧಾಕೃಷ್ಣ ಕಲ್ಚಾರ್, ಧರ್ಮಸ್ಥಳದ ಬಿ.ಭುಜಬಲಿ, ಪ್ರೊ. ಎಂ.ಎಲ್.ಸಾಮಗ, ಪುತ್ತಿಗೆ ರಘುರಾಮ ಹೊಳ್ಳ, ಬೇಗಾರು ಶಿವಕುಮಾರ್, ವಸಂತ ಗೌಡ ಕಾಯರ್ತಡ್ಕ, ಸರಪಾಡಿ ಅಶೋಕ ಶೆಟ್ಟಿ, ದಿವಾಣ ಗೋವಿಂದ ಭಟ್, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಸುಣ್ಣಂಬಳ ವಿಶ್ವೇಶ್ವರ ಭಟ್, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ವಿದ್ಯಾ ಕೋಳ್ಯೂರು, ಮುರಳಿ ಕಡೆಕಾರ್, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ನಿವೃತ್ತ ಶಿಕ್ಷಕಿ ಶಾರದಾ ಟೀಚರ್, ಗಿರೀಶ್ ರೈ ಕಕ್ಯಪದವು, ವಾಸುದೇವ ರಂಗಾ ಭಟ್ಟ, ಪ್ರಶಾಂತ್ ಹೊಳ್ಳ ಮಾತನಾಡಿದರು.


ಹಿರಿಯ ಕಲಾವಿದರಾದ ಅರುವ ಕೊರಗಪ್ಪ ಶೆಟ್ಟಿ, ಕೋಳ್ಯೂರು ರಾಮಚಂದ್ರ ರಾವ್, ಪ್ರಮುಖರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಧನಲಕ್ಷ್ಮೀ ಕ್ಯಾಶೂಸ್ ನ ಶ್ರೀಪತಿ ಭಟ್, ಮಾವೆ ದಿನಕರ ಭಟ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ ಭಟ್, ಟಿ.ಜಿ.ರಾಜಾರಾಮ ಭಟ್, ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಶ್ಯಾಮ ಭಟ್ ಸಹಿತ ಗೋವಿಂದ ಭಟ್ಟರ ಅಭಿಮಾನಿಗಳು, ವಿವಿಧ ಮೇಳಗಳ ಕಲಾವಿದರು, ಶಿಷ್ಯರು, ಬಂಧುಗಳು ಉಪಸ್ಥಿತರಿದ್ದರು.


ಹಿರಣ್ಯ ವೆಂಕಟೇಶ್ವರ ಭಟ್ ಮತ್ತು ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಹರೀಶ್ ಬೊಳಂತಿಮೊಗರು ವಂದಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top