- 4 ಲಕ್ಷಕ್ಕೂ ಅಧಿಕ ಮೌಲ್ಯದ ವಿದ್ಯಾರ್ಥಿ ವೇತನ ವಿತರಣೆ
- ರಾಜ್ಯಾದ್ಯಂತ 200 ಕ್ಕೂ ಅಧಿಕ ಕಲಾ ಪ್ರದರ್ಶನ
ಕಲೆಗಳು ಸರ್ವತೋಮುಖ ಬೆಳವಣಿಗೆಗೆ ಪೂರಕ: ಸೋನಿಯಾ ಯಶೋವರ್ಮ
ಉಜಿರೆ, ಏ.16: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಯಕ್ಷಗಾನ, ನೃತ್ಯ, ಸಂಗೀತ, ರಂಗ ಕಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ತರಬೇತಿ ಪಡೆಯುವ ಕಲಾಕೇಂದ್ರದ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಕಾಲೇಜಿನ ಕಲಾಕೇಂದ್ರದಲ್ಲಿ ಜರುಗಿತು.
ಕಲಾ ಕೇಂದ್ರದ ಪೋಷಕರು ಹಾಗು ಮಾರ್ಗದರ್ಶಕರಾಗಿರುವ ಉಜಿರೆಯ ಸೋನಿಯಾ ಯಶೋವರ್ಮ ವಿದ್ಯಾರ್ಥಿಗಳು ಸುಮಾರು 4.5 ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನವನ್ನು ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಇವರು, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳಿಗೆ ಹೊಸ ಹೊಸ ಕಲೆಯ ಅಭ್ಯಾಸ ಮತ್ತು ಅಧ್ಯಾಯನದ ಜೊತೆಗೆ ಈ ದೇಶದ ಸಾಂಸ್ಕೃತಿಕ ಸಂಪತ್ತಿನ ಅರಿವನ್ನು ಜಾಗೃತಗೊಳಿಸುತ್ತದೆ. ನಿರಂತರವಾಗಿ ಕಲೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮನ್ನು ನಾವು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದಾ ಆರೋಗ್ಯದಿಂದಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಲಾ ಕೇಂದ್ರ ಹಾಗೂ ಇಲ್ಲಿನ ಸಿಬ್ಬಂದಿಗಳ ಮಾರ್ಗದರ್ಶನ ಬದುಕಿನಲ್ಲಿ ಬಹು ಎತ್ತರಕ್ಕೆ ಬೆಳೆಯುವಂತೆ ಪ್ರೋತ್ಸಾಹಿಸುವುದರ ಜೊತೆಗೆ ಶಿಸ್ತು ಮತ್ತು ಸಂಸ್ಕಾರಭರಿತವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ತಿಳಿಹೇಳುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಪ್ರಸಕ್ತ ಸಾಲಿನಲ್ಲಿ 20 ಕ್ಕೂ ಅಧಿಕ ಕಲಾ ಪ್ರದರ್ಶನ ನೀಡಿದ ವಿದ್ಯಾರ್ಥಿಗಳ ತಂಡಕ್ಕೆ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಸಾಗುತ್ತಿರುವ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಮೌಲ್ಯಯುತ ಶಿಕ್ಷಣ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನ ವ್ಯವಸ್ಥೆಗಳನ್ನು ಕಲ್ಪಿಸಿಕೊಟ್ಟಿದೆ. ವಿಶೇಷವಾಗಿ ಅತ್ಯಾಧುನಿಕ ಗ್ರಂಥಾಲಯ, ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ, ಸುಸಜ್ಜಿತವಾದ ಈಜುಕೊಳ, ಕ್ರೀಡಾಂಗಣ, ನಿರಂತರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕಲೆ ಮತ್ತು ಸಾಹಿತ್ಯವನ್ನು ಬೆಳೆಸಿ ಪ್ರೋತ್ಸಾಹಿಸಲು ಕಲಾ ಕೇಂದ್ರ ತೆರೆದು ಕೊಟ್ಟಿದೆ. ಈ ಎಲ್ಲಾ ವ್ಯವಸ್ಥೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು, ಯಶಸ್ಸಿನ ಹಾದಿಯತ್ತ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಹಾಗೂ ಉಜಿರೆಯ ಸೋನಿಯಾ ಯಶೋವರ್ಮರವರ ಮಾರ್ಗದರ್ಶನದಲ್ಲಿ ವಿರಚಿತವಾದ ಶ್ರೀ ರಾಮಾಯಣ ದರ್ಶನಂ ಎಂಬ ನೃತ್ಯ ರೂಪಕ ಅತೀ ಹೆಚ್ಚಿನ ಪ್ರಶಂಸೆಗೆ ಪಾತ್ರವಾಗಿ, ಕೇವಲ 25 ನಿಮಿಷಗಳಲ್ಲಿ 100 ಜನ ವಿದ್ಯಾರ್ಥಿಗಳಿಂದ ಸಂಪೂರ್ಣ ರಾಮಯಣವನ್ನು ಇಂಡೋನೇಷ್ಯಾದ ಬಾಲಿ, ಶ್ರೀಲಂಕಾದ ಕ್ಯಾಂಡಿಯನ್, ರಷ್ಯಾದ ಕಳಿಂಕ, ಸ್ಪೈನ್ ದೇಶದ ಫ್ಲೆಮೆಂಕೋ ಸೇರಿದಂತೆ ವಿವಿಧ ನೃತ ಪ್ರಕಾರಗಳಲ್ಲಿ ಪ್ರಸ್ತುತ ಪಡಿಸಿದ ಸಂಪೂರ್ಣ ರಾಮಾಯಣವು ರಾಜ್ಯದಂತ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದನ್ನು ಗುರುತಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಲಾಯಿತು.
ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಬಳಿಕ ಕಲಾಕೇಂದ್ರದ ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ವೇಳೆ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಇನ್ನಿತರ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಕಲಾ ಕೇಂದ್ರದ ವಿದ್ಯಾರ್ಥಿಗಳು ಸೇರಿದಂತೆ ಉಪನ್ಯಾಸಕ ಡಾ. ನಾಗಣ್ಣ, ಡ್ರಾಮ ತರಬೇತದಾರ ಯಶವಂತ್ ಬೆಳ್ತಂಗಡಿ, ನೃತ್ಯ ತರಬೇತುದಾರರಾದ ಚೈತ್ರ, ಯಕ್ಷಗಾನ ತರಬೇತುದಾರರಾದ ಅರುಣ್, ಸಿಬ್ಬಂದಿ ಸದಾನಂದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಮನಸ್ವಿನಿ ಹಾಗು ಶಯನ್ ನಿರೂಪಿಸಿ ವಂದಿಸಿದರು. ಎಸ್.ಡಿ.ಎಂ ಕಲಾಕೇಂದ್ರದ ಸಂಯೋಜಕ ತೃಪ್ತ ಕುಮಾರ್ ಜೈನ್ ಕಾರ್ಯಕ್ರಮವನ್ನು ಸಂಯೋಜಿಸಿದರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಡಾ. ಹೇಮಾವತಿ ವೀ. ಹೆಗ್ಗಡೆಯವರ ಕನಸಿನ ಕೂಸು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಕಲಾಕೇಂದ್ರ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕೃತಿ ಮತ್ತು ಕಲೆಯ ಅಭಿರುಚಿಯನ್ನು ಇಮ್ಮಡಿಗೊಳಿಸುವ ಸಲುವಾಗಿ ಇದನ್ನು ಸ್ಥಾಪಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕಲೆಯನ್ನು ನಿರಂತರವಾಗಿ ಅಭ್ಯಾಸ ಮಾಡಿ ರಾಜ್ಯದ ನಾನಾ ಭಾಗಗಳ ಬೃಹತ್ ವೇದಿಕೆಯಲ್ಲಿ ಕಲೆಯನ್ನು ಪ್ರದರ್ಶಿ ಕಾರ್ಯಕ್ರಮ ನೀಡುವ ವಿಶೇಷ ಅವಕಾಶವನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಅನುವು ಮಾಡಿಕೊಟ್ಟಿದೆ. ಇದು ವಿದ್ಯಾರ್ಥಿಗಳಿಗೆ ಹೊಸ ಅನುಭವವನ್ನು ನೀಡುವುದರ ಜೊತೆಗೆ ಭವಿಷ್ಯದ ಕಲಾ ಸಾಧನೆಗೆ ಮತ್ತಷ್ಟು ಪ್ರೇರಣೆಯನ್ನು ನೀಡುತ್ತದೆ.
- ಸೋನಿಯಾ ಯಶೋವರ್ಮ
ಮಾರ್ಗದರ್ಶಕರು, ಎಸ್.ಡಿ.ಎಂ ಕಲಾಕೇಂದ್ರ
ವಿದ್ಯಾರ್ಥಿಗಳ ಪ್ರತಿಭೆ ಮತ್ತು ಕೌಶಲ್ಯವನ್ನು ಅಭಿವ್ಯಕ್ತಿ ಪಡಿಸಲು ಕಲಾಕೇಂದ್ರ ಬಹುದೊಡ್ಡ ವೇದಿಕೆ. ಇಲ್ಲಿ ಯಕ್ಷಗಾನ ಕೇಂದ್ರ, ರಂಗ ತರಬೇತಿ ಕೇಂದ್ರ ಮತ್ತು ನೃತ್ಯ ಹಾಗೂ ಸಂಗೀತ ಸೇರಿದಂತೆ ವಿವಿಧ ವಿಭಾಗಗಳನ್ನು ಒಳಗೊಂಡಿದೆ. ಸಿಬ್ಬಂದಿಗಳ ಮಾರ್ಗದರ್ಶನ ಮತ್ತು ಸಂಸ್ಥೆಯ ಸಹಕಾರದಿಂದ ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು ನೂರಾರು ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕಲಾ ಆಸಕ್ತ ವಿದ್ಯಾರ್ಥಿಗಳು ಕಲಾಕೇಂದ್ರವು ಉಚಿತವಾಗಿ ತರಬೇತಿಯನ್ನು ನೀಡುತ್ತಿದೆ.
- ತೃಪ್ತ ಕುಮಾರ್ ಜೈನ್
ಸಂಯೋಜಕರು, ಎಸ್.ಡಿ.ಎಂ ಕಲಾ ಕೇಂದ್ರದ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


