ಎಐ ಚಿತ್ರ
- ಟಿ. ದೇವಿದಾಸ್
ಕಾಮ್ರೇಡರ ಸ್ಟಾಲಿನ್ ಸಿದ್ಧಾಂತ ಮೂಲದ ಈ ಪದವೇ ಇದು ಭಾರತದಂಥ ಪ್ರಜಾಪ್ರಭುತ್ವದ ದೇಶದಲ್ಲಿ ಬಹುಪ್ರಸಿದ್ಧಿಯೂ ಚಲಾವಣೆಯೂ ಆಗಿಬಿಟ್ಟಿದೆ. ರಾಜಕಾರಣಿಗಳು ಬಾಯಿ ಬಿಟ್ಟರೆ 'ನಮ್ಮದು ಹೈಕಮಾಂಡ್ ಪಕ್ಷ' ಎಂದು ದೊಡ್ಡ ಮಾತನ್ನು ಆಡುತ್ತಾರೆ. ಆದರೆ, ನಿಜವಾದ ಪ್ರಜಾಪ್ರಭುತ್ವದಲ್ಲಿ ಹೈಕಮಾಂಡ್ ಇರುವುದಿಲ್ಲ. ಬದಲಿಗೆ consensus, ಅಂದರೆ ಒಟ್ಟಾಭಿಪ್ರಾಯ. ಸಮೂಹದ ನಿರ್ಣಯ.
ನೆಹರೂ ಕೂಡ ತನ್ನ ವಿಚಾರವಂತ ಸಹೋದ್ಯೋಗಿಗಳ ಅಭಿಪ್ರಾಯಕ್ಕೆ ಹೆದರಿ ಮಣಿದ ಉದಾಹರಣೆಗಳಿವೆ. ರಾಜಾಜಿ, ಪಟೇಲ್, ಕೃಪಲಾನಿ, ರಾಜೇಂದ್ರ ಪ್ರಸಾದ್, ಬೋಸ್ ನಿಜಾರ್ಥದಲ್ಲಿ ಪ್ರಜಾ ಪ್ರತಿನಿಧಿಗಳಿದ್ದರು. ಹಾಗಂತ, ಒಬ್ಬನೇ ಹೇಳಿದ್ದು ಪರಮ ನಿರ್ಣಯ ಎಂಬ ಉದ್ದಂಡ ನಾಯಕನ, ಸರ್ವಾಧಿಕಾರಿಯ ಧೋರಣೆಯೇ ಚಾಲ್ತಿಗೆ ಬಂದದ್ದು ನೆಹರೂ ಕಾಲದಲ್ಲಿಯೇ! ಮಧುಲಿಮಯೆ, ಲೋಹಿಯಾ, ಢಾಂಗೆ, ಇಂದ್ರಜಿತ್ ಗುಪ್ತಾ ಮುಂತಾದವರಿಗೆ ನೆಹರೂ ಹೆದರುತ್ತಿದ್ದರು. ಕ್ರಮೇಣ ಎಲ್ಲರಿಗೂ ಕಡಿವಾಣ ಹಾಕುತ್ತಲೇ ಬಂದದ್ದು ಈ ಹೈಕಮಾಂಡ್ ಕಲ್ಚರ್. ನೆಹರೂ ಕಾಲದಲ್ಲಿ ಅಷ್ಟೋ ಇಷ್ಟೋ ಚಾಲ್ತಿಗೆ ಬಂದಿದ್ದ ಹೈಕಮಾಂಡ್ ಸಂಸ್ಕೃತಿ ಊರ್ಜಿತವಾಗಿ ಪ್ರತಿಷ್ಠಾಪನೆಯಾದದ್ದು ಶ್ರೀಮತಿ ಇಂದಿರಾ ಗಾಂಧಿಯವರ ಕಾಲದಲ್ಲಿ!
ಕಮ್ಯುನಿಸ್ಟರು ಇದನ್ನೇ ಬೇರೆ ಮಾತಿನಲ್ಲಿ ಪೊಲಿಟಿಕಲ್ ಬ್ಯೂರೋ, ಸಾಮೂಹಿಕ ನಿರ್ಣಯ ಎಂದು ಅರ್ಥವೇ ತಲೆಕೆಳಗಾಗುವಂತೆ ಕರೆದ ಮೋಸ ಈ ದೇಶವಾಸಿಗಳಿಗೆ ಇನ್ನೂ ಅರ್ಥವಾಗಿಲ್ಲ. ಆಗದವರನ್ನು ಹೊರಹಾಕುವ ಪದ್ಧತಿ, ಬೇಕಾದವರನ್ನು ಆಯಕಟ್ಟಿನ ಜಾಗದಲ್ಲಿ ಸ್ಥಾಪನೆ ಮಾಡುವ ಪದ್ಧತಿಯನ್ನು ನೆಹರೂ ಕಾಲದ ಢಾಂಗೆಯಿಂದ ಸೋಮನಾಥ ಚಟರ್ಜಿಯವರೆಗೆ ನಡೆದೇ ಬಂದಿಲ್ಲವೆ? ನನಗಾಗದವರನ್ನು ಹೊರಗೆ ಹಾಕಲು, ನಾನು ಸಾಮೂಹಿಕ ಜವಾಬುದಾರಿಯ ನಿರ್ಣಯ ಎಂಬ ನೆಪದಲ್ಲಿ ಆಜ್ಞೆಯನ್ನು ಜಾರಿಗೊಳಿಸಿ, ಸೇಡು ತೀರಿಸಿಕೊಳ್ಳಲು, ನನ್ನ ಅಭಿಪ್ರಾಯವನ್ನೇ ಇತರರ ಮೇಲೆ ಹೇರುವ ಪ್ರಯತ್ನವೇ ಹೈ ಕಮಾಂಡ್ ಎಂದರೆ ಯಾರಿಗೆ ಅರ್ಥವಾಗುವುದಿಲ್ಲ?! ಹೀಗೆ ಹೊರಡಿಸುವ ಆಜ್ಞೆಯು ಸೇಡು ತೀರಿಸಿಕೊಳ್ಳಲು, ನನ್ನ ಅಭಿಪ್ರಾಯವನ್ನೇ ಇತರರ ಮೇಲೆ ಹೇರಲು ಇರುವ ಒಂದು ಮಾರ್ಗವೇ ಹೈ ಕಮಾಂಡ್ ಅಂತ ಹೇಳಿದರೆ ಹಳ್ಳಿಯ ಹೈದನಿಗೂ ಅರ್ಥವಾಗುತ್ತದೆ. ಇದನ್ನೇ ಅಲ್ಲವೆ ನೆಹರೂ ಮನೆತನ ಅಧಿಕಾರ ಮತ್ತು ಪಕ್ಷ ತಮ್ಮ ನಿಯಂತ್ರಣದಲ್ಲೇ ಇರುವಂತೆ ಮಾಡುತ್ತ ಬಂದಿರೋದು. ನಮ್ಮ ನೆಲದಲ್ಲದ ಈ ಹೈಕಮಾಂಡ್ ಕಲ್ಚರ್ ಆಮೇಲಾಮೇಲೆ ಎಲ್ಲ ಪಕ್ಷಗಳಿಗೂ ಅಂಟಿಕೊಳ್ಳುವ ಅರ್ಬುದವಾಗಿ ಈಗ ಎಲ್ಲ ಪಕ್ಷದಲ್ಲೂ ಹೈಕಮಾಂಡೋ ಹೈಕಮಾಂಡ್!
ಒಬ್ಬನಲ್ಲಿ ತೀರಲಾರದ ಹಣಬಲವಿದೆ. ಅದರಿಂದಾಗಿ ಜನಬಲವೂ ಇದೆ. ಜಾತಿಬಲವೂ ಇದೆ. Mischief power ಎನ್ನಬಹುದಾದ ಶಕ್ತಿಯಿದ್ದರೆ, ಆಗ, ಎಂಥಾ ಬಲಾಢ್ಯ ಸರ್ಕಾರವನ್ನೂ ಉರುಳಿಸುವ, ಬೇಕಾದವರನ್ನು ಪಟ್ಟಕ್ಕೇರಿಸುವ, ಬೇಡಾದವರನ್ನು ಉರುಳಿಸುವ ಶಕ್ತಿಯನ್ನು ಹೊಂದಿದವನು ಆಡಿದ್ದೇ ಆಟ, ಆಡಿದ್ದೇ ಮಾತು. ಜನರನ್ನು ಹಣಕ್ಕೆ ಕೊಳ್ಳುತ್ತಾನೆ. ಪಕ್ಷವನ್ನೇ ಕೊಳ್ಳುತ್ತಾನೆ. ರಾಜ್ಯವನ್ನೇ ಕೊಳ್ಳುತ್ತಾನೆ. ಇಂಥವನ ಮುಂದೆ ಪಕ್ಷದ ಹಿರಿಯ ನಾಯಕರ ಗತಿಯೇನು? ಆಗ ಅದು ಹೈಕಮಾಂಡೋ? ಹೈ ಡಿಮ್ಯಾಂಡೋ? ಲೋ ಕಮಾಂಡೋ? ಲೋ ಡಿಮ್ಯಾಂಡೋ!
ಇಂದಿರಾಗಾಂಧಿಯವರು ಗೊಬ್ಬರ ನೀರು ಹಾಕಿ ಪೋಷಿಸಿ ಬೆಳೆಸಿ ಪ್ರತಿಷ್ಠಿತಗೊಂಡ ಈ ಹೈಕಮಾಂಡ್ ಕಲ್ಚರ್ ಎಂಬ ಸರ್ವಾಧಿಕಾರದ ಅಮಲು ಸಂಜಯ ಗಾಂಧಿ, ರಾಜೀವ್ ಗಾಂಧಿಯವರನ್ನು ದಾರಿತಪ್ಪಿಸಿದ್ದನ್ನು ವೀರೇಂದ್ರ ಪಾಟೀಲರ ಅಂತ್ಯಕಾಲದ ಅವಸ್ಥೆಯನ್ನು ನೆನಪಿಸಿಕೊಂಡರೆ ಗೊತ್ತಾಗುತ್ತದೆ. ಇಂದಿರಾಗಾಂಧಿ ಕಾಂಗ್ರೆಸ್ಸನ್ನೇ ಒಡೆದುದನ್ನು ನೆನಪಿಸಿಕೊಂಡರೆ ಆ ಕಲ್ಚರಿನ ಅರ್ಥವಾಗುತ್ತದೆ. ನಿಜಲಿಂಗಪ್ಪ ಏನಾದರು? ೧೯೮೯ರಲ್ಲಿ ಭರ್ಜರಿ ಜಯ ತಂದುಕೊಟ್ಟಿದ್ದರೂ, ೧೯೯೦ರ ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಕೋಮುಗಲಭೆಗಳು ಸಂಭವಿಸಿದಾಗ ಅನಾರೋಗ್ಯದ ಕಾರಣ ನೀಡಿ, ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ಪಾಟೀಲರನ್ನು ವಿಮಾನ ನಿಲ್ದಾಣದಲ್ಲೇ ಸಿಎಂ ಸ್ಥಾನದಿಂದ ವಜಾಗೊಳಿಸಿದರು. ದೇವರಾಜ ಅರಸರು ಏನಾದರು? ಜನವರಿ ೧೯೮೦ರಲ್ಲಿ ಇಂದಿರಾಗಾಂಧಿ ಅಧಿಕಾರಕ್ಕೆ ಬಂದ ಅನಂತರ, ಅರಸರನ್ನು ಬೆಂಬಲಿಸಿದ ಹೆಚ್ಚಿನ ಶಾಸಕರು ಕಾಂಗ್ರೆಸ್ (I) ಗೆ ಮರು ಸೇರ್ಪಡೆಗೊಂಡರು. ಇದರಿಂದಾಗಿ ಅರಸು ಪದಚ್ಯುತರಾದರು. ಆರ್. ಗುಂಡೂರಾವ್ ಮುಖ್ಯಮಂತ್ರಿಯಾದರು. ಅರಸು ತಮ್ಮ ರಾಜಕೀಯ ಜೀವನದ ಅಂತ್ಯದಲ್ಲಿ ಮೂಢನಂಬಿಕೆ ಮತ್ತು ಅಹಂಕಾರದ ಆರೋಪಗಳನ್ನು ಎದುರಿಸಿದರು. ಶ್ರೀಮತಿ ಗಾಂಧಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಅರಸರ ಬೆಂಬಲ ಕಡಿಮೆಯಾಯಿತು. ಇದ್ಯಾವುದನ್ನೂ ಕರ್ನಾಟಕದ ರಾಜಕೀಯ ಚರಿತ್ರೆ ಮರೆಯಲಿಲ್ಲ.
1969ರ ಕಾಂಗ್ರೆಸ್ ವಿಭಜನೆಯ ನಂತರ ಕಾಂಗ್ರೆಸ್ (O) ನಲ್ಲಿದ್ದ ನಿಜಲಿಂಗಪ್ಪನವರು, 1977ರಲ್ಲಿ ಜನತಾ ಪಾರ್ಟಿಗೆ ಸೇರಿ ನಂತರ 1983ರಲ್ಲಿ ಸಕ್ರಿಯ ರಾಜಕೀಯದಿಂದ ಸಂಪೂರ್ಣವಾಗಿ ನಿವೃತ್ತರಾದರು. ಸರಳ ಜೀವನ, ನಿವೃತ್ತಿಯ ನಂತರ, ಅವರು ತಮ್ಮ ತತ್ವ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿದ್ದರು. ನಿಜಲಿಂಗಪ್ಪನವರ ಅವಸಾನಕ್ಕೆ ಇಂದಿರಾಗಾಂಧಿಯವರ ಅವಿವೇಕ, ಅಹಂಕಾರ, ಸ್ವೇಚ್ಛಾವರ್ತನೆ, ಹಿತ್ತಾಳೆ ಕಿವಿ, ಸರ್ವಾಧಿಕಾರಿ ಧೋರಣೆ ಕಾರಣವಾದುವು ಎಂಬುದನ್ನು ನೈತಿಕ ರಾಜಕಾರಣದಲ್ಲಿ ನಂಬಿಕೆಯಿರುವ ಯಾರೂ ಅಲ್ಲಗಳೆಯಲಾರರು.
ಶ್ರೀ ಹನುಮಂತಯ್ಯನವರಾಗಲೀ, ನಿಜಲಿಂಗಪ್ಪನವರಾಗಲೀ, ಚೆಂಗಲರಾಯರೆಡ್ಡಿಯವರಾಗಲಿ, ವೀರೇಂದ್ರ ಪಾಟೀಲರಾಗಲಿ- ಒಬ್ಬರೂ ಖಾಸಗಿ ಪುಂಡಸೇನೆಯನ್ನು ಕಟ್ಟ;ಲಿಲ್ಲ. ವ್ಯಕ್ತಿಪೂಜೆಯನ್ನು ಹುಟ್ಟುಹಾಕಲಿಲ್ಲ. ಸರ್ಕಾರಗಳನ್ನು ರಚಿಸಿ ತೂಗಿಸಿಕೊಂಡು ಹೋಗಿ ಅಷ್ಟಿಷ್ಟು ಉತ್ತಮ ಕೆಲಸಗಳನ್ನು ಮಾಡಿ ಕೀರ್ತಿಶೇಷರಾದರು. ಜನಮಾನಸದಲ್ಲಿ ಹೆಸರೂ ಉಳಿಸಿಕೊಂಡರು. ಸಣ್ಣಪುಟ್ಟ ದೋಷ, ತಪ್ಪುಹೆಜ್ಜೆ, ಆಕ್ಷೇಪಾರ್ಹ ಕಾರ್ಯಗಳು ಇದ್ದಿರಬಹುದೆನ್ನಿ. ಜಾತಿ ಪಕ್ಷಪಾತ, ಕೇಂದ್ರದ ಮಿತಿಮೀರಿದ ಓಲೈಕೆ, ಸ್ವಲ್ಪಮಟ್ಟಿಗೆ ರಾಜ್ಯಹಿತಾಂಶಗಳ ಕಡೆಗಣನೆ, ನೆರೆಯವರೊಡನೆ ತಿಕ್ಕಾಟಗಳಲ್ಲೂ ಆತ್ಮಗೌರವ, ಆತ್ಮಸಾಕ್ಷಿಗಳನ್ನು ಒತ್ತೆಯಿಡದೆ ನಡೆದವರಿಗೆ ತೇಜೋವಧೆ, ಅಧಿಕಾರ ನಷ್ಟ, ಒಳಗೇ ಹಿಂಸೆ, ಅಸಹಕಾರಗಳು ಉಂಟಾದದ್ದು ಕರ್ನಾಟಕಕ್ಕೆ ಹಿತವನ್ನು ಮಾಡಲಿಲ್ಲ.
ರಾಜ್ಯ ಕಾಂಗ್ರೆಸ್ಸಿನ ಭಾಷ್ಯ ಬರೆದವರು ಗುಂಡೂರಾಯರು, ಬಂಗಾರಪ್ಪ ಮತ್ತು ಆಮೇಲೆ ಬಂದ ಮತಿಹೀನರು ಎಂದರೆ ಕೋಪಬರುವುದೇಕೆ? ಅಲ್ಲಿಯವರೆಗೆ ಉಳಿದು ಬಂದ ನೈತಿಕ ರಾಜಕಾರಣ ಅಥವಾ ರಾಜಕಾರಣದಲ್ಲಿ ನೈತಿಕತೆ ಎಂಬುದು ಚಾಕು, ಚೂರಿ, ಪುಂಡಸೇನೆಗಳ ಯುಗದಲ್ಲಿ ಸತ್ತು ಸ್ವರ್ಗಸೇರಿತು. ಇದು ರಾಮಕೃಷ್ಣ ಹೆಗಡೆಯವರನ್ನೂ ಬಿಡಲಿಲ್ಲ. ದೇವರಾಜ ಅರಸರು ಎಲ್ಲ ಜಾತಿಗಳನ್ನೂ ಎಲ್ಲ ಜಾತಿಗಳ ಮೇಲೂ ಎತ್ತಿಕಟ್ಟಿ ಜಾತಿ ರಾಜಕಾರಣಕ್ಕೂ, ಭ್ರಷ್ಟಾಚಾರದ ಪರಮಾವಧಿ ಪಟ್ಟಕ್ಕೂ ಕುಖ್ಯಾತರಾದರು. ಕಾಂಗ್ರೆಸ್ಸಿನ ಮಹಾಸಮಾಧಿ ತೋಡಿದ್ದು ಇಲ್ಲಿಂದಲೇ!
ಹೈಕಮಾಂಡ್ ಸಂಸ್ಕೃತಿಯ ಜೀ ಹುಜೂರ್ ಮೇಲಾಟದ ಆರಂಭ, ಅವರನ್ನೇ ಮುಗಿಸಿದ್ದು ಇಂದಿರಾಗಾಂಧಿಯವರ ಸರ್ವಾಧಿಕಾರದ ಪೋಷಣೆಯಿಂದ. ಆದರೂ ಕರ್ನಾಟಕದ ಕಾಂಗ್ರೆಸ್ಸಿನ ಮರಣಾಗತಿಯ ಓಟಕ್ಕೆ ಬ್ರೇಕ್ ಹಾಕಿದರು. ಆಮೇಲೆ ಬಂದವರಿಗೆ ಯಾವ ಬ್ರೇಕ್ ಕೂಡ ಹಾಕಲು ಸಾಧ್ಯವಾಗಲೇ ಇಲ್ಲ. ಆಗಲೇ ದೆಹಲಿಯಲ್ಲೂ ಕರ್ನಾಟಕದಲ್ಲೂ ಕಾಂಗ್ರೆಸ್ಸಿನ ಪರ್ಯಾಯಗಳಾಗಿ ದೇವೇಗೌಡರು ಹುಟ್ಟಿ ಕರ್ನಾಟಕದಲ್ಲಿ ಮಾಡಿದ ಮಹಾಸಾಧನೆಗಳು, ಕುಟುಂಬ ರಾಜಕೀಯ ಸ್ಥಾಪನೆ, ಮೈನಾರಿಟಿ ಓಲೈಕೆ, ಓಟು ಬ್ಯಾಂಕ್ ಸೃಷ್ಟಿ- ಲಾಭ, ಜಾತ್ಯತೀತತೆಯ ಕೂಗುಮಾರಿಯ ತಮಟೆ, ಭ್ರಷ್ಟಾಚಾರದ ವ್ಯವಸ್ಥಿತ ಜಾಲದ ಊರ್ಜಿತ ಪಾಲನೆ, ಪೋಷಣೆಯ ಪ್ರತಿಫಲವಾಗಿ ರೈತ, ಮಹಿಳೆ, ಮೀಸಲಾತಿ, ಮಣ್ಣಿನ ಮಗ- ಇಂಥವು ಕ್ರಮೇಣ ಕಾಂಗ್ರೆಸ್ ಕಾಲದಲ್ಲಿ ರಕ್ತಬೀಜನಂತೆ ನಾನಾ ರೂಪ, ಆಕಾರ, ಆಯುಧ ಪಡೆದ ವಿನಾಶದ ಶಕ್ತಿಯಾಗಿ ವಿಜೃಂಭಿಸಿದೆ.
ಪ್ರಚಂಡ ಬಹುಮತಗಳ ಬಲ, ಅಪಾರ ಜನಪ್ರಿಯತೆಯ ನೆಹರೂ ಭಾರತೀಯ ಮತದಾರರನ್ನು ಸುಧಾರಿಸಬಹುದಿತ್ತು. ಬೆದರಿಕೆ, ಬ್ಲಾಕ್ ಮೇಲ್ ಮಾಡುತ್ತ ರಾಜೀನಾಮೆ ಕೊಡುವ ಗೊಂದಲವನ್ನು ಪಾರ್ಲಿಮೆಂಟಿನಲ್ಲಿ ಒಡ್ಡಿದ್ದ ನೆಹರೂ ಮನಸ್ಸು ಮಾಡಿದ್ದರೆ ಹೊರಗಿಂದಲೂ, ಒಳಗಿಂದಲೂ ಸುಧಾರಿಸಬಹುದಿತ್ತು. ಪ್ರಜಾಪ್ರಭುತ್ವಕ್ಕೆ ಹೊರ ನಿಯಂತ್ರಣ ಅಪಾಯಕಾರಿ. ಬಿಗಿ ಹಿಡಿದರೆ ಸರ್ವಾಧಿಕಾರಕ್ಕೆ ಜಾರಬಹುದಾದ ಪ್ರಜಾಪ್ರಭುತ್ವದ ಯಶಸ್ಸು ಚುನಾವಣೆಗೆ ನಿಲ್ಲುವವರ ಗುಣ ಸ್ವಭಾವ ಮೆರಿಟ್ ಆಧಾರದಲ್ಲಿ ನಿಂತರೆ ಮಾತ್ರ ಸಾಧ್ಯ ಎಂಬುದನ್ನು ನೆಹರೂಗೆ ತಿಳಿಯಲೇ ಇಲ್ಲ. ನೀನು ಅಯೋಗ್ಯ, ರಾಜಕಾರಣಕ್ಕೆ ಅನರ್ಹ, ಜಾತಿಯೊಂದೇ ಮುಖ್ಯವಲ್ಲ, ನೀತಿಯೂ ಮುಖ್ಯ. ಅದನ್ನು ಸಂಪಾದಿಸಿಕೊಂಡು ಬಾ ಎಂದು ನೆಹರೂ ಗುಡುಗಿದ್ದರೆ ವಿದ್ಯೆ ಸಂಸ್ಕೃತಿಹೀನರು ರಾಜಕೀಯದಲ್ಲಿ ಬೆಳೆಯುತ್ತಿರಲಿಲ್ಲ. ಅಂಥವರ ಸಂತಾನವೂ ಬೆಳೆಯುತ್ತಿರಲಿಲ್ಲ. ನೆಹರೂ ಆ ಚಿಂತೆಯನ್ನೇ ಮಾಡದೆ ವಿಲಾಸೀ ಜೀವನ, ಮೋಜಿನ ವೈಭವ, ಹೊಗಳಿಕೆ, ಪಾರ್ಟಿಯ ಚೀಲಕ್ಕೆ ಹಣ ತುಂಬುವ ನೀಚರ ಪಾಲನೆ ಪೋಷಣೆ ರಕ್ಷಣೆಯಲ್ಲಿ ತೊಡಗುತ್ತ, ತನ್ನನ್ನು ಬಿಟ್ಟರಿಲ್ಲ ಎಂಬ ಭ್ರಮಾಲೋಕದಲ್ಲಿ ವಿಹರಿಸುತ್ತ ದೇಶನಾಶಕ ಶಕ್ತಿಗಳನ್ನು ಬೆಳೆಸಿದುದರ ಪೂರ್ಣಫಲ ಸಿಕ್ಕಿದ್ದು ಮಾತ್ರ ಇಂದಿರಾಗಾಂಧಿಯವರಿಗೇ!
ಕೊನೆಗೆ ಇವರುಗಳು ಹುಟ್ಟುಹಾಕಿದ ಹೈಕಮಾಂಡ್ ಕಲ್ಚರ್ ನೀನೇ ಪ್ರಧಾನಿಯಾಗು ಎಂಬ ಗೋಗರೆತದ ಅಜ್ಞಾನದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರೂ, ಸರಿಹೊತ್ತಿನವರೆಗೂ ನಮ್ಮದು ಮಾತ್ರ ಬಲವಾದ ಹೈಕಮಾಂಡ್ ಪಕ್ಷ ಎಂದೇ ಭ್ರಮಿಸಿ ಸಂಭ್ರಮಿಸುತ್ತಿದೆ. ರಾಷ್ಟ್ರಭಕ್ತಿ, ರಾಷ್ಟ್ರಕ್ಷೇಮ, ರಾಷ್ಟ್ರಪ್ರೇಮ, ರಾಷ್ಟ್ರಭದ್ರತೆ, ಸಾರ್ವಭೌಮತೆ, ಏಕತೆ, ಸಮರಸತೆ, ಸಮಗ್ರತೆ, ಬಾಹ್ಯಾಂತರ ಶತ್ರುನಿಗ್ರಹ, ರಾಷ್ಟ್ರಾಭಿವೃದ್ಧಿ, ಈ ಬೃಹತ್ ಜನಸಂಖ್ಯಾ ವ್ಯವಸ್ಥೆಯ ರಕ್ಷಣೆಗೆಂದು ಹುಟ್ಟಿಬಂದು ಅನೇಕ ವರ್ಷಗಳ ಕಾಲ ಈ ಗುರಿಗೇ ಗಂಟುಬಿದ್ದು ಶ್ರಮಿಸಿದ, ಈ ಮಹಾನ್ ಸಂಸ್ಥೆಯ ಮೂಲಸ್ವರೂಪ, ಉದ್ದಿಶ್ಯ, ಘನತೆ, ಬಲಿದಾನ, ತ್ಯಾಗ, ಕ್ರತುಶಕ್ತಿ, ಕರ್ತೃಶಕ್ತಿ, ದುಷ್ಟದಮನದ ಕ್ಷಾತ್ರಶಕ್ತಿ, ಅಂತಃಶೋಧಗಳಂಥ ರಾಜಕಾರಣದ ಚಿರಂತನ ಮೌಲ್ಯಗಳು ರಾಜಾಜಿ, ಪಟೇಲ್, ರಾಜೇಂದ್ರ ಪ್ರಸಾದ್ ಇಂಥ ಮಹನೀಯರೊಂದಿಗೇ ಮಣ್ಣಾಗಿ ಹೋದದ್ದು ಈ ದೇಶದ ದುರಂತ!
ಒಂದು ಕುಟುಂಬವೇ ಅಧಿಕಾರದ ಸೂತ್ರಹಿಡಿದು ಹೈಕಮಾಂಡಾಗಿ, ಎಲ್ಲೆಲ್ಲೂ ತನ್ನ ಬಾಹುಬಲದಿಂದ ಸರ್ವಾಧಿಕಾರಿ ಧೋರಣೆಯಾಗಿ ಪರಿವರ್ತನೆಗೊಂಡದ್ದು ಈ ದೇಶದಲ್ಲಿ ನೆಹರೂ ಕುಟುಂಬ ಮಾತ್ರ. ಹಾಗೇ ಕುಟುಂಬವೊಂದು ಹೈಕಮಾಂಡಾಗಿ ಬೆಳೆದವೆಲ್ಲ ವರ್ತಮಾನದಲ್ಲಿ ಕಾಂಗ್ರೆಸ್ಸಿನಂತೆ ಅವನತಿಯ ಹಾದಿಯನ್ನು ಹಿಡಿದಿವೆ. ಹಿಡಿಯುತ್ತಲೂ ಇವೆ. ಮುಲಾಯಂ ಸಿಂಗ್, ಲಾಲೂ, ಬಾದಲ್, ಡಿಎಂಕೆ, ದೇವೇಗೌಡ ಇವರುಗಳು ಕಟ್ಟಿದ ಪ್ರಾದೇಶಿಕ ಪಕ್ಷಗಳ ಅಸ್ತಿತ್ವಕ್ಕೆ ಸಂಚಕಾರ ಬಂದಿದ್ದು ಉಳಿವಿಗಾಗಿ ಹೋರಾಡುತ್ತಿದ್ದಾರೆ. ರಾಷ್ಟ್ರೀಯ ಪಕ್ಷವಾಗಲೀ, ಪ್ರಾದೇಶಿಕ ಪಕ್ಷವಾಗಲೀ ಅದನ್ನು ಕುಟುಂಬವೊಂದು ಹೈಕಮಾಂಡಾಗಿ ನಿಯಂತ್ರಿಸುತ್ತಿದ್ದರೆ ಹೆಚ್ಚು ಕಾಲ ಬಾಳಲಾರದು. Of course ಬಿಜೆಪಿಯಲ್ಲೂ ಹೈ ಕಮಾಂಡ್ ಕಲ್ಚರ್ ಇದೆ. ಆದರೆ ಅದು ಒಂದು ಕುಟುಂಬದ ನಿಯಂತ್ರಣದಲ್ಲಿಲ್ಲ. ದೇಶಹಿತಕ್ಕಾಗಿ ಸರ್ವಾಧಿಕಾರಿ ಧೋರಣೆಯನ್ನು ಇಂದಿರಾಗಾಂಧಿಯವರು ಮೆರೆದಂತೆಯೇ ಮೋದಿಯವರು ಹೊರತಾಗದೇ ಇದ್ದಾರೆ; ಆದರೆ ಸ್ವಾರ್ಥಕ್ಕಾಗಿಯಲ್ಲ!
ಕಾಂಗ್ರೆಸ್ ಹೈಕಮಾಂಡ್ ಕಲ್ಚರನ್ನು ಬಲವಾಗಿ ಕರ್ನಾಟಕದಲ್ಲಿ ಬೆಳೆಸಿತ್ತು. ಆದರೆ, ಕಾಂಗ್ರೆಸ್ ಉಗ್ರಾಣಕ್ಕೆ ಇತ್ತೀಚೆಗೆ ಬಂದವರು, ಮುಂಚೂಣಿಯಲ್ಲಿರುವ ನಾಯಕರು ತಾವೇ ಹೈಕಮಾಂಡ್ ಎಂಬಂತೆಯೂ ವರ್ತಿಸುತ್ತಿದ್ದಾರೆ. ತಾಕತ್ತಿದ್ರೆ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿ ನೋಡೋಣ ಎಂಬ ಧಾರ್ಷ್ಟ್ಯವನ್ನೂ, ಹೈಕಮಾಂಡ್ ಹೇಳುವವರೆಗೂ ನಾನು ಅಧಿಕಾರದಲ್ಲಿ ಇರುತ್ತೇನೆ ಎಂಬ ಹುಸಿ ವಿನೀತದ ವಿಧೇಯತೆಯನ್ನೂ ಸಾರ್ವಜನಿಕವಾಗಿ ತೋರಿಸಿಕೊಳ್ಳುವ ಮೂಲಕ ಹೈಡಿಮ್ಯಾಂಡನ್ನು ಹೈಕಮಾಂಡ್ ಮುಂದೆ ಅ-ಪರೋಕ್ಷವಾಗಿ ಯಃಕಶ್ಚಿತ್ ಎಂಬಂತೆ ಮೆರೆಯುತ್ತಿರುವುದನ್ನು ನೋಡಿದರೆ ಯಾವ ಪಕ್ಷ ಹೈಕಮಾಂಡ್ ಕಲ್ಚರನ್ನು ಪಾತಾಳದವರೆಗೂ ಬೇರೂರುವಂತೆ ಬೆಳೆಸಿತ್ತೋ ಆ ಪಕ್ಷದ ಬುಡವೇ ಪಾತಾಳದಲ್ಲಿರುವ ಬೇರುಸಹಿತ ಅಲ್ಲಾಡುವಂತೆ ಹೊರ ಜಗತ್ತಿಗೆ ಕಾಣುತ್ತಿದೆ ಅಂದರೆ ಕಾಂಗ್ರೆಸ್ಸಿಗೆ ಸಿಟ್ಟು ಬಂದೀತು!
ಕುಟುಂಬ ರಾಜಕೀಯ, ಓಟಿಗಾಗಿ ಜಾತಿಯಲ್ಲಿ ದೇಶದ ಛಿದ್ರೀಕರಣ, ನ್ಯಾಯದ ಹೆಸರಲ್ಲಿ ಅಯೋಗ್ಯರಿಗೆ ಪುರಸ್ಕಾರ, ಪಟ್ಟ ಇರುವ ತನಕ ಹೈಕಮಾಂಡ್ ಅನ್ನುವ ಬಲ ತನಗಿದ್ದೇ ಇರುತ್ತದೆಂದು ಬಲವಾಗಿ ನಂಬಿಕೊಂಡ ಪಕ್ಷಕ್ಕೆ ಸಾಲು ಸಾಲು ಚುನಾವಣೆಗಳ ಸೋಲಿಂದ ಹೈಕಮಾಂಡ್ ಎಂಬ ದರ್ಪವೇ ಅಡಗಿಹೋಗಿದೆ. ಹೈಕಮಾಂಡ್ ಎಂಬ ಕಲ್ಚರನ್ನು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹುಟ್ಟುಹಾಕಿ ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿ ಪಡಬಾರದ ಕಷ್ಟವನ್ನು ದೇಶವೇ ಪಡುವಂತೆ ಮಾಡಿದ ಪಕ್ಷಕ್ಕೆ ಈಗ ಹೈಕಮಾಂಡ್ ಎಂದರೇನು? ಹೈಕಮಾಂಡ್ ಅಂದರೆ, ಒಂದೇ ಮನೆತನ ನಡೆಸಿಕೊಂಡು ಬರುವ ಪಾಳೇಗಾರಿಕೆ ಅಲ್ಲ ಅಂತ ಅನಿಸುತ್ತಿದೆಯೇನೋ!


