ನನ್ನ ಬಾಳಲ್ಲಿ ನೀನೊಂದು ಅದ್ಭುತ ಪರಿಚಯ. ಸಣ್ಣಗಿನಿಂದಲೂ ನಿನ್ನೊಂದಿಗೆ ನನ್ನ ಸ್ನೇಹ ಅದೇನೋ ಒಂದು ರೀತಿಯ ಬೆಸುಗೆ. ಯಾರೇ ನಮ್ಮನ್ನು ದೂರ ಮಾಡಲು ಬಂದರು ನನ್ನನು ಬಿಟ್ಟು ಹೋಗದ ಗೆಳೆತನ ನಿಜಕ್ಕೂ ಆಶ್ಚರ್ಯವೇ. ಆದರೆ ನಮ್ಮ ಈ ಸ್ನೇಹಕ್ಕೆ ಯಾರ ಕಣ್ಣು ಬಿತ್ತೋ ಏನೋ ಅದೊಂದು ದಿನ ನೀ ನನ್ನ ಬಿಟ್ಟು ಹೋದೆ. ಅದೆಲ್ಲಿ ನಿನ್ನ ಹುಡುಕಿದೆನೋ ನನಗೆ ತಿಳಿಯದು. ಆ ಕ್ಷಣವನ್ನು ನೆನೆದರೆ ನಿಜಕ್ಕೂ ಈಗಲೂ ಕಣ್ಣ ಕಂಬನಿ ಹರಿಯುವುದು.
ಸಣ್ಣಗಿನಿಂದ ಇದ್ದ ನಮ್ಮಿಬ್ಬರ ಸ್ನೇಹ ಏನು ಎಂಬುದು ನಮಗೆ ಮಾತ್ರ ತಿಳಿಯಲು ಸಾಧ್ಯ. ನಾನು ನಿನ್ನನ್ನು ಎಷ್ಟು ಹಚ್ಚಿಕೊಂಡಿದ್ದೆ ಎಂಬುವುದು ನನ್ನ ಗೆಳತಿಯರಿಗೆ ತಿಳಿದಿತ್ತು. ಆದರೂ ಆ ಕ್ಷಣದಲ್ಲಿ ಅಂದ ಆ ಮಾತು ಮನಸು ಪೂರ್ತಿ ಆವರಿಸಿತು. ನಿನ್ನನ್ನು ಬಿಟ್ಟು ಹೇಗಿರುವುದು ಎಂಬುದೊಂದೆ ನನ್ನ ಮನದಲ್ಲಿ ಮೂಡುತ್ತಿದ್ದ ಆತಂಕವಾಗಿತ್ತು. ಆದರೆ ಆ ದೇವರಿಗೂ ನಮ್ಮ ಸ್ನೇಹ ಮುರಿಯಲು ಇಷ್ಟ ಇಲ್ಲ ಎಂಬ ಕಾರಣಕ್ಕಾಗಿಯೇ ಇರಬಹುದು ಮತ್ತೆ ನನಗೆ ನೀ ಸಿಗುವಂತಾಯಿತು. ಅದೇ ಕೊನೆ ನಾನು ನಿನ್ನನ್ನು ಬಿಟ್ಟಿದ್ದದ್ದು, ಮುಂದೆ ಯಾವತ್ತೂ ಹಾಗೆ ಆಗಬಾರದು ಎಂದು ಪ್ರತೀದಿನ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ಕೊನೆಗೂ ನಮ್ಮ ಸ್ನೇಹ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ಇದರಲ್ಲೇ ನೋಡಬಹುದು. ಈ ಐದು ವರ್ಷಗಳ ಸ್ನೇಹ ಎಷ್ಟು ಶಾಶ್ವತ ಎಂಬುವುದನ್ನು ಇದರಿಂದಲೇ ತಿಳಿಯಬಹುದು.
ಮಳೆ ಇರಲಿ, ಬೇಸಿಗೆಯೇ ಇರಲಿ ಸದಾ ನಿನ್ನ ಧ್ಯಾನಿಸುವೆ. ನೀ ಇಲ್ಲವಾದರೆ ಮನದಲ್ಲೇನೋ ತಳಮಳ. ಅದೇಕೋ ಏನೆಂದು ತಿಳಿಯೆನು. ಹನಿ ಹನಿ ಮಳೆಗೆ ಮನ ಸದಾ ನಿನ್ನ ಬಯಸಿತು. ಆ ಚಳಿಯ ಸಮಯದಲ್ಲೂ ನೀ ಜೊತೆಗಿದ್ದರೆ ಅದೇನೋ ಬೆಚ್ಚಗಿನ ಅನುಭವ. ಅದರಲ್ಲೂ ನನ್ನ ಗೆಳತಿಯರಿಗೆ ನಮ್ಮಿಬ್ಬರನ್ನು ಕಂಡರೆ ಅದ್ಯಾಕೋ, ಒಂದು ರೀತಿ ಆಡುತ್ತಾರೆ. ಪ್ರತೀ ಸಲವೂ ನಮ್ಮನ್ನು ದೂರ ಮಾಡುವ ವಿಚಾರವನ್ನೇ ಮಾತನಾಡುತ್ತಿರುತ್ತಾರೆ.
ಇಲ್ಲಿ ಎಲ್ಲರ ಮನಸಲ್ಲೂ ಒಂದು ಪ್ರಶ್ನೆ ಮೂಡಿರಬಹುದು ನೀನು ಅಂದರೆ ಯಾರು ಅಂತ. ಅದು ಬೇರೆ ಯಾರೂ ಅಲ್ಲ ನಮ್ಮೆಲ್ಲರ ಮಳೆಗಾಲದ ನೆಚ್ಚಿನ ಗೆಳೆಯ ಛತ್ರಿ. ಮಳೆಯ ಸಮಯದಲ್ಲಂತೂ ನಿನ್ನನ್ನು ನೆನೆಯದವರು ಯಾರೂ ಇಲ್ಲ. ಈ ಸಮಯದಲ್ಲಿ ಪ್ರತೀ ಅಂಗಡಿಗಳಲ್ಲೂ ನಿನ್ನದೇ ಹವ. ಈಗಂತೂ ನೀನಿಲ್ಲದೆ ಮನೆಯಿಂದ ಹೊರಗೆ ಹೋಗಲು ಸಾಧ್ಯವೇ ಇಲ್ಲ. ಪ್ರತಿಯೊಬ್ಬರಿಗೂ, ಪ್ರತಿಯೊಂದು ವಸ್ತುವಿಗೂ ಒಂದಲ್ಲಾ ಒಂದು ದಿನ ಒಳ್ಳೆಯ ಸಮಯ ಎಂದು ಬಂದೇ ಬರುತ್ತದೆ. ಆಗ ಪ್ರತಿಯೊಬ್ಬರಿಗೂ ನಮ್ಮ ಸಾಮರ್ಥ್ಯ ಏನು ಎಂದು ತಿಳಿಯುತ್ತದೆ. ಆ ಸಮಯಕ್ಕಾಗಿ ಕಾಯುವುದು ಮುಖ್ಯ.
- ಧನ್ಯಶ್ರೀ ಆಚಾರ್ಯ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


