ಕಥೆ: ಬೆಕ್ಕಿನ ಮರಿ

Upayuktha
0


ದೊಂದು ರಾತ್ರಿ ಸಿಕ್ಕಾಪಟ್ಟೆ ಮಳೆ ಹೊಯ್ಯುತ್ತಿತ್ತು. ಆಕಾಶ ತೂತಾಗಿ ನಲ್ಲಿಯಿಂದ ಧೋ ಎಂದು ನೀರು ಸುರಿಯುವಂತೆ ಮಳೆ ಹೊಯ್ಯುತ್ತಿತ್ತು.  ಅವನು ಪ್ರಾಜೆಕ್ಟ್ ಕೆಲಸಕ್ಕೋಸ್ಕರ ಕಾಲೇಜಿನಲ್ಲಿ ಕಾದು ನಿಂತವನಿಗೆ ಲೇಟ್ ಆಗಿತ್ತು. 


ರಾತ್ರಿ ಎಂಟು ಗಂಟೆ ಕಳೆದಿತ್ತು. ಮಳೆ ನಿಲ್ಲುವುದೋ ಎಂದು ಕಾಯುತಿದ್ದ. ಅವನಲ್ಲಿ ರೈನ್ ಕೋಟ್ ಇಲ್ಲ. ನವೆಂಬರ್ ತಿಂಗಳಿನ ಮಧ್ಯ ಭಾಗದಲ್ಲಿ ಈ ರೀತಿ ಮಳೆ ಬರುವುದೆಂದು ಅವನು ಕನಸಲ್ಲೂ ಎಣಿಸಿರಲಿಲ್ಲ. ಅವನೆಲ್ಲ ಕ್ಲಾಸ್‌ಮೇಟ್ಸ್ ಮೊದಲೇ ಹೊರಟು ಹೋಗಿದ್ದರು. 



ಕಾಲೇಜ್ ನ ವರಾಂಡದಲ್ಲಿ ನಿಂತವನು ಕಾಯುತ್ತಿರಲು, ಸಣ್ಣದಾಗಿ “ಮಿಯೋ ಮಿಯೋ” ಎಂದು ಕೇಳಿಸಿತು. ಒಂದೆರಡು ಬಾರಿ ಅದನ್ನು ಪರಿಗಣಿಸದ ಅವನು ಮತ್ತೆ ಮತ್ತೆ ಕೇಳಲು ಆ ಮಳೆಗೆ ಯಾವುದೋ ಬೆಕ್ಕಿನ ಮರಿ ಈ ರೀತಿ ಕೂಗುವುದನ್ನು ಬಿಟ್ಟು ಹೋಗಲು ಮನಸು ಕೇಳಲಿಲ್ಲ.

 

ಸದ್ದನು ಅನುಸರಿಸಿ ಹೊರಟ, ಮೊಬೈಲ್ ಟಾರ್ಚ್ ಹಾಕಿ ಒಂದೆರಡು ಕ್ಲಾಸ್ ರೂಮ್ ಹುಡುಕಿದ. ಸಿಗಲಿಲ್ಲ. ಮೇಲಿನ ಮಹಡಿಯಿಂದ ಇರಬಹುದು ಎಂದು ಮೊದಲನೇ ಮಹಡಿಯ ಎರಡನೇ ಕ್ಲಾಸ್ ನೋಡಲು ಅಲ್ಲಿ ಬೆಂಚಿನ ಕೆಳಗೆ ಮುದುಡಿ ಮಲಗಿತ್ತು ಒಂದು ಪುಟ್ಟ ಬೆಕ್ಕಿನ ಮರಿ.

 

ಜಾಗ್ರತೆಯಿಂದ ಎತ್ತಿಕೊಂಡ ಅದನ್ನು ಬ್ಯಾಗ್ ಅಲ್ಲಿದ್ದ ಅವನ ಟಿ - ಷರ್ಟ್ ಅಲ್ಲಿ ಸುತ್ತಿ ಬ್ಯಾಗ್ ಅಲ್ಲಿರಿಸಿದ. ಹೊರಟು ಹೋಗಲು ಅನುವಾದವನಿಗೆ ಹಿಂದಿನ ಬೆಂಚಲ್ಲಿ ಏನೋ ಇರುವಂತೆ ಭಾಸವಾಯಿತು. ಹೋಗಿ ನೋಡಲು ಅಲ್ಲಿ ಮಲಗಿದ್ದಳು “ಮಲ್ಲಿ”.


ಮಲ್ಲಿ ಅವನ ಜೂನಿಯರ್. ಅವಳನ್ನು ಎಬ್ಬಿಸಿದ ಅವನು “ನೀನೇನ್ ಇಲ್ಲಿ, ಇನ್ನೂ ಮನೆಗೆ ಹೋಗಿಲ್ವಾ?” ಮಲ್ಲಿ “ನಿನ್ನೆ ರಾತ್ರಿ ಪೂರ್ತಿ ನಿದ್ದೆ ಇಲ್ಲ, ಮನೆಯಲ್ಲಿ ತುಂಬಾ ಗದ್ದಲವಿತ್ತು, ಅಯ್ಯೋ ಇಷ್ಟು ಲೇಟ್ ಆಯ್ತು, ಏನ್ ಮಾಡ್ಲಿ, ಮಳೆ ಬೇರೆ ಇದೆ, ಮನೆಗೆ ಹೇಗೆ ಹೋಗಲಿ” ಎಂದು ಒಂದೇ ಉಸಿರಿನಲ್ಲಿ ತಡವರಿಸಿ ಹೇಳಿದಳು. ಅವನಿಗೆ ಅವಳನ್ನು ನೋಡಿ ಬೇಸರವೆನಿಸಿತು, “ನಿನ್ನ ಮನೆಗೆ ಬಿಟ್ಟು ಹೋಗುವೆ, ಬಾ ನಂಜೊತೆ” ಎಂದು ಕೈ ಹಿಡಿದು ಕರೆದುಕೊಂಡು ಹೋದ. ಅವನಿಗೊತ್ತು ಹಾಗೆ ಕರೆದೊಯ್ಯದಿದ್ದರೆ ಅವಳು ಬರುವವಳಲ್ಲ.


ಅಷ್ಟೊತ್ತಿಗೆ ಮಳೆ ಕಮ್ಮಿ ಆಗಿತ್ತು. ಚಿಕ್ಕದಾಗಿ ಜಿಟಿ ಜಿಟಿ ಬರುತಿತ್ತು. ಅವನದ್ದು ಹೊಸ ರಾಯಲ್ ಎನ್‌ಫೀಲ್ಡ್ ಬೈಕ್, ಹಿಂದಿನ ದಿನ ಅಕ್ಕ ಕೊಡಿಸಿದ್ದು. ಅಲ್ಲಿ ಮೊದಲ ಸಹ ಪ್ರಯಾಣಿಕ ಮಲ್ಲಿ. ಅಕ್ಕನ ಮಾತು “ನನ್ನ ಬಿಟ್ಟು ಬೇರೆ ಯಾರನ್ನಾದ್ರೂ ಹಿಂದ್ಗಡೆ ಕೂರಿಸ್ಕೊಂಡು ಹೋದ್ರೆ ನೋಡು” ಎಂದು ಜೋರು ಮಾಡಿದ್ದು ನೆನಪಾಗಿ ಚಿಕ್ಕದಾಗಿ ನಕ್ಕ.


ಹಾಗೆ ಜಿಟಿ ಜಿಟಿ ಮಳೆಯಲ್ಲಿ, ಅವನು, ಮಲ್ಲಿ ಜೊತೆಗೆ ಬೆಕ್ಕಿನ ಮರಿ ಹೊರಟರು. ಮಳೆ ಬರುತ್ತಿತ್ತು ಎಂದು ಮಲ್ಲಿ ಶಾಲ್ ತಲೆಗೆ ಸುತ್ತಿ ಕುಳಿತವಳು ಮೆಲ್ಲನೆ ಅವನ ತಲೆಗೂ ಸೇರಿಸಿ ಹಿಡಿದಳು. ಅವನು ಮನಸಲ್ಲೇ ಮುಗುಳ್ನಕ್ಕ. ಅವಳು ಹೇಳಿದ ದಾರಿಯಲ್ಲಿ ಅವಳ ಮನೆಗೆ ಹೋದವನಿಗೆ ಅವಳು ಇಳಿಯಲು, ಇದುವೇ ಮನೆ ಬರ್ತಿಯಾ, ಚಾಯ್ ಕುಡಿದು ಹೋಗು ಎಂದು ಹೇಳಲು, ಒಂದು ವರ್ಷದಿಂದ ಆ ದಿನಕ್ಕೋಸ್ಕರ ಕಾಯುತ್ತಿದ್ದ ಹುಡುಗ “ರೋಗಿ ಬಯಸಿದ್ದು ಹಾಲು ವೈದ್ಯ ಹೇಳಿದ್ದು ಹಾಲು” ಎಂಬ ಮಾತಿನಂತೆ ಬೈಕ್ ಇಟ್ಟು ನೇರವಾಗಿ ಮನೆಗೆ ಹೋದ. ಮಲ್ಲಿಯ ಅಮ್ಮ ಮಾಡಿಕೊಟ್ಟ ಬಿಸಿ ಬಿಸಿ ಚಾಯ್ ಕುಡಿದು ಮನಸಲ್ಲೇ ಅತ್ತೆ ಎಂದು ಫಿಕ್ಸ್ ಆಗಿ ಬಿಟ್ಟ. 


ಅಲ್ಲಿಂದ ಹೊರಡಲು ಗೇಟ್ ನ ಬಳಿ ಬರಲು ಬ್ಯಾಗ್ ಅಲ್ಲಿದ್ದ ಬೆಕ್ಕಿನ ಮರಿ “ಮಿಯೋ ಮಿಯೋ” ಎಂದು ಜೋರು ಸದ್ದು ಮಾಡಲು, ಮಲ್ಲಿ “ಇದನ್ನು ನನಗೆ ಕೊಡುವೆಯ?!” ಎಂದಳು. 


ಬ್ಯಾಗ್ ಇಂದ ತೆಗೆದು ಕೊಡಲು, ಮಲ್ಲಿ “ಈ ಬೆಕ್ಕಿನ ಮರಿಯನ್ನು ಸುತ್ತಿದ ಟಿ ಷರ್ಟ್ ನಾಳೆ ಬೆಳಗ್ಗೆ ನನ್ನನ್ನು ಕಾಲೇಜಿಗೆ  ಕರೆದುಕೊಂಡು ಹೋಗಲು ನೀನು ಬರುವಾಗ ತೆಗೆದುಕೋ” ಎಂದು ಸಣ್ಣನೆ ಒಂದು ನಗು ಬೀರಿ ಹೇಳಿ ಸರ ಸರನೆ ಮನೆಗೆ ನಡೆದಳು. 


ಅವನು ಗಟ್ಟಿಯಾಗಿ “ನನ್ನ ಬೆಕ್ಕಿನ ಮರಿ ನೋಡಲು ನಾನು ದಿನವೂ ಇಲ್ಲಿಗೆ ಬರಬೇಕಾದಿತು” ಎಂದು ನಗಾಡುತ್ತ ಹೇಳಿ ಬೈಕ್ ಸ್ಟಾರ್ಟ್ ಮಾಡಿ “ಧಡ್ ಧಡ್” ಎಂದು ಮುಗುಳ್ನಗುತ್ತಾ ಹೊರಟ.


- ಸಚಿನ್ ಕುಳಮರ್ವ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top