ಬಹುಮುಖ ಪ್ರತಿಭೆಯ ಸಾಹಿತಿ ಶಕುಂತಲಾ ಸಿಂಧೂರ

Upayuktha
0

(ನಾಳೆ ಬಿಡುಗಡೆಯಾಗಲಿರುವ ಅವರ ಕೃತಿ 'ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು)





ಡು ಮುಟ್ಟದ ಸೊಪ್ಪಿಲ್ಲ. ಪ್ರೊ. ಶಕುಂತಲಾ ಸಿಂಧೂರ ಅವರು ತೊಡಗಿಸಿಕೊಳ್ಳದ ಕ್ಷೇತ್ರವಿಲ್ಲ. ಕಾಲೇಜು ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಲೇ ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶ್ರೀಮತಿ ಶಕುಂತಲಾ ಸಿಂಧೂರ ಅವರು ಬಹುಮುಖ ಪ್ರತಿಭೆ ಹಾಗೂ ವ್ಯಕ್ತಿತ್ವವನ್ನು ಹೊಂದಿದವರು. ಅವರು ಕವನ ಲೇಖನ, ಉಪನ್ಯಾಸ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಚಾರಗಳಲ್ಲಿ ಅಭಿವೃದ್ಧಿಪರ ಚಟುವಟಿಕೆಗಳು ರಾಷ್ಟ್ರೀಯ ಸೇನಾ ಯೋಜನೆಯ ಅಧಿಕಾರಿಯಾಗಿ, ಹತ್ತು ಹಲವಾರು ಶೈಕ್ಷಣಿಕ ಹಾಗೂ ಸಾಹಿತ್ಯಕ ಚಟುವಟಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗುವುದರಿಂದ ಹಿಡಿದು ಯುಜಿಸಿ ಪ್ರಾಯೋಜಿತ ಕಾರ್ಯ ಯೋಜನೆ ಅಡಿಯಲ್ಲಿ ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು ಎಂಬ ವಿಷಯ ಕುರಿತ ಸಂಶೋಧನಾ ಪ್ರಬಂಧ ರಚನೆಯವರೆಗೆ, ಯೋಗದಿಂದ ಹಿಡಿದು ಆಧ್ಯಾತ್ಮದವರೆಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅವರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.


ಶಿಕ್ಷಣ ಹಾಗೂ ಸಾಹಿತ್ಯ ಅವರ ಎರಡು ಕಣ್ಣುಗಳು ಎಂದರೆ ತಪ್ಪಿಲ್ಲ, ಅಂತೆಯೇ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆದೇಶದ ಮೇರೆಗೆ ಪ್ರಬಂಧ ಸಂಚಯ ಹಾಗೂ ಷಟ್ಪದಿ ಕಾವ್ಯ ಸಂಗ್ರಹ ಎರಡು ಪಠ್ಯಪುಸ್ತಕಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಪ್ರಕಟಿತ ಕೃತಿಗಳು, ಅಭಿನಂದನಾ ಗ್ರಂಥಗಳು, ಸಂಪಾದನೆಗಳು ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗುವ  ಕಾರ್ಯಕ್ರಮಗಳು, ಆಕಾಶವಾಣಿ ಕಾರ್ಯಕ್ರಮಗಳು ಸಂಶೋಧನಾ ಚಟುವಟಿಕೆಗಳು, ರಾಜ್ಯ, ರಾಷ್ಟ್ರ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ಯು ಟ್ಯೂಬ್ ಆನ್ಲೈನ್ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿದ್ದು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.


1960 ರ ಜೂನ್ ತಿಂಗಳ 28ನೇ ದಿನಾಂಕದಂದು ಜನಿಸಿದ ಶಕುಂತಲಾ ಸಿಂಧೂರ ಅವರ ಊರು ಗದಗ ಜಿಲ್ಲೆಯ ಕೋಟುಮಚಗಿ ಗ್ರಾಮ. ರಾವ್ ಸಾಹೇಬ್ ದಿ ವೀರಪ್ಪ ಪರಪ್ಪ ಚವಡಿ ಮನೆತನದಲ್ಲಿ ಜನಿಸಿದ್ದು ಹಿರಿಯ ಸ್ವಾತಂತ್ರ್ಯ ಯೋಧರಾದ ಸಿಂಧೂರ ಸಿದ್ದಪ್ಪ ಜನವರ ದತ್ತಕ ಪುತ್ರರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾತಿನಿಧ್ಯ ನೀಡುತ್ತಿದ್ದ ಅವರು ಮಗಳು ಶಕುಂತಲಾ ಅವರಿಗೆ ಹೆಚ್ಚಿನ ಶಿಕ್ಷಣ ಪಡೆಯಲು ಸದಾ ಪ್ರೋತ್ಸಾಹಿಸುತ್ತಿದ್ದುದರ ಪರಿಣಾಮವಾಗಿ ಹೈಸ್ಕೂಲು ಹಾಗೂ ಪದವಿಯನ್ನು ಎಸ್ ಎ ಕಾಲೇಜ್ ನರೇಗಲ್ ನಲ್ಲಿ ಪೂರೈಸಿದರು. ಶಕುಂತಲಾ ಅವರು ವಿದ್ಯಾರ್ಥಿ ದೆಸೆಯಿಂದಲೂ  ಸದಾ ಅಧ್ಯಯನ ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಂಡವರು. ಸ್ನಾತಕೋತ್ತರ ಪದವಿಯ ನಂತರ ಗದುಗಿನ ಪ್ರತಿಷ್ಠಿತ ಕೆ ಎಲ್ ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಪದವಿ ಕಾಲೇಜಿನಲ್ಲಿ 1986 ರಿಂದ 2020 ರವರೆಗೆ ಅಸೋಸಿಯೇಟ್ ಕನ್ನಡ ಪ್ರಾಧ್ಯಾಪಕರಾಗಿ 34 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದರು.


ಕನ್ನಡ ಸಾಹಿತ್ಯ ಹಾಗೂ ಜಾನಪದ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿದ್ದ ಶಕುಂತಲಾ ಅವರು ಓದು,ಅಧ್ಯಯನ,ಬರೆವಣಿಗೆಗಳ ಜೊತೆ ಜೊತೆಗೆ ಕಾಲೇಜು ಮಕ್ಕಳನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಇಂದಿಗೂ ಕೂಡ ಅವರ ವಿದ್ಯಾರ್ಥಿಗಳು ತಾವು ಅವರ ಶಿಷ್ಯರೆಂದು ಹೇಳಿಕೊಳ್ಳಲು ಹೆಮ್ಮೆ ಪಡುವಂತಹ  ಅಧ್ಯಯನಶೀಲ ವ್ಯಕ್ತಿತ್ವ ಅವರದು.


ಜಾನಪದ ಎಂಬ ದೇಶಿ ಸೊಗಡಿನ ಸಾಹಿತ್ಯ ಸಂರಕ್ಷಕರಾಗಿರುವ ಇವರು ಸಂಶೋಧನಾ ಪ್ರಿಯರೂ ಹೌದು. ಹಳೆಯ ವಿದ್ಯಾರ್ಥಿನಿ ಸಂಘದ ಚೇರಮನ್ ಆಗಿದ್ದರು. ಕಾಲೇಜಿನ ಕನ್ನಡ ಸಂಘದ ಕಾರ್ಯಾಧ್ಯಕ್ಷರಾಗಿದ್ದ ಇವರು ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಟನೆಯ ಉಪಾಧ್ಯಕ್ಷರು ಕೂಡ ಆಗಿದ್ದರು. ಕ.ವಿ.ವಿ ಅಧ್ಯಾಪಕರ ಸಂಘದ ಕೋಶಾಧಿಕಾರಿಯಾಗಿದ್ದ ಇವರು ವೃತ್ತಿಯಲ್ಲಿರುವಾಗ ಸಿಬ್ಬಂದಿ ವರ್ಗದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಗಾಂಧಿ ಅಧ್ಯಯನ ಕೇಂದ್ರದ ಸಂಚಾಲಕರಾಗಿದ್ದ ಇವರು  ಕಾಲೇಜು ಮ್ಯಾಗಜಿನ್ ನ ಪ್ರಧಾನ ಸಂಪಾದಕರಾಗಿ ಗುರುತರ ಹೊಣೆಯನ್ನು ನಿರ್ವಹಿಸಿದವರು. 


ಪುಸ್ತಕ ಪ್ರಕಟಣೆಗಳು:

ಏಕಲವ್ಯ ಉಪಾಖ್ಯಾನ ತೌಲನಿಕ ಅಧ್ಯಯನ (ಜಾನಪದ ವಿದ್ವಾಂಸ ಡಾ. ಬಿ ಎಸ್ ಗದ್ದಗಿಮಠ ಮತ್ತು ಹಿರಿಯ ಚೇತನ ಗಂಗಣ್ಣ ಕೋಟಿ) 


* ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು ಅವರ ಮುಖ್ಯ ಕೃತಿಗಳಾಗಿದ್ದರೆ ಅವರ ಸಂಪಾದನೆಯಲ್ಲಿ 'ಹಿರಣ್ಯಕಶಿಪು ದೊಡ್ಡಾಟ, ಕೃತಿಯು ಪ್ರಕಟವಾಗಲಿದೆ.


* 2012-13ನೇ ಸಾಲಿನ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಬಿ ಎಸ್ ಸಿ ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಕನ್ನಡ ಪಠ್ಯಪುಸ್ತಕದಲ್ಲಿ 'ಪ್ರಬಂಧ ಸಂಚಯ' 


* ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಪ್ರಸಾರಂಗದ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 2016ರಲ್ಲಿ ಐಚ್ಚಿಕ ಕನ್ನಡ ಪುಸ್ತಕ 

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ದೂರ ಶಿಕ್ಷಣ ಅಧ್ಯಯನ ವಿದ್ಯಾರ್ಥಿಗಳಾಗಿ ಅವಶ್ಯಕ ಮತ್ತು ಐಚ್ಛಿಕ ಕನ್ನಡ ಗದ್ಯವನ್ನು ಇವರು ಸಿದ್ದಪಡಿಸಿದ್ದು 2004 ರಿಂದ ಇಂದಿಗೂ ಮುಂದುವರೆದಿದೆ.


ಇದಲ್ಲದೆ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾಗಿ ನೇತ್ರದಾನ, ರಕ್ತದಾನ ಹಾಗೂ ಶ್ರಮದಾನ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ಏರ್ಪಡಿಸಿ ವಿದ್ಯಾರ್ಥಿಗಳನ್ನು ತೊಡಗಿಸಿರುವುದಲ್ಲವೇ ಆಯಾ ಭಾಗದ ಗ್ರಾಮೀಣ ಜನರಲ್ಲಿ ಜಾಗೃತಿಯನ್ನು ಮೂಡಿಸಿದ್ದಾರೆ.


ವಚನಾಮೃತ, ಶರಣರ ಸಂದೇಶ ಕಾರ್ಯಕ್ರಮಗಳು, ದೂರದರ್ಶನದ ಡಿಡಿ ಒಂದು ಮತ್ತು ಚಂದನ ವಾಹಿನಿಗಳಲ್ಲಿ ಪ್ರಸಾರವಾಗಿದ್ದು 2010ರಲ್ಲಿ ಏಕಕಾಲಕ್ಕೆ 58 ರಾಷ್ಟ್ರಗಳಲ್ಲಿ ಈ ಕಾರ್ಯಕ್ರಮವು 12 ಸರಣಿಗಳಲ್ಲಿ ಪ್ರಸಾರವಾಗಿದ್ದು ಇವುಗಳನ್ನು ಡಿವಿಡಿ ರೂಪದಲ್ಲಿ ಸಂಗ್ರಹಿಸಿ ಲೋಕಾರ್ಪಣೆ ಮಾಡಲಾಗಿದೆ.


. ಡಾ. ಶಾಂತ ಇಮ್ರಾಪುರ ಅವರ ಮೇಜರ್ ರಿಸರ್ಚ್ ಪ್ರಾಜೆಕ್ಟ್ ಯುಪಿಐ ಯೋಜನೆಯಡಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಐಎಸ್‌ಬಿಎನ್ ಪುಸ್ತಕದಲ್ಲಿ ಇವರ ಮೂರು ಸಂಶೋಧನಾ ಲೇಖನಗಳು ಪ್ರಕಟವಾಗಿವೆ.


ಯುಜಿಸಿ ಪ್ರಾಯೋಜಿತ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧ ಮಂಡನಕಾರರಾಗಿ ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಿದ್ದು ಅವು ಸ್ಮರಣ ಸಂಪುಟಗಳಲ್ಲಿ ಪ್ರಕಟವಾಗಿವೆ.

ಇತಿಹಾಸದಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪುರಾತತ್ವ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಬೆಂಗಳೂರು ಸಂಸ್ಥೆಗಳವರು ಆಯೋಜಿಸಿದ ರಾಜ್ಯ, ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಾಗೂ ಸಮಾವೇಶಗಳಲ್ಲಿ ಹಲವಾರು ವಿಷಯಗಳ ಬಗ್ಗೆ ಸಂಶೋಧನಾ ಪ್ರಬಂಧ ಮಂಡಿಸಿದ್ದು ಅವೆಲ್ಲವೂ ಆಯಾ ವರ್ಷದ ಐ ಎಸ್ ಬಿ ಎನ್ ಪುಸ್ತಕಗಳಲ್ಲಿ ಪ್ರಕಟವಾಗಿವೆ.


 ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ಆಯೋಜಿಸಿದ ಅಖಿಲ ಭಾರತ ಹೊರನಾಡು ಕನ್ನಡಿಗರ ಸಮ್ಮೇಳನ 2024ರಲ್ಲಿ ಆದವಾನಿ ಮತ್ತು ಅಕ್ಕಲಕೋಟೆಗಳಲ್ಲಿ ನಡೆದಿದ್ದು ಆ ಕವಿಗೋಷ್ಠಿಯಲ್ಲಿ ಸ್ವರಚಿತ ಕವನಗಳನ್ನು ವಾಚಿಸಿದ್ದಾರೆ.


ಇದಲ್ಲದೆ ಕೆ ಪಿ ಎಸ್ ಸಿ ಅಧಿಕಾರಿಗಳ ಆದೇಶದ ಮೇರೆಗೆ 2017 ರಿಂದ 2019 ರವರೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಹಾಗೂ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. 


ಹಲವಾರು ರಾಜ್ಯ, ರಾಷ್ಟ್ರೀಯ ಮಟ್ಟದ ಸಮ್ಮೇಳನದ ಗೋಷ್ಠಿಗಳಲ್ಲಿ ಮಾತ್ರವಲ್ಲದೆ  ಬೆಳವಡಿ ಮಲ್ಲಮ್ಮ ಉತ್ಸವ, ಲಕ್ಕುಂಡಿ ಉತ್ಸವ, ಹಂಪಿ ಉತ್ಸವಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಬಂಧವನ್ನು ಮಂಡಿಸಿದ್ದಾರೆ. 


ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ 2008 ರ 'ಬೆಳಗು' ನೇರ ಸಂದರ್ಶನದಲ್ಲಿ ಪಾಲ್ಗೊಂಡಿರುವ ಇವರು ಮುಂದೆ 2018 ರಲ್ಲಿ ' ಓ ಸಖಿ', ಹಾಗೂ 2023 ರಲ್ಲಿ 'ಶುಭೋದಯ ಕರ್ನಾಟಕ 'ದ ದ್ವಿತೀಯ ಆವೃತ್ತಿಯಲ್ಲಿ ಸಂದರ್ಶನಗಳನ್ನು ನೀಡಿದ್ದಾರೆ.


ಹತ್ತು ಹಲವಾರು ದೂರದರ್ಶನ ವಾಹಿನಿಗಳು, ಚಂದನ ವಾಹಿನಿ ಹಾಗೂ ವಿವಿಧ ಖಾಸಗಿ ವಾಹಿನಿಗಳವರು ನಡೆಸಿದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಇವರು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.


ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರಿನವರು ಏರ್ಪಡಿಸಿದ 2011ರ ಯುವ ಲೇಖಕರ ಚೊಚ್ಚಲ ತೃತಿಯ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿರುವ ಇವರು ಹಲವಾರು ಅಭಿನಂದನ ಗ್ರಂಥಗಳಲ್ಲಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಮರಣ ಸಂಚಿಕೆಗಳ ಸಂಪಾದಕ ಮಂಡಳಿಯಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ಸಂಶೋಧನಾ ಲೇಖನಗಳನ್ನು ಕೂಡ ಪ್ರಕಟಿಸಿದ್ದಾರೆ.


ಬೆಂಗಳೂರಿನ ಬಸವ ಸಮಿತಿಯ ಐ ಎಸ್ ಎಸ್ ಎನ್ 'ಬಸವ ಪಥ ' ಮಾಸಿಕ ಜರ್ನಲ್ ಸಂಪುಟಗಳಲ್ಲಿ, ಹಲವಾರು ನಾಡಿನ ಜನಪ್ರಿಯ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ.


ಕಾಲೇಜಿನ ವಿದ್ಯಾರ್ಥಿಗಳಿಗೆ ಆರೋಗ್ಯ ಭಾಗ್ಯ ಜಾಗೃತಿ ಮೂಡಿಸಲು 2001 ರಿಂದ ಯೋಗಾಸನ, ಪ್ರಾಣಾಯಾಮ, ಧ್ಯಾನ ತರಬೇತಿಗಳನ್ನು ಆಯೋಜಿಸುತ್ತಿದ್ದ ಇವರು ಯೋಗ ಸಾಧಕಿಯೂ ಹೌದು. ಕರೋನಾ ಸಮಯದಲ್ಲಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಹಲವಾರು ವೆಬಿನಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ.


ಕ್ರೀಡೆಯಲ್ಲಿ ಆಸಕ್ತಿಯನ್ನು ಹೊಂದಿರುವ ಇವರು ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಭಾಗವಹಿಸಿ ಹಲವಾರು ಕ್ರೀಡಾ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಕರೋನಾದ ಸಂಕಷ್ಟ ಸಮಯದಲ್ಲಿ ಸಾಕಷ್ಟು ದಾನಗಳನ್ನು ಕೈಗೊಂಡಿರುವ ಇವರು ಆಹಾರದ ಕಿಟ್‌ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿದ್ದಾರೆ.


ನಿವೃತ್ತರಾದ ನಂತರವೂ ಕೂಡ ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಹೀಗೆ ಹತ್ತು ಹಲವು ವಿಷಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

ಕನ್ನಡ ಸಾಹಿತ್ಯವನ್ನು ಅಪಾರವಾಗಿ ಪ್ರೀತಿಸುವ ಇವರು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ, ವ್ಯಕ್ತಿತ್ವ ವಿಕಸನಕ್ಕೆ ಪ್ರೇರೇಪಕರಾಗಿದ್ದರು. ಕನ್ನಡ ಸಾಹಿತ್ಯ ಹಾಗೂ ಜಾನಪದದ ಕುರಿತು ಆಕಾಶವಾಣಿ ಧಾರವಾಡ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.


ಗದುಗಿನ ಇನ್ನರ ವೀಲ್ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ಗುರುತರ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಗದುಗಿನ  ಜಗದ್ಗುರು ತೋಂಟದಾರ್ಯ ಮಠದ  ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷರಾಗಿ  ಕಾರ್ಯನಿರ್ವಹಿಸಿದ್ದಾರೆ. ಹತ್ತು ಹಲವರು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಅರಸಿ ಬಂದಿದ್ದು ಅವುಗಳಲ್ಲಿ ಶಿಕ್ಷಕರತ್ನ, ಶಿಕ್ಷಣ ಸೌಗಂಧ, ಮಹಿಳಾ ಸಂಶೋಧನಾ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.


ಸಂಸ್ಕೃತಿ ಸೌಗಂಧ ಪ್ರಶಸ್ತಿ 2003, ಲಾಲ್ ಗೈಡ್ ರಾಷ್ಟ್ರೀಯ ಪ್ರಶಸ್ತಿ 2012, ಸ್ವಾತಂತ್ರ್ಯ ಯೋಧ ಪ್ರಶಸ್ತಿ 2017, ಕಾಯಕಯೋಗಿ ಪ್ರಶಸ್ತಿ 2021, ಶ್ರೀ ಗುರು ಪುಟ್ಟರಾಜ ಗವಾಯಿ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ 2022, ಮಹಿಳಾ ಸಂಶೋಧಕರಿಗೆ ಮೀಸಲಾದ ರಾಷ್ಟ್ರಮಟ್ಟದ ದತ್ತಿ ಪ್ರಶಸ್ತಿಯಾದ 'ಸುಮಂಗಲ ಪಾಟೀಲ ದತ್ತಿ ಮಹಿಳಾ ರಾಷ್ಟ್ರೀಯ ಪ್ರಶಸ್ತಿ 2023' ನ್ನು ಬೆಂಗಳೂರಿನ ಕರ್ನಾಟಕ ಇತಿಹಾಸ ಅಕಾಡೆಮಿಯು ಪಾವಗಡದಲ್ಲಿ ನಡೆದ ಸಮ್ಮೇಳನದಲ್ಲಿ ನೀಡಿ ಗೌರವಿಸಿದೆ.


ಇವರ ಎಲ್ಲಾ ಕಾರ್ಯ ಚಟುವಟಿಕೆಗಳಿಗೆ ಪ್ರೇರೇಪಕರಾಗಿ ಸದಾ ಇವರಿಗೆ ಬೆಂಬಲವಾಗಿ ನಿಂತಿರುವುದು ಇವರ ತಂದೆ ಹಾಗೂ  ಪತಿ ಶಿವಪುತ್ರಪ್ಪ ವೀರಪ್ಪ ಕುಂದಗೋಳ. ಮೂಲತಃ ಎಲಿವಾಳ ಗ್ರಾಮದವರಾದ ಕೆಎಲ್ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಪದವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ  ನಿವೃತ್ತರಾಗಿರುವ ಕುಂದಗೋಳ ಗುರುಗಳವರ ಬೆಂಬಲ ಪ್ರೋತ್ಸಾಹ ಅಪಾರ ಎಂದು ಸಂತಸ ವ್ಯಕ್ತಪಡಿಸುವ ಶ್ರೀಮತಿ ಶಕುಂತಲಾ ಸಿಂಧೂರ ಅವರ ಸಾಧನೆಯ ಹಾದಿಯ ಹೆಜ್ಜೆ ಗುರುತುಗಳು ಅಪಾರವಾಗಿದ್ದು ಅದರಲ್ಲಿ ಬಹು ಮುಖ್ಯವಾದ ಮೈಲಿಗಲ್ಲು ನಾಳೆಯ ದಿನ ಬಿಡುಗಡೆಯಾಗಲಿರುವ ಅವರ ಕೃತಿ 'ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು'.


ಗದಗ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಡಾ.ರಶ್ಮಿ ಅಂಗಡಿ ಅವರು ತಮ್ಮ ತಂದೆ ಡಾ. ಉಮೇಶ ಅಂಗಡಿ ಅವರ ಸ್ಮರಣಾರ್ಥ ಗ್ರಂಥ ದಾಸೋಹಕ್ಕೆ ಆಯ್ಕೆಯಾಗಿದೆ. ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘ, ಗದಗ-ಬೆಟಗೇರಿ ಇವುಗಳ ಆಶ್ರಯದಲ್ಲಿ ಈ ಕೃತಿಯು ನಾಳೆಯ ದಿನ ಗದುಗಿನ ತೋಂಟದಾರ್ಯ ಮಠದಲ್ಲಿ ಬಸವ ಜಯಂತಿ ಹಾಗೂ 2794ನೇ ಶಿವಾನುಭವದ ಪ್ರಯುಕ್ತ ಲೋಕಾರ್ಪಣೆಗೊಳ್ಳುತ್ತಿದ್ದು ತನ್ನಿಮಿತ್ತ ಕೃತಿಯ ಕರ್ತೃ ಶ್ರೀಮತಿ ಶಕುಂತಲಾ ಸಿಂಧೂರ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸೋಣ. 


- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ ಗದಗ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top