ಉಜಿರೆ: “ಸಿನಿಮಾ ಕ್ಷೇತ್ರ ಅಗಾಧವಾದದ್ದು. ಇಲ್ಲಿ ಜೀವನ ಕಂಡುಕೊಳ್ಳಬೇಕು ಎಂದರೆ ಅಗತ್ಯ ಕೌಶಲ್ಯಗಳ ಜೊತೆಗೆ, ಸಮಯ ನಿರ್ವಹಣೆ ಹಾಗೂ ಇರುವ ಕೆಲಸಗಳನ್ನು ಸರಿಯಾದ ಗುಣಮಟ್ಟದಲ್ಲಿ ಮಾಡಿ ಮುಗಿಸುವುದು ಅಗತ್ಯ” ಎಂದು ನಿರ್ದೇಶಕ ಜಿ. ಕೃಷ್ಣ ಬೆಳ್ತಂಗಡಿ ಎಂದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ, ಬಿ. ವೋಕ್ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿದ 45 ನಿಮಿಷದ ಕನ್ನಡ ಸಿನಿಮಾ ʻಅವ್ಯಾಹತʼ ವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, “ಒಬ್ಬ ಪ್ರೇಕ್ಷಕನಿಗೆ ಒಂದು ಸಿನಿಮಾ ಅನ್ನುವುದು ಕೇವಲ ಒಂದು ಮನೋರಂಜನೆ. ಆದರೆ ಸಿನಿಮಾ ನಿರ್ಮಾಣ ಮಾಡುವವರಿಗೆ ಅದರ ಮೌಲ್ಯದ ಅರಿವಿರುತ್ತದೆ. ಸಿನಿಮಾ ನಿರ್ಮಾಣ ಕಾರ್ಯದಲ್ಲಿ ಸಮಯ ಹಾಗೂ ದುಡ್ಡಿನ ನಿರ್ವಹಣೆಯೂ ಅಗತ್ಯ. ವಿದ್ಯಾರ್ಥಿ ಹಂತದಲ್ಲೇ ಇದನ್ನೆಲ್ಲ ರೂಢಿಸಿಕೊಂಡಾಗ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ” ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿ. ವೋಕ್ ಡಿಜಿಟಲ್ ಮೀಡಿಯಾ ಹಾಗೂ ಫಿಲ್ಮ್ ಮೇಕಿಂಗ್ ವಿಭಾಗದ ಮುಖ್ಯಸ್ಥ ಮಾಧವ ಹೊಳ್ಳ, “ಪದವಿ ವಿದ್ಯಾರ್ಥಿಗಳು ಇಂತಹ ಗುಣಮಟ್ಟದ ಸಿನಿಮಾ ನಿರ್ಮಾಣ ಮಾಡಿರುವುದು ನಮ್ಮ ವಿಭಾಗಕ್ಕೂ ಹೆಮ್ಮೆಯ ವಿಷಯ. 3 ವರ್ಷಗಳ ಬಿ. ವೋಕ್ ಪದವಿಯಲ್ಲಿ ವಿದ್ಯಾರ್ಥಿಗಳು ಡಿಜಿಟಲ್ ಮಾಧ್ಯಮ ಮತ್ತು ಸಿನಿಮಾ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಥಿಯರಿ ಹಾಗೂ ಪ್ರಾಯೋಗಿಕವಾಗಿ ಕಲಿಯುತ್ತಾರೆ. ಅವುಗಳೆಲ್ಲವನ್ನು ಅಂತಿಮ ಸೆಮಿಸ್ಟರ್‌ನಲ್ಲಿ ಕನಿಷ್ಠ 40 ನಿಮಿಷದ ಸಿನಿಮಾ ನಿರ್ಮಾಣ ಮಾಡುವ ಮುಖೇನ ತಾವು ಕಲಿತದ್ದನ್ನು ದೊಡ್ಡ ಮಟ್ಟದಲ್ಲಿ ಪ್ರಚುರಪಡಿಸುತ್ತಾರೆ. ಇಂತಹ ಗುಣಮಟ್ಟದ ಸಿನಿಮಾಗಳನ್ನು ನೋಡುವಾಗ, ಅವರಿಗೆ ಸಿಗುವ ತರಬೇತಿಯ ಗುಣಮಟ್ಟವನ್ನೂ ಕಲ್ಪಿಸಿಕೊಳ್ಳಬಹುದು” ಎಂದರು.
ಎಸ್‌ಡಿಎಂ ಪಿಜಿ ವಿಭಾಗದ ಡೀನ್ ಡಾ. ಸೌಮ್ಯ ಬಿ. ಪಿ. ಮಾತನಾಡಿ, “ಸೃಜನಾತ್ಮಕ ಚಟುವಟಿಕೆಗಳಿಗೆ ನಮ್ಮ ಕಾಲೇಜು ಸದಾ ಪ್ರೋತ್ಸಾಹ ನೀಡುತ್ತಿದೆ. ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಾಗ ವೃತ್ತಿಯಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ. ಬಿ. ವೋಕ್ ವಿದ್ಯಾರ್ಥಿಗಳು ನಿರ್ಮಿಸಿರುವ ಈ ಸಿನಿಮಾ ಯಾವುದೇ ವೃತ್ತಿಪರರು ನಿರ್ಮಿಸಿದ ಸಿನಿಮಾಗಿಂತಲೂ ಕಡಿಮೆಯಿಲ್ಲ” ಎಂದರು.
ಅವ್ಯಾಹತ ಸಿನಿಮಾದ ನಿರ್ದೇಶಕ ಲೋಹಿತ್ ಎಸ್ ಕಳೆಂಜ ಮಾತನಾಡಿ, “ವಿದ್ಯಾರ್ಥಿಯಾಗಿದ್ದಾಗ ನನಗೆ ಹಲವಾರು ಅವಕಾಶಗಳು ಸಿಕ್ಕಿದ್ದವು. ಮೊದಲ ವರ್ಷದಲ್ಲಿದ್ದಾಗ, ನನಗೆ ವೆಬ್ ಸಿರೀಸ್ ಮಾಯಾದಲ್ಲಿ ಮತ್ತು ಎರಡನೇ ವರ್ಷದಲ್ಲಿದ್ದಾಗ ತುಳು ಸಿನಿಮಾ ದಸ್ಕತ್ ನಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುವ ಅವಕಾಶ ಲಭಿಸಿತ್ತು. ಮೂರನೇ ವರ್ಷದಲ್ಲಿದ್ದಾಗ ಕನ್ನಡ ಸಿನಿಮಾ ಸು ಫ್ರಂ ಸೋ ದಲ್ಲಿ ಕಲಾ ವಿಭಾಗದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಇವೆಲ್ಲ ಅನುಭವಗಳು ನನ್ನನ್ನು ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ರೂಪುಗೊಳ್ಳಲು ಸಹಕಾರಿಯಾಗಿದೆ. ಬಿ. ವೋಕ್ ವಿಭಾಗಕ್ಕೆ ನಾನು ಸದಾ ಚಿರಋಣಿ” ಎಂದರು.
ಈ ಸಂದರ್ಭ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ಎ. ಜೆ., ಬಿ. ವೋಕ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಜೈನ್, ತೇಜಸ್ವಿನಿ ಆರ್. ಎಸ್. ಹಾಗೂ ಇಂದುಧರ್ ಕಿಣಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಂಕಿತಾ ಕಾರ್ಯಕ್ರಮ ನಿರೂಪಿಸಿದರು.
ಕಾಲೇಜಿನ ಸಮ್ಯಗ್ದರ್ಶನ್ ಸಭಾಂಗಣದಲ್ಲಿ, ಏಪ್ರಿಲ್ 16 ರಂದು ಅವ್ಯಾಹತ ಸಿನಿಮಾದ ಪ್ರೀಮಿಯರ್ ಶೋ ನಡೆಯಿತು. ಕೇವಲ 10,000 ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾದಲ್ಲಿ ಯುವ ಪ್ರೇಮದ ಸರಳ ಕಥಾಹಂದರದ ಜೊತೆಗೆ, ಇಂದಿನ ಕಾಲಘಟ್ಟದ ಪ್ರಮುಖ ಸಮಸ್ಯೆಯಾದ ‘ಸೈಬರ್ ಕ್ರೈಮ್’ ಮತ್ತು ಪಾತ್ರಗಳ ನಡುವಿನ ಭಾವನಾತ್ಮಕ ಸಂಘರ್ಷವನ್ನು ಒಳಗೊಂಡಿದೆ. ಉಜಿರೆ ಹಾಗೂ ಕಾಲೇಜು ಆವರಣದ ಸುತ್ತಮುತ್ತಲೇ ಚಿತ್ರೀಕರಣ ನಡೆಸಲಾಗಿದ್ದು, ಕಾಲೇಜಿನ ವಿದ್ಯಾರ್ಥಿಗಳೇ ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ನಿರ್ದೇಶನ, ಛಾಯಾಗ್ರಹಣ, ಸಂಕಲನ ಎಲ್ಲಾ ವಿಭಾಗಗಳನ್ನೂ ವಿದ್ಯಾರ್ಥಿಗಳೇ ನಿಭಾಯಿಸಿದ್ದಾರೆ. ಚಿತ್ರದ ಎಲ್ಲಾ ತಾಂತ್ರಿಕ ಮೌಲ್ಯಗಳನ್ನು ವಿದ್ಯಾರ್ಥಿಗಳೇ ನಿಭಾಯಿಸಿದ್ದಾರೆ. ಲೋಹಿತ್ ಎಸ್. ಕಳೆಂಜ ಅವರ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದ್ದು, ಪ್ರಜ್ವಲ್ ಗೌಡ ಅವರ ಛಾಯಾಗ್ರಹಣವಿದೆ. ಕಲೆ ಮತ್ತು ನಿರ್ವಹಣಾ ವಿಭಾಗದಲ್ಲಿ ಯೋಗೀಶ್, ವಿನ್ಯಾಸದಲ್ಲಿ ಶರತ್ ಹಾಗೂ ಮಾರ್ಕೆಟಿಂಗ್ ಜವಾಬ್ದಾರಿಯನ್ನು ತರುಣ್ ಎಸ್ ಮತ್ತು ಸಹನಾ ನಿರ್ವಹಿಸಿದ್ದಾರೆ. ಈ ಸಿನಿಮಾದಲ್ಲಿ 2 ಹಾಡುಗಳಿದ್ದು, ಸಂಗೀತ ಸಂಯೋಜನೆಯನ್ನು ಎಐ ತಂತ್ರಜ್ಞಾನವನ್ನು ಬಳಸಿ ಮಾಡಿರುವುದು ವಿಶೇಷ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

