ಎಸ್.ಡಿ.ಎಂ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ಹೊಸ ಮೈಲಿಗಲ್ಲು

Upayuktha
0

- ವಿದ್ಯಾರ್ಥಿಗಳ 16 ಸ್ಟಾರ್ಟ್‌ಅಪ್‌ಗಳಿಗೆ ಅಧಿಕೃತ ಚಾಲನೆ

- ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ನೂತನ ಸ್ಟಾರ್ಟ್‌ಅಪ್‌ಗಳ ಶುಭಾರಂಭ 

 ಹೊಸ ಬ್ರಾಂಡ್ ಸೃಷ್ಟಿಸಿ ಜನರ ವಿಶ್ವಾಸಕ್ಕೆ ಸಾಕ್ಷಿಯಾಗೋಣ : ಅರ್ಚನಾ ರಾಜೇಶ್ ಪೈ 





ಉಜಿರೆ, ಏ. 11 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗದ ವತಿಯಿಂದ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಿ ಭವಿಷ್ಯದ ನಾಯಕರನ್ನು ನಿರ್ಮಿಸುವ 'ವಿಶಿಷ್ಟ' ಎಂಬ ವಿದ್ಯಾರ್ಥಿಗಳ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ನೂತನ ಸ್ಟಾರ್ಟ್‌ಅಪ್‌ಗಳ ಶುಭಾರಂಭ ಸಮಾರಂಭ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸೆಮಿನಾರ್ ಹಾಲ್ ನಲ್ಲಿ ನಡೆಯಿತು. 


ಉಜಿರೆಯ ಸಂಧ್ಯಾ ಫ್ರೆಶ್ ಸಂಸ್ಥೆಯ ಸಹ-ಸ್ಥಾಪಕಿ ಹಾಗೂ ಉದ್ಯಮಿ ಅರ್ಚನಾ ಪೈ ನೂತನ ಸ್ಟಾರ್ಟ್‌ಅಪ್‌ಗಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಇವರು, ಒಂದು ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳು ತನ್ನ ವಿದ್ಯಾಭ್ಯಾಸದ ನಡುವೆಯೆ ಉದ್ದಿಮೆದಾರಾಗಿ ಬೆಳೆದಿರುವುದರ ಹಿಂದೆ ಅಗಾಧವಾದ ಪ್ರಯತ್ನ ಮತ್ತು ಪರಿಶ್ರಮ ಅಡಗಿದೆ. ಸಣ್ಣ ಕನಸಿನಿಂದ ಆರಂಭವಾಗುವ ಪ್ರತಿಯೊಂದು ಕಾರ್ಯಗಳು ವಂಚನೆ ಮತ್ತು ಅವಿಶ್ವಾಸಕ್ಕೆ ಸುಳಿಯದೆ ಇದ್ದಾಗ ಸಮಾಜದ ಬಹುದೊಡ್ಡ ಆಸ್ತಿಯಾಗಿ ಬೆಳೆಯುತ್ತದೆ. ಉದ್ದಿಮೆಯಲ್ಲಿ ಶಿಸ್ತು ಮತ್ತು ನೈತಿಕತೆಯನ್ನು ಸದಾ ಪಾಲಿಸಿದರೆ ಹಂತ ಹಂತವಾಗಿ ಬೆಳೆಯಲು ಸಾಧ್ಯ.


ವಿದ್ಯಾರ್ಥಿಗಳು ಉದ್ದಿಮೆಯನ್ನು ಸೃಷ್ಟಿಮಾಡುವ ಜೊತೆಗೆ ಉದ್ದಿಮೆಯನ್ನು ನಿರಂತರವಾಗಿ ನಿರ್ವಹಿಸುವ ಮತ್ತು ಸುಸ್ಥಿರವಾಗಿ ಉಳಿಸಿಕೊಳ್ಳವ ಕೌಶಲ್ಯ ಬೆಳೆಸಿಕೊಳ್ಳಬೇಕು. ತಮ್ಮ ಉತ್ಪನ್ನವನ್ನು ಕಾನೂನಾತ್ಮಕವಾಗಿ ನೋಂದಾಯಿಸಿ ಮಾರುಕಟ್ಟೆಯಲ್ಲಿ ತಮ್ಮದೇ ಹೊಸ ಬ್ರಾಂಡ್ ಉಳಿದುಕೊಳ್ಳುವಂತೆ ಮಾಡಿ ಜನರ ವಿಶ್ವಾಸಕ್ಕೆ ಸಾಕ್ಷಿಯಾಗಬೇಕು ಎಂದರು.


ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿದ್ದ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಮಾತನಾಡಿ, 2019 ರ ಸಂದರ್ಭದಲ್ಲಿ ಯುಜಿಸಿಯ ಮಾರ್ಗಸೂಚಿಯಂತೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾಗಿದ್ದ ಡಾ.ಬಿ ಯಶೋವರ್ಮರವರ ಮಾರ್ಗದರ್ಶನದಲ್ಲಿ ನೂತನವಾಗಿ ಬಿವೋಕ್ ಕೋರ್ಸ್ ಆರಂಭವಾದಾಗ ಹಲವು ಸವಾಲುಗಳಿದ್ದವು. ಆದರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಮೇಲಿನ ಭರವಸೆಯಿಂದ ಧೈರ್ಯದಿಂದ ಮುಂದೆ ಹೆಜ್ಜೆ ಹಾಕಿತು. ಈ ನಡುವೆ ಇಂದು ಬಿವೋಕ್ ಕೋರ್ಸ್ ನ ವಿದ್ಯಾರ್ಥಿಗಳು ತಾವೇ ಉದ್ಯೋಗದಾತರಾಗಿ ಬೆಳೆದು ನಿಂತಿರುವುದು ಕೋರ್ಸ್ ಆರಂಭದ ಆಶಯವನ್ನು ಈಡೇರಿಸಿದಂತಾಗಿದೆ. ವಿದ್ಯಾರ್ಥಿಗಳು ಯಾವುದೇ ಕ್ಷೇತ್ರ ತಲುಪಿದರು ಶಿಸ್ತು ಮತ್ತು ಸಂಯಮವನ್ನು ಪಾಲಿಸುವುದರ ಜೊತೆಗೆ ಸಮಾಜದಲ್ಲಾಗುವ ಹೊಸ ಬದಲಾವಣೆಗೆ ಅನುಗುಣವಾಗಿ ಮುಂದುವರಿಯಬೇಕು ಎಂದು ವಿದ್ಯಾರ್ಥಿಗಳಿಗೆ ಅಭಿನಂದಿಸಿ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಬಿವೋಕ್ ಕೋರ್ಸ್ ಸಂಯೋಜಕ ಡಾ. ಸುವೀರ್ ಜೈನ್ ಮಾತನಾಡಿ, ಭಾರತದಲ್ಲಿ ದಿನೇ ದಿನೇ ಉದ್ದಿಮೆ ಕ್ಷೇತ್ರ ಬೆಳೆಯುತ್ತಿದೆ. ಈ ನಡುವೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆ ಬದುಕಿನ ಶಿಕ್ಷಣ ನೀಡುವುದರ ಜೊತೆಗೆ ಹೊಸ ಪ್ರಯತ್ನದ ಮೂಲಕ ಬಹುಸಂಖ್ಯೆಯ ಉದ್ದಿಮೆದಾರರನ್ನು ಸಮಾಜಕ್ಕೆ ನೀಡುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾತನಾಡಿ, ಎಸ್.ಡಿ.ಎಂ ಸಂಸ್ಥೆ ವಿಪುಲವಾದ ಅವಕಾಶ ಮತ್ತು ವ್ಯವಸ್ಥೆಗಳನ್ನು ಕಲ್ಪಿಸಿಕೊಡುತ್ತಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು. ಪೋಷಕರ ಪ್ರೋತ್ಸಾಹ ಮತ್ತು ಉಪನ್ಯಾಸಕರ ಮಾರ್ಗದರ್ಶನದಿಂದ ಬದುಕಿನ ಗುರಿಯತ್ತ ಹೆಜ್ಜೆ ಹಾಕಬೇಕು. ನಕಾರಾತ್ಮಕ ಚಿಂತನೆಗಳಿಗೆ ತಲೆದೂಗದೆ ಸಕಾರಾತ್ಮಕ ಯೋಚನೆ ಮತ್ತು ಯೋಜನೆಯೊಂದಿಗೆ ಮುಂದೆ ಸಾಗಬೇಕು ಎಂದರು.


ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ 16 ಉತ್ಪನ್ನಗಳನ್ನು ವೇದಿಕೆಯಲ್ಲಿ ಅತಿಥಿಗಳ ಸಮ್ಮುಖದಲ್ಲಿ ಅಧಿಕೃತವಾಗಿ ಬಿಡುಗಡೆಗೊಳಿಸಲಾಯಿತು. ಎಲ್ಲಾ ಉತ್ಪನ್ನಗಳನ್ನು ಕಾನೂನಿನ ವ್ಯಾಪ್ತಿಯಲ್ಲಿ ಸ್ವತಃ ವಿದ್ಯಾರ್ಥಿಗಳೇ ಪರವಣಿಗೆ ಪಡೆದು ಬಿಡುಗಡೆಗೊಳಿಸಿದ್ದು ವಿಶೇಷವಾಗಿತ್ತು. ಉತ್ಪನ್ನ ಮತ್ತು ಉದ್ದಿಮೆಗೆ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗ ಮುಖ್ಯಸ್ಥ ಆಶ್ವಿತ್ ಎಚ್.ಆರ್. ಮಾರ್ಗದರ್ಶನ ನೀಡಿರುತ್ತಾರೆ.


ಕಾರ್ಯಕ್ರಮದಲ್ಲಿ ಉದ್ಯಮಿ ಅರ್ಚನಾ ರಾಜೇಶ್ ಪೈ ರವರನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ, ಬಿವೋಕ್ ಕೋರ್ಸ್ ಸಂಯೋಜಕ ಡಾ. ಸುವೀರ್ ಜೈನ್ ಹಾಗೂ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗ ಮುಖ್ಯಸ್ಥ ಆಶ್ವಿತ್ ಎಚ್.ಆರ್. ಗೌರವ ಉಪಸ್ಥಿತಿತರಿದ್ದರು.


ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಉಪ ಪ್ರಾಂಶುಪಾಲರಾದ ನಂದ ಕುಮಾರಿ, ಕಾಲೇಜಿನ ಪರಿಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ವಿಭಾಗದ ಉಪನ್ಯಾಸಕರಾದ ಪ್ರವೀಣ ಡಿ, ಡಾ. ಶಶಾಂಕ್ ಬಿ.ಎಸ್ ಮತ್ತು ಮಾಧುರಿ ಗೌಡ ಭಾಗಿಯಾಗಿದ್ದರು. ಕಾರ್ಯಕ್ರಮವನ್ನು  ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗ ಮುಖ್ಯಸ್ಥ ಆಶ್ವಿತ್ ಎಚ್.ಆರ್. ಕಾರ್ಯಕ್ರಮವನ್ನು ಸಂಯೋಜಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಸಾಕ್ಷಿ ಮತ್ತು ತಂಡದವರು ಪ್ರಾರ್ಥನೆಯನ್ನು ಹಾಡಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಹರ್ಷಿತ್ ನಿರೂಪಿಸಿ, ವಿದ್ಯಾರ್ಥಿ ಕಿರಣ್ ಕುಮಾರ್ ವಂದಿಸಿದರು.


----------------------


''ಉಜಿರೆಯ‌ ಎಸ್.ಡಿ.ಎಂ ಸಂಸ್ಥೆಯ ಬಿ.ವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ವಿಷಯ ಪರಿಣಿತರಾಗುವುದರ ಜೊತೆಗೆ ಪ್ರಾಯೋಗಿಕವಾಗಿ ಅರಿತು ಉದ್ಯೋಗಾವಕಾಶಗಳನ್ನು ಹುಡುಕುವ ಸಂದರ್ಭದಲ್ಲಿ ತಾವೇ ಉದ್ದಿಮೆದಾರರಾಗಿ ಬೆಳೆದು ನಿಂತಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಬಹು ಹೆಮ್ಮೆಯ ಸಂಗತಿ. ಇದರಲ್ಲಿ ಪಾತ್ರದಾರಿಗಳಾದ ವಿದ್ಯಾರ್ಥಿಗಳಿಗೆ ಮತ್ತು ಮಾರ್ಗದರ್ಶನ ನೀಡಿದ ಉಪನ್ಯಾಸಕರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ''

- ಅರ್ಚನಾ ರಾಜೇಶ್ ಪೈ

ಉದ್ಯಮಿ, ಮಾಲಕರು ಸಂಧ್ಯಾ ಪ್ರೆಶ್ ಉಜಿರೆ

         

 

"ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್‌ನ ಬಿ.ವೊಕ್ ವಿದ್ಯಾರ್ಥಿಯಾಗಿ ಈ ಸ್ಟಾರ್ಟ್‌ಅಪ್ಸ್ ಉದ್ಘಾಟನಾ ದಿನದಲ್ಲಿ ನನ್ನದೇ ಬ್ರ್ಯಾಂಡ್ ನ್ಯೂಟ್ರಿನಟ್ಸ್ – ಆರೋಗ್ಯಕರ ಕಡಲೆ ಬೆಣ್ಣೆ (ಪೀನಟ್ ಬಟರ್) ಉತ್ಪನ್ನವನ್ನು ಬಿಡುಗಡೆಗೊಳಿಸುತ್ತಿರುವುದ ಅತ್ಯಂತ ಸಂತಸವನ್ನು ತಂದಿದೆ. ನನ್ನಂತಹ ಯುವ ಉದ್ಯಮಿಗಳಿಗೆ ಈ ಅದ್ಭುತ ವೇದಿಕೆಯನ್ನು ಒದಗಿಸಿದ ಕಾಲೇಜಿಗೆ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ. ನಮ್ಮ ಆಲೋಚನೆಗಳನ್ನು ವಾಸ್ತವವಾಗಿ ರೂಪಿಸಲು ನಿರಂತರ ಮಾರ್ಗದರ್ಶನ, ಪ್ರೇರಣೆ ಮತ್ತು ಬೆಂಬಲ ನೀಡಿದ ಬಿ.ವೊಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಅಶ್ವಿತ್ ಹೆಚ್. ಆರ್ ಅವರಿಗೆ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ."

- ಭುವನ್ ಎಂ ಜೈನ್

ತೃತೀಯ ವರ್ಷದ ಬಿ.ವೊಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿ



" ಈ 16 ಸ್ಟಾರ್ಟ್‌ಅಪ್‌ಗಳು ಶುಭಾರಂಭ ವಿದ್ಯಾರ್ಥಿಗಳನ್ನು ಹೊಸ ಪ್ರಾಯೋಗಿಕ ಸಾಧನೆಯತ್ತ ಹೆಜ್ಜೆ ಹಾಕುವಂತೆ ಮಾಡಿದೆ. ವಿಭಾಗದ ವಿದ್ಯಾರ್ಥಿಗಳ ಆಸಕ್ತಿ ಮತ್ತು ಸಂಸ್ಥೆಯ ಸಹಕಾರ ಇವೆಲ್ಲ ಸ್ಟಾರ್ಟ್‌ಅಪ್‌ಗಳಿಗೆ ನನ್ನನ್ನು ಮಾರ್ಗದರ್ಶನ ನೀಡುವಂತೆ ಪ್ರೇರೆಪಿಸಿತು. ವಿದ್ಯಾರ್ಥಿಗಳ ಪರಿಶ್ರಮ ಮತ್ತು ಭವಿಷ್ಯದ ಪರಿಕಲ್ಪನೆ  ಯಶಸ್ವಿ ಉದ್ಯಮಗಳಾಗಿ ರೂಪಿಸಿ ಸಂಸ್ಥೆಗೆ ಹೆಮ್ಮೆ ತಂದಿದೆ. ಈ ಯುವ ಉದ್ಯಮಿಗಳನ್ನು ಬೆಳೆಸಲು ಸದಾ ಪ್ರೋತ್ಸಾಹ ನೀಡಿದ ವ್ಯವಸ್ಥಾಪಕರು, ಬೋಧಕ ವೃಂದ ಮತ್ತು ಸಹಾಯಕ ಸಿಬ್ಬಂದಿಗಳಿಗೆ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಸ್ಟಾರ್ಟ್‌ಅಪ್‌ಗಳು ಮತ್ತಷ್ಟು ವಿದ್ಯಾರ್ಥಿಗಳನ್ನು ಉದ್ಯಮಶೀಲತೆಯತ್ತ ಪ್ರೇರೇಪಿಸಲಿವೆ ಎಂಬ ವಿಶ್ವಾಸ ನನಗಿದೆ.


- ಅಶ್ವಿತ್ ಎಚ್. ಆರ್

ಸ್ಟಾರ್ಟ್‌ಅಪ್‌ಗಳ ಮಾರ್ಗದರ್ಶಕರು ಹಾಗು

ವಿಭಾಗದ ಮುಖ್ಯಸ್ಥರು 


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top