ಕೆ.ಆರ್.ಪೇಟೆ ಸರಕಾರಿ ಶಾಲಾ ಕಟ್ಟಡದ ಅಭಿವೃದ್ಧಿಗೆ ಪುರಸಭಾ ಸದಸ್ಯರ ನೆರವು

Upayuktha
0


ಕೆ.ಆರ್.ಪೇಟೆ: ಪಟ್ಟಣದ ಸಮೀಪದ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪುರಸಭಾ ಸದಸ್ಯ ಕೆ.ಬಿ. ಮಹೇಶ್ ಅವರು ಮಹತ್ವದ ನೆರವು ನೀಡಿದ್ದು, ಶಾಲಾ ಕಟ್ಟಡದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.


ಕಳೆದ ಸುಮಾರು 25 ವರ್ಷಗಳಿಂದ ಶಾಲಾ ಕಟ್ಟಡ ಸುಣ್ಣ ಬಣ್ಣ ಕಾಣದೆ ನಿರ್ಲಕ್ಷ್ಯಕ್ಕೊಳಗಾಗಿದ್ದು, ಕಿಟಕಿ–ಬಾಗಿಲುಗಳು ಹಾಳಾಗಿದ್ದವು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪುರಸಭಾ ಸದಸ್ಯ ಕೆ.ಬಿ. ಮಹೇಶ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಮನವಿಗೆ ಸ್ಪಂದಿಸಿದ ಅವರು ಶಾಲೆಗೆ ಸುಣ್ಣ ಬಣ್ಣ ಬಳಿಯುವ ಜೊತೆಗೆ ಹಾಳಾಗಿದ್ದ ಕಿಟಕಿ–ಬಾಗಿಲುಗಳನ್ನು ದುರಸ್ತಿ ಮಾಡಿಸಿ ಕೊಡುಗೆಯಾಗಿ ನೀಡಿದ್ದಾರೆ.


ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಕುಮಾರಿ ಪದ್ಮೇಶ್ ಮಾತನಾಡಿ, “ಗ್ರಾಮದಲ್ಲಿ ದೇವರನ್ನು ಪೂಜಿಸುವ ಭಕ್ತಿಭಾವದಂತೆಯೇ ಶಾಲೆಯನ್ನೂ ದೇವಾಲಯದಂತೆ ಕಾಣಬೇಕು. ಸರಸ್ವತಿ ಪೂಜೆಯ ವೇಳೆ ಶಾಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಬಳಿಕ, ವಿಷಯ ತಿಳಿದು ಕೆ.ಬಿ. ಮಹೇಶ್ ಅವರ ಪುತ್ರ ಶ್ಯಾಂಪ್ರಸಾದ್ ಅವರು ಶಾಲಾ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಲು ಸಹಾಯ ಮಾಡಿದ್ದಾರೆ,” ಎಂದು ತಿಳಿಸಿದರು. ಶಾಲೆಯ ಮೇಲ್ಚಾವಣಿ ಕೂಡ ಶಿಥಿಲಗೊಂಡಿದ್ದು, ಅದರ ದುರಸ್ತಿ ಕಾರ್ಯಕ್ಕೆ ದಾನಿಗಳು ಸಹಕರಿಸುವಂತೆ ಮನವಿ ಮಾಡಿದರು.


“ನಮ್ಮ ಊರಿನ ಮಕ್ಕಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಸಾಧನೆ ಮಾಡಿದರೆ ಅದರ ಕೀರ್ತಿ ಗ್ರಾಮಕ್ಕೇ ಸಲ್ಲುತ್ತದೆ. ಆದ್ದರಿಂದ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿಯೊಬ್ಬರ ಪಾತ್ರ ಮಹತ್ವದ್ದಾಗಿದೆ,” ಎಂದು ಅವರು ಹೇಳಿದರು. ಪೋಷಕರು ಮಕ್ಕಳಿಗೆ ಬಾಲ್ಯದಲ್ಲೇ ಸಂಸ್ಕಾರ, ಶಿಸ್ತು ಹಾಗೂ ಮೌಲ್ಯಗಳನ್ನು ಬೆಳೆಸಲು ಸಹಕರಿಸಬೇಕೆಂದು ಸೂಚಿಸಿದರು. ಇದೇ ವೇಳೆ ಮಂಡ್ಯದಲ್ಲಿ ವಾಸವಿರುವ ಗ್ರಾಮಸ್ಥ ರಾಮೇಗೌಡ ಅವರು ₹50,000 ದೇಣಿಗೆ ನೀಡಿರುವುದನ್ನು ಸ್ಮರಿಸಿದರು.


ಗ್ರಾಮದ ಯುವ ಮುಖಂಡ ಅನಿಲ್ ಮಾತನಾಡಿ, “ಹಳೆಯ ಕಟ್ಟಡವಾಗಿರುವ ನಮ್ಮ ಶಾಲೆಗೆ ಸುಧಾರಣೆ ಅಗತ್ಯವಿತ್ತು. ನಮ್ಮ ಮನವಿಗೆ ಸ್ಪಂದಿಸಿ ನೆರವಾದ ಪುರಸಭಾ ಸದಸ್ಯ ಕೆ.ಬಿ. ಮಹೇಶ್ ಹಾಗೂ ಶ್ಯಾಂಪ್ರಸಾದ್ ಅವರಿಗೆ ಕೃತಜ್ಞತೆಗಳು,” ಎಂದು ಹೇಳಿದರು.


ಈ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಜ್ಯೋತಿ, ಗ್ರಾಮ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top