ಎಸ್‌.ಡಿ.ಎಂ ಕಾಲೇಜಿನ ಸಹಪ್ರಾಧ್ಯಾಪಕಿ ಮಾಲಿನಿ ಅಂಚನ್ ಅವರಿಗೆ ಪಿ.ಎಚ್.ಡಿ ಪದವಿ

Upayuktha
0



ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಲಿನಿ ಅಂಚನ್ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ವಾಣಿಜ್ಯ ಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.


ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರೊಫೆಸರ್ ಡಾ. ಪ್ರೀತಿ ಕೀರ್ತಿ ಡಿಸೋಜ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ, ಮಂಡಿಸಿದ "ವಿಮೆನ್ ಇನ್ ಎಗ್ರಿಬಿಸಿನೆಸ್: ಎ ಲೈವ್ ಲೀ ಹುಡ್ ಪ್ಯಾಟರ್ನ್ ಅನಾಲಿಸಿಸ್ ವಿದ್ ರೆಫರೆನ್ಸ್ ಟು ದಕ್ಷಿಣ ಕನ್ನಡ ಅಂಡ್ ಉಡುಪಿ ಡಿಸ್ಟ್ರಿಕ್ಟ್" (Women in Agribusiness: A Livelihood Pattern Analysis with reference to Dakshina Kannada and Udupi Districts) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಲಭಿಸಿದೆ.


ಮಂಗಳೂರಿನ ಉರ್ವಸ್ಟೋರ್ ಸುಂಕದಕಟ್ಟೆಯ ನಿವಾಸಿಯಾಗಿರುವ ಮಾಲಿನಿ ಅಂಚನ್, ಎಂ. ಶಿವಪ್ಪ ಕೋಟ್ಯಾನ್ ಮತ್ತು ಸರಸ್ವತಿ ದಂಪತಿಯ ಪುತ್ರಿ. ಇವರು ತಮ್ಮ ಎಂ.ಕಾಂ ಪದವಿಯನ್ನು ಮಂಗಳೂರು  ವಿಶ್ವವಿದ್ಯಾನಿಲಯದಿಂದ ಹಾಗೂ ಎಂ.ಫಿಲ್ ಪದವಿಯನ್ನು ತಮಿಳುನಾಡಿನ ಸೇಲಂನ ವಿನಾಯಕ ಮಿಷನ್ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಅಲ್ಲದೆ,  ಪಿ.ಜಿ.ಡಿ.ಬಿ.ಎಂ. ಪದವಿಯನ್ನೂ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಡೆದಿರುವ ಇವರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಗಳಾದ ನೆಟ್ (NET) ಮತ್ತು ಕೆಸೆಟ್ (KSET) ಗಳಲ್ಲೂ ಉತ್ತೀರ್ಣರಾಗಿದ್ದಾರೆ.

ಬಹುಮುಖ ಪ್ರತಿಭೆಯ ಇವರು ಕೇವಲ ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ, ಸಾಹಿತ್ಯ, ಸಂಗೀತ ನಟನೆ, ಯಕ್ಷಗಾನ ಹಾಗೂ ನಿರೂಪಣಾ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ.


ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಪ್ರತಿಷ್ಠಿತ "ಯಕ್ಷಧ್ರುವ  ಕಲಾ ಗೌರವ ಪ್ರಶಸ್ತಿ"ಯನ್ನೂ ಪಡೆದಿದ್ದಾರೆ. ಬೆಳ್ತಂಗಡಿ ತಾಲೂಕಿನ ಸ್ವಸಹಾಯ ಗುಂಪುಗಳನ್ನು ಉಲ್ಲೇಖಿಸಿ ಸೂಕ್ಷ್ಮ ವಿಮೆಯ ಪರಿಣಾಮಗಳ ಕುರಿತಾದ ಅಧ್ಯಯನ, ಬೆಳ್ತಂಗಡಿ ತಾಲ್ಲೂಕಿಗೆ ಸಂಬಂಧಿಸಿದಂತೆ ಕೃಷಿ ವ್ಯವಹಾರದಲ್ಲಿ ಮಹಿಳೆಯರ ಸಾಮಾಜಿಕ-ಆರ್ಥಿಕ ಅಂಶಗಳ ಕುರಿತಾದ ಅಧ್ಯಯನವನ್ನು ನಡೆಸಿರುವ ಇವರು, ಹಲವು ಸಂಶೋಧನಾ ಲೇಖನಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ವಿಚಾರಸಂಕಿರಣಗಳಲ್ಲಿ ಮಂಡಿಸಿದ್ದಾರೆ ಮತ್ತು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಪ್ರಸ್ತುತ ಇವರು ಎಸ್‌ಡಿಎಂ ಕಾಲೇಜಿನ ಎನ್‌ಎಸ್‌ಎಸ್ (NSS) ಯೋಜನಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಹೋದ್ಯೋಗಿಗಳು ಅಭಿನಂದನೆ ಸಲ್ಲಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top