ಪ್ರಧಾನಿಗೆ ಖರ್ಗೆ ಅವಮಾನ ದೇಶದ ಜನರಿಗೆ ಎಸಗಿದೆ ಅಪಚಾರ: ಸಂಸದ ಕ್ಯಾಪ್ಟನ್ ಚೌಟ

Upayuktha
0


 


ಮಂಗಳೂರು: ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಜನರಿಂದ ಆಯ್ಕೆಯಾದ ನಾಯಕ, ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಅವಹೇಳನಕಾರಿಯಾಗಿ ನಿಂದಿಸಿರುವುದು ದೇಶದ ಸಮಸ್ತ ಪ್ರಜೆಗಳಿಗೆ ಮಾಡಿದ ಅವಮಾನ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.


 "ಮೋದಿ ಭಯೋತ್ಪಾದಕ " ಎಂಬ ಖರ್ಗೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅವರು, "ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ದೇಶದ ನಾಯಕ ಅದರಲ್ಲಿಯೂ ದೇಶದ ಪ್ರಧಾನಮಂತ್ರಿಯನ್ನು ಇಂತಹ ಕೀಳುಮಟ್ಟದ ಶಬ್ದಗಳಿಂದ ನಿಂದಿಸುವುದು ದೇಶದ ಜನಾದೇಶಕ್ಕೆ ಮಾಡಿದ ಅಪಚಾರವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಇಂತಹ ಕೀಳು ಮಟ್ಟದ ಹೇಳಿಕೆ ಕಾಂಗ್ರೆಸ್ ಪಕ್ಷವು ತಲುಪಿರುವ ಬೌದ್ಧಿಕ ಅಧಃಪತನ ಹಾಗೂ ಪಕ್ಷದ ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ" ಎಂದು ಸಂಸದರು ಹೇಳಿದ್ದಾರೆ.


ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷವು ಹೆಣೆದಿದ್ದ ಸುಳ್ಳಿನ ಜಾಲವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಜನಪರ ಆಡಳಿತದ ಮೂಲಕ ಬಯಲಿಗೆಳೆದಿದ್ದಾರೆ. ಈ ಸತ್ಯವನ್ನು ಸಹಿಸಲಾಗದೆ ಹಾಗೂ ರಾಜಕೀಯ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿರುವ ಹತಾಶೆಯ ತುತ್ತತುದಿಗೆ ತಲುಪಿರುವ ಕಾಂಗ್ರೆಸ್ ಈಗ ಪ್ರಧಾನಿಯವರ ಮೇಲೆ ವೈಯಕ್ತಿಕ ದಾಳಿ ನಡೆಸುವ ಮೂಲಕ ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸುತ್ತಿದ್ದಾರೆ. ಅಭಿವೃದ್ಧಿ ರಾಜಕಾರಣದ ಮುಂದೆ ಸೋಲೊಪ್ಪಿಕೊಂಡಿರುವ ಕಾಂಗ್ರೆಸ್, ಇಂತಹ ಕೀಳುಮಟ್ಟದ ಶಬ್ದ ಬಳಕೆಯ ಮೂಲಕ ದೇಶದ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ ಎಂದು ಕ್ಯಾ. ಚೌಟ ಅವರು ಅಭಿಪ್ರಾಯಪಟ್ಟಿದ್ದಾರೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top