ಬೆಂಗಳೂರು: ‘ತಂತ್ರಜ್ಞಾನದ ವಿನೂತನ ಆವಿಷ್ಕಾರಗಳಾದ ಕೃತಕ ಬುದ್ದಿಮತ್ತೆ, ಕಟ್ಟಡದ ವಿನ್ಯಾಸದ ನಿರ್ವಹಣೆಯ ಡಿಜಿಟಲ್ ಪ್ರಕ್ರಿಯೆ (ಬಿ.ಐ.ಎಂ) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (ಐ.ಓ.ಟಿ)ಗಳು ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರವನ್ನು, ಸಾಂಪ್ರದಾಯಿಕ ಪದ್ಧತಿಗಳಿಂದ ಡೇಟಾಚಾಲಿತ ಸುಸ್ಥಿರ ವ್ಯವಸ್ಥೆಗೆ ಕೊಂಡೊಯ್ದಿವೆ. ಈಗ, ಇಂಜಿನಿಯರ್ ಗಳು ಸುಲಭವಾಗಿ 3ಡಿ ಮಾದರಿಗಳು, ಸ್ವಯಂಚಾಲಿತ ಯಾಂತ್ರಿಕ ವ್ಯವಸ್ಥೆ ಇತ್ಯಾದಿಗಳ ಮೇಲೆ ಹತೋಟಿ ಸಾಧಿಸಬಹುದು ಹಾಗೂ ಸಮಯವನ್ನು ಉಳಿತಾಯ ಮಾಡಬಹುದು. ಅಲ್ಪಾವಧಿಯಲ್ಲಿ ಸ್ಥಿತಿಗತಿಗಳ ವಿಶ್ಲೇಷಣೆ ಮಾಡಿ ಕಟ್ಟಡದ ಕಾಮಗಾರಿಯನ್ನು ಅತ್ಯಂತ ವೇಗವಾಗಿ ಕಾರ್ಯಗತಗೊಳಿಸಬಹುದು. ಅಷ್ಟೇ ಅಲ್ಲದೆ ಸುಸ್ಥಿರ ತಂತ್ರಜ್ಞಾನವನ್ನು ಅಳವಡಿಸಿ ನಿರ್ಮಲ ವಾತಾವರಣವನ್ನೂ ಸೃಷ್ಟಿಸಬಹುದು’, ಎಂದು ಬ್ಲೂಮ್ ಕಂಪನಿಯ ಹಿರಿಯ ಸ್ಟ್ರಕ್ಚರಲ್ ಇಂಜಿನಿಯರ್ ಶುಭಾ ರಾವ್ ನುಡಿದರು. ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ, ಸಿವಿಲ್ ಇಂಜಿನಿಯರಿಂಗ್ ವಿಭಾಗ ಆಯೋಜಿಸಿದ್ದ ‘ಸವೇಕ್ಷಣ-2026’, ವಾರ್ಷಿಕ ತಂತ್ರಜ್ಞಾನ ಉತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಎರಡು ದಿನಗಳ ಈ ಉತ್ಸವದಲ್ಲಿ ದೇಶದಾದ್ಯಂತ ಆಗಮಿಸಿದ್ದ ನೂರಾರು ತಂತ್ರಜ್ಞರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮುಂದುವರಿದು ಅವರು- ‘ಪರಿಸರದ ಹಿತದೃಷ್ಟಿಯಿಂದ ‘ನಿರ್ಮಾಣ ಉದ್ಯಮ ಕ್ಷೇತ್ರ’ದಲ್ಲಿ ಸುಸ್ಥಿರ ತಂತ್ರಜ್ಞಾನವನ್ನು ಅಳವಡಿಸುವುದು ಬಹಳ ಮುಖ್ಯ. ಈ ಕ್ಷೇತ್ರ ಜಗತ್ತಿನ ಶೇಕಡಾ 40 ರಷ್ಟು ಇಂಧನವನ್ನು ಬಳಸುತ್ತಿದೆ, ಜಗತ್ತಿನ ಇಂಗಾಲದ ಡೈಆಕ್ಸೈಡ್‍ನ ಹೊರಸೂಸುವಿಕೆಯ ಶೇಕಡಾ 38 ರಷ್ಟು ಪ್ರಮಾಣ ಈ ಕ್ಷೇತ್ರದಿಂದಲೇ ಆಗುತ್ತಿದೆ. ಸುಸ್ಥಿರ ತಂತ್ರಜ್ಞಾನದ ಮೂಲಕ ಪರಿಸರ ಸ್ನೇಹಿ ಸಾಮಗ್ರಿಗಳನ್ನು ಬಳಸಬಹುದು ಹಾಗೂ ಇಂಧನದ ವ್ಯರ್ಥ ಬಳಕೆಯನ್ನು ತಪ್ಪಿಸಲು ಸೂಕ್ತ ನವೀನ ವಿನ್ಯಾಸಗಳನ್ನು ಮಾಡಬಹುದು ಹಾಗೂ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಉಂಟಾಗುವ ತ್ಯಾಜ್ಯಗಳ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಇದರಿಂದ ಕಾಮಗಾರಿಯ ವೆಚ್ಚವನ್ನು ಕಡಿತಗೊಳಿಸಿದಂತಾಗುತ್ತದೆ ಮತ್ತು ಪರಿಸರ ರಕ್ಷಣೆಯನ್ನೂ ಮಾಡಿದಂತಾಗುತ್ತದೆ’, ಎಂದು ವಿಶ್ಲೇಷಿಸಿದರು.
ಎಲ್ ಆ್ಯಂಡ್ ಟಿ ಎಜುಟೆಕ್‍ನ ವಿಷಯ ತಜ್ಞ ಡಾ. ಎಸ್. ಲೋಕೇಶ್ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅವರು ತಮ್ಮ ಭಾಷಣದಲ್ಲಿ ಕಠಿಣ ಪರಿಶ್ರಮದ ಜತೆ ಬುದ್ದಿವಂತಿಕೆಯ ಜಾಣ ನಡೆ ವೃತ್ತಿಜೀವನದಲ್ಲಿ ಅತ್ಯವಶ್ಯ ಎಂದು ಕಿವಿಮಾತು ಹೇಳಿದರು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪಠ್ಯಕ್ರಮ ಅಭಿವೃದ್ಧಿ ಹಾಗೂ ಶೈಕ್ಷಣಿಕ ವಿಭಾಗದ ನಿರ್ದೇಶಕ ಡಾ. ಜೆ. ಸುಧೀರ್ ರೆಡ್ಡಿ, ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಎಲ್. ಮಂಜುನಾಥ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಹಾಜರಿದ್ದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


