ವೈಜ್ಞಾನಿಕಯುಗ ಅಂತ ದೇವರನ್ನು ಮರೆತು ಹಾರಾಡುವರಿಗೆ ಇದೊಂದು ಜ್ಞಾನ ಮೊದಲು ವಿಜ್ಞಾನ ನಂತರ ಅಂತ ತಿಳಿಯಬೇಕಾದ ಮತ್ತು ಓದಬೇಕಾದ ಸಂಗತಿ. ವಾಯುದೇವರ ಶ್ವಾಸ ಜಪಗಳ ಸಂಖ್ಯೆ ಮತ್ತು ಮಾಹಿತಿ ಎಲ್ಲವೂ ನಮ್ಮ ಶ್ರೀ ವೇದವ್ಯಾಸರು ವೇದ ಪುರಾಣಗಳಲ್ಲಿ ಬರೆದಿಟ್ಟಿದ್ದಾರೆ. ಪರಶುಕ್ಲ (ಯಾವ ದೋಷಗಳು ಇರದವನು) ನಾದ ಎಲ್ಲರಲ್ಲೂ ಧಾರಣನಾಗಿರುವರು ಪ್ರಾಣದೇವರು. ಇವರಿಲ್ಲದೆ ಜೀವಿಗೆ ತ್ರಾಣವಿಲ್ಲ.
ಅಂತಯೇ ಶ್ರೀಪಾದರಾಜರು ರಚಿಸಿದ "ಶ್ರೀ ಮಧ್ವನಾಮ"ದಲ್ಲಿ ಶರೀರದಲ್ಲಿ ಯಾವ ಅಂಗಾಂಗ ವಿಲ್ಲದಿದ್ದರೂ ನಡೆಯುತ್ತದೆ, ಆದರೆ ಪ್ರಾಣದೇವರು ಇಲ್ಲದಿದ್ದರೇ "ಹೆಣ" ಎಂದು ಎನಿಸಿಕೊಳ್ಳುತ್ತೇವೆ ಎಂದು ಹೇಳಿರುವ ಸಂಗತಿ ಗೊತ್ತಿದೆ.
ಹಾಗೇ ಪ್ರಾಣದೇವರಿಂದ ಇನ್ನೊಂದು ಗುಣ ಕಲೆಯಬೇಕಾದದ್ದು ಎಂದರೆ, ಎಷ್ಟೇ ಮಹತ್ವ ಗೊತ್ತಿದ್ದರೂ, ಅಹಂಕಾರ ಪಡದೆ ದಾಸ್ಯತ್ವದಲ್ಲಿದ್ದು "ದಾಸೋಹಂ ಕೋಸಂಲೆಂದ್ರೀಯಂ" ಅನ್ನುವಂತೆ ನಿತ್ಯದಲ್ಲಿ ಶ್ರೀರಾಮಚಂದ್ರ ದೇವರ ಉಪಾಸನೆ ಮಾಡುತ್ತಿರುತ್ತಾರೆ.
ಇನ್ನು ಶ್ರೀ ಜಗನ್ನಾಥದಾಸರು ರಚಿಸಿದ ಹರಿಕಥಾಮೃತ ಸಾರದಲ್ಲಿನ ಶ್ವಾಸ ಸಂಧಿಯಲ್ಲಿನ ಪ್ರಾಣದೇವರ ಮಹತ್ವವನ್ನು ತಿಳಿಯೋಣ.
ಭಗವಂತನು ಪ್ರಾಣದೇವರ ಅಂತರ್ಯಾಮಿಯಾಗಿ ಸಾತ್ವಿಕ ರಾಜಸ ತಾಮಸ ಮೂರು ವಿಧ ಜೀವರಲ್ಲಿದ್ದು ಯೋಗ್ಯತೆ ತಕ್ಕಂತೆ ಸಾಧನೆ ಮಾಡಿಸಿ ಫಲಗಳನ್ನು ಕೊಡುತ್ತಾನೆ. ಶ್ರೀ ಹರಿಯ ನಂತರ ವಾಯುದೇವರು ಸರ್ವಜ್ಞ.
ಪ್ರಾಣದೇವರು ನಮ್ಮ ಬಿಂಬರೂಪಿ ಅಷ್ಟಭುಜ ನಾರಾಯಣ ಮೂರ್ತಿ ಮೂಲೇಶನ ಪಾದದ ಕೆಳಗೆ ಕುಳಿತು ನಮ್ಮಲ್ಲಿ ನಿಂತು ಶ್ವಾಸ ಜಪ ಮಾಡುತ್ತಾನೆ. ಈ ಶ್ವಾಸ ಸಂಧಿಯಲ್ಲಿ ಪ್ರಾಣದೇವರ ಜಪ ಮಾಡುತ್ತಿರುತ್ತಾರೆ.
ಮನುಷ್ಯನ ನಾಲ್ಕು ದೇಹಗಳನ್ನು ಹೊಂದಿರುತ್ತಾನೆ. ಸ್ವರೂಪ ದೇಹ, ಲಿಂಗ ದೇಹ, ಅನಿರುದ್ಧ ದೇಹ, ಲದೇಹ, ಒಂದೊಂದು ಶರೀರದಲ್ಲಿ 21600 ಶ್ವಾಸ ಜಪದಂತೆ, ಹೀಗೆ ನಾಲ್ಕು ದೇಹಗಳ ಒಟ್ಟಾರೆ 81400 "ಹಂಸ ಸೋಹಂ ಸ್ವಾಹಾ" ಎಂಬ ಶ್ವಾಸ ಜಪ ಉಸಿರಾಡುತ್ತಾರೆ.
ನಮ್ಮ ಮೂಗಿನ ಎಡ ಮೂಗಿನಲ್ಲಿ "ಇಡಾ" ನಾಡಿಯಲ್ಲಿ "ರಯಿ"(ಭಾರತಿ ದೇವಿ) ಮೂಲಕ ಉಸಿರಾಟ ಕ್ರಿಯೆ ನಡೆಸಿದರೆ,
ಬಲದಲ್ಲಿ ಪಿಂಗಳ ನಾಡಿಯಲ್ಲಿ ತಾನೇ ಇದ್ದು (ಪ್ರಾಣದೇವರು) ಉಸಿರಾಟ ಕ್ರಿಯೆ ನಡೆಸುತ್ತಾರೆ. ಇದನ್ನು "ಷಟೋಪನಿಷತ್ತಿ"ನಲ್ಲಿ ಹೇಳಿದ್ದಾರೆ.
ಈ ಸಂಧಿಯಲ್ಲಿ ಗಳಿಗೆ, ಯಾಮ, ಪಕ್ಷ, ಋತು, ಮಾಸ ನಮ್ಮ ಉಸಿರಾಟದ ಇಂಚಿಂಚು ಮಾಹಿತಿಯನ್ನು ಕೊಟ್ಟಿದ್ದಾರೆ ಶ್ರೀ ಜಗನ್ನಾಥದಾಸರು. ಕೆಳಗೆ ಕೊಟ್ಟಿರುವಂಥ ಗಳಿಗೆಯಿಂದ ವರ್ಷದವರಿಗೆ ಪ್ರಾಣದೇವರು ನಮ್ಮಲ್ಲಿ ನಿಂತು ಶ್ವಾಸ ಜಪಗಳ ಸಂಖ್ಯೆ.
ಘಳಿಗೆ:- 360
ಯಾಮಕ್ಕೆ :-2700
ದಿನಕ್ಕೆ:-21600
ಪಕ್ಷಕ್ಕೆ:- 324000
ತಿಂಗಳಿಗೆ:- 648000
ಋತು:-1296000
ಆಯನ:-3888000
ವರ್ಷ:-7776000
ಶಿಷ್ಟರಲ್ಲಿ ಮತ್ತು ದುಷ್ಟರಲ್ಲಿ ಎಲ್ಲರಲ್ಲಿಯೂ ನಿಂತು ಅನವರತ ಶ್ವಾಸ ಜಪ ಮಾಡುತ್ತಿರುತ್ತಾರೆ. ಇದೆಲ್ಲವೂ ಭಗವಂತನ ಆಜ್ಞೆಯಂತೆ ಮಾಡುತ್ತಿರುವುದಕ್ಕೆ ಇವರಿಗೆ ಯಾವ ದೋಷವು ಇರುವುದಿಲ್ಲ. ವಾಯುದೇವರು ಯೋಗ್ಯರಲ್ಲಿ "ಹಂಸಃ". ಶ್ವಾಸ ಮಂತ್ರ ಉಚ್ಛರಿಸಿದರೆ, ಅಯೋಗ್ಯರಲ್ಲಿ "ಸೋಹಂ" ಶ್ವಾಸ ಮಂತ್ರ. ಶ್ವಾಸ ಮಂತ್ರ ಉಚ್ಛರಿಸಿ ತಮಸ್ಸಿಗೆ ಕರೆದೊಯ್ಯುತ್ತಾರೆ.
ಹಾಗೇಯೇ ಭಗವಂತನ ಮೂರು ಪ್ರಧಾನ ಮನೆಗಳು ಇವೆ. ಇಲ್ಲಿಯೂ ವಾಯುದೇವರ ಮಹತ್ವ ಪಾತ್ರವಿದೆ.
1) ಶ್ವೇತ ದ್ವೀಪ 2) ಅನಂತಾಸನ 3) ವೈಕುಂಠ. ವೈಕುಂಠದಲ್ಲಿ ಪ್ರತಿ ದಿಕ್ಕಿಗೂ ಬಾಗಿಲುಗಳು ಇವೆ. ಪ್ರತಿಯೊಂದು ಬಾಗಲಕ್ಕೂ ದಿಗ್ ದೇವತೆಗಳು ದ್ವಾರಪಾಲಕರಾಗಿರುವರು. ಇಲ್ಲಿ ವಾಯುದೇವರು ಪ್ರಾಣ, ವ್ಯಾನ, ಅಪಾನ, ಉದಾನ ಸಮಾನ ಎಂಬ ರೂಪದ ಅಂತರ್ಯಾಮಿಯಾದ ಹರಿಯು ಇರುವನು.
1) ವೈಕುಂಠದ ಪೂರ್ವದ ದ್ವಾರಕ್ಕೆ ಸಂಜ್ಞಾ ಮತ್ತು ಸೂರ್ಯ ದೇವರು ದಿಗ್ ದೇವತೆಗಳು. ಇವರಲ್ಲಿ ಭಾರತಿ ಮತ್ತು ಪ್ರಾಣದೇವರು ಇರುತ್ತಾರೆ. ಇವರ ಅಂತರ್ಯಾಮಿಯಾಗಿ ಲಕ್ಷ್ಮೀ ನಾರಾಯಣರ ಕಥೆ, ಗುಣಗಳ ಸ್ತುತಿಸುತ್ತಾ ಮಾನುಷೋತ್ತಮರು ಮುಕ್ತಿಯಲ್ಲಿ ಇರುತ್ತಾರೆ. ಹರಿ ಚಿಂತನೆ, ಜ್ಞಾನಿಗಳ, ಹಿರಿಯರ ಸೇವೆಯಲ್ಲಿದ್ದರೆ ಮುಕ್ತಿ ಸಿಗೋದು ಸಾಧ್ಯ. ಇದೊಂದು ಒಳ್ಳೆಯ ಸುಜೀವಿಯ ಲಕ್ಷಣ.
2) ವೈಕುಂಠದ ದಕ್ಷಿಣ ಬಾಗಿಲಿಗೆ ಶಶಿ ಮತ್ತು ರೋಹಿಣಿ ದಿಗ್ ದೇವತೆಗಳು ದ್ವಾರ ಪಾಲಕರು. ಇಲ್ಲಿ ವಾಯು ವ್ಯಾನ ರೂಪದಿಂದ ಇರುತ್ತಾನೆ. ಇಲ್ಲಿ ಪ್ರದ್ಯುಮ್ನ ಸತಿಯಾದ ಕೃತಿಯೊಡನೆ ಇರುತ್ತಾನೆ. ಇವರದು ಸೃಷ್ಟಿ ಕಾರ್ಯ. ಈ ಬಾಗಿಲಿನಿಂದ ಪಿತೃಗಳು ಭಗವಂತನನ್ನು ಸ್ತುತಿಸುತ್ತಾ, ಭಗವಂತನ ಆಜ್ಞೆಯಂತೆ ಸಂಚರಿಸುವರು. ಪಿತೃಗಳ ಮೂಲಕ ನಮ್ಮ ಜನನವಾಗಿದೆ ಎಂದು ತಿಳಿದು ಪಿತೃಗಳ ಅಂತರ್ಯಾಮಿಯಾದ ಪ್ರದ್ಯುಮ್ನನನ್ನು ಸ್ಮರಿಸಬೇಕು.
3) ವೈಕುಂಠದ ಪಶ್ಚಿಮ ಬಾಗಿಲಿಗೆ ಸ್ವಾಹ ಮತ್ತು ಅಗ್ನಿದೇವರು ಇರುವರು. ಇಲ್ಲಿ ವಾಯುದೇವರು ಅಪಾನ ರೂಪದಿಂದ ಇರುತ್ತಾರೆ.ಇಲ್ಲಿ ಸಂಕರ್ಷಣ ಮತ್ತು ಸತಿಯಾದ ಜಯಾದೇವಿ ಜೊತೆ ಇರುತ್ತಾನೆ. ಅಗ್ನಿಯ ಕಾರ್ಯ ದಹಿಸುವುಹುದು. ಇಲ್ಲಿ ಋಷಿಗಳು ಹೃದಯ ಕಮಲದಲ್ಲಿ ಧ್ಯಾನಿಸುತ್ತಾ ಇರುವರು. ನಮ್ಮ ನಾಲಿಗೆ ಅಭಿಮಾನಿ ದೇವತೆ ಅಗ್ನಿ ಹೀಗಾಗಿ ನಾವುಗಳು ಒಳ್ಳೆಯ ಮಾತು ಭಗವಂತನ ಸ್ತುತಿ ಹೀಗೆ ಚಿಂತಿಸಬೇಕು.
4) ವೈಕುಂಠದ ಉತ್ತರದ ದ್ವಾರಕ್ಕೆ ಶಚಿ ಮತ್ತು ಇಂದ್ರರು ದಿಗ್ ದೇವತೆಗಳು. ಇವರಲ್ಲಿ ವಾಯುದೇವರು ಸಮಾನ ರೂಪದಿಂದ ಇರುತ್ತಾರೆ. ಇಲ್ಲಿ ಅನಿರುದ್ಧನು ತನ್ನ ಸತಿಯಾದ ಶಾಂತಿದೇವಿಯೊಂದಿಗೆ ಇರುತ್ತಾನೆ. ಇಲ್ಲಿ ತುಂಬುರ ಗಂಧರ್ವ ಮೊದಲಾದವರು ಭಗವಂತನ ಗುಣ ಕೀರ್ತನೆಯನ್ನು ಸುಮಧುರವಾಗಿ ಹಾಡುತ್ತಾ ಸುಖಿಸುವರು.
5) ವೈಕುಂಠದ ಊರ್ಧ್ವದ್ವಾರದಲ್ಲಿ ವಾಯುದೇವರು ತಮ್ಮ ನಿಯತ ಪತ್ನಿಯಾದ ಭಾರತಿ ಜೊತೆ ಉದಾನ ನಾಮಕನಾಗಿರುವನು. ಇಲ್ಲಿ ವಾಸುದೇವ ಮತ್ತು ಮಾಯಾದೇವಿ ಇರುವರು. ಇಲ್ಲಿಂದ ಗರುಡ ಶೇಷ ಇಂದ್ರಾದಿಗಳಿಂದ ಪುಷ್ಕರವರೆಗಿನ ದೇವತೆಗಳು ಭಗವಂತನ ಅವಯವಗಳಲ್ಲಿ ಹೊಂದಿ ಮುಕುಂದನನ್ನು ನೊಡುತ್ತಾ ಆನಂದಪಡುವರು.
ನಾವು ಮಾಡುವ ಕಾಯಾ, ವಾಚಾ, ಮನಸ್ಸಾ, ಎಲ್ಲ ಉಚಿತ ಅನುಚಿತ ಕರ್ಮಗಳನ್ನು ಭಾರತಿರಮಣ ಪ್ರಾಣದೇವರ ಅಂತರ್ಗತನಾದ ನಾರಾಯಣನಿಗೆ ಸಮರ್ಪಿಸಿ ಕೃಷ್ಣಾರ್ಪಣ ಎನ್ನಬೇಕು. ಭಗವಂತ ಹುಲು ಮಾನವರನ್ನು ಕ್ಷಮಿಸಿ ತಾಯಿಯಂತೆ ಸಲಹುವನು.
-ಪ್ರಿಯಾ ಪ್ರಾಣೇಶ ಹರಿದಾಸ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


