ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಡಾ. ಬಿ.ಆರ್.‌ ಅಂಬೇಡ್ಕರ್‌ ಜನ್ಮದಿನಾಚರಣೆ

Upayuktha
0


ಮಂಗಳೂರು: ಪ್ರತಿಯೊಂದು ದೇಶದ ಪ್ರಗತಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ದಿ ಮುಖ್ಯವಾಗುವುದರಿಂದ ವೈಜ್ಞಾನಿಕ ತಳಹದಿಯ ಮೇಲೆ ಸಮಾಜವನ್ನು ಕಟ್ಟಬೇಕೆಂಬುದು ಸಂವಿಧಾನ ಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ ಕನಸಾಗಿತ್ತು. ಈ ನಿಟ್ಟಿನಲ್ಲಿ ಯುವ ಜನಾಂಗವನ್ನು ತಯಾರು ಮಾಡುವ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಎಸ್‌ ಸಿ, ಎಸ್‌ ಟಿ ಘಟಕದ ಸಿಬ್ಬಂದಿ ಸಲಹೆಗಾರರಾದ ಡಾ. ಎನ್.‌ ನರಸಿಂಹಯ್ಯ ಅವರು ಅಭಿಪ್ರಾಯಪಟ್ಟರು.


ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರ 135ನೇ ಜನ್ಮದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಜ್ಞಾನದ ಬಲವನ್ನು ತೋರಿಸಿಕೊಟ್ಟ ಅಂಬೇಡ್ಕರ್‌, ದಾಮೋದರ ಕಣಿವೆ ಯೋಜನೆ, ಹಿರಾಕುಡ್‌ ಅಣೆಕಟ್ಟು, ಬಾಕ್ರಾ ನಂಗಲ್‌ ಅಣೆಕಟ್ಟು ಮುಂತಾದ ಪ್ರಮುಖ ಯೋಜನೆಗಳಿಗೆ ನೀಲನಕ್ಷೆ ರೂಪಿಸಿದ್ದರಿಂದಾಗಿ ಜಾಗತಿಕ ಮಟ್ಟದ ಆರ್ಥಿಕ ಸಂಕಷ್ಟವನ್ನು ಎದುರಿಸುವಲ್ಲಿ ಭಾರತ ಇಂದು ಶಕ್ತವಾಗಿದೆ ಎಂದು ತಿಳಿಸಿದರು.


ರೈತರು, ಮಹಿಳೆಯರು ಪ್ರಗತಿ ಹೊಂದಿದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂಬುದನ್ನು ಪ್ರತಿಪಾದಿಸಿದ್ದ ಅಂಬೇಡ್ಕರ್‌, ಪ್ರತೀಯೊಬ್ಬರು ಶಿಕ್ಷಣವನ್ನು ಸದುಪಯೋಗಪಡಿಸಿಕೊಂಡರೆ ವಿಕಸಿತ ಭಾರತದ ಕನಸು ನನಸಾಗುತ್ತದೆ ಎಂದು ತಿಳಿಸಿದರು. ಯುವ ಜನರು ಸತ್ಯಪರತೆ, ಸ್ವಾರ್ಥರಹಿತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಕರೆ ಕೊಟ್ಟ ಸಂವಿಧಾನ ಶಿಲ್ಪಿ ಡಾ. ಬಿ. ಆರ್‌. ಅಂಬೇಡ್ಕರ್‌ ಯುವಕರಿಗೆ ಮಾದರಿ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ. ಎಸ್‌, ಮೌಢ್ಯ ಹಾಗೂ ಅಸಮಾನತೆಯಿಂದ ಕೂಡಿದ್ದ ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮೌಲ್ಯ ಹಾಗೂ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ತಮ್ಮ ಪ್ರಯತ್ನಕ್ಕೆ ಅಡ್ಡಿಪಡಿಸಿದವರ ಧೋರಣೆಗೆ ಮೂಲ ಕಾರಣಗಳನ್ನು ಹುಡುಕಿ ಅಧ್ಯಯನ ಮಾಡಿ ಅದಕ್ಕೆ ಪರಿಹಾರವನ್ನು ಸಂವಿಧಾನದಲ್ಲಿ ರೂಪಿಸಿದ ಮಹಾನ್‌ ಚೇತನ ಡಾ. ಬಿ.ಆರ್. ಅಂಬೇಡ್ಕರ್‌ ಎಂದರು. ಪ್ರತೀಯೊಬ್ಬರು ಶಿಕ್ಷಣ ಪಡೆದು ತಮಗೆ ಉದ್ಯೋಗ ಲಭಿಸಿದ ನಂತರ ಸುಮ್ಮನಾಗದೆ ಮತ್ತೊಬ್ಬರ ಏಳಿಗೆಗೂ ಶ್ರಮಿಸುವ ಮೂಲಕ ಅಂಬೇಡ್ಕರ್‌ ಅವರ ಕನಸು ನನಸು ಮಾಡುವ ಜವಾಬ್ದಾರಿ ಪ್ರತೀಯೊಬ್ಬರ ಮೇಲಿದೆ ಎಂದರು.


ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ. ರಾಮಕೃಷ್ಣ ಬಿ.ಎಂ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಎನ್‌ .ಸಿ. ಸಿ ಭೂದಳದ ಎಎನ್‌ಒ ಮೇಜರ್‌ ಡಾ. ಜಯರಾಜ್‌ ಎನ್‌, ಎನ್‌. ಸಿ .ಸಿ ನೌಕಾದಳದ ಎಎನ್‌ಒ ಲೆಫ್ಟಿನೆಂಟ್‌ ಕಮಾಂಡರ್‌ ಡಾ. ಯತೀಶ್‌ ಕುಮಾರ್‌, ಎನ್‌. ಎಸ್‌ .ಎಸ್‌ ಅಧಿಕಾರಿ ಡಾ. ಸುರೇಶ್‌, ಗ್ರಂಥಪಾಲಕಿ ಡಾ. ವನಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಎನ್‌. ಸಿ. ಸಿ ಮತ್ತು ಎನ್‌.ಎಸ್‌ .ಎಸ್‌ ವಿದ್ಯಾರ್ಥಿಗಳು ಭಾಗವಹಿಸಿದ್ದರು.



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top