ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಧಾರವಾಡ ಜಿಲ್ಲಾಮಟ್ಟದ ಕವಿಗೋಷ್ಠಿ

Upayuktha
0

ಕಾವ್ಯ ಸಮಾಜದ ಕಟ್ಟಕಡೆಯ ಬದುಕಿನ ತಲ್ಲಣಗಳಿಗೆ ಸ್ಪಂದಿಸಬೇಕು: ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್




ಧಾರವಾಡ: ಕವಿಗಳಿಗೆ ಕಾವ್ಯ ಪರಂಪರೆಯ ಜೊತೆಗೆ ಹಿರಿಯ ತಲೆಮಾರಿನ ಕವಿಗಳ ಸಾಹಿತ್ಯದ ತಿರುಳು ಗೊತ್ತಿರಬೇಕು. ಕನ್ನಡ ಸಾಹಿತ್ಯೇತಿಹಾಸದಲ್ಲಿ ಜನಪದ ಸಾಹಿತ್ಯ ಹಾಗೂ ವಚನ ಸಾಹಿತ್ಯ ಅನುಭಾವದ ಮೌಲ್ಯಗಳನ್ನು ಕಟ್ಟಿಕೊಡುವುದರ ಜೊತೆಗೆ ತಳಸಮುದಾಯದ ಬದುಕಿಗೆ ಬಲ ತುಂಬಿವೆ. ಆದ್ದರಿಂದ ಕಾವ್ಯ ಸಮಾಜದ ಕಟ್ಟಕಡೆಯ ಬದುಕಿನ ತಲ್ಲಣಗಳಿಗೆ ಸ್ಪಂದಿಸಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.


ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಧಾರವಾಡದ ವತಿಯಿಂದ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಧಾರವಾಡ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಕನ್ನಡ ಅಸ್ಮಿತೆಗಾಗಿ ಸದಾ ತುಡಿಯಬೇಕಾಗಿದ್ದ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯಾದಾದ್ಯಂತ ಬಹುತೇಕ ನಿದ್ರಾವಸ್ಥೆಯಲ್ಲಿದ್ದು ರಾಜ್ಯಾಧ್ಯಕ್ಷನೇ ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿ ಅಧಿಕಾರದಿಂದ ವಜಾಗೊಂಡಿರುವುದು ಕನ್ನಡ ಸಾಹಿತ್ಯ ಪರಿಷತ್ತಿಗೆ ಕಪ್ಪುಚುಕ್ಕೆಯಾಗಿದೆ. ಪ್ರಸ್ತುತ ನೂರಾರು ಕನ್ನಡಪರ ಸಂಘಟನೆಗಳು ಇಂದು ಕಾರ್ಯೋನ್ಮುಖವಾಗಿರುವುದರಿಂದ ಕನ್ನಡ ಸಾಹಿತ್ಯ ಕ್ಷೇತ್ರ ಜೀವಂತವಾಗಿದೆ. ಜಾತಿ ಮತ್ತು ರಾಜಕಾರಣಗಳನ್ನೇ ಹೊದ್ದು ಮಲಗಿರುವ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಆಶಯಗಳನ್ನು ಮರೆತು ಕುಳಿತಿರುವುದು ಕನ್ನಡಿಗರಾದ ನಾವು ಜಾಗೃತಿಗೊಳ್ಳಬೇಕಿದೆ ಎಂದರು.



ರಾಜ್ಯ ಉಪಾಧ್ಯಕ್ಷೆ ಶಾಲಿನಿ ಆರ್. ರುದ್ರಮುನಿ ತಾಲ್ಲೂಕು ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳ ಮೌಲ್ಯಗಳನ್ನು ಪಸರಿಸುವಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಜಿಲ್ಲಾಧ್ಯಕ್ಷರಾದ ಎ.ಎ.ದರ್ಗಾರವರ ಮಾರ್ಗದರ್ಶನದಲ್ಲಿ ಹಿರಿಯ ಸಾಹಿತಿ ಸಂಧ್ಯಾ ದೀಕ್ಷಿತರವರ ನೇತೃತ್ವದಲ್ಲಿ ಹುಬ್ಬಳ್ಳಿ ಘಟಕ ಹಾಗೂ ಶಿವು ಖನ್ನೂರರವರ ನೇತೃತ್ವದಲ್ಲಿ ಧಾರವಾಡ ತಾಲ್ಲೂಕು ಕಾರ್ಯನಿರ್ವಹಿಸುತ್ತಿವೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಗಟ್ಟಿಯಾಗಿ ವೇದಿಕೆಯನ್ನು ಕಟ್ಟಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.


ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಎ.ಎ.ದರ್ಗಾ ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಒಂದು ಕಾಲಘಟ್ಟದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಧಾರವಾಡ ಇಂದು ನಿರಾಸಕ್ತಿಯೆಡೆಗೆ ಸಾಗುತ್ತಿರುವುದು ದುರಂತ. ಸಾಹಿತ್ಯ ಸಮ್ಮೇಳನ ಹಾಗೂ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಯುವಜನತೆ ತೊಡಗಿಸಿಕೊಳ್ಳುತ್ತಿರುವುದು ತುಂಬಾ ಕ್ಷೀಣಿಸುತ್ತಿದೆ. ಇದು ಭವಿಷ್ಯಕ್ಕೆ ತುಂಬಾ ನಿರಾಸೆ ಉಂ ಟು ಮಾಡುತ್ತದೆ. ಸಾಹಿತ್ಯ ಸಂಘಟನೆಗಳು ಹಾಗೂ ಸಾಹಿತಿಗಳು ಇಂದಿನ ಯುವಜನತೆಗೆ ಸ್ಫೂರ್ತಿ ತುಂಬ ಬೇಕಿದೆ. ಸಾಹಿತ್ಯದ ಜಾಗೃತಿ ಮೂಡಿಸಬೇಕಿದೆ. ಸಾಂಸ್ಕೃತಿಕ ಆಸಕ್ತಿಯನ್ನು ಬೆಳೆಸಬೇಕಿದೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಮೂಲ ಉದ್ಧೇಶವೇ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಾಗಿದೆ ಎಂದರು.


ವೇದಿಕೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ರಾಜ್ಯ ಗೌರವಾಧ್ಯಕ್ಷ ರಂಜಾನ್ ದರ್ಗಾ, ರಾಜ್ಯ ಉಪಾಧ್ಯಕ್ಷೆ ಶಾಲಿನಿ ಆರ್. ರುದ್ರಮುನಿ, ಜಿಲ್ಲಾಧ್ಯಕ್ಷ ಎ.ಎ.ದರ್ಗಾ, ನಿವೃತ್ತ ಪ್ರಾಚಾರ್ಯರಾದ ಪ್ರೊ. ಎಸ್.ಆರ್. ಆಶಿ, ಹಿರಿಯ ಸಾಹಿತಿ ಎಂ.ಡಿ.ಒಕ್ಕುಂದ, ಧಾರವಾಡ ತಾಲ್ಲೂಕು ಅಧ್ಯಕ್ಷ ಶಿವು ಎಂ. ಖನ್ನೂರ, ಹುಬ್ಬಳ್ಳಿ ತಾಲ್ಲೂಕು ಅಧ್ಯಕ್ಷೆ ಸಂಧ್ಯಾ ಧೀಕ್ಷಿತ ಮುಂತಾದವರು ಮಾತನಾಡಿದರು.


ಧಾರವಾಡ ಜಿಲ್ಲಾಮಟ್ಟದ ಕವಿಗೋಷ್ಠಿ

ನಂತರ ನಡೆದ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಸುಹಾಸಿನಿ ಕುಕ್ಕಡೊಳ್ಳಿ, ಸುಲೋಚನಾ ಮಾಲಿ ಪಾಟೀಲ, ಮಂಜುನಾಥ ಮದ್ನೂರು, ಎಸ್.ಎಂ. ಮುಲ್ಲಾ, ಶ್ರೀನಿವಾಸ ಪಾಟೀಲ, ಪರ್ವೀನ್ ದರ್ಗಾ, ಡಾ. ರೇಣುಕಾತಾಯಿ ಎಂ. ಸಂತಬಾ, ಜ್ಯೋತಿ ಎಂ. ಚಿನಗುಂಡಿ, ದೀಪಾ ಜವಳಿ, ಭಾರತಿ ಬಡಿಗೇರ, ಗಣೇಶ ಏಸುಗಡೆ, ಸಂತೋಷ ಕರೆಮಳ್ಳನವರ, ಶಾಂತ ಕೆ. ಹೊಂಬಳ, ಪ್ರಿಯಾಂಕ ಮಾವಿನಕರ, ಮಲ್ಲಮ್ಮ ಯಾತಗಲ್ಲ, ಪದ್ಮಾ ಕಲೆಗಾರ, ಗಿರಿಜಾ ಸಂಗೊಳ್ಳಿ, ಪಾರ್ವತಿ ಹಮ್ಮಿಗೆ, ಮೇಘಾ ಹುಕ್ಕೇರಿ, ಸಂಗನಗೌಡ ಯಾಳಗಿ, ರಾಹುಲ ಉಪ್ಪಾರ, ಪಾರಕ್ಕ ದಾನನ್ನವರ್, ರಾಜೇಶ್ವರಿ ಕೋಲಕಾರ, ದೀಪಶ್ರೀ ನಾಯಕ, ಅಶೋಕ ಮುತ್ತಗಿ, ಪದ್ಮಜಾ ಉಮರ್ಜಿ, ಮಂಗಳಾ ನಾಡಿಗೇರ, ಸುಮಾ ಜೋಷಿ ಸೇರಿದಂತೆ ಹಲವರು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top