ಧರ್ಮಸ್ಥಳದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ: 106 ಜೋಡಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

Upayuktha
0

 


ಉಜಿರೆ: ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಸಂಜೆ ನಡೆದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಭವ್ಯವಾಗಿ ನಡೆಯಿತು. ಅಮೃತವರ್ಷಿಣಿ ಸಭಾಭವನದಲ್ಲಿ ಗೋಧೂಳಿ ಲಗ್ನದ ಶುಭ ಮುಹೂರ್ತದಲ್ಲಿ 106 ಜೋಡಿ ವಧೂ-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬೆಳಿಗ್ಗೆ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಕುಟುಂಬದವರು ವರರಿಗೆ ಧೋತಿ, ಶಾಲು ಹಾಗೂ ವಧುವರಿಗೆ ಸೀರೆ, ಮೂಗುತಿ ಮತ್ತು ರವಿಕೆ ಕಣ ವಿತರಿಸಿದರು. ಸಂಜೆ 5 ಗಂಟೆಗೆ ದೇವಸ್ಥಾನದಿಂದ ಅಮೃತವರ್ಷಿಣಿ ಸಭಾಭವನದವರೆಗೆ ವಧೂ-ವರರ ಭವ್ಯ ಮೆರವಣಿಗೆ ಜರುಗಿತು.

ಸಂಜೆ 6.40ಕ್ಕೆ ಗೋಧೂಳಿ ಲಗ್ನದಲ್ಲಿ ವೇದಘೋಷ, ಮಂಗಳವಾದ್ಯಗಳ ನಡುವೆ ಹಾರ ವಿನಿಮಯ, ಮಂತ್ರಾಕ್ಷತೆ ನೆರವೇರಿಸಿ ವಧುವಿಗೆ ಮಂಗಳಸೂತ್ರ ಧಾರಣೆ ಮಾಡಲಾಯಿತು. ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು ಹಾಗೂ ಗಣ್ಯ ಅತಿಥಿಗಳು ಮಂಗಳಸೂತ್ರ ವಿತರಿಸಿದರು. ಇದೇ ವೇಳೆ 13100ನೇ ದಂಪತಿಗೆ ಹೆಗ್ಗಡೆಯವರು ಮಂಗಳಸೂತ್ರ ನೀಡಿ ಆಶೀರ್ವದಿಸಿದರು.

ಶೋಭಾನೆ ಹಾಡುಗಳ ನಡುವೆ ನೂತನ ದಂಪತಿಗಳಿಗೆ ಆರತಿ ಹಾಗೂ ಮಂಗಳದ್ರವ್ಯ ವಿತರಿಸಲಾಯಿತು. ಬಳಿಕ ಧರ್ಮಸ್ಥಳದ ವತಿಯಿಂದ ಉಡುಗೊರೆ ನೀಡಿ ಶುಭ ಹಾರೈಸಲಾಯಿತು. ನೂತನ ದಂಪತಿಗಳು ದೇವರ ದರ್ಶನ ಪಡೆದು ಅನ್ನಪೂರ್ಣ ಭೋಜನಾಲಯದಲ್ಲಿ ಮದುವೆ ಊಟ ಮಾಡಿ ತಮ್ಮ ತಮ್ಮ ಊರುಗಳಿಗೆ ತೆರಳಿದರು.

ಸಭಾ ಕಾರ್ಯಕ್ರಮ

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ದಾಂಪತ್ಯ ಜೀವನದಲ್ಲಿ ಪರಸ್ಪರ ನಂಬಿಕೆ, ಪ್ರೀತಿ ಮತ್ತು ಹೊಂದಾಣಿಕೆ ಅತ್ಯಂತ ಮುಖ್ಯ ಎಂದು ಸಲಹೆ ನೀಡಿದರು. ಧರ್ಮಸ್ಥಳದಲ್ಲಿ ಆರಂಭವಾದ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನು ಸರ್ಕಾರ ಹಾಗೂ ಅನೇಕ ಮಠ-ಮಂದಿರಗಳು ಮಾದರಿಯಾಗಿ ಅನುಸರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಇನ್ನು ಮುಂದೆ ಇತರ ಕಡೆಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳಿಗೆ ಧರ್ಮಸ್ಥಳದಿಂದ ಮಂಗಳಸೂತ್ರ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇದರಿಂದ ಜನರಲ್ಲಿ ತಪ್ಪು ಕಲ್ಪನೆ ಮೂಡುವ ಸಾಧ್ಯತೆ ಇರುವುದಾಗಿ ಅವರು ತಿಳಿಸಿದರು.

ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ಮದುವೆ ಜೀವನದಲ್ಲಿ ಮಹತ್ವದ ಬದಲಾವಣೆಯ ಘಟ್ಟವಾಗಿದ್ದು, ಧರ್ಮಸ್ಥಳದ ಉಚಿತ ಸಾಮೂಹಿಕ ವಿವಾಹ ಸಮಾಜ ಸೇವೆಯ ಅತ್ಯಂತ ಪವಿತ್ರ ಕಾರ್ಯವಾಗಿದೆ ಎಂದು ಹೇಳಿದರು.

ಶಾಸಕ ಹರೀಶ್ ಪೂಂಜ ಅವರು ಹೆಗ್ಗಡೆ ದಂಪತಿಯ ಜೀವನವನ್ನು ಪ್ರೇರಣಾದಾಯಕವೆಂದು ಕೊಂಡಾಡಿ ನೂತನ ದಂಪತಿಗಳಿಗೆ ಶುಭ ಹಾರೈಸಿದರು. ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.

ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಹಾಗೂ ಶರ್ಮಿಳಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಂಗಳೂರಿನ ಕ್ಷೇಮವನದ ಸಿಇಒ ಶ್ರದ್ಧಾ ಅಮಿತ್ ಸ್ವಾಗತಿಸಿದರು. ಎ.ವಿ. ಶೆಟ್ಟಿ ಧನ್ಯವಾದ ಅರ್ಪಿಸಿದರು.

ಸಂಪತ್ ಕುಮಾರ್ ರೈ ಮತ್ತು ಶ್ರೀನಿವಾಸ ರಾವ್ ಕಾರ್ಯಕ್ರಮ ನಿರ್ವಹಿಸಿದರು.


 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top