ತುಳುನಾಡಿನ ಹೊಸ ವರ್ಷ ಬಿಸು

Upayuktha
0


ತುಳುವರಿಗೆ ವಿಷು ಸಂಕ್ರಾಂತಿ ಬಿಸು. ಬೇವು ಬೆಲ್ಲಗಳ ವಿನಿಮಯದ ಸಮೃದ್ಧಿ ಯ ಪ್ರೀತಿಯ ಹಬ್ಬ. ಸೌರಮಾನದ ಲೆಕ್ಕಾಚಾರದಂತೆ ಇದನ್ನು ವರ್ಷ ಆರಂಭದ ದಿನ ಎಂದು ಹೇಳಲಾಗುತ್ತದೆ. ಯುಗದ ಆದಿ ಯುಗಾದಿ. ಯುಗ ಎಂಬುದಕ್ಕೆ ಹೊಸ ವರ್ಷ ಎಂಬ ಅರ್ಥವೂ ಇದೆ. ತುಳುವರಿಗೆ ಬಿಸು, ಕೇರಳಿಯರು ಮತ್ತು ತಮಿಳಿಗರಿಗೆ ವಿಷು, ವಿಶುವತ್ ಸಂಕ್ರಮಣ.


"ಯುಗ ಯುಗಾದಿ ಕಳೆದರೂ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷ ವ ಹೊಸತು ಹೊಸತು ತರುತಿದೆ "ಎಂಬ ಕವಿವಾಣಿಯಂತೆ ಪ್ರಕೃತಿ ಹಸಿರು ಹಸಿರಾಗಿ ಕಂಗೋಳಿಸುತ್ತದೆ.


ಕಣಿ ಇಡುವುದು ಬಿಸುವಿನ ಬಹು ಮುಖ್ಯ ಆಚರಣೆ. ಯುಗಾದಿ ಯ ಹಿಂದಿನ ದಿನ ಹಿರಿಯ ರೊಬ್ಬರು ರಾತ್ರಿ ದೇವರ ಮುಂದೆ ಕಣಿ ಇಡುತ್ತಾರೆ. ಹರಿವಾಣದಲ್ಲಿ ಅಕ್ಕಿಯ ಮೇಲೆ ತೆಂಗಿನ ಕಾಯಿ. ಅದರ ಮುಂದೆ ಕನ್ನಡಿ. ಆಭರಣಗಳು, ತಾವೇ ಬೆಳೆಸಿದ ಸೌತೆಕಾಯಿ ಮೊದಲಾದ ತರಕಾರಿಗಳು ಮತ್ತು ಹಣ್ಣುಗಳನ್ನು ಜೋಡಿಸಿ ಇಡುತ್ತಾರೆ.


ಮುಂಜಾನೆ ಎದ್ದು ಮೊದಲು ಕನ್ನಡಿಯಲ್ಲಿ ತಮ್ಮ ಮುಖ ನೋಡಿ ದೇವರಿಗೆ ನಮಸ್ಕಾರ ಮಾಡ ಬೇಕು. ಹೊಸ ಬಟ್ಟೆ ಧರಿಸಿ ಹಿರಿಯರಿಗೆ ನಮಿಸಿ  ಆಶೀರ್ವಾದ ಪಡೆದು ಕೊಳ್ಳುತ್ತಾರೆ.


ಕಣಿ ಎಂಬುದಕ್ಕೆ ಭವಿಷ್ಯ ಫಲ ಎಂಬ ಅರ್ಥವೂ ಇದೆ. ಬಿಸುವಿನ ದಿನ ಪಂಚಾಂಗ ಶ್ರವಣವೂ ಇರುತ್ತದೆ. ಹೊಸ ವರ್ಷದ ಭವಿಷ್ಯ ಫಲವನ್ನು ತಿಳಿದು ಕೊಳ್ಳುತ್ತಾರೆ. ಭವಿಷ್ಯ ಸುಖಕರವಾಗಿರಲಿ ಎಂಬ ಹಾರೈಕೆ ಎಲ್ಲರದು.


ಕಣಿ ನೋಡುವ ಮೂಲಕ ಮಂಗಲಕರವಾದ ಆಶಯ ನಮ್ಮದಾಗಬೇಕು ಎಂಬ ಆಶಯವಿದೆ. ಕನ್ನಡಿಯಲ್ಲಿ ತನ್ನನ್ನು ತಾನು ಕಾಣುವ ಮೂಲಕ ತನ್ನತನವನ್ನು ಅರಸುವ ಹಂಬಲ ಇದೆ. ಕಳೆದ ವರ್ಷದ ತನ್ನ ತಪ್ಪು ಒಪ್ಪುಗಳ ಅವಲೋಕನದೊಂದಿಗೆ ಮುಂದಿನ ವರ್ಷದ ಬದುಕಿನ ಯಾನದ ಹುಡುಕಾಟವೂ ಇದೆ. ಬಹಿರಂಗದ ಶುದ್ಧಿಯೊಂದಿಗೆ ಅಂತರಂಗದ ಶುದ್ಧೀಕರಣಕ್ಕೊಂದು ವೇದಿಕೆ ಅದು. ಕುಟುಂಬದ ಸದಸ್ಯರು ಜೊತೆಗೆ ಉಣ್ಣುವ, ಕಾಲ ಕಳೆಯುವ ಸಂದರ ದಿನ ಇದು. 


ಕೃಷಿ ಬದುಕಿನಲ್ಲಿ ಬಿಸುವಿನ ಆಚರಣೆ ಇನ್ನಷ್ಟು ವಿಸ್ತರಣೆಗೊಂಡಿದೆ. ರೈತರು ಗದ್ದೆಗಳಿಗೆ ಹೋಗಿ ನೆಕ್ಕಿ, ಸರೋಳಿ, ಸಪ್ಪು ಗೆಲ್ಲುಗಳನ್ನು ಸೂಡಿ ಕಟ್ಟಿ ಊರಿ ಬರುವ ಕ್ರಮ ಇದೆ. ಕೋಡಿ ಗದ್ದೆಯ ಮೂಲೆಯಲ್ಲಿ ಮಣ್ಣು ಅಗೆದು ಬೂದಿ ನೀರು ಬೆರೆಸಿ ರಾಶಿ ಮಾಡಿ ಭತ್ತದ ಬೀಜಗಳನ್ನು ಹಾಕಿ ಬರುವ 'ಕೈಬಿತ್ತು' ಕ್ರಮವೂ ಇದೆ. 


ಹಿಂದಿನ ಕಾಲ …


ಬಿಸು ಎಂಬುದು ಪ್ರಕೃತಿಯ ಹಬ್ಬ. ಮನುಷ್ಯ ಪ್ರಕೃತಿಯ ನಡುವಿನ ಸಂಬಂಧದ ಹಬ್ಬ. ತನ್ನ ನೆಲದಲ್ಲಿ ಆದ ತರಕಾರಿ ಹಣ್ಣಹಂಪಲು ಹೂವು ಗಳನ್ನು ದೇವರ ಮುಂದಿಟ್ಟು ಸಂಭ್ರಮಿಸುವ ಹಬ್ಬ. ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳ ಹಬ್ಬವೂ ಹೌದು.


ಇಂದಿನ ದಿನಗಳಲ್ಲಿ ಮನುಷ್ಯ ಪ್ರಕೃತಿಯಿಂದ ದೂರ ಸರಿಯುತ್ತಿದ್ದಾನೆ. ಕೌಟುಂಬಿಕ ಸಂಬಂಧಗಳೂ ಇಲ್ಲವಾಗುತ್ತಿದೆ. ಕವಿ ರಘು ಇಡ್ಕಿದು ಅವರು ತಮ್ಮ ಕವಿತೆ ಯೊಂದಲ್ಲಿ ಹಿರಿಯ ಹಾಗೂ ಕಿರಿಯ ತಲೆಮಾರಿ ನ ಸಂಘರ್ಷ ವನ್ನುಹೀಗೆ ಚಿತ್ರಿಸುತ್ತಾರೆ.


"ಕಾಲ ಚಕ್ರೋದ ತಿರ್ಗುಗೊಂಜಿ ಪುದರ್ ಬಿಸು" ಎಂದು ಮಗ ಹೇಳಿದರೆ ತಾಯಿ ಹೇಳುತ್ತಾಳ- 

"ಬಿಸು ಪಂಡ 

ನಮ್ಮ ರೀತಿ ರಿವಾಜಿದ ಉಸುಲು 

ಕಟ್ಟ್ ಕಟ್ಟೆಲದ ನೆರೆಲ್ 

ಪರ ಪೋಕುದ ಒಸರ್!"


ಕೊನೆಗೆ ಆಕೆ ನುಡಿಯುತ್ತಾಳೆ 


ಅವು ಎನ್ನ ನಿನ್ನ ಸಂಬಂದೊ 

ಮಣ್ಣ ಕಣೊ ಕಣೊತ್ತ ಋಣಾನುಬಂದೊ!


ಇಂದು ನಾವು ಪ್ರಕೃತಿ ಮತ್ತು ಮನುಷ್ಯ ಸಂಬಂಧಗಳ ಹಿನ್ನೆಲೆಯಲ್ಲಿ ಬಿಸು ಹಬ್ಬವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮನುಷ್ಯ ಜೀವನದ ಉನ್ನತಿಗೆ ಅಂತರಂಗದೊಳಗಿನ ಭಾವನಾ ಪ್ರಪಂಚ ಜಾಗೃತಗೊಳ್ಳಬೇಕಾಗಿದೆ. ಪ್ರಕೃತಿಯಿಂದ ದೂರ ಸಾಗುತ್ತಿರುವ ನಾವು ಮತ್ತೆ ನಮ್ಮನ್ನು ನಾವು ಪ್ರಕೃತಿ ಯೊಂದಿಗೆ ಮುಖಾಮುಖಿಗೊಳಿಸಬೇಕಾಗಿದೆ.

 

ಕವಿ ಕೆ.ಎಸ್. ನರಸಿಂಹ ಸ್ವಾಮಿ ಅವರು 'ಯುಗಾದಿ' ಕವಿತೆಯಲ್ಲಿ ಹೀಗೆ ಹೇಳುತ್ತಾರೆ.


ಮಾವು ನಾವು, ಬೇವು ನಾವು 

ನೋವು ನಲಿವು ನಮ್ಮವು 

ಹೂವು ನಾವು, ಹಸಿರು ನಾವು 

ಬೇವು ಬೆಲ್ಲ ನಮ್ಮವು 


ಹೊಸತು ವರುಷ, ಹೊಸತು ಹರುಷ 

ಹೊಸತು ಬಯಕೆ ನಮ್ಮವು 

ತಳಿರ ತುಂಬಿದಾಸೆಯೆಲ್ಲ,

ಹರಕೆಯೆಲ್ಲ ನಮ್ಮವು


ಯುದ್ಧದ ಉನ್ಮಾದ ಅಳಿದು ಶಾಂತಿಯ ನಾಡು ಮರು ಸ್ಥಾಪನೆಯಾಗಲಿ. ಕೆಟ್ಟತನಗಳು 'ಪರಾಭವ'ಗೊಂಡು ಒಳ್ಳೆಯತನ ಜಯ ಸಾಧಿಸಲಿ ಎಂಬ ಹಾರೈಕೆ ನಮ್ಮದಾಗಲಿ.


-ಕೃಷ್ಣಮೂರ್ತಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top