ಪ್ರಸ್ತುತ ಆಧುನಿಕ ಯುಗದಲ್ಲಿ ಮನುಷ್ಯ ತಾಂತ್ರಿಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಅಂತರಂಗದ ಮೌಲ್ಯಗಳಲ್ಲಿ ಕುಸಿಯುತ್ತಿದ್ದಾನೆ. ಪ್ರಮುಖ ವೆಂದರೆ ಹಣದ ವ್ಯಾಮೋಹ, ಅತಿಯಾದ ಲಾಭದ ಆಸೆ ಮತ್ತು ಅಧಿಕಾರದ ಅಮಲಿನಲ್ಲಿ ಮಾನವೀಯತೆಯನ್ನು ಮರೆಯುತ್ತಿದ್ದಾನೆ. ಇಂತಹ ಸಂಕೀರ್ಣ ಕಾಲಘಟ್ಟದಲ್ಲಿ 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ವಚನಗಳು ಕೇವಲ ಸಾಹಿತ್ಯವಲ್ಲ, ಅವು ಸಮಾಜವನ್ನು ಸುಸ್ಥಿತಿಗೆ ತರುವ 'ನೈತಿಕ ದಿಕ್ಸೂಚಿ'ಗಳಾಗಿವೆ. ವ್ಯಕ್ತಿ ತನ್ನ ಸ್ವಾರ್ಥವನ್ನು ಬಿಟ್ಟು ಸಮಾಜದ ಹಿತವನ್ನು ಹೇಗೆ ಕಾಪಾಡಬೇಕು ಎಂಬುದಕ್ಕೆ ಬಸವಣ್ಣನವರ ಬದುಕು ಮತ್ತು ಬರಹಗಳು ಅತ್ಯುತ್ತಮ ಸಾಕ್ಷಿ.
ಬಸವಣ್ಣನವರು ಪ್ರತಿಪಾದಿಸಿದ 'ಕಾಯಕವೇ ಕೈಲಾಸ' ಎಂಬ ತತ್ವವು ಇಂದಿನ ಜಗತ್ತಿಗೆ ಬಹುದೊಡ್ಡ ಮದ್ದಾಗಿದೆ. ಬೆವರು ಸುರಿಸಿ ದುಡಿಯುವ ಕಾಯಕದಲ್ಲಿ ದೈವತ್ವವನ್ನು ಕಂಡ ಅವರು ಶ್ರಮಕ್ಕೆ ಗೌರವ ನೀಡಿ 'ದಾಸೋಹ' ಸಂಸ್ಕೃತಿಯನ್ನು ಪರಿಚಯಿಸಿ, ಸಂಗ್ರಹ ಬುದ್ಧಿಯನ್ನು ಬಿಡಬೇಕು ಎಂದು ಸಾರಿದರು. ವೈಯಕ್ತಿಕ ನೈತಿಕತೆಯ ಬಗ್ಗೆ ಬಸವಣ್ಣನವರು ನೀಡಿದ 'ಸಪ್ತ ಸೂತ್ರಗಳು' ಇಂದಿನ ಲೋಕಕ್ಕೆ ಕನ್ನಡಿ ಹಿಡಿಯುವಂತಿವೆ. "ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ" ಎಂಬ ಸರಳ ನಿಯಮಗಳನ್ನು ಪಾಲಿಸಿದರೆ ಸಮಾಜದಲ್ಲಿ ಪೊಲೀಸ್ ಮತ್ತು ನ್ಯಾಯಾಲಯಗಳ ಅಗತ್ಯವೇ ಇರುವುದಿಲ್ಲ ಎಂಬುದು ನನ್ನ ಅಭಿಪ್ರಾಯ. ಅಂತರಂಗ ಶುದ್ಧಿ ಮತ್ತು ಬಹಿರಂಗ ಶುದ್ಧಿಯ ನಡುವೆ ಸಾಮರಸ್ಯ, ಅನ್ಯರನ್ನು ಅಸಹ್ಯ ಪಡದೆ, ತನ್ನನ್ನು ತಾನು ಹೊಗಳಿಕೊಳ್ಳದೆ ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಎಂಬ ಮನೋಭಾವ, ಇಂದಿಗೂ ಕೂಡ ನಮಗೆ ಮಾನವೀಯತೆಯ ಪಾಠ ಕಲಿಸುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಅಸಮಾನತೆ ತಾಂಡವವಾಡುತ್ತಿರುವ ಇಂದಿನ ಕಾಲಕ್ಕೆ ಬಸವಣ್ಣನವರ ಸ್ತ್ರೀ ಸಮಾನತೆಯ ವಿಚಾರಗಳು ಅತ್ಯಂತ ಪ್ರಸ್ತುತ. ಅಂದಿನ ಸಂಪ್ರದಾಯಬದ್ಧ ಸಮಾಜದಲ್ಲೇ ಮಹಿಳೆಯರಿಗೆ ಧಾರ್ಮಿಕ ಮತ್ತು ಸಾಮಾಜಿಕವಾಗಿ ಸಮಾನ ಸ್ಥಾನಮಾನ ನೀಡಿ, "ಆತ್ಮಕ್ಕೆ ಹೆಣ್ಣೆಂದಿಲ್ಲ, ಗಂಡೆಂದಿಲ್ಲ" ಎಂದು ಸಾರುವ ಮೂಲಕ, ಲಿಂಗ ಭೇದವನ್ನು ತೊಡೆದುಹಾಕಿ ಮಹಿಳಾ ಶಕ್ತಿಯನ್ನು ಗೌರವಿಸಿದರು. ಅನುಭವ ಮಂಟಪದಲ್ಲಿ ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮನಂತಹ ಮಹಿಳೆಯರಿಗೆ ಮುಕ್ತವಾಗಿ ಚರ್ಚಿಸುವ ಅವಕಾಶ ನೀಡುವ ಮೂಲಕ ವಿಶ್ವದ ಮೊದಲ ಪ್ರಜಾಪ್ರಭುತ್ವದ ಅಡಿಪಾಯ ಹಾಕಿದ್ದು ಎಂಬುದು ಸುಳ್ಳಲ್ಲ.
ಪ್ರಸ್ತುತ ಸಮಾಜದಲ್ಲಿ ಬಸವಣ್ಣನವರ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ ಅವರ ಶ್ರೇಷ್ಠ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಬದಲು, ಕೇವಲ ಆಚರಣೆ ಮತ್ತು ಮೆರವಣಿಗೆಗಳಿಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಭಾವಚಿತ್ರಕ್ಕೆ ಹೂಮಾಲೆ ಹಾಕಿ ಸಂಪ್ರದಾಯದಂತೆ ಆಚರಿಸುವುದಷ್ಟೇ ಜಯಂತಿಯ ಉದ್ದೇಶವಾಗಬಾರದು. ಬಸವಣ್ಣನವರು ಕಂಡ 'ಕಲ್ಯಾಣ ರಾಜ್ಯ'ದ ಕನಸು ನನಸಾಗಲು ಅವರ ವಿಚಾರಗಳನ್ನು ಲೇಖನಗಳಲ್ಲಿ ಮಾತ್ರವಲ್ಲದೆ ನಮ್ಮ ದೈನಂದಿನ ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಹ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.
ಖಡ್ಗದ ಕ್ರಾಂತಿ ರಕ್ತದ ಕಲೆ ಮಾಸುವವರೆಗೂ ಮಾತ್ರ, ಆದರೆ ಲೇಖನಿಯ ಕ್ರಾಂತಿ ಕಾಲದ ಹಾದಿ ಇರುವವರೆಗೂ ಶಾಶ್ವತ."
- ಡಾ. ಶಿವಪ್ಪ ಎನ್.
ಸಹಾಯಕ ಪ್ರಾಧ್ಯಾಪಕರು
ಸಮಾಜಶಾಸ್ತ್ರ ವಿಭಾಗ
ಸಿ.ಜಿ. ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಕ್ಕಿಆಲೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


