ಜೇಡನ ಬಲೆಯಲ್ಲಿ ಅಮೆರಿಕ

Upayuktha
0

-ಟಿ. ದೇವಿದಾಸ್ 

ತಾನು ಆರಂಭಿಸಿದ ಯುದ್ಧದಿಂದ ಹೊರಬರುವುದಕ್ಕೆ ಅಮೆರಿಕ ಯಾವುದೇ ನಿರ್ಗಮನದ ತಂತ್ರವಿಲ್ಲದೆ ಇರಾನ್ ಜೊತೆ ಯುದ್ಧಕ್ಕೆ ಇಳಿದುಬಿಟ್ಟಿತು. ಇದು ಅಮೆರಿಕಾ ಮಾಡಿದ ಮಹಾ ತಪ್ಪು. ಯಾಕೆಂದರೆ, ಅಮೆರಿಕದ ಯೋಜನೆ ಯೋಚನೆ ಸರಳವಾಗಿತ್ತು. ಇರಾನಿನ ನಾಯಕತ್ವವನ್ನು ಹತ್ಯೆ ಮಾಡಿದರೆ, ಸರ್ಕಾರದ ಪತನಗೊಂಡು ಅದು ಶರಣಾಗತಿಯನ್ನು ಘೋಷಿಸುತ್ತದೆ. ಅಲ್ಲಿಗೆ ವಿಜಯವನ್ನು ಸಾಧಿಸಿದಂತಾಗುತ್ತದೆ ಎಂಬುದು ಅಮೆರಿಕಾದ ದೂ(ದು)ರದೃಷ್ಟಿಯೂ ಆಗಿತ್ತು.  ಆದರೆ ಈಗ ಆದದ್ದೇ ಬೇರೆ. ಮಹಾ ಎಡವಟ್ಟು ಮಾಡಿಕೊಂಡು ಅಮೆರಿಕಾ ಸಂಧಾನಕ್ಕೂ ಯುದ್ಧ ನಿಲುಗಡೆಗೂ ಅವಕಾಶ ಸಿಕ್ಕದೆ ಇರಾನ್ ಕೈಯಲ್ಲಿ ಒಂಥರಾ ಪೇಚಾಟಕ್ಕೆ ಸಿಕ್ಕಿಕೊಂಡಂತಾಗಿದೆ. ದುಃಖಕರವೆಂದರೆ ಅವರಿಗೆ ಅದು ಆಗಲಿಲ್ಲ ಮತ್ತು ಈಗ ನಾಲ್ಕು ವಾರಗಳ ಅನಂತರದ ವಾಸ್ತವವೆಂದರೆ ತೈಲ ಮಾರುಕಟ್ಟೆಗಳು ತೀವ್ರ ಗೊಂದಲದಲ್ಲಿವೆ ಎಲ್ಲಕ್ಕಿಂತ ಮುಖ್ಯವಾಗಿ, ವಿಶ್ವ ಆರ್ಥಿಕತೆಯು ಅಮೆರಿಕಾದ ತಪ್ಪು ಲೆಕ್ಕಾಚಾರಕ್ಕೆ ಬೆಲೆಯನ್ನು ತೆರುತ್ತಿದೆ. ಸಣ್ಣಸಣ್ಣ ದೇಶಗಳು ದಿಗಿಲು ಪಡೆದು ಕೂತುಬಿಟ್ಟಿವೆ. ಭಾರತಕ್ಕಂತೂ ಇರುವುದರಲ್ಲೇ ಉಳಿಸಿಕೊಂಡರೆ ಸಾಕು ಎನ್ನುವಂಥ ಸ್ಥಿತಿ ಬಂದೊದಗಿದೆ.


ಮಾರ್ಚ್ 25, 2026ರ ಹೊತ್ತಿಗೆ, ಟ್ರಂಪ್ ಹೇಳಿಕೊಂಡ ಮಾತುಕತೆಯ ಮೂಲಕ ನಡೆಯಬೇಕಾದ ಕದನ ವಿರಾಮದ ಮಾತುಕತೆ ಇನ್ನೂ ಕನಸಿನ ಮಾತು. ಅಮೆರಿಕಾದ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಾನ್ ಇಲ್ಲವೇ ಇಲ್ಲ. ಯಾವ ಸ್ಥಿತಿಯಲ್ಲೂ ಯುದ್ಧವನ್ನು ನಿಲ್ಲಿಸುವ ಇರಾದೆಯೇ ಇರಾನಿಗಿಲ್ಲ. ಇರಾನಿನ ಈ ನಿರ್ಧಾರವೇ ಅಮೆರಿಕಾಕ್ಕೆ ಜಾಗತಿಕ ಮಟ್ಟದಲ್ಲಿ ನಿಜವಾದ ಮುಖಭಂಗವಾಗಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ಜಾಗತಿಕವಾಗಿ ನಂಬಿಕೆಯನ್ನು ಕಳೆದುಕೊಂಡಿದೆ. ಮಾತುಕತೆ ನಡೆಯುತ್ತಿದೆ ಅಂತ ಅಮೆರಿಕಾ ಹೇಳುತ್ತಿರುವಾಗಲೇ ಇರಾನ್ ಮೇಲೆ ಬಾರಿ ದಾಳಿ ಮಾಡಿದೆ. ವಿಶ್ವದ ರಾಷ್ಟ್ರಗಳನ್ನು ಬಿಡಿ, ಅಮೆರಿಕಾದಲ್ಲೇ ಟ್ರಂಪ್ ಸರ್ಕಾರದ ವಿರುದ್ಧ ಸರಿಸುಮಾರು ಒಂದು ಕೋಟಿ ಅಮೆರಿಕನ್ ಪ್ರಜೆಗಳು ಬೀದಿಗಿಳಿದಿದ್ದಾರೆ. ಇತ್ತ ನೆತನ್ಯಾಹು ಸರ್ಕಾರದ ವಿರುದ್ಧವೂ ಅದೇ ರೀತಿ ಖಂಡನೆ, ಪ್ರತಿಭಟನೆ ಸುರುವಾಗಿದೆ.


ತಕ್ಷಣಕ್ಕೆ ಹಿಂತಿರುಗುವುದೋ ಅಥವಾ ಕದನ ವಿರಾಮವೋ ಇವೆರಡೂ ತನ್ನ ಪ್ರತಿಷ್ಠೆಯನ್ನು ವಿಶ್ವಮಟ್ಟದಲ್ಲಿ ಮಣ್ಣುಪಾಲು ಮಾಡುತ್ತದೆಂಬ ಅವಮಾನ ಮಾಡಿಬಿಟ್ಟೀತೆಂಬ ಭಯದಿಂದ ಯಾವುದೂ ಸಾಧ್ಯವಾಗದ ಯುದ್ಧದಿಂದ ಟ್ರಂಪ್‌ಗೆ ನಿರ್ಗಮನ ತಂತ್ರವೊಂದು ಸಾಧ್ಯವಾಗಬೇಕಿದೆ. ಅದಕ್ಕಾಗಿ ಇವತ್ತು ರಾತ್ರೆ ಮಹತ್ತ್ವದ ಘೋಷಣೆ ಮಾಡಲಿದ್ದಾನೆಂಬ ಸುದ್ದಿಯಿದೆ. ತನ್ನ ಉದ್ದೇಶಗಳನ್ನು ಸಾಧಿಸಲಾಗಿದೆ ಎಂದು ಘೋಷಿಸುತ್ತಲೇ ಯುದ್ಧದಿಂದ ಹಿಂದೆ ಸರಿಯುವುದು ಅಮೆರಿಕದ ಖ್ಯಾತಿಗೆ ಭವಿಷ್ಯದಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ ಎಂಬುದು ಟ್ರಂಪ್ ಗೊತ್ತಿದೆ. ಆದರೆ, ಟ್ರಂಪ್ ತಾನು ಜಗತ್ತಿನ ದೊಡ್ಡಣ್ಣ ಎಂಬ ಭ್ರಮೆ ಮತ್ತು ಹುಚ್ಚಿನ ಪರಮಾವಧಿಯಿಂದ ಅವನಲ್ಲಿಯೇ ಹುಟ್ಟಿಕೊಂಡ ಅತ್ಯವಸರ ಮತ್ತು ಮೇಲರಿಮೆ ಎಂಬುದು ವಿಶ್ವವನ್ನೇ ಆತಂಕ ಮತ್ತು ಅವ್ಯವಸ್ಥೆಯ ಸ್ಥಿತಿಗೆ ದೂಡಿಬಿಟ್ಟಿತು. ಈಗ ಯುದ್ಧ ನಿಲ್ಲಿಸುವ ಮತ್ತು ಮಾತುಕತೆಯ ಅಗತ್ಯ ಇರಾನಿಗಿಂತ ಅಮೆರಿಕಾಕ್ಕೆ ಅತ್ಯಗತ್ಯವಾಗಿದೆ. ಆದರೆ, ಅದೆಷ್ಟು ದೊಡ್ಡ ಪಾಪದ ಮೂಟೆಯನ್ನು ತನ್ನ ಹೆಗಲ ಮೇಲೆ ತಾನು ಹೊತ್ತುಕೊಂಡೇ ಉಳಿದ ದಿನಗಳನ್ನು ಕಳೆಯಬೇಕು ಎಂಬರಿವು ಟ್ರಂಪ್ ಗೆ ಇದ್ದಂತಿಲ್ಲ.


ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅಮೆರಿಕ ಮಾತುಕತೆಗೆ ಸಿದ್ಧವಾಗಿಲ್ಲ ಎಂದು ನಾನು ಭಾವಿಸುವುದಿಲ್ಲ ಏಕೆಂದರೆ ಅದು ಅವರ ವಿಶ್ವಾಸಾರ್ಹತೆಯನ್ನು ತೀವ್ರವಾಗಿ ಹಾಳು ಮಾಡುತ್ತದೆ. ಹತ್ತಿರದ ಇರಾನೈನ್ ದ್ವೀಪಗಳಿಗೆ ಸೈನ್ಯವನ್ನು ನಿಯೋಜಿಸಿ, ಅವುಗಳನ್ನು ಸೆರೆಹಿಡಿದು, ಅನಂತರ ಪ್ರಾಬಲ್ಯದ ಸ್ಥಾನದಿಂದ ಮಾತುಕತೆ ನಡೆಸಲು ಹೆಚ್ಚಿನ ಸಮಯವನ್ನು ಕೊಡಲು ಅಮೆರಿಕಾ ಸಿದ್ಧವಿಲ್ಲ. ಅಷ್ಟಕ್ಕೂ ಇದು ಅಪಾಯಕಾರಿ ಜೂಜಾಟ. ಯಾಕೆಂದರೆ ಈ ದ್ವೀಪಗಳು ಜನನಿಬಿಡ ಪ್ರದೇಶವಾಗಿವೆ. ಮೇಲಾಗಿ, ಇರಾನಿನ ದಾಳಿಯ ವ್ಯಾಪ್ತಿಯಲ್ಲಿವೆ. ಅಮೆರಿಕನ್ ಪಡೆಗಳಿಗೆ ಯಾವುದೇ ರಕ್ಷಣೆಯನ್ನು ನೀಡುವುದು ಸಾಧ್ಯವಿಲ್ಲವಾಗಿದೆ. ಟ್ರಂಪ್ ಮಾಡುವ ಯಾವುದೇ ತಪ್ಪು ಲೆಕ್ಕಾಚಾರವು ಜಗತ್ತನ್ನು ಅನಿರೀಕ್ಷಿತವೂ ಅತಿಹೆಚ್ಚು ತೀವ್ರವೂ ಆದ ಆರ್ಥಿಕ ಬಿಕ್ಕಟ್ಟಿಗೆ ಸಂಕಷ್ಟಗೆ ಸಿಲುಕಿಸುವುದಂತೂ ಟ್ರಂಪಣ್ಣನ ಅಪ್ಪನಾಣೆಗೂ ಸತ್ಯ.


ನ್ಯಾಟೋ ದೇಶಗಳ ಬೆಂಬಲವನ್ನು ಕಳೆದುಕೊಂಡ ಅಮೆರಿಕಾದ ಜಂಘಾಬಲವೇ ಕುಸಿಯುವಂತೆ ಇರಾನ್ ಈಗ ಹೊಸ ಆಕ್ರಮಣಕಾರಿ ಹೆಜ್ಜೆಯಿಟ್ಟಿದೆ. ವಿಶ್ವದ ತೈಲದ ಶೇ.20 ರಷ್ಟು ಸಾಗುವ ಹಾರ್ಮುಜ್ ಜಲಸಂಧಿಯು ಪ್ರಸ್ತುತ ಇರಾನಿನ ಸಂಪೂರ್ಣ ನಿಯಂತ್ರಣದಲ್ಲಿದೆ. ಜಾಗತಿಕವಾಗಿತೈಲ ಬೆಲೆಗಳು ಗಗನಕ್ಕೇರುತ್ತಿವೆ ಮತ್ತು ವ್ಯಾಪಕ ಭೀತಿ ಆವರಿಸಿದೆ. ಈ ಸಂದರ್ಭದಲ್ಲಿ, ಅಮೆರಿಕ ಮತ್ತು ಇಸ್ರೇಲಿ ರಾಯಭಾರಿಗಳನ್ನು ಹೊರಹಾಕುವ ಯಾವುದೇ ಅರಬ್ ಅಥವಾ ಯುರೋಪಿಯನ್ ದೇಶವು ತನ್ನ ತೈಲ ಟ್ಯಾಂಕರ್‌ಗಳನ್ನು ಯಾವುದೇ ಅಡೆತಡೆಯಿಲ್ಲದೆ ನಮ್ಮ ಮಾರ್ಗದ ಮೂಲಕ ಮುಕ್ತವಾಗಿ ಹಾದುಹೋಗುವಂತೆ ಮಾಡುತ್ತದೆ ಎಂದು ಇರಾನ್ ಘೋಷಿಸಿದೆ.


ಆ ದೇಶಗಳು ಒಂದೋ ಇರಾನ್ ಹೇಳಿದ್ದಕ್ಕೆ ಒಪ್ಪಿಕೊಳ್ಳಬೇಕು. ಇಲ್ಲ ಅಮೆರಿಕಾವನ್ನು ಬೆಂಬಲಿಸಬೇಕು. ಕಚ್ಚಾತೈಲದ ಪೂರಣೆಗಾಗಿ ಇರಾನನ್ನು ಬೆಂಬಲಿಸುವುದೊಂದೇ ಸದ್ಯ ಮತ್ತು ಶಾಶ್ವತದ ಒಂದೇ ಒಂದು ಮಾರ್ಗವಾಗಿ ಭಾರತವೂ ಸೇರಿ ಜಗತ್ತಿನ ಕೆಲವು ರಾಷ್ಟ್ರಗಳಿಗೆ ಉಳಿದುಕೊಂಡಿದೆ. ಇದೂ ಸಾಧ್ಯವಾಗದೆ ಅಲಿಪ್ತವಾಗಿರೋಣ ಎಂದುಕೊಳ್ಳುವುದಾದರೆ ಪೆಟ್ರೋಲ್, ಡೀಸೆಲ್, ಎಲ್ ಪಿಜಿಗಾಗಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಅದು ಸದ್ಯಕ್ಕಂತೂ ಅದು ದೂರದ ಮಾತು. ಎಥೆನಾಲ್ ಬಳಸಿ ಗ್ಯಾಸ್ ಸಮಸ್ಯೆ ನೀಗಿಸುವುದು ಕೂಡ ಸದ್ಯಕ್ಕೆ ಕಾರ್ಯಸಾಧ್ಯದ ಮಾತಾಗಿ ಭಾರತಕ್ಕೆ ಉಳಿದಿಲ್ಲ. 


ಇದರರ್ಥ ಅಮೆರಿಕ ಮತ್ತು ಇಸ್ರೇಲ್ ಅನ್ನು ವಿಶ್ವಮಟ್ಟದಲ್ಲಿ ಅವಮಾನಿಸಲು ಇರಾನ್ ಸಿದ್ಧತೆ ನಡೆಸಿದೆ. ಈಗ ಯಾವ ದೇಶಗಳು ತೈಲದ ದುರಾಸೆಯಲ್ಲಿ ಅಮೆರಿಕದ ರಾಯಭಾರಿಯನ್ನು ಹೊರಹಾಕುತ್ತವೆ ಎಂದು ನೋಡುವ ಕುತೂಹಲ. ತೈಲ ಮತ್ತು ಅನಿಲ ಕೊರತೆಯಿಂದ ಬಳಲುತ್ತಿರುವ ದೇಶಗಳಿಗೆ ಇದು ಲಾಟರಿಗಿಂತ ಕಡಿಮೆಯೇನಲ್ಲ! ಕಚ್ಚಾ ತೈಲಕ್ಕಾಗಿ ಹತಾಶರಾಗಿರುವ ಯುರೋಪಿಯನ್ ರಾಷ್ಟ್ರಗಳಿಗೆ ಇದು ಒಂದು ಸುವರ್ಣಾವಕಾಶ. ಆದರೆ ಪ್ರಶ್ನೆಯೆಂದರೆ, ಅಮೆರಿಕದ ಕಣ್ಣಲ್ಲಿ ಕಣ್ಣಿಟ್ಟು ಇದನ್ನು ಮಾಡಲು ಯಾರಿಗೆ ಧೈರ್ಯ ಹುಟ್ಟುತ್ತದೆ?


ಟ್ರಂಪ್ ಮತ್ತು ನೆತನ್ಯಾಹು ಬಹುಶಃ ಈ ಮಾಸ್ಟರ್ ಸ್ಟ್ರೋಕ್ ಅನ್ನು ನಿರೀಕ್ಷಿಸಿರಲಿಲ್ಲ. ಈಗ ಈ ಯುದ್ಧ ಹೇಗೆ ತೆರೆದುಕೊಳ್ಳುತ್ತದೆ ಎಂಬ ಭಯದ ಜೊತೆಗೆ ಕುತೂಹಲವೂ ಹೆಚ್ಚಾಗಿದೆ ಇರಾನ್ ಏಕಕಾಲದಲ್ಲಿ ಮೂರು ರಂಗಗಳಲ್ಲಿ - ರಾಜತಾಂತ್ರಿಕತೆ, ಆರ್ಥಿಕತೆ ಮತ್ತು ಕಾರ್ಯತಂತ್ರದಲ್ಲಿ ಉತ್ತಮ ಆಟವಾಡುತ್ತಿದೆ!


ತಾನು ನೇಯ್ದ ಬಲೆಯಲ್ಲೇ ಬಿದ್ದು ಸಿಕ್ಕಿಕೊಳ್ಳುವ ಜೀವಿಯಂತಿದೆ ಅಮೆರಿಕಾದ ಪರಿಸ್ಥಿತಿ…!



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top