ಮಡಿಕೇರಿ: ಜಾಗತಿಕ ಮಟ್ಟದಲ್ಲಿ ಪ್ರತಿಭಾನ್ವಿತರನ್ನು ಗುರುತಿಸಿ, ಅವರ ಉದ್ಯೋಗ ನೇಮಕಾತಿಗೆ ನೆರವಾಗುವ ಪ್ರಕ್ರಿಯೆಯಲ್ಲಿ ತೊಡಗಿರುವ ವೃತ್ತಿಪರ ಸಂಸ್ಥೆ ಅಡೆಕೊ ಗ್ರೂಪ್‍ನ ಅಂಗ ಸಂಸ್ಥೆಯಾಗಿರುವ ಅಡೆಕೊ ಇಂಡಿಯಾ ಕೊಡಗಿನಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ಕರ್ನಾಟಕದಲ್ಲಿ ಬಹು ಹಂತಗಳ ಗ್ರಾಮೀಣ ಉದ್ಯೋಗ ಅವಕಾಶ ಉಪಕ್ರಮಕ್ಕೆ ಚಾಲನೆ ನೀಡಿದೆ.
ಮುಂದಿನ ಮೂರು ತಿಂಗಳಲ್ಲಿ 2500 ರಿಂದ 3000 ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಅಡೆಕೊ ಇಂಡಿಯಾ ಕಾರ್ಯ ಪ್ರವೃತ್ತವಾಗಿದ್ದು, ಕೊಡಗು ಸಮಾಜದ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸುವ ಮೂಲಕ ಚಾಲನೆ ನೀಡಲಾಗಿದೆ. ಇದು ಎಲೆಕ್ಟ್ರಾನಿಕ್ಸ್, ತಯಾರಿಕೆ, ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್‍ಎಸ್‍ಐ), ದೂರಸಂಪರ್ಕ, ಎಂಜಿನಿಯರಿಂಗ್ ಮತ್ತು ಇತರ ಪ್ರಮುಖ ವಲಯಗಳಲ್ಲಿ 450-500 ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಿದೆ.
ಎರಡು ದಿನಗಳ ಕಾರ್ಯಕ್ರಮವನ್ನು ಬೆಂಗಳೂರಿನ ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ನಿರ್ಮಲಾ ಎಚ್.ಪಿ, ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಬಿ. ಕಾವೇರಿಯಪ್ಪ ಅವರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಅಡೆಕೊ ಇಂಡಿಯಾದ ನಿರ್ದೇಶಕರಾದ ದೀಪೇಶ್ ಗುಪ್ತಾ ಮತ್ತು ಸಂಕೇತ್ ಚೆಂಗಪ್ಪ ಭಾಗವಹಿಸಿದ್ದರು.
ಐಟಿಐ ಡಿಪ್ಲೊಮಾ ಹೊಂದಿರುವವರು, 12 ನೇ ತರಗತಿ ಉತ್ತೀರ್ಣರಾದವರು ಮತ್ತು ಪದವೀಧರರು ಸೇರಿದಂತೆ ಕೌಶಲ ಮತ್ತು ಅರೆ ಕೌಶಲದ ಯುವ ಜನರಿಗೆ ತಕ್ಷಣದ ಉದ್ಯೋಗಾವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಲು ಈ ಮೇಳ ಅನುವು ಮಾಡಿಕೊಟ್ಟಿತು.
ಮುಂದಿನ ಮೂರು ತಿಂಗಳುಗಳಲ್ಲಿ ಕರ್ನಾಟಕದ ಪ್ರಮುಖ ಜಿಲ್ಲೆಗಳಲ್ಲಿ ಇದೇ ರೀತಿಯ ಉದ್ಯೋಗ ಅಭಿಯಾನಗಳನ್ನು ಅಡೆಕೊ ಇಂಡಿಯಾ ಆಯೋಜಿಸಲಿದೆ. ಇದಕ್ಕೆ ಪೂರಕವಾಗಿ, ರಾಜ್ಯದ ಇತರ ಭಾಗಗಳಲ್ಲಿ ಹಾಗೂ ಬೇರೆಡೆ ಕೆಲಸಕ್ಕೆ ತೆರಳಲು ಒಲವು ಹೊಂದಿರುವವರಿಗೆ ಭಾರತದ ಮತ್ತು ಬಹುರಾಷ್ಟ್ರೀಯ ಕಾರ್ಪೊರೇಟ್ ಕಂಪನಿಗಳ ವ್ಯಾಪಕ ಜಾಲದ ಮೂಲಕ ಸಾವಿರಾರು ಹೆಚ್ಚುವರಿ ಉದ್ಯೋಗ ಅವಕಾಶಗಳನ್ನು ಒದಗಿಸುತ್ತಿದೆ. ರಾಜ್ಯದ ಆರ್ಥಿಕ ಬೆಳವಣಿಗೆಗೆ ನೆರವಾಗಲು ಮತ್ತು ದೇಶದ ಅಭಿವೃದ್ಧಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಇಂತಹ ಪ್ರಯತ್ನಗಳು ಸಂಸ್ಥೆಯ ಪಾತ್ರವನ್ನು ಬಲಪಡಿಸುತ್ತಿವೆ ಎಂದು ಪ್ರಕಟಣೆ ಹೇಳಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

