- ಟಿ. ದೇವಿದಾಸ್
ಜಾತಿಯನ್ನು ಹುಟ್ಟು ಹಾಕಿದವನು ಬ್ರಾಹ್ಮಣ. ಮುಖ್ಯವಾಗಿ ಮನು. ಆದುದರಿಂದ ಮನುವನ್ನೂ, ಬ್ರಾಹ್ಮಣರನ್ನೂ, ಇವರಿಂದ ಹುಟ್ಟಿದ ಜಾತಿಯನ್ನೂ ಸರ್ವನಾಶ ಮಾಡಿದ ಹೊರತು ಯಾರೂ ಸುಖವಾಗಿ ಈ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ-ಎಂಬ ಸುಳ್ಳೊಂದು ಹಲವು ವರ್ಷಗಳಿಂದ ಪ್ರಚಾರಕ್ಕೆ ಬಂದು ಈಗ ತುರಿಯಾವಸ್ಥೆಯಲ್ಲಿದೆ. ದಲಿತರು ರಾಷ್ಟ್ರದ ಒಂದು ಭಾಗವಾಗಿ ತಾವೇನೇ ಮಾಡಿದರೂ ಅದು ತಮಗೇ ಹಾನಿಯನ್ನುಂಟು ಮಾಡುತ್ತದೆಂಬುದನ್ನೂ ಮರೆತು ತಮ್ಮ ಜಾತಿಯನ್ನು ಆಧರಿಸಿದ ಮೀಸಲಾತಿಗೆ ಒತ್ತುಕೊಟ್ಟು ಸಂಘರ್ಷಕ್ಕೆ ಇಳಿಯುತ್ತಲೇ ಇರುತ್ತಾರೆ. ಜಾತಿ ಹುಟ್ಟಿಕೊಂಡ ಬಗೆಗೆ ಅಂಬೇಡ್ಕರ್ ತುಂಬಾಪ ಚೆನ್ನಾಗಿ ಓದಿಕೊಂಡವರು ಮಾತ್ರವಲ್ಲ, ಜಾತಿಯ ಬಗ್ಗೆ ಮಾತಾಡಲು ಪೂರ್ಣಪ್ರಮಾಣದಲ್ಲಿ ನೈತಿಕತೆಯುಳ್ಳವರು. ಆದರೆ, ಎಲ್ಲ ದಲಿತರೂ ಅಂಬೇಡ್ಕರರಂತೆ ಯೋಚಿಸಲಾರರು; ಅಂಬೇಡ್ಕರರು ದಲಿತರಂತೆ ಯೋಚಿಸಿದವರಲ್ಲ. ಕರ್ಮದಲ್ಲಿ ಬ್ರಾಹ್ಮಣತ್ವ ಹೊಂದಿದ ದಲಿತರನ್ನು, ಕರ್ಮದಲ್ಲಿ ಶೂದ್ರತ್ವವನ್ನು ಹೊಂದಿದ ಬ್ರಾಹ್ಮಣರನ್ನು ಮನುಸ್ಮ್ರತಿ ಹೇಳುತ್ತದೆ. ಸಮಾಜದಲ್ಲಿ ಇದನ್ನು ಕಾಣಬಹುದು. ಜಾತಿಸೃಷ್ಟಿಯ ಬಗ್ಗೆ ಅಂಬೇಡ್ಕರ್ ಮಾತಿದು: ನಿಮ್ಮ ಮೇಲೆ ಒತ್ತಾಯದಿಂದ ನಾನು ದೃಢಪಟ್ಟು ಹೇಳಬಯಸುವುದೇನೆಂದರೆ, ಮನುವು ಜಾತಿ ನಿಯಮವನ್ನು ಸೃಷ್ಟಿಸಲೂ ಸಾಧ್ಯವಿಲ್ಲ; ಹಾಗೆ ಮಾಡಲು ಅವನಿಗೆ ಸಾಧ್ಯವೂ ಇರಲಿಲ್ಲ. ಮನುವಿಗಿಂತ ಬಹಳ ಹಿಂದೆಯೇ ಜಾತಿಪದ್ಧತಿಯಿತ್ತು! ಮನು ರೂಢಿಯಲ್ಲಿದ್ದ ಅದನ್ನು ಬರೀ ಎತ್ತಿಹಿಡಿದ, ಮತ್ತು ತಾತ್ತ್ವಿಕ ಚೌಕಟ್ಟನ್ನು ಮಾತ್ರ ಇಟ್ಟ. ಆದರೆ ಸತ್ಯವಾಗಿಯೂ, ಖಂಡಿತವಾಗಿಯೂ ಅವನು ಈಗಿರುವ ಹಿಂದೂ ಸಮಾಜ ವ್ಯವಸ್ಥೆಯನ್ನು ನಿರ್ಮಿಸಿದವನೂ ಅಲ್ಲ; ಹಾಗೆ ಮಾಡಲು ಅವನಿಗೆ ಶಕ್ಯವೂ ಇರಲಿಲ್ಲ... ಜಾತಿಯ ಹುಟ್ಟು, ಬೆಳವಣಿಗೆ, ಹಬ್ಬುವಿಕೆ ಎಂಬುದು ಒಬ್ಬ ವ್ಯಕ್ತಿಯ ಬುದ್ಧಿತನಕ್ಕೂ, ಒಂದು ವರ್ಗದ ಶಕ್ತಿಗೂ ಮೀರಿ ನಿಂತ ಮಹಾನ್ ವ್ಯವಸ್ಥೆ...ಹಾಗೆಯೇ ಬ್ರಾಹ್ಮಣನು ಈ ವ್ಯವಸ್ಥೆಯನ್ನು ಸೃಷ್ಟಿಮಾಡಿದನೆಂಬುದೂ ಸುಳ್ಳು. ಮನುವಿನ ಬಗ್ಗೆ ನಾನು ಹೇಳಿದ ಮೇಲೆ ಹೆಚ್ಚೇನೂ ಉಳಿದಿಲ್ಲ. ಈ ದುರ್ವಾದವೂ ಮೋಸದ್ದು, ಕಿಡಿಗೇಡಿತನದ್ದು. ತರ್ಕವಿಲ್ಲದ ಅವಿವೇಕ ಮತ್ತು ದುರುದ್ದೇಶ್ಯದಿಂದ ಕೂಡಿದ್ದು ಎಂದಷ್ಟೇ ಹೇಳುವೆ. ಬ್ರಾಹ್ಮಣರು ಎಷ್ಟೋ ತಪ್ಪುಗಳನ್ನು ಮಾಡಿದ ಅಪರಾಧಿಗಳಿರಬಹುದು; ಇದ್ದಾರೆಂದೇ ಹೇಳಲು ನನಗೆ ಧೈರ್ಯವಿದೆ. ಆದರೆ ಜಾತಿಯನ್ನು ಅವರು ಬ್ರಾಹ್ಮಣೇತರ ಪ್ರಜಾವರ್ಗದ ಮೇಲೆ ಹೇರುವುದೆಂಬುದು ಬ್ರಾಹ್ಮಣರ ಶಕ್ತಿಗೆ ಮೀರಿದ್ದಾಗಿತ್ತು (ಡಾ.ಅಂಬೇಡ್ಕರ್ ರೈಟಿಂಗ್ಸ್ ಆಂಡ್ ಸ್ಪೀಚಸ್. ಭಾಷಾಂತರ -ಡಾ.ಕೆ.ಎಸ್.ನಾರಾಯಣಾಚಾರ್ಯ).
ಜಾತಿ ವೃತ್ತಿಗೆ ಸಂಬಂಧಿಸಿದ್ದು. ಕುಲ ಬೇರೆ. ಅನೇಕ ವೃತ್ತಿಗಳವರು ಒಂದೇ ಗುರುವಿನೆಡೆ ವಿದ್ಯಾರ್ಜನೆ ಮಾಡಿದ ವ್ಯವಸ್ಥೆಯನ್ನು ಗುರುಕುಲವೆಂದರು. ಆ ಗುರುವೇ ಕುಲಪತಿಯೆನಿಸಿದ. ಬ್ರಿಟಿಷರು ಬಂದಮೇಲೆ ನಮ್ಮ ವ್ಯವಸ್ಥೆಯನ್ನೂ, ಬುದ್ಧಿಯನ್ನೂ ಕೆಡಿಸಿ ಜಾತಿದ್ವೇಷ ಹಬ್ಬಿಸಿ ಬೆಳೆಸಿದರು. ಅಲ್ಲಿಂದೀಚೆಗೆ ಹುಟ್ಟಿದ ಕೆಲವು ರಾಜಕೀಯ ಪಕ್ಷಗಳ ಉದ್ದಿಶ್ಯವೇ ಬ್ರಾಹ್ಮಣ ದ್ವೇಷ, ಬ್ರಾಹ್ಮಣ ನಿರ್ನಾಮ, ಸಂಸ್ಕೃತ ದ್ವೇಷ, ದೇಗುಲಗಳ ನಾಶ, ಹೀಗೆ ದ್ವೇಷಪ್ರವಾಹವೇ ಮುಂದೂವರೆಯುತ್ತಿದೆ. ಇವೆಲ್ಲ ಚರಿತ್ರೆಯುದ್ದಕ್ಕೂ ಹರಿದು ಬಂದ ಪ್ರವಾಹವಾಗಿ ವರ್ತಮಾನದಲ್ಲಿ ಈ ಬಿಕ್ಕಟ್ಟು ಸೃಜಿಸಿದ ಅನಾಹುತಗಳಿಂದ ನಾವು ಒಂದಾಗಲು ಸಾಧ್ಯವೇ ಇಲ್ಲವೇನೋ ಎಂಬ ಸ್ಥಿತಿಯನ್ನು ತಲುಪಿದ್ದೇವೆ. ಈ ಕಾರಣದಿಂದಾಗಿ ದಲಿತರು ಜಾತಿಯನ್ನು ಮುಂದುಮಾಡಿಕೊಂಡು ಮೀಸಲಾತಿಗೆ ಆಗ್ರಹಿಸಿ ಮುಖ್ಯವಾಹಿನಿಯಲ್ಲಿ ಬೆರೆಯಲು ಅಸಾಧ್ಯವಾಗುತ್ತಿದೆಯೇನೋ ಅನಿಸುತ್ತಿದೆ. ಶೂದ್ರರು ಯಾರು? ಎಂಬುದಕ್ಕೆ ಅಂಬೇಡ್ಕರ್ ಉತ್ತರವಿದು: ಸೂರ್ಯವಂಶದ ಗೌರವಾನ್ವಿತ ದೊರೆಗಳ ಆರ್ಯಕುಲದವರೇ ಈ ಶೂದ್ರರು. ಒಂದು ಕಾಲದಲ್ಲಿ ಮೂರೇ ವರ್ಣಗಳಿದ್ದವು. ಶೂದ್ರರು ಕ್ಷತ್ರಿಯರೇ ಆಗಿದ್ದರು. ಒಂದೊಮ್ಮೆ ಬ್ರಾಹ್ಮಣರಿಗೂ ಅವರಿಗೂ ದೀರ್ಘಕಾಲ ಮನಸ್ತಾಪವಾಗಿ, ಬ್ರಾಹ್ಮಣರಿಗೆ ಇವರು ನಾನಾ ಹಿಂಸೆ, ಕ್ರೌರ್ಯ, ಅಪಮಾನಗಳನ್ನು ನೀಡುತ್ತ ಬಂದ ಪ್ರಯುಕ್ತ, ಅವರ ಕಾಟ ತಡೆಯಲಾರದೆ ಬ್ರಾಹ್ಮಣರು ಅವರಿಗೆ ಉಪನಯನ, ಪೌರೋಹಿತ್ಯ, ಯಾಜನಗಳನ್ನು ನಿಲ್ಲಿಸಿ ಬಹಿಷ್ಕರಿಸಿದರು. ಹೀಗಾಗಿ ಈ ಕ್ಷತ್ರಿಯರು ಪತಿತರಾದರು. ವೈಶ್ಯರಿಗಿಂತ ಕೆಳಗಾದರು (ಹು ವೆರ್ ದ ಶೂದ್ರಾಸ್?).
ಅಂಬೇಡ್ಕರರಿಗಿದ್ದ ಸಂಸ್ಕೃತ ಪಾಂಡಿತ್ಯ ಗಾಂಧಿ, ನೆಹರೂ, ಇಂದಿರಾ, ರಾಜೀವ್- ಯಾರಿಗೂ ಇರಲಿಲ್ಲ. ದಲಿತರು ಹೇಗೆ ಆದರು? ಎಂಬುದಕ್ಕೆ ಅಂಬೇಡ್ಕರ್ ಐದಾರು ವಾದಗಳನ್ನು ಮಂಡಿಸುತ್ತಾರೆ: "ಅವರು ವೀರಕ್ಷತ್ರಿಯರಾಗಿ, ಮುಸ್ಲಿಂ ಆಕ್ರಮಣಕಾರರೊಡನೆ ಹೋರಾಡಿ ಸೋತು ಬಂದ ವೀರರಾಗಿ, ಸೋತು ಬಂದವರನ್ನು ಸಮಾಜ ಒಳಸೇರಿಸದೇ, ಮೂಢನಂಬಿಕೆಯಿಂದ ಹೊರಗಿಟ್ಟ ಪರಿಣಾಮ, ಒಂದು. ಅಥವಾ ಸಾಮೂಹಿಕವಾಗಿ ಬೌದ್ಧಮತ ಅಂಗೀಕರಿಸಿ, ಬ್ರಾಹ್ಮಣರೊಡನೆ ಘರ್ಷಣೆಯಾಗಿಯೂ ಹಾಗಾಗಿರಬಹುದು. ಅಥವಾ ಮಾಂಸಾಹಾರ, ಗೋಭಕ್ಷಣಾದಿಗಳಿಂದ, ಬೌದ್ಧರಾಗಿಯೂ ಶೀಲ ಬದಲಾಗದೇ ಹಾಗಾಗಿರಲು ಸಾಕು– ಇತ್ಯಾದಿ (ಭಾಷಣಗಳು ಬರೆಹಗಳು ಮತ್ತು ಎ ಟ್ರ್ಯೂ ಆರ್ಯನ್, ಕಾನ್ರಾಡ್ ಎಲ್ಸ್ಟ್). ಮೊದಲು ಅಂಬೇಡ್ಕರರ ಕೃತಿಗಳ ಚರ್ಚೆಯಾಗಬೇಕು. ಅಂಬೇಡ್ಕರರ ಬರೆಹಗಳಲ್ಲಿ ಖಚಿತತೆಯೂ ಇದೆ, ಸಂದೇಹವಿದೆ, ಕೋಪ, ಆಕ್ರೋಶ, ಕಳಕಳಿ, ಪ್ರಾಮಾಣಿಕತೆ, ವಿದ್ವತ್ತು, ಸಮಾಜಪ್ರೀತಿ, ರಾಷ್ಟ್ರಪ್ರೇಮ- ಎಲ್ಲವೂ ಅನ್ಯಾನ್ಯ ಆಕೃತಿಗಳಲ್ಲಿವೆ. ಅದರಲ್ಲಿ ಬೇಕಾದುದನ್ನು ಮಾತ್ರ ಆಯ್ದುಕೊಳ್ಳುವವರಿಂದ ರಾಷ್ಟ್ರಹಿತ ಅಸಾಧ್ಯ!
ದಲಿತರು ಆತ್ಮವಿಮರ್ಶೆಯೊಂದಿಗೆ ಅಂಬೇಡ್ಕರರನ್ನು ಮೆಚ್ಚಿ ಆರಾಧಿಸುವಾಗ ಅವರ ಚಿಂತನೆಗಳನ್ನು ಅಳವಡಿಸಿಕೊಂಡರೆ ಬಹುಪಾಲು ಸಮಸ್ಯೆಗೆ ಪರಿಹಾರ ಖಂಡಿತವಾಗಿ ಸಾಧ್ಯವೇನೋ! ಆರ್ಥಿಕ ಸ್ಥಿರತೆ, ವೃತ್ತಿ ಖಾತರಿಗಳ ಅಭಯವನ್ನಿತ್ತು ನಿಜವಾಗಿ ಹಿಂದುಳಿದ ದಲಿತರನ್ನು ಮೇಲೆತ್ತಿ ಜಾತಿ ಅವರಿಗೆ ಮುಖ್ಯವಾಗದಂತೆ ವ್ಯವಸ್ಥೆಯನ್ನು ಸಮತೋಲನಗೊಳಿಸುವುದು ಸಾಧ್ಯವಿದೆಯೆಂದು ವಿವೇಕಾನಂದರು ಹೇಳುತ್ತಾರೆ. ಜಾತ್ಯತೀತ ರಾಷ್ಟ್ರವಾಗಿ ಜಾತಿಯನ್ನೇ ಪ್ರಬಲ ಅಸ್ತ್ರವಾಗಿ ಭಿನ್ನಾಭಿಪ್ರಾಯಗಳಿಗೆ, ಸಂಘರ್ಷಗಳಿಗೆ ಎರವಾಗದಂತೆ ಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಚಿಂತನಾಶಕ್ತಿ ನಮ್ಮಲ್ಲಿದೆ. ಬಹುತ್ವದ ಭಾರತದಲ್ಲಿ ಯಾವಾಗಲೂ ಇರುತ್ತದೆ ಕೂಡ. ಇದು ದಲಿತರಿಗೆ ಮಾತ್ರವಲ್ಲ, ಎಲ್ಲ ಜಾತಿಯವರಿಗೂ ಅನ್ವಯಿಸುವ ಮಾತು. ಜಾತಿಯಿಂದ ಹುಟ್ಟಬಹುದಾದ ದ್ವೇಷ ಯಾರನ್ನು ಉಳಿಯಗೊಟ್ಟಿದೆ? ದ್ವೇಷದಿಂದಲೇ ಅಲ್ಲವೆ ರಾಷ್ಟ್ರ ರಾಷ್ಟ್ರಗಳು ಉರಿಯುತ್ತಿರುವುದು. "ಭೂಮಿಯ ಮೇಲಿಂದಲೇ ಯಹೂದ್ಯ ಸಂತಾನವನ್ನು ತೊಡೆದುಬಿಡು" ವುದಾಗಿ ಘೋಷಿಸಿ, ಕೋಟ್ಯಂತರ ನಿರಪರಾಧಿಗಳನ್ನು ಹಿಟ್ಲರ್ ಸುಟ್ಟುಸಾಯಿಸಿದ. ತಮ್ಮ ಮತಬಾಹಿರರ ಬಗ್ಗೆ ಕ್ರೈಸ್ತರು, ಮುಸ್ಲಿಮರದ್ದೂ ಇದೇ ಮನಃಸ್ಥಿತಿಯ ನಿಲುವು. ಕ್ರೈಸ್ತನಾಗಿದ್ದ ಹಿಟ್ಲರನಿಗೆ ಅಂದಿನ ಪೋಪರು, ಕ್ರೈಸ್ತ ಮುಖಂಡರು ಮಧ್ಯೆ ಪ್ರವೇಶಿಸಿ ಹಿತವಚನ ಹೇಳಿದ್ದರೆ ಅವನು ಕೇಳುತ್ತಿದ್ದನೋ? ನೋ ಚಾನ್ಸ್. ಧರ್ಮದ ಆಫೀಮಿನ ಅಮಲಿನಿಂದ ಅಷ್ಟು ಸುಲಭವಾಗಿ ಕಳಚಿಕೊಳ್ಳುವುದು ಸಾಧ್ಯವಿಲ್ಲ!
ಜಾತೀಯತೆಯ ಮೂಲೋತ್ಪಾಟನೆಗೆ ಅವರು ನಿರಂತರ ಶ್ರಮಿಸಿದರೆಂಬುದನ್ನೇ ಮುಖ್ಯವಾಗಿರಿಸಿಕೊಂಡೇ ವಿನಾ ದಲಿತೋದ್ಧಾರಕ್ಕಾಗಿ ಗಾಂಧಿ, ಅಂಬೇಡ್ಕರ್ ಪ್ರಯತ್ನಿಸಿದರು ಎಂದ ಮಾತ್ರಕ್ಕೆ ಈ ರಾಷ್ಟ್ರ ಅವರನ್ನು ಗೌರವಾದರಿಸಿದ್ದಲ್ಲ. ಅವರ್ಯಾರೂ ಬ್ರಾಹ್ಮಣ ದ್ವೇಷ, ಸರಸ್ವತಿ ದ್ವೇಷ ಮಾಡಲಿಲ್ಲ. ಶ್ರೀರಾಮ-ಕೃಷ್ಣರು ಕ್ಷತ್ರಿಯರೇ ಆಗಿದ್ದರು. ಅವರನ್ನು ನಾವೆಲ್ಲ ಆರಾಧಿಸಿ ಪೂಜಿಸುತ್ತಿಲ್ಲವೆ? ಯಾರಿಗೂ ದ್ವೇಷವೇ ಒಂದು ಕ್ಯಾರೆಕ್ಟರ್ ಆಗಬಾರದು. ಅದು ತನ್ನನ್ನು ತಾನು ಸುಟ್ಟುಕೊಳ್ಳುತ್ತ ಸುತ್ತಮುತ್ತಲಿನ ವಾತಾವರಣವನ್ನೂ ಸುಡುತ್ತದೆ. ಈ ಸುಡುವ ಕ್ರಿಯೆ ಕೊನೆಗೊಳ್ಳುವುದು ಎಲ್ಲವೂ ಬೂದಿಯಾಗುವುದರೊಂದಿಗೆ. ಯಾರದ್ದೋ 'ಎಡ' ಚಿಂತನೆಗಳಿಗೆ ಮಾರುಹೋಗಿ ಬದುಕನ್ನು ನಿರಂತರ ಸಂಘರ್ಷದಲ್ಲಿ ಹಾಳುಮಾಡಿಕೊಳ್ಳುವುದೇಕೆ? ಬದುಕು ಎಲ್ಲದಕ್ಕಿಂತ ದೊಡ್ಡದು. ಜಾತಿಯೇ ಬದುಕಲ್ಲ; ಬದುಕು ಜಾತಿಯ ಮೇಲೂ ನಿಂತಿಲ್ಲ. ಅಂಬೇಡ್ಕರ್ ಬಯಸಿದ್ದು ಜಾತಿವಿಹೀನ ಬದುಕನ್ನು. ಬಸವಣ್ಣನ ಕ್ರಾಂತಿಯೂ ಇದೇ ಹಿನ್ನೆಲೆಯದ್ದು. ದಲಿತರ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಬ್ರಾಹ್ಮಣರು ಹೇಗೆ ಕಾರಣರಾದಾರು? ವ್ಯವಸ್ಥಿತವಾಗಿ ನಮ್ಮನ್ನು ದಾರಿ ತಪ್ಪಿಸಿದವರ್ಯಾರು? ತಪ್ಪಿಸುತ್ತಿರುವವರ್ಯಾರು? ಇದೆಲ್ಲ ನಮ್ಮ ನಮ್ಮನ್ನು ಒಡೆಯುವ ಯಾರದ್ದೋ ಷಡ್ಯಂತ್ರವೆಂದು ಯೋಚಿಸಬೇಡವೆ? ಇದೆಲ್ಲ ರಾಷ್ಟ್ರೀಯ ಚರ್ಚೆಯ ವಿಷಯಾಂಶಗಳು. ಸಮಸ್ತ ಹಿಂದೂಗಳು ಒಂದಾಗಿ ಭಾರತೀಯ ಅಧ್ಯಾತ್ಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಔನ್ನತ್ಯಕ್ಕೊಯ್ಯಬೇಕಿದೆ. ಇದಕ್ಕೆ ಸರ್ಕಾರಗಳು, ಮಾಧ್ಯಮಗಳು, ಭಾರತೀಯರೆಲ್ಲರೂ ಕೈಗೂಡಿಸಬೇಕಿದೆ. ಅಂಬೇಡ್ಕರರ ದಲಿತೋದ್ಧಾರದ ಕನಸು ಅಂಬೇಡ್ಕರ್ ಚಿಂತನೆಗಳಿಂದಲೇ ಆರಂಭವಾಗಬೇಕಿದೆ. ಬಹುಕಾಲದ ಹಿಂದೆಯೇ ವರ್ಣಗಳು ಮಿಶ್ರಿತವಾಗಿರುವುದರಿಂದ ಹೀಗೆಯೇ ಆಯಿತು ಅಂತ ನಿರ್ಣಯಿಸಲು ಸಾಧ್ಯವಾಗುವುದಿಲ್ಲ. ಸತ್ಯ, ದಾನ, ಕ್ಷಮೆ, ಶೀಲ, ಕರುಣೆ, ತಪಸ್ಸು, ದಾಕ್ಷಿಣ್ಯ, ಇಂಥ ಗುಣಗಳು ಯಾವನಲ್ಲಿರುತ್ತದೋ ಅವನೇ ಬ್ರಾಹ್ಮಣನು, ಇಲ್ಲದವನು ಅಬ್ರಾಹ್ಮಣ. ಶೂದ್ರನಲ್ಲೂ ಇವು ಇರುವುದಾದರೆ ಅವನೇ ಬ್ರಾಹ್ಮಣ. ಬ್ರಾಹ್ಮಣನಲ್ಲಿ ಇಲ್ಲವಾದರೆ ಅವನೇ ಶೂದ್ರ. ಬ್ರಾಹ್ಮಣನು ತನ್ನ ಚಾರಿತ್ರ್ಯ ಪತನಕ್ಕೆ ಕಾರಣವಾದ ಅನ್ಯ ವೃತ್ತಿಗಳಲ್ಲಿ ಬಿದ್ದರೆ, ಡಂಭಾಚಾರಿಯಾದರೆ ಶೂದ್ರನಿಗಿಂತ ಕಡೆಯಾಗುತ್ತಾನೆ. ಇನ್ನೊಬ್ಬನು ಶೂದ್ರನಾಗಿ ಹುಟ್ಟಿಯೂ ಮನೋನಿಗ್ರಹ, ಇಂದ್ರಿಯ ನಿಗ್ರಹದೊಂದಿಗೆ, ಸತ್ಯ-ಧರ್ಮಗಳಲ್ಲಿ ಸದಾ ಇರುತ್ತಾನಾದರೆ ಅವನೇ ಬ್ರಾಹ್ಮಣನಾಗುತ್ತಾನೆ. ಅಂದರೆ ಬ್ರಾಹ್ಮಣ್ಯಕ್ಕೆ ಮೂಲ ಕಾರಣವೇ ಚಾರಿತ್ರ್ಯ ಎಂಬುದು ಸ್ಪಷ್ಟ. ಮಹಾಭಾರತದ ಧರ್ಮವ್ಯಾಧ, ರಾಮಾಯಣದ ಶಬರಿಯಂಥವರು ಇದಕ್ಕೆ ಜ್ವಲಂತ ನಿದರ್ಶನ. ಎಲ್ಲ ಶಬರರೂ ಶಬರಿಯಂಥಾಗಲಿಲ್ಲ, ಎಲ್ಲ ವ್ಯಾಧರು ಧರ್ಮವ್ಯಾಧರಾಗಲಿಲ್ಲ. ಒಂದು ಕಾಲದಲ್ಲಿ ಕ್ಷತ್ರಿಯರಾಗಿದ್ದು ಈಗ ದಲಿತರಾಗಿರುವವರು ಮತ್ತೆ ಏಕೆ ಕ್ಷತ್ರಿಯರಾಗಬಾರದು? ಅವರು ಸಂಕಲ್ಪ ಮಾಡುವರಾದರೆ ಸಮಸ್ಯೆ ತೀರುತ್ತದೆ. ಕುರುಬರಾಗಿ ಹುಟ್ಟಿ, ವಿಜಯನಗರ ಸಾಮ್ರಾಜ್ಯದ ಮೂರನೆಯ ಬಲ್ಲಾಳನ ಸೇನೆಯಲ್ಲಿ, ಸೇವೆಯಲ್ಲಿ ಮುಸ್ಲಿಮರಾಗಿ ಮತಾಂತರಗೊಂಡಿದ್ದ ಹಕ್ಕಬುಕ್ಕರಿಗೆ ವಿದ್ಯಾರಣ್ಯರು ಕ್ಷಾತ್ರದೀಕ್ಷೆ ಕೊಟ್ಟು ಅರಸರನ್ನಾಗಿಸಿದಾಗ ಅಧ್ಯಾತ್ಮ ಅಡ್ಡಿಬರಲಿಲ್ಲ! ಈಗಲೂ ಅಷ್ಟೇ. ನಾಯಕರು, ಬೇಡರು, ರೆಡ್ಡಿಗಳು, ತಿಗಳರು, ನಾಯ್ಡುಗಳು, ಜಾಟರು, ಹೂಣರು, ಪಟೇಲರು ಮುಂತಾದ ದಲಿತವರ್ಗದವರು ಅಂಬೇಡ್ಕರರ ಚಿಂತನೆಯ ದಾರಿಯಲ್ಲಿ ಕ್ಷತ್ರಿಯರಾಗಬೇಕು. ಇವರನ್ನು ಸರ್ಕಾರಿ ಜಾತಿಯಾಧಾರದ ಮೇಲೆ ಒಡೆದು ಮೀಸಲಾತಿಗೆ ಬಡಿದಾಡುವಂಥ ದುಃಸ್ಥಿತಿಗೆ ತಂದ ದುಷ್ಟ ರಾಜಕಾರಣ ಸಾಯಬೇಕು. ಜಾತ್ಯತೀತ ದೇಶದಲ್ಲಿ ಜಾತಿಗಣತಿ, ಜಾತಿಯಾಧಾರಿತ ರಾಜಕೀಯ ತೊಲಗಿದರೆ ಮಾತ್ರ ಬಹುತ್ವದ ಭಾರತ ಸದೃಢವಾದೀತು!
ನಮ್ಮ ಕಾಲದ ಎರಡು ಮಹಾನ್ ವ್ಯಕ್ತಿತ್ವವೆಂದರೆ, ಇರುವುದೆಲ್ಲವನ್ನೂ ಕಳಚಿಕೊಳ್ಳುತ್ತ ಲೌಕಿಕದ ನಂಟನ್ನು ಬಿಟ್ಟು ಮೇರು ಸದೃಶವಾದ ವ್ಯಕ್ತಿತ್ವವನ್ನು ತನ್ನ ರೂಪಕಗಳಿಂದಲೇ ಗಳಿಸಿದ ಗಾಂಧಿ ಹಾಗೂ ಇಲ್ಲದಿರುವುದನ್ನು ಒಟ್ಟುಗೂಡಿಸುತ್ತ ಮನುಷ್ಯ ಬದುಕಿನ ಔನ್ನತ್ಯವನ್ನು, ಉತ್ಕರ್ಷವನ್ನು ಅದರ ಆತ್ಯಂತಿಕವಾದ ನೆಲೆಯಲ್ಲಿ ಆರ್ಜಿಸಿದ ಮಹರ್ ಎಂಬ ದಲಿತ ಜನಾಂಗದ ಅಭಿಮಾನ ಮತ್ತು ಹೆಮ್ಮೆಯಾಗಿ ಭಾರತರತ್ನ ಎನಿಸಿದ ಡಾ.ಅಂಬೇಡ್ಕರ್. ಈರ್ವರೂ ಮನುಷ್ಯ ಜೀವಿತದಲ್ಲಿ ಏರಬಹುದಾದ ಎತ್ತರವನ್ನೂ ಏರಿ ಯಶಸ್ಸಿನ ಪರಮಗಮ್ಯವನ್ನು ಕಂಡವರು. ಈ ಎರಡೂ ಪರಿವರ್ತನೆಗಳಾದ ಕಾಲದಲ್ಲೇ ನಾವು ಬದುಕುತ್ತಿದ್ದೇವೆ. ಇವರುಗಳ ಬದುಕು ಮತ್ತು ಭಾವ ಮೇಲ್ಪಂಕ್ತಿಯಾಗಬೇಕು. ಈ ಅರಿವು ಹುಟ್ಟಿದರೆ ಬಹುತ್ವದ ಭಾರತ ಕಟ್ಟಲು ಸಾಧ್ಯವಿದೆಯೇ ಹೊರತು ಅಧಿಕಾರದ ರಾಜಕೀಯದ ಮೂಸೆಯಿಂದಲ್ಲ!
ನಮ್ಮ ನಮ್ಮ ಮಾನವೀಯತೆಯ ಅಸ್ಮಿತೆಗೆ ಸವಾಲಾಗಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಅಸ್ಪೃಶ್ಯತೆಯು ಬೆಳೆದು ನಿಂತಿದೆ. ಸವರ್ಣೀಯರನ್ನು ಎದುರಿಸುವ ಸ್ವಾಭಿಮಾನ ಪ್ರಜ್ಞೆ ದಲಿತರಲ್ಲಿ ಹುಟ್ಟಿ ಅವರು ಅಂಬೇಡ್ಕರರಂತೆ ಎಲ್ಲವನ್ನೂ ಗಳಿಸುತ್ತಲೇ ಸಹನೀಯ ಬದುಕಿನ ಗತಿಯ ಎತ್ತರವನ್ನು ಮುಟ್ಟಬೇಕು. ಅದಕ್ಕೂ ಮೊದಲು ಜಾತಿಯ ಭೂತ ಸಾಯಬೇಕು. ಜಾತಿಯ ಬಗ್ಗೆ ಮಾತನಾಡುವುದನ್ನು ಬಿಟ್ಟಾಗಲೇ ಜಾತಿಯ ಭೂತ ಸಾಯುತ್ತದೆ. ಆಲೋಚಿಸಿ: ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೂ ಜಾತಿಪ್ರಜ್ಞೆ ಹುಟ್ಟುವುದೇ ಇಲ್ಲ. ಆಫ್ ಕೋರ್ಸ್ ಹುಟ್ಟಲು ಸಾಧ್ಯವೂ ಇಲ್ಲ. ನಾವೆಲ್ಲ ಮನುಷ್ಯರು ಎಂಬ ಭಾವದಲ್ಲಿ, ಆ ಅರಿವಲ್ಲಿ ಬದುಕನ್ನು ನೋಡಿದರೆ ಜಾತಿ ಮಾಯವಾಗುತ್ತದೆ. ಜಾತಿಯ ಭೂತ ಉಳಿದಿರುವುದು ವಿಧಾನಸೌಧದಲ್ಲಿ, ರಾಜಕಾರಣಿಗಳ ವಿಷ ತುಂಬಿದ ತಲೆಯಲ್ಲಿ ಮತ್ತು ಜಾತಿಯ ರಾಜಕೀಯವನ್ನೇ ಗುರಿಯಾಗಿಟ್ಟುಕೊಂಡ ಮಾಧ್ಯಮಗಳಲ್ಲಿ! ನಾನು ಮುಸ್ಲಿಮ್, ನಾನು ಕ್ರೈಸ್ತ, ನಾನು ಹಿಂದೂ, ನಾನು ಆ ಜಾತಿ, ಈ ಮತ, ಆ ಪಂಥ ಅಂದರೆ ಹೊಟ್ಟೆ ತುಂಬುವುದಿಲ್ಲ. ಇದೆಲ್ಲ ಹೊಟ್ಟೆ ತುಂಬಿದವರು ಅಮಾಯಕರನ್ನು ಪ್ರಚೋದಿಸಿ ಮಾಡುತ್ತಿರುವ ನೀಚ ರಾಜಕೀಯದ ಕುಕೃತ್ಯ. ಅಂಬೇಡ್ಕರರ ಚಿಂತನೆಯಲ್ಲಿ ದಲಿತರು ಸಮಕಾಲೀನ ಭಾರತವನ್ನು ಪ್ರತಿನಿಧಿಸಬೇಕು. ಅಂದಾಗ ರಾಷ್ಟ್ರಕ್ಕೂ ಹಿತ, ದಲಿತರಿಗೂ ಮುಖ್ಯವಾಹಿನಿಯಲ್ಲಿ ಸ್ಥಾನ ಮಾನ್ಯತೆ ಪ್ರಾಪ್ತಿ ಸಾಧ್ಯ. ದಲಿತ ಚಿಂತನೆ ಈ ದಿಸೆಯಲ್ಲಿ ಸಾಗುವುದಕ್ಕೆ ದಲಿತ ಚಿಂತಕರು, ಮುಖಂಡರು ಹೆಜ್ಜೆಯಿಡಬೇಕು. ಈ ಮಾತು ದಲಿತರಿಗಷ್ಟೇ ಅಲ್ಲ, ಅಲ್ಪಸಂಖ್ಯಾತರಿಗೂ ಅನ್ವಯಿಸುತ್ತದೆ. ಅಂಬೇಡ್ಕರ್ ಅನುಭವಿಸಿದ ಕಷ್ಟಗಳನ್ನು ಇಂದಿನ ದಲಿತರು ಅನುಭವಿಸುತ್ತಿಲ್ಲವೇನೋ! ಅಂಬೇಡ್ಕರರ ತಂದೆತಾಯಿಗಳು ಮಗನನ್ನು ವಿದ್ಯಾವಂತನನ್ನಾಗಿಸಬೇಕೆಂಬ ಹಂಬಲವನ್ನು ಬಹುವಾಗಿ ಹೊಂದಿದ್ದವರು. ಅಂಬೇಡ್ಕರರನ್ನು ಎತ್ತಿ ಮೆರೆಯಿಸಿ ಹೊಗಳಿ ಕೊಂಡಾಡುವ, ಮೀಸಲಾತಿ ಹೋರಾಟದಲ್ಲಿ ತಮ್ಮ ಜನಾಂಗಕ್ಕೆ ಅನುಕೂಲವಾಗಲೆಂದು ಬಯಸುವ ದಲಿತರು, ದಲಿತ ಚಿಂತಕರು, ದಲಿತ ಸಂಘಟನೆಗಳು ತಮ್ಮ ವರ್ಗದ ಮಕ್ಕಳನ್ನು ಕಲಿಕೆಯ ಕಡೆ ಗಮನ ಸೆಳೆಯುವಂತೆ ಬಹುದೊಡ್ಡ ಪ್ರಯತ್ನ ಮಾಡಬೇಕಿದೆ. ದಲಿತರ ಮುಖ್ಯಪಾತ್ರವಿರುವುದು ಅಂಬೇಡ್ಕರರ ಚಿಂತನೆಗಳನ್ನು ನಿಜಗೊಳಿಸುವುದರಲ್ಲಿ! ಬದುಕಿನ ಗತಿಬಿಂಬಕ್ಕೆ ಅವುಗಳನ್ನು ತಂದುಕೊಳ್ಳುವುದರಲ್ಲಿ! ಭಾರತದ ರತ್ನದಂತಿದ್ದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರಂಥ ಮಹಾನ್ ಮೇಧಾವಿ, ಕೇವಲ ಅನ್ಯಾಯ, ಪ್ರತಿಭಟನೆ, ಮುಷ್ಕರಗಳಲ್ಲಿ ಸಾಂಕೇತಿಕವಾಗಿ ಪಟದೊಂದಿಗೆ ನಮಗೆ ಬೇಕಾದಾಗ ಬೇಕಾದಂತೆ ಬೇಕಾದ ಜಾಗದಲ್ಲಿ ಅಭಿವ್ಯಕ್ತಿಗೊಳ್ಳುವುದು ಭವ್ಯ ಭಾರತದ ಭವಿಷ್ಯದ ದೃಷ್ಟಿಯಿಂದ ಶ್ರೇಯಸ್ಕರವಲ್ಲ!
ಸದ್ಯ ಮತ್ತು ಶಾಶ್ವತ ನೆಲೆಯ ಪ್ರಶ್ನೆಗಳಿವು: ಅಂಬೇಡ್ಕರರ ಸಂವಿಧಾನದ ಪೀಠಿಕೆಯನ್ನು ತಿದ್ದವರು ಯಾರು? ಅದರ ವಿಧಿಗಳನ್ನು ಬೇಕಾದಾಗ ಬೇಕಾದಂತೆ ತಿದ್ದಿ ಬಳಸಿಕೊಂಡವರು ಯಾರು? ನೆಹರೂ ಸಂಪುಟದಲ್ಲಿದ್ದ ಅಂಬೇಡ್ಕರರು ರಾಜೀನಾಮೆ ನೀಡಿದ್ದೇಕೆ? ಅಡಿಗಡಿಗೆ ಅಂಬೇಡ್ಕರರಿಗೆ ವಂಚನೆ ಆಗಿದ್ದು ಯಾರಿಂದ? ಅವರನ್ನು ೧೯೫೨ರ ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಬಾಂಢಾರ ಲೋಕಸಭಾ ಉಪಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದು ಯಾರು? ಯಾಕೆ? ಜನಸಂಘದ ಬೆಂಬಲದಿಂದ ರಾಜ್ಯಸಭೆಗೆ ಹೋದ ಅಂಬೇಡ್ಕರರನ್ನು ಅಗೌರವಯುತವಾಗಿ ನಡೆಸಿಕೊಂಡವರ್ಯಾರು? ಅಂಬೇಡ್ಕರ್ ನಿಧನರಾದಾಗ ಪ್ರಧಾನಿಯಾಗಿದ್ದ ನೆಹರೂ ಗೌರವಯುತವಾಗಿ ನಡೆದುಕೊಳ್ಳಲಿಲ್ಲವೇಕೆ? ಅಂಬೇಡ್ಕರರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಅವಕಾಶ ನೀಡದೆ ಮುಂಬಯಿಗೆ ಕೊಂಡೊಯ್ಯಲು ವಿಮಾನವನ್ನು ಕೊಡದೆ ಸತಾಯಿಸಿ ಕೊನೆಗೆ ಬಾಡಿಗೆಗೆ ವಿಮಾನವನ್ನು ಕೊಡುವಂತಾದುದು ಯಾಕೆ? ಮುಂಬಯಿಯ ಕೇಂದ್ರ ಸ್ಥಳದಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡದೆ ಬಹುತೇಕ ಕೊಳಚೆ ನೀರು ಸೇರುವ ಕಡೆ ಸ್ಥಳ ನೀಡಲಾಗಿ, ಮೊಣಕಾಲುದ್ದ ನೀರಿನಲ್ಲಿ ನಿಂತು ಜನ ಅಂತಿಮ ಸಂಸ್ಕಾರ ಮಾಡಬೇಕಾಗಿ ಬಂದುದು ಯಾಕೆ? ಅಂಬೇಡ್ಕರ್ ನಿಧನ ಅನಂತರ ಅವರ ಚಿಂತನೆಗಳು ಮುದ್ರಣವಾಗದೆ ಅವರ ಕೈಬರೆಹದಲ್ಲೇ ಇದ್ದ ಹತ್ತಾರು ಪೆಟ್ಟಿಗೆಗಳಲ್ಲಿದ್ದ ಪುಸ್ತಕಗಳು ಹೊರಜಗತ್ತಿಗೆ ಬರದಂತೆ ತಡೆದು ಅಕೆಡಮಿಕ್ ವಲಯದ ಕಪಾಟುಗಳಲ್ಲೇ ಕೊಳೆಸಿದವರು ಯಾರು? ಅಂಬೇಡ್ಕರರಿಗೆ ಭಾರತರತ್ನ ಬರದಂತೆ ಸುಮಾರು ನಾಲ್ಕು ದಶಕಗಳ ಕಾಲ ಅಡ್ದಿಯಾದವರು ಯಾರು? ಯಾಕೆ? ಅಂಬೇಡ್ಕರ ಅವರ ಜೀವನದ ಯಾವ ಕುರುಹುಗಳೂ ಉಳಿಯದಂತೆ ನಾಶಮಾಡಲು ಯತ್ನಿಸದವರು ಯಾರು? ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಅವರ ಭಾವಚಿತ್ರವನ್ನು ಹಾಕಲು ಬಿಡದವರು ಯಾರು? ಕೇಳುತ್ತ ಹೋದರೆ ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರವೇನೆಂಬುದನ್ನು ಈ ದೇಶವಾಸಿಗಳು ತಿಳಿಯಬೇಕಿದೆ. ಮಾಡಬಾರದ ಕೊಡಬಾರದ ತೊಂದರೆಗಳನ್ನು ಕೊಟ್ಟು ಈಗ ಸಂವಿಧಾನದ ಪುಸ್ತಕವನ್ನು ಬಗಲಲ್ಲಿಟ್ಟುಕೊಂಡು, ದಲಿತರ ಓಟಿಗಾಗಿ ದಲಿತನನ್ನು ಅಧ್ಯಕ್ಷನನ್ನಾಗಿಸಿ ನಾಟಕ ಮಾಡುತ್ತಿರುವವರ್ಯಾರು?
ನಿಜವಾದ ಅಂಬೇಡ್ಕರವಾದಿಗಳು ಯಾರೆಂಬುದು ಆ ಸಮುದಾಯಕ್ಕೆ ಎಂದೋ ತಿಳಿಯಬೇಕಿತ್ತು. ಆದರೆ ಅದಾಗಲಿಲ್ಲ ಎಂಬುದು ಮಾತ್ರ ದೊಡ್ಡ ದುರಂತ. ೨೦೧೪ರಿಂದ ತಾವು ಮಾತ್ರ ಸಂವಿಧಾನ ರಕ್ಷಕರು, ನಿಜವಾದ ಅಂಬೇಡ್ಕರ ವಾದಿಗಳೆಂದು ಸಂವಿಧಾನವನ್ನೂ, ಅಂಬೇಡ್ಕರರನ್ನೂ ಓಟು ಗಳಿಕೆಯ ಗುರಾಣಿಯನ್ನಾಗಿಸಿ ಕಂಕುಳಲ್ಲಿ ದೊಣ್ಣೆಯನ್ನಿಟ್ಟುಕೊಂಡು ಲಾಭ ಪಡೆಯಲು ಯತ್ನಿಸುವವರ ಬಗ್ಗೆ ಎಚ್ಚರಗೊಳ್ಳದಿದ್ದರೆ ಜಾತಿ ಜಾತಿಗಳ ನಡುವಿನ ಸಂಘರ್ಷದಿಂದ ರಾಷ್ಟ್ರೀಯತೆ ಶೈಥಿಲ್ಯಗೊಂಡೀತು!
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


