ಮಲಬಾರ್ ವಿಶ್ವರಂಗ ಪುರಸ್ಕಾರ–2026: ಹಿರಿಯ ರಂಗ ನಟಿ ಗೀತಾ ಸುರತ್ಕಲ್ ಅವರಿಗೆ ಗೌರವ

Upayuktha
0



ಜೈನ ಧರ್ಮದ ಕಲೆ ಮತ್ತು ವಾಸ್ತುಶಿಲ್ಪದ ಐತಿಹಾಸಿಕ ಕೇಂದ್ರವಾಗಿರುವ, “ಜೈನ ಕಾಶಿ” ಎಂದೇ ಪ್ರಸಿದ್ಧಿಯಾದ ಮೂಡುಬಿದ್ರೆಯ ಸಮೀಪದ ಪಚ್ಚೆಪಸಿರಿನ ಸುಂದರ ಹಳ್ಳಿ ಮರೋಡಿ. ಇದೇ ಹಳ್ಳಿಯಲ್ಲಿ ದಿವಂಗತ ತಿಮ್ಮಪ್ಪ ಮತ್ತು ಶಾಂತಾ ದಂಪತಿಗಳ ಸಾತ್ವಿಕ ಸಂಸ್ಕಾರಯುತ ಕುಟುಂಬದಲ್ಲಿ 1953ರ ಮೇ 18ರಂದು ಗೀತಾ ಸುರತ್ಕಲ್ ಜನಿಸಿದರು. ಒಂಬತ್ತು ಮಕ್ಕಳಿರುವ ಈ ಕುಟುಂಬದಲ್ಲಿ ಐದು ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳಲ್ಲಿ ಮೂರನೇಯವರಾದ ಗೀತಾ, ಮುಂದಕ್ಕೆ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಿನುಗಿದ ಪ್ರತಿಭೆಯಾಗಿದರು.


ತಂದೆ ಗ್ರಾಮ ಲೆಕ್ಕಿಗರಾಗಿದ್ದು, ತಾಯಿ ಮನೆಯಲ್ಲಿಯೇ ಅಂಚೆ ಕಚೇರಿಯ ಕಾರ್ಯ ನಿರ್ವಹಿಸುತ್ತಿದ್ದರು. ಈ ದಂಪತಿಗಳಿಗೆ ಹಾಡು, ಭಜನೆ, ನಾಟಕ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ಅಪಾರ ಆಸಕ್ತಿ ಇತ್ತು. ಅದರ ಪ್ರಭಾವದಿಂದಲೇ ಗೀತಾರವರು ಬಾಲ್ಯದಲ್ಲೇ ಹಾಡುಗಾರ್ತಿಯಾಗಿಯೂ ಹಾರ್ಮೋನಿಯಂ ವಾದನದಲ್ಲಿಯೂ ಪರಿಣತಿ ಗಳಿಸಿದರು.


ಮರೋಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಆರಂಭಿಸಿದ ಗೀತಾ, ಗ್ರಾಮೀಣ ವಾತಾವರಣದಲ್ಲಿ ಜನಪದ ಹಾಡುಗಳು, ಕಥೆಗಳು, ಬಯಲಾಟ, ನಾಗನೃತ್ಯ ಮತ್ತು ಬಲಿಕೋಲಗಳಂತಹ ಸಾಂಸ್ಕೃತಿಕ ಸಂಭ್ರಮಗಳನ್ನು ನೋಡಿ ಬೆಳೆದರು. ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೃಷ್ಣವೇಷ, ಭಾರತಮಾತೆ ಮೊದಲಾದ ಪಾತ್ರಗಳಲ್ಲಿ ನೃತ್ಯ ಹಾಗೂ ಅಭಿನಯದ ಮೂಲಕ ವೇದಿಕೆಯನ್ನು ಅಲಂಕರಿಸುತ್ತಿದ್ದರು. ಇದೇ ಸಮಯದಲ್ಲಿ ಬರವಣಿಗೆಯ ಮೇಲೂ ಅವರಿಗೆ ವಿಶೇಷ ಆಸಕ್ತಿ ಮೂಡಿತು.


ನಂತರ ಮಕ್ಕಿದ ಪಲ್ಲದ ಜವಾಹರಲಾಲ್ ನೆಹರು ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ತಂದೆತಾಯಿಯ ನಿವೃತ್ತಿಯ ನಂತರ ಕುಟುಂಬ ಜೀವನೋಪಾಯಕ್ಕಾಗಿ ಮಂಗಳೂರಿನ ಸಮೀಪದ ಸುರತ್ಕಲ್‌ಗೆ ಸ್ಥಳಾಂತರಗೊಂಡಿತು. ಅಲ್ಲಿ ಎದುರಾದ ಭೂ ವ್ಯಾಜ್ಯಗಳ ಕಹಿ ಅನುಭವವೇ ಗೀತಾರವರಲ್ಲಿ ಬರವಣಿಗೆಯ ಪ್ರೇರಣೆಯಾಗಿ ಮೂಡಿತು. ಅದರ ಫಲವಾಗಿ ಅವರು ಬರೆದ “ಕಪ್ಪೆ” ಎಂಬ ಕಥೆ ನವಭಾರತ ಪ್ರಕಟಿತ ಕಥಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಸುಧಾ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿ ಮೆಚ್ಚುಗೆ ಗಳಿಸಿತು.


ಸುರತ್ಕಲ್‌ನ ಹಿಂದೂ ವಿದ್ಯಾದಾಯಿನಿ ಹೈಸ್ಕೂಲ್‌ನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು, ಮಂಗಳೂರಿನ ಗೋವಿಂದ ದಾಸ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯದಲ್ಲಿ ಪದವಿ ಪಡೆದರು. ನಂತರ ಕೋಣಾಜೆಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಸಂಪಾದಿಸಿದರು. ಈ ಸಂದರ್ಭದಲ್ಲಿ ಲೀಲಾವತಿ ರಾವ್, ಸೀತಾರಾಮ ಆಚಾರ್ಯ ಮತ್ತು ಪ್ರೊ. ಶೇಖರ್ ಇಡ್ಯ ಅವರಂತಹ ಗುರುಗಳ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಅವರ ಸಾಹಿತ್ಯಿಕ ಹಾಗೂ ಕಲಾತ್ಮಕ ಬದುಕಿಗೆ ಹೊಸ ದಿಕ್ಕು ನೀಡಿತು. ಕಡಲತೀರದ ಮಹಾನ್ ಸಾಹಿತಿ ಶಿವರಾಮ ಕಾರಂತರ ಕೃತಿಗಳು ಇವರ ಮೇಲೆ ಆಳವಾದ ಪ್ರಭಾವ ಬೀರಿದವು.


ಸ್ಪಷ್ಟವಾದ ಧ್ವನಿ ಮತ್ತು ಭಾಷಾ ಪ್ರೌಢಿಮೆಯಿಂದ ಗೀತಾರವರಿಗೆ ಆಕಾಶವಾಣಿಯಲ್ಲಿ ಅನೇಕ ಅವಕಾಶಗಳು ದೊರಕಿದವು. ಕಥೆ, ಲೇಖನ ಮತ್ತು ನಾಟಕಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗತೊಡಗಿದವು. ತುಳು ಭಾಷೆಯಲ್ಲಿ “ಪಿಲಿ ಪತ್ತಿ ಗಡಸ್” ನಾಟಕದಲ್ಲೂ ಹಾಗೂ ಕನ್ನಡದ ಅನೇಕ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಯಲ್ಲಿ ತಮ್ಮ ಗುರುತು ಮೂಡಿಸಿದರು.


ಮಂಗಳೂರು ರಂಗಭೂಮಿಯ ಭೂಮಿಕಾ, ಆಯನ, ಅಭಿವ್ಯಕ್ತ ಮುಂತಾದ ತಂಡಗಳಲ್ಲಿ ಸುರೇಂದ್ರನಾಥ್, ಸುರೇಶ್ ಆನಗಳ್ಳಿ, ಮೋಹನಚಂದ್ರ, ರಾಮು, ನಾ. ದಾಮೋದರ ಶೆಟ್ಟಿ ಮತ್ತು ಅನಂತರಂಗಾಚಾರ್ ಮೊದಲಾದ ಖ್ಯಾತ ನಿರ್ದೇಶಕರೊಂದಿಗೆ “ಮಾಧವಿ”, “ಮಾಡು ಸಿಕ್ಕದಲ್ಲ”, “ಅಂಜಿ”, “ಕಾಲೇಜು ಹುಡುಗಿ”, “ಅಂತಿ ಗೊನೆ”, “ಜೂಲಿಯಸ್ ಸೀಸರ್” ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಪ್ರಶಂಸೆ ಗಳಿಸಿದರು.


ಮುಖ್ಯಮಂತ್ರಿ ಚಂದ್ರು ಅವರೊಂದಿಗೆ ಅಭಿನಯಿಸಿದ “ಮುಖ್ಯಮಂತ್ರಿ” ನಾಟಕ ಭಾರತದಲ್ಲಷ್ಟೇ ಅಲ್ಲದೆ ಅಮೇರಿಕಾದ 18ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರದರ್ಶನಗೊಂಡಿದ್ದು, ಗೀತಾರವರ ಕಲಾಜೀವನದ ಸ್ಮರಣೀಯ ಅಧ್ಯಾಯವಾಗಿದೆ. ಇವರ ಮೊದಲ ರಂಗಪ್ರವೇಶ ಜಯಪ್ರಕಾಶ್ ಮಾವಿನಕುಳಿ ನಿರ್ದೇಶನದ “ಯಯಾತಿ” ನಾಟಕದ ಮೂಲಕ ನಡೆದಿದೆ.


ಎಂ.ಎ. ನಂತರ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಉದ್ಯೋಗ ದೊರೆತಿದ್ದು, ಉಡುಪಿ ಲೋಕಲ್ ಆಫೀಸ್ ಹಾಗೂ ಕಾಟಿಪಳ್ಳ ಶಾಖೆಗಳಲ್ಲಿ ಸೇವೆ ಸಲ್ಲಿಸಿದರು. ನಂತರ 1991ರಲ್ಲಿ ಬೆಂಗಳೂರಿನ ಗಾಂಧಿನಗರ ಶಾಖೆಗೆ ವರ್ಗಾವಣೆಗೊಂಡು, ರಂಗಭೂಮಿಯಲ್ಲಿ ತಮ್ಮ ಪ್ರತಿಭೆಯನ್ನು ಇನ್ನಷ್ಟು ವಿಸ್ತರಿಸಿದರು.


ಬೆಂಗಳೂರಿನಲ್ಲಿ ರಂಗ ನಿರಂತರ, ಕಲಾ ಗಂಗೋತ್ರಿ, ರಂಗಮಂಟಪ ಮುಂತಾದ ತಂಡಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಾಜೇಂದ್ರ ಕಾರಂತ್ ರಚನೆಯ “ಮೈಮನಗಳ ನಡುವೆ”, ಪ್ರಕಾಶ್ ಶೆಟ್ಟಿ ನಿರ್ದೇಶನದ “ಅನಭಿಜ್ಞ ಶಾಕುಂತಲ”, ಚಂಪಾ ಶೆಟ್ಟಿ ಅವರ “ಗಾಂಧಿ ಬಂಧ”, ಮೋಹಿತ್ ತಾಕಲ್ಕರ್ ನಿರ್ದೇಶನದ “ಬೀದಿಯೊಳಗೊಂದು ಮನೆ ಮಾಡಿ” ಮುಂತಾದ ನಾಟಕಗಳಲ್ಲಿ ಭಾವಪೂರ್ಣ ಅಭಿನಯ ನೀಡಿ ಮೆಚ್ಚುಗೆ ಪಡೆದರು.


ಚಿತ್ರರಂಗದಲ್ಲಿಯೂ ಅವರು ತಮ್ಮ ಗುರುತು ಮೂಡಿಸಿದ್ದಾರೆ. ವೈದೇಹಿಯವರ ಕಥೆಗಳ ಆಧಾರದ ಮೇಲೆ ನಿರ್ಮಿತ “ಅಮ್ಮಚ್ಚಿಯೆಂಬ ನೆನಪು” ಹಾಗೂ ಕಾ.ತಾ. ಚಿಕ್ಕಣ್ಣ ಅವರ ಕಥೆಯನ್ನು ಆಧರಿಸಿದ “ಕೋಳಿ ಎಸ್ರು” ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. “ಅಮ್ಮಚ್ಚಿಯೆಂಬ ನೆನಪು” ಚಿತ್ರ ಈಗಲೂ ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. ಜೊತೆಗೆ ಹಲವಾರು ಚಿತ್ರಗಳಿಗೆ ವಸ್ತ್ರ ವಿನ್ಯಾಸ ಮಾಡಿಯೂ ಪ್ರಶಂಸೆ ಪಡೆದಿದ್ದಾರೆ.


ಮುಂಬೈ ಕನ್ನಡ ಸಂಘದ “ಪ್ರತಿಷ್ಠಿತ ರಂಗಕರ್ಮಿ”, “ಸ್ಟರ್ನ್ ಮಯ್ಯೂರ”, “ಕಾರ್ಮಿಕ ರಂಗ ಪ್ರಶಸ್ತಿ”, “ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ” ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿವೆ.


ರಂಗಭೂಮಿ ಮತ್ತು ಸಾಹಿತ್ಯದ ಜೊತೆಗೆ ಗೀತಾರವರಿಗೆ ಚಾರಣದ ಮೇಲೂ ಅಪಾರ ಆಸಕ್ತಿ ಇದೆ. ಹಿಮಾಲಯದ ಸರ್ಪಾಸ್, ರೋಹಟಾಂಗ ಪಾಸ್, ಚಂದ್ರಕಾಣಿ ಪಾಸ್, ಹರ್ ಕಿ ದುನ್, ಕರೇರಿ ಲೇಕ್, ಹೇಮಕುಂಡ್ ಸಾಹಿಬ್, ಪುಷ್ಪ ಕಣಿವೆ, ಶಿಮ್ಲಾ, ನೀಲಗಿರಿ ಬೆಟ್ಟಗಳು ಹಾಗೂ ಕೈಲಾಸ ಪರ್ವತದಂತಹ ಅನೇಕ ತಾಣಗಳಲ್ಲಿ ಟ್ರೆಕ್ಕಿಂಗ್ ಮಾಡಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ್ದಾರೆ.


ಪ್ರಸ್ತುತ ಸುರತ್ಕಲ್‌ನಲ್ಲಿ ನೆಲೆಸಿರುವ ಗೀತಾ ಸುರತ್ಕಲ್ ಅವರು ಕಥೆ, ಕವನ, ಲೇಖನ, ರಂಗಭೂಮಿ ಮತ್ತು ಪ್ರಕೃತಿ ಚಾರಣದ ಮೂಲಕ ತಮ್ಮ ಸೃಜನಶೀಲ ಬದುಕನ್ನು ಮುಂದುವರೆಸುತ್ತಿದ್ದಾರೆ.


ಇವರ ಈ ಬಹುಮುಖ ಸಾಧನೆಯನ್ನು ಗುರುತಿಸಿ 2025–26ನೇ ಸಾಲಿನ ಶಂಕರ್ ರೂಫಿಂಗ್ ಸಿಸ್ಟಮ್ಸ್ ದತ್ತಿನಿಧಿ ಪ್ರಾಯೋಜಿತ “ಮಲಬಾರ್ ವಿಶ್ವ ರಂಗ ಪುರಸ್ಕಾರ–2026” ಅನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಮತ್ತು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ವತಿಯಿಂದ ಇದೇ ಮಾರ್ಚ್ 26ರಂದು ಪ್ರದಾನ ಮಾಡಲಾಗುತ್ತಿದೆ.


- ರಾಜೇಶ್ ಭಟ್ ಪಣಿಯಾಡಿ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
To Top