ಸುರಪುರದ ಬಣಗಾರ ಫೌಂಡೇಶನ್ ವತಿಯಿಂದ ವಿಶೇಷವಾಗಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಳೆದ ಮೂರು ವರ್ಷಗಳಿಂದ ವಿಶೇಷ ಸಾಧಕರಿಗೆ ಸನ್ಮಾನ ಮಾಡುತ್ತ ಬಂದಿದ್ದಾರೆ ಪ್ರಕಾಶ ಬಣಗಾರ.
ನಾಲ್ಕನೆಯ ವರ್ಷದ ಮಹಿಳಾ ದಿನಾಚರಣೆ ಕಾರ್ಯಕ್ರಮ ಈಗ ಜರುಗುತ್ತಲಿದೆ. ಇದಕ್ಕಾಗಿ ಫೌಂಡೇಶನ್ ಅಧ್ಯಕ್ಷ ವಸಂತಕುಮಾರ (ಪ್ರಕಾಶ) ಬಣಗಾರ ಅವರು ನಿಜಕ್ಕೂ ಅಭಿನಂದನಾರ್ಹರು.
'ಮಹಿಳೆ ಉನ್ನತ ಶಿಕ್ಷಣವನ್ನು ಪಡೆದು ತನ್ನ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಬೇಕು ಹಾಗೂ ದೌರ್ಜನ್ಯ ಎದುರಿಸುವ ದಿಟ್ಟತನವನ್ನು ಹಾಗೂ ತನ್ನನ್ನು ತಾನು ರಕ್ಷಣೆ ಮಾಡಿ ಕೊಳ್ಳುವ ಶಕ್ತಿಯನ್ನು ಖಂಡಿತ ಗಳಿಸಬೇಕು. ಈಗ ಆಧುನಿಕ ಸಮಾಜದಲ್ಲಿ ಮಹಿಳೆ ಪುರುಷರಷ್ಟೇ ಪ್ರಬುದ್ಧಳಾಗಿದ್ದಾಳೆ. ಆದರೆ ದುರದೃಷ್ಟಾವಶಾತ್ ಅವಳಿಗೆ ಇನ್ನೂ ಹಲವು ಕ್ಷೇತ್ರಗಳಲ್ಲಿ ಸಮಾನ ಅವಕಾಶ ದೊರಕುತ್ತಿಲ್ಲ. ಇದು ಪುರುಷ ಪ್ರಾಬಲ್ಯದ ಪಾರಮ್ಯವನ್ನು ಎತ್ತಿ ತೋರಿಸುತ್ತದೆ.
ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಪಿಡುಗು ಹಾಗೂ ಅವಳ ಮೇಲಿನ ದೌರ್ಜನ್ಯ, ಅತ್ಯಾಚಾರ... ಹೀಗೆ ಅನೇಕ ಸಮಸ್ಯೆಗಳು ಮಹಿಳಾ ಸಮಾಜವನ್ನು ಇಂದಿಗೂ ಕಾಡುತ್ತಿವೆ ಎಂದು ಸಮಾಜದಲ್ಲಿ ಮಹಿಳೆಯರ ಉನ್ನತಿಗಾಗಿ ಶ್ರಮಿಸುತ್ತಿರುವವರು ಅನೇಕ ಬಾರಿ ಕಳವಳ ವ್ಯಕ್ತಪಡಿಸಿದ್ದಾರೆ. ಸಿನೇಮಾ ಹಾಗೂ ಧಾರಾವಾಹಿಗಳಲ್ಲಿಯೂ ಹೆಣ್ಣಿನ ಮೇಲಿನ ದೌರ್ಜನ್ಯವನ್ನು ವೈಭವಿಕರಿಸಲಾಗುತ್ತಿದೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂದು ದಿನ ನಿತ್ಯ ಪ್ರಸಾರವಾಗುವ ಅನೇಕ ಧಾರಾವಾಹಿಗಳಲ್ಲಿ ತೋರಿಸುತ್ತಾರೆ. ನಿರ್ದೇಶಕ ಆಕೆಯನ್ನು ಖಳನಾಯಕಿಯನ್ನಾಗಿ ವಿಜೃಂಭಿಸಿ ತನ್ನ ಧಾರಾವಾಹಿಯ ಟಿಆರ್'ಪಿ ಹೆಚ್ಚಿಸಿಕೊಳ್ಳುತ್ತಾನೆ. ಅನೇಕ ನಾಟಕಗಳಲ್ಲಿ ಹಾಗೂ ಇಂದಿನ ರೀಲ್ಸ್ ಯುಗದಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳನ್ನು ಅವಳಿಂದ ಹೇಳಿಸಿ ಸಂತೋಷ ಪಡುವ ವಿಕೃತಿಗಳಿಗೇನೂ ಇಲ್ಲಿ ಕಡಿಮೆಯಿಲ್ಲ!
ಹೆಣ್ಣಿನ ಬೆಳವಣಿಗೆಯೇ ಒಂದು ದೇಶದ ಪ್ರಗತಿಯ ನಿಜವಾದ ಸಂಕೇತವಾಗಿದೆ. ಹೆಣ್ಣನ್ನು ಪೂಜನೀಯ ಭಾವನೆಯಿಂದ ಕಾಣುವ ದೇಶ ನಮ್ಮದು. ಇಂದು ಮಹಿಳೆ ಕಾಲಿಡದ ಕ್ಷೇತ್ರವಿಲ್ಲ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಅನನ್ಯ. ಇಂತಹ ಸಂದರ್ಭಗಳಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಮಾಡುವುದು ವಿಶೇಷವಾದದ್ದು.ಮಹಿಳೆಯರು ಸಂತೋಷ ಸಂಭ್ರಮದಿಂದ ಈ ದಿನಾಚರಣೆಯಂದು ಮಹಿಳಾ ಸಮುದಾಯದ ಸಾಧನೆಯ ಬಗ್ಗೆ ಹೇಳುತ್ತಾರೆ. ಇದು ಮುಂದೆ ಸಾಧನೆ ಮಾಡುವವರಿಗೆ ಹೆಚ್ಚಿನ ಸ್ಪೂರ್ತಿಯನ್ನು ನೀಡುವುದರಿಂದ ಇದು ಖಂಡಿತ ಅತ್ಯಗತ್ಯವಾಗಿದೆ.
ಇಂತಹ ಸಂದರ್ಭದಲ್ಲಿ ಸುರಪುರದ ಬಣಗಾರ ಫೌಂಡೇಶನದಿಂದ ಕಳೆದ ಮೂರು ವರ್ಷಗಳಿಂದಲೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮದ ಆಯೋಜನೆ ಮಾಡುತ್ತ ಬಂದಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿ ಎಂದರೇನೂ ತಪ್ಪಾಗಲಿಕ್ಕಿಲ್ಲ. ಇದರಿಂದ ಮಹಿಳೆಯರಿಗೆ ಉತ್ತೇಜನ ದೊರೆತು, ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲು ಸ್ಪೂರ್ತಿ ದೊರೆತಂತಾಗುತ್ತದೆ. ಅದೇ ರೀತಿಯಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭಗಳು ನಿರಂತರವಾಗಿ ಬಣಗಾರ ಫೌಂಡೇಶನದಿಂದ ನಡೆಯುತ್ತ ಬಂದಿವೆ. ಇದಲ್ಲದೇ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ಅನೇಕ ಜನ ಉತ್ತಮ ಶಿಕ್ಷಕ/ಶಿಕ್ಷಕಿಯರನ್ನು ಗೌರವಿಸುತ್ತ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತ, ಅದರ ಮೂಲಕ ಸಮಾಜದ ಸ್ವಾಸ್ಥ್ಯ ಕಾಯುತ್ತಿರುವುದು ನಿಜಕ್ಕೂ ಅದು ನಮಗೆ ಶ್ರೇಷ್ಠತೆಯ ವ್ಯಸನದಂತೆ ಗೋಚರಿಸುತ್ತದೆ.
ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಜಿ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಮಾಡುತ್ತಾ ಬಂದಿರುವ ಪ್ರಕಾಶ ಅವರು, ತಮ್ಮ ಸ್ನೇಹಿತರು ಹಾಗೂ ಹಿತೈಷಿಗಳೊಡಗೂಡಿ ಸದಾ ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಲೇ ಇರುತ್ತಾರೆ.
ಸಾಮಾಜಿಕವಾಗಿ ಸಿಂಪಿ ಸಮಾಜದ ಮೂಲಕ ರಾಜ್ಯ ಹಾಗೂ ಜಿಲ್ಲಾ, ತಾಲೂಕು ಮಟ್ಟದಲ್ಲಿ ಗುರುತಿಸಿಕೊಂಡಿರುವ ವಸಂತಕುಮಾರ (ಪ್ರಕಾಶ) ಬಣಗಾರ ಅವರು ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲಿ ಎಂದು ಹಾರೈಸುತ್ತೇನೆ. ಬಣಗಾರ್ ಫೌಂಡೇಶನದ ಎಲ್ಲ ಪದಾಧಿಕಾರಿಗಳಿಗೂ ಅವರ ಸಮಾಜಮುಖಿ ಕಾರ್ಯಗಳಿಗಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಮುಂಬರುವ ದಿನಗಳಲ್ಲಿ ಇನ್ನೂ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಬರಲಿ. ಉದಯೋನ್ಮುಖ ಕವಿಗಳನ್ನು ಸಾಹಿತಿಗಳನ್ನು ಕಲಾವಿದರನ್ನು ಗುರುತಿಸಿ, ಅವರಿಗೆ ಹೊಸದನ್ನು ಬರೆಯಲು ಸೃಷ್ಟಿಸಲು ಅವಕಾಶ ನೀಡಲಿ ಹಾಗೂ ಇದಕ್ಕಾಗಿ ಇವರಿಗೆ ಸಮಾಜದಲ್ಲಿ ಇನ್ನೂ ಹೆಚ್ಚಿನ ಉನ್ನತ ಸ್ಥಾನಮಾನ ದೊರೆಯಲಿ ಎಂಬುದೇ ನಮ್ಮ ಹದುಳ ಹಾರೈಕೆ.
ಈಗ ಇದೇ 2026ರ ಮಾರ್ಚ್ 8, ರವಿವಾರದಂದು ಸುರಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಗರುಡದ್ರಿ ಕಲಾ ಮಂದಿರ ಎದುರುಗಡೆ) ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಯೋಜನೆಯನ್ನು ಬಣಗಾರ ಫೌಂಡೇಶನ್ ಹೊಂದಿದೆ. ಇಲ್ಲಿ ಸಮಾಜದಲ್ಲಿ ಅನೇಕ ರೀತಿಯ ಸಾಧನೆ ಮಾಡಿರುವ ಮಹಿಳೆಯರ ಸಮ್ಮೀಲನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ತಾವೆಲ್ಲ ಬಂದು ಸಾಕ್ಷಿಯಾಗಬೇಕು ಎಂಬುದೇ ನಮ್ಮ ಆಶಯವಾಗಿದೆ.
ಬನ್ನಿ ಎಲ್ಲರೂ ಸೇರಿ ಈ ಶುಭ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಗೌರವಿಸೋಣ.... ಭಾರತೀಯ ಮೌಲ್ಯಗಳಿಗೆ ವಿಶೇಷ ಅರ್ಥ ನೀಡಲು ಪ್ರಯತ್ನಿಸೋಣ.
'ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ'
- ಶ್ರೀನಿವಾಸ ಜಾಲವಾದಿ, ಸುರಪುರ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

