- ಪ್ರಸನ್ನಾ ವಿ. ಚೆಕ್ಕೆಮನೆ
ಅದೊಂದು ಕ್ಷಣಿಕ ಮುನಿಸು. ಮೇಲ್ನೋಟಕ್ಕೆ ಅದು ಕೇವಲ ಒಂದು ಸಣ್ಣ ಜಗಳದಂತೆ ಕಂಡರೂ, ಆ ಕ್ಷಣದಲ್ಲಿ ನಮ್ಮಿಬ್ಬರ ನಡುವೆ ಬೆಳೆದು ನಿಂತಿದ್ದ ಅಹಂ ನ ಗೋಡೆ. ಅದು ಹಿಮಾಲಯಕ್ಕಿಂತಲೂ ಎತ್ತರವಾಗಿತ್ತು. ಅದನ್ನು ಕರಗಿಸುವುದು ಅಷ್ಟು ಸುಲಭವಾಗಿರಲಿಲ್ಲ.
ಸಂಸಾರ ಅಂದಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಆ ಭಿನ್ನಾಭಿಪ್ರಾಯಗಳು ಯಾವಾಗ ದ್ವೇಷದ ರೂಪ ತಾಳುತ್ತವೆ ಎಂಬುದು ಯಾರಿಗೂ ತಿಳಿಯುವುದಿಲ್ಲ.
'ಅವಳು ನನ್ನ ಮಾತು ಕೇಳಲಿಲ್ಲ' ಎಂಬ ಒಂದೇ ಒಂದು ಕಾರಣಕ್ಕೆ ನನ್ನೊಳಗಿನ ಹಠ ಕೆರಳಿತ್ತು. ಅವಳು ತಾನೇ ಸೋತು ಸಂಧಾನಕ್ಕೆಂದು ಎಷ್ಟೋ ಬಾರಿ ತನ್ನ ಮೌನ ಮುರಿದು ಮಾತನಾಡಿಸಲು ಬಂದಿದ್ದಳು. ಆದರೆ ನಾನು ಮೌನವಾಗಿದ್ದೆ. ಆಕೆಯ ಕಣ್ಣುಗಳಲ್ಲಿ "ಸರಿ ಬಿಡು, ಎಲ್ಲವನ್ನೂ ಮರೆತುಬಿಡೋಣ" ಎಂಬ ಹಂಬಲವಿತ್ತು. ಆದರೆ ನಾನು ಮಾತ್ರ ನನ್ನ ಕೋಪದ ಬೆಂಕಿಯಲ್ಲಿ ಅವಳ ಪ್ರೀತಿಯನ್ನು ಸುಡುತ್ತಿದ್ದೆ.
ಕೊನೆಗೆ ತಾಳ್ಮೆ ಕಳೆದುಕೊಂಡ ಅವಳು, ಮನಸ್ಸಿನ ನೋವಿನಿಂದ ಎರಡು ಕಟು ಮಾತುಗಳನ್ನು ಹೇಳಿಯೇ ಬಿಟ್ಟಳು. ಆ ಕ್ಷಣದ ಆವೇಶದಲ್ಲಿ ನಾನು ಏನು ಮಾಡುತ್ತಿದ್ದೇನೆ ಎಂಬ ಪ್ರಜ್ಞೆಯೂ ಇಲ್ಲದೆ ಅವಳ ಮೇಲೆ ಕೈ ಎತ್ತಿಬಿಟ್ಟೆ. ಆ ಪೆಟ್ಟು ಅವಳ ಕೆನ್ನೆಗಿಂತ ಹೆಚ್ಚಾಗಿ ಅವಳ ಮನಸ್ಸಿಗೆ ಬಿದ್ದಿತ್ತು. ಅವಳ ಹೃದಯದಲ್ಲಿರುವ ನನ್ನ ಮೇಲಿನ ಪ್ರೀತಿಯ ನಂಬಿಕೆಯ ಮೇಲೆ ಬಿದ್ದಿತ್ತು.
ಅವಳ ಕಣ್ಣುಗಳಿಂದ ಧಾರಾಕಾರವಾಗಿ ಕಣ್ಣೀರು ಹರಿಯತೊಡಗಿತು. ಒಂದು ಶಬ್ದವನ್ನೂ ಆಡದೆ, ತನ್ನೆಲ್ಲಾ ನೋವನ್ನು ಆ ಮೌನದಲ್ಲೇ ಅದುಮಿಟ್ಟುಕೊಂಡು, ತನ್ನ ಬಟ್ಟೆಗಳನ್ನು ಬ್ಯಾಗಿಗೆ ತುಂಬಿಸಿಕೊಂಡು ಅವಳು ಹೊರಟುಹೋದಳು. ಅವಳು ಮನೆಯ ಹೊಸ್ತಿಲು ದಾಟುತ್ತಿದ್ದಾಗ ನನ್ನ ಹೃದಯ ಒಳಗಿನಿಂದ ಕಿರುಚುತ್ತಿತ್ತು,
"ಹೋಗಬೇಡ ನಿಲ್ಲು, ಕ್ಷಮಿಸಿಬಿಡು" ಎಂದು. ಆದರೆ ನನ್ನ ನಾಲಿಗೆ ಮಾತ್ರ ಜಡವಾಗಿತ್ತು.
ನಮ್ಮದು ಎಲ್ಲರಂತೆ ಸಾಮಾನ್ಯ ಮದುವೆಯಲ್ಲ, ಅದೊಂದು ಸುಂದರ ಪ್ರೇಮಕಾವ್ಯವಾಗಿತ್ತು. ಅವಳು ಶ್ರೀಮಂತ ಮನೆಯಲ್ಲಿ ಬೆಳೆದ ಹುಡುಗಿ, ನಾನೋ ಒಬ್ಬ ಸಾಮಾನ್ಯ ಸಣ್ಣ ವ್ಯಾಪಾರಿ. ಸಣ್ಣ ಜೀನಸು ಅಂಗಡಿ ಮಾತ್ರ ನನಗೆ ಇರುವುದು ಆದರೂ ಅವಳು ನನ್ನನ್ನು ಪ್ರೀತಿಸಿದಳು. ಅವಳ ಮುಗ್ಧ ಪ್ರೀತಿಗೆ ನಾನು ಮನಸೋತಿದ್ದೆ. ಅವಳಾದರೋ ನಾನು ಪ್ರೀತಿಸುವುದಕ್ಕಿಂತ ಎರಡು ಪಟ್ಟು ಹೆಚ್ಚು ನನ್ನನ್ನು ಪ್ರೀತಿಸಿದಳು. ನಾನಿಲ್ಲದೆ ಬದುಕೇ ಇಲ್ಲ ಎಂಬಷ್ಟು ಹೃದಯ ತುಂಬಿ ಪ್ರೀತಿಸಿದಳು.
ಹಾಗಾಗಿ ಅವಳ ಮನೆಯವರ ವಿರೋಧದ ನಡುವೆಯೂ, ಸುಖ- ಸಂತೋಷದ ಆಸೆಗಳನ್ನು ಬದಿಗಿಟ್ಟು ಅವಳು ಕೇವಲ ನನ್ನ ಮೇಲಿನ ನಂಬಿಕೆಯಿಂದ ಕೈ ಹಿಡಿದು ಬಂದಿದ್ದಳು. ಆದರೆ ಮದುವೆಯಾಗಿ ಎರಡು ತಿಂಗಳು ಕಳೆಯುವುದರೊಳಗೆ ಆ ಪ್ರೀತಿಯ ಕಾವು ಆರಿಹೋಗಿತ್ತು. ವ್ಯಾಪಾರದಲ್ಲಿನ ನಷ್ಟ, ಬದುಕಿನ ಜಂಜಾಟಗಳು ನನ್ನನ್ನು ಒರಟನನ್ನಾಗಿ ಮಾಡಿದ್ದವು. ಅಮ್ಮನ ಚುಚ್ಚು ಮಾತುಗಳು ಬೇರೆ.
"ಅವಳ ಸ್ನೇಹಿತೆಯರ ಮದುವೆಗೆ ಎಷ್ಟು ಬಂಗಾರ ಕೊಟ್ಟಿದ್ದರಂತೆ ನೋಡು, ನಿನಗೇನು ಸಿಕ್ಕಿತು? ಪ್ರೀತಿಸಿ ಮದುವೆ ಆದರೆ ಹೀಗೆ ಆಗುವುದು ಇಲ್ಲದಿದ್ದರೆ ಒಂದಿಷ್ಟು ಚಿನ್ನ ಒಡವೆಯಾದರೂ ಸಿಗುತ್ತಿತ್ತು ಈಗ ನೋಡು ಏನು ಇಲ್ಲದಂತಾಗಿದೆ" ಎಂಬ ಮಾತುಗಳು ನನ್ನ ಮನಸ್ಸಿನಲ್ಲಿ ಕಹಿಯನ್ನು ತುಂಬಿದ್ದವು. ಆ ಕಹಿಯೇ ನಮ್ಮ ನಡುವಿನ ಅನಗತ್ಯ ಜಗಳಗಳಿಗೆ ಗೊಬ್ಬರವಾಗುತ್ತಿತ್ತು.
ಅವಳು ಹೋದ ಮೇಲೆ ಇಡೀ ಮನೆ ಸ್ಮಶಾನದಂತೆ ಭಾಸವಾಯಿತು. ಗೋಡೆಗಳು ನನ್ನನ್ನು ಅಣಕಿಸುತ್ತಿದ್ದವು. ಅಮ್ಮ ಈಗ ಸೊಸೆಯ ಪರವಾಗಿ ಮಾತಾಡುತ್ತಿದ್ದರು. "ಹೆಂಡತಿ ಹೋದರೆ ಗಂಡನೇ ಹೋಗಿ ಕರೆತರಬೇಕು. ಅವಳ ಮನಸ್ಸನ್ನು ನೋಯಿಸಬಾರದು ಹೆಂಡತಿಯ ಕಣ್ಣೀರು ಗಂಡನಿಗೆ ಕ್ಷೇಮವಲ್ಲ " ಎಂದು ಬುದ್ಧಿವಾದ ಹೇಳುತ್ತಿದ್ದರು. ಆದರೆ ನನ್ನ ಹಠ ಮಾತ್ರ ಸ್ವಲ್ಪವೂ ಕಡಿಮೆಯಾಗಲಿಲ್ಲ.
"ಅವಳೇ ಅಲ್ಲವೇ ನನ್ನನ್ನು ಬಿಟ್ಟು ಹೋಗಿದ್ದು. ಅವಳಿಗೆ ಬೇಕಾದಾಗ ಬರಲಿ" ಎಂದು ಹೊರಗೆ ಹೇಳುತ್ತಿದ್ದರೂ, ಒಳಗೊಳಗೆ ಅವಳಿಲ್ಲದೆ ನಾನು ಅನಾಥನಾಗಿದ್ದೆ. ಆದರೆ ಅದನ್ನು ನಾನು ಪ್ರದರ್ಶಿಸುವಂತೆ ಇರಲಿಲ್ಲ.
ಪ್ರತಿ ರಾತ್ರಿ ಮಲಗುವ ಮುನ್ನ ಅವಳ ಫೋಟೋ ನೋಡದೆ ನನಗೆ ನಿದ್ದೆ ಬರುತ್ತಿರಲಿಲ್ಲ. ಬೆಳಗ್ಗೆ ಎದ್ದ ತಕ್ಷಣ ಅವಳ ಪಿಸುಮಾತುಗಳನ್ನು ಕೇಳಲು ಕಿವಿಗಳು ಹಂಬಲಿಸುತ್ತಿದ್ದವು. ನನಗೂ ಅವಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂಬ ಸತ್ಯ ನೂರಕ್ಕೆ ನೂರು ತಿಳಿದಿತ್ತು, ಆದರೆ ಆ ಸತ್ಯವನ್ನು ಒಪ್ಪಿಕೊಳ್ಳುವಷ್ಟು ದೊಡ್ಡ ಮನಸ್ಸು ನನಗಿರಲಿಲ್ಲ.
ಕೆಲವು ದಿನಗಳ ನಂತರ ಅಮ್ಮನೇ ಹೋಗಿ ಅವಳನ್ನು ಕರೆದುಕೊಂಡು ಬಂದರು. ನಾನು ಅಂದು ಅಂಗಡಿಯನ್ನು ಬೇಗನೇ ಮುಚ್ಚಿ ಮನೆಗೆ ಬಂದೆ. ಅವಳು ಅಡುಗೆಮನೆಯಲ್ಲಿದ್ದಳು. ಮಾಮೂಲಿಯಾಗಿದ್ದರೆ ನನ್ನನ್ನು ನೋಡಿದ ತಕ್ಷಣ ಓಡಿ ಬಂದು ಅಪ್ಪಿಕೊಳ್ಳುತ್ತಿದ್ದವಳು, ಇಂದು ಕಲ್ಲಿನ ಪ್ರತಿಮೆಯಂತಿದ್ದಳು. ಅವಳ ಮುಖದಲ್ಲಿ ಯಾವುದೇ ಭಾವನೆಗಳಿರಲಿಲ್ಲ. ಊಟ ಬಡಿಸಿ ಮೌನವಾಗಿ ಅಲ್ಲಿಂದ ಹೊರಗೆ ತೆರಳಿದಳು.
ಅವಳು ಹತ್ತಿರವಿಲ್ಲದೆ ನನಗೆ ಊಟ ನನ್ನ ಗಂಟಲಲ್ಲಿ ಇಳಿಯಲಿಲ್ಲ. ಒಂದು ಬಾರಿ ನನ್ನ ಹತ್ತಿರ ಕುಳಿತು 'ಸ್ವಲ್ಪ ಪಲ್ಯ ಬಡಿಸಲೇ? ಸಾರು ಇನ್ನೂ ಬೇಕೇ?' ಎಂದು ಅವಳು ಕೇಳಿದ್ದರೆ ಎಂದು ನನ್ನ ಮನಸ್ಸು ಹಂಬಲಿಸಿತು. ಅವಳು ಬರಲು ಇಲ್ಲ, ಕೇಳಲು ಇಲ್ಲ. ಆದರೆ ನಾನು ಆಗಲೂ ಶಿಲೆಯಂತೆ ತಟಸ್ಥನಾಗಿಯೇ ಇದ್ದೆ.
ರಾತ್ರಿ ಮಲಗಲು ನನ್ನ ಕೋಣೆಗೆ ಬಂದವಳು ಹಿಂದಿನಂತೆ ಹಾಸಿಗೆಯಲ್ಲಿ ನನ್ನ ಪಕ್ಕ ಮಲಗಲಿಲ್ಲ. ಒಂದು ಚಾಪೆ ಮತ್ತು ಬೆಡ್ ಶೀಟ್ ತೆಗೆದುಕೊಂಡು ನೆಲದಲ್ಲಿ ಮಲಗಿದಳು. ಅವಳನ್ನು ಹತ್ತಿರ ಕರೆಯಬೇಕೆಂದು ನನ್ನ ಮನಸ್ಸು ಬಯಸಿದರೂ ನಾನು ಆ ಕೆಲಸ ಮಾಡಲಿಲ್ಲ.
ಅವಳ ಉಸಿರಾಟದ ಸದ್ದು ನನಗೆ ಕೇಳಿಸುತ್ತಿತ್ತು, ಅವಳಿಗೂ ನಿದ್ದೆ ಬಂದಿಲ್ಲ ಎಂದು ನನಗೆ ತಿಳಿದಿತ್ತು. ಆದರೆ ಅವಳನ್ನು ಮಾತನಾಡಿಸಲು ಯಾವುದೋ ಒಂದು ಅದೃಶ್ಯ ಗೋಡೆ ನನಗೆ ಅಡ್ಡ ಬರುತ್ತಿತ್ತು.
ಮರುದಿನ ಬೆಳಗ್ಗೆ ನಾನು ಕೆಲಸಕ್ಕೆ ಹೊರಡುವಾಗ ಅವಳು ನಿಧಾನವಾಗಿ ನನ್ನ ಬಳಿಗೆ ಬಂದಳು. ಕೈಯಲ್ಲಿದ್ದ ಬಳೆಗಳು ಮತ್ತು ಕುತ್ತಿಗೆಯ ಸರವನ್ನೆಲ್ಲಾ ತೆಗೆದು ಒಂದು ಬಟ್ಟೆಯಲ್ಲಿ ಕಟ್ಟಿ ನನ್ನ ಕೈಗಿಟ್ಟಳು. "ಇದನ್ನು ಅಡವಿಡಿ ಅಥವಾ ಮಾರಿಬಿಡಿ... ನಿಮ್ಮ ವ್ಯಾಪಾರ ಚೆನ್ನಾಗಿಲ್ಲ ಎಂಬುದು ನನಗೆ ಗೊತ್ತು. ನಿಮಗೆ ಸಹಾಯವಾಗಲಿ" ಎಂದು ಮೃದು ಧ್ವನಿಯಲ್ಲಿ ಹೇಳಿ ಹೊರಟುಹೋದಳು.
ನಿಂತಲ್ಲೇ ಕರಗಿ ಹೋದರೆ ಚೆನ್ನಾಗಿತ್ತು ಎಂದೆನಿಸಿತು ನನಗೆ. ನಾನು ಅವಳನ್ನು ಕೇವಲ ಒಬ್ಬ ಹಠಮಾರಿ ಹುಡುಗಿ ಎಂದುಕೊಂಡಿದ್ದೆ, ಆದರೆ ಅವಳು ನನ್ನ ಮೌನದ ಹಿಂದಿನ ನೋವನ್ನು, ನನ್ನ ವ್ಯವಹಾರದ ಕುಸಿತವನ್ನು ಅದೆಷ್ಟು ಸೂಕ್ಷ್ಮವಾಗಿ ಗಮನಿಸಿದ್ದಳು! ಆ ಒಡವೆಗಳು ಅವಳ ದೇಹದ ಮೇಲಿದ್ದಾಗಲೇ ಚೆಂದ, ಅವುಗಳನ್ನು ಮಾರಿ ಬದುಕು ಕಟ್ಟಿಕೊಳ್ಳುವ ಅಸಹಾಯಕತೆ ನನ್ನನ್ನು ಕಾಡತೊಡಗಿತು. ನನಗೆ ಅದು ಎಂದಿಗೂ ಸಾಧ್ಯವಿರಲಿಲ್ಲ.
ಸಂಜೆ ಮನೆಗೆ ಬಂದಾಗ ಅವಳಿರಲಿಲ್ಲ. 'ಅವಳ ತಾಯಿ ಬಂದು ಕರೆದುಕೊಂಡು ಹೋದರು' ಎಂದು ಅಮ್ಮ ಹೇಳಿದಾಗ ತಿಳಿದಾಗ ನನ್ನ ಎದೆಯಲ್ಲಿ ಅಜ್ಞಾತ ಭಯವೊಂದು ಆವರಿಸಿತು.
"ಇವತ್ತು ಅವಳು ಶಾಶ್ವತವಾಗಿ ನನ್ನನ್ನು ಬಿಟ್ಟು ಹೋಗಬಹುದೇ? ಅದಕ್ಕಾಗಿಯೇ ಆ ಒಡವೆಗಳನ್ನು ಕೊಟ್ಟು ಹೋಗಿದ್ದೇ?" ಎಂಬ ಆಲೋಚನೆ ಮನದಲ್ಲಿ ತೇಲಿ ಬಂದಾಗ ನನಗೆ ಹುಚ್ಚು ಹಿಡಿದಂತಾಯಿತು.
'ಅವಳನ್ನು ಬಿಟ್ಟು ನಾನು ಬದುಕಬಲ್ಲೆನೇ ಅವಳಿಲ್ಲದೆ ನನ್ನ ಜೀವನ ಶೂನ್ಯವಾಗದೆ? ನಾನು ಅವಳಲ್ಲಿ ಮಾತನಾಡಬೇಕಿತ್ತು. ಅದೆಷ್ಟು ಬಾರಿ ಅವಳು ಸೋತು ನನ್ನ ಬಳಿಗೆ ಬಂದಿದ್ದಾಳೆ. ಆದರೂ ನಾನು ಅಹಂ ನಟಿಸಿ, ಭಂಡನಂತೆ ನಿಂತಿದ್ದೆ.
ಯೋಚನೆಯ ಸುಳಿಯಲ್ಲಿ ಸಿಲುಕಿದ ನನಗೆ ಅದೆಷ್ಟು ಹೊತ್ತು ಹಾಗೆ ಕುಳಿತಿದ್ದೇನೋ ಎಂದು ಗೊತ್ತಾಗಲೇ ಇಲ್ಲ. ಬಾಗಿಲು ತೆರೆಯುವ ಶಬ್ದವಾಯಿತು. ಅವಳು ಒಬ್ಬಳೇ ಒಳಬಂದಳು. ನನ್ನ ಕಡೆ ನೋಡಿದಳು, ಆದರೆ ಏನೂ ಮಾತನಾಡಲಿಲ್ಲ. ನಾನು ಏನೋ ಕೇಳಬೇಕೆಂದುಕೊಂಡಿದ್ದರು ನನಗೂ ಅವಳಲ್ಲಿ ಮಾತನಾಡಲು ಏನೋ ತೊಡಕು ಅಡ್ಡ ಬರುತ್ತಿತ್ತು.
ಅಂದು ರಾತ್ರಿ ಮಲಗುವಾಗ, ಅವಳು ನಿಧಾನವಾಗಿ ನನ್ನ ಹತ್ತಿರ ಬಂದು ಮಲಗಿದಳು. ಮೆಲ್ಲನೆ ನನ್ನನ್ನು ಅಪ್ಪಿಕೊಂಡಳು. ಅವಳ ಕಣ್ಣೀರು ನನ್ನ ಎದೆಗೆ ತಾಗಿದಾಗ ನನ್ನೊಳಗೆ ಹೆಪ್ಪುಗಟ್ಟಿದ ಅಹಂ ನ ಬಂಡೆಕಲ್ಲು ಕರಗಿ ನೀರಾಯಿತು.
"ಚಿನ್ನಾ..... ಕ್ಷಮಿಸು. ಇನ್ನು ನಾನು ನಿನ್ನನ್ನು ಇಷ್ಟು ನೋಯಿಸಲಾರೆ" ಅವಳ ಕಣ್ಣೀರನ್ನು ಮೃದುವಾಗಿ ಒರೆಸುತ್ತಾ ಹೇಳಿದೆ.
"ಇಂದು ಅಮ್ಮ ನನ್ನನ್ನು ವಕೀಲರ ಹತ್ತಿರ ಕರೆದುಕೊಂಡು ಹೋಗಿದ್ದರು... ವಿಚ್ಛೇದನ ನೀಡಲು ಎಲ್ಲವನ್ನೂ ಸಿದ್ಧಪಡಿಸಿದ್ದರು....." ಅವಳು ಮೆಲುವಾಗಿ ಹೇಳುತ್ತಿದ್ದರೆ ಅವಳ ಮಾತು ಕೇಳಿದ ನಾನು ಬೆಚ್ಚಿ ಎದ್ದು ಕುಳಿತೆ. 'ಹಾಗಾದರೆ ಇಂದು ಅವಳ ಅಮ್ಮ ಅವಳನ್ನು ವಕೀಲರ ಬಳಿಗೆ ಕರೆದುಕೊಂಡು ಹೋಗಿದ್ದೆ ನಮ್ಮಿಬ್ಬರನ್ನು ಅವರು ಶಾಶ್ವತವಾಗಿ ಅಗಲಿಸುತ್ತಾರೆಯೇ?' ಮುಂದೆ ಯೋಚಿಸಲು ನನ್ನ ಮನಸ್ಸು ಒಪ್ಪಲಿಲ್ಲ.
ನನ್ನ ಜೊತೆ ಅವಳು ಎದ್ದು ಕುಳಿತಳು. ನಾನು ಅವಳ ಮುಖ ನೋಡಿದೆ. ಕಣ್ಣೀರಿನ ನಡುವೆಯೂ ಅವಳು ಕಿರುನಗೆ ಬೀರಿದಳು. ಕಾಮನಬಿಲ್ಲು ನಕ್ಕಂತೆ ಕಂಡಿತು ನನಗೆ.
"ನನಗೆ ಸಾಧ್ಯವಿಲ್ಲ ರೀ. ನಿಮ್ಮ ಈ ಒರಟುತನ, ಈ ಸಿಟ್ಟು, ಈ ಧ್ವನಿ... ಈ ಮನದ ಪ್ರತಿಯೊಂದು ಕಣಕಣವೂ ನಿಮ್ಮ ನೆನಪಿನಿಂದ ತುಂಬಿದೆ. ನಿಮ್ಮನ್ನು ಬಿಟ್ಟಿರಲು ನನಗೆ ಸಾಧ್ಯವೇ ಇಲ್ಲ. ನನ್ನ ತನಮನಗಳಲ್ಲಿ ನೀವೇ ತುಂಬಿದ್ದೀರಿ. ನನ್ನ ಮನೆಯವರು ಇನ್ನು ಮುಂದೆ ನನ್ನನ್ನು ಹುಡುಕಿಕೊಂಡು ಬರಲ್ಲ ಎಂದಿದ್ದಾರೆ.
'ಇನ್ನೆಂದೂ ಅಲ್ಲಿಗೆ ಬರಲಾರೆ' ಎಂದು ಹೇಳಿ ಆ ಮನೆಯಿಂದ ಹೊರ ಬಂದೆ ನಾನು. ಈಗ ನಾನು ಪೂರ್ತಿಯಾಗಿ ನಿಮ್ಮವಳೇ. ನಿಮಗೆ ಬೇಕಾದ್ರೆ ನನ್ನನ್ನು ಹೊಡೆಯಿರಿ, ಬೈಯಿರಿ... ಆದರೆ ನಿಮ್ಮ ಪಕ್ಕದಲ್ಲೇ ಇರಲು ಬಿಡಿ. ನಿಮ್ಮನ್ನು ಬಿಟ್ಟರೆ ನಾನು ಬರಿ ಶೂನ್ಯ. ನಿಮ್ಮನ್ನು ಬಿಟ್ಟು ನನಗೊಂದು ಬದುಕೇ ಇಲ್ಲ. ಯಾಕೆಂದರೆ ನಾನು ಎಂದೆಂದೂ ನಿಮ್ಮವಳು " ಹೇಳುತ್ತಾ ನನ್ನೆದೆಯಲ್ಲಿ ಮುಖವಿರಿಸಿ ಕಣ್ಣೀರು ಸುರಿಸಿದಳು. ಅವಳ ಆ ಮಾತುಗಳು ನನ್ನ ಹೃದಯವನ್ನು ಭಾರವಾಗಿಸಿತು.
ಅದೆಷ್ಟು ವಿಶಾಲ ಹೃದಯ ಇವಳದ್ದು!
ನಾನು ಅಷ್ಟು ಅವಮಾನ ಮಾಡಿದರೂ, ಬೈದರೂ, ಕೇವಲ ನನ್ನ ಪ್ರೀತಿಯನ್ನು ಮಾತ್ರ ನೆನಪಿಟ್ಟುಕೊಂಡು ತವರು ಮನೆಯ ಸಿರಿತನವನ್ನು ಬಿಟ್ಟು ನನ್ನಂತಹ ಬಡವನ ಬಳಿಗೆ ಮರಳಿ ಬಂದಿದ್ದಾಳೆ.
ಅವಳನ್ನು ಎದೆಯಂತರಾಳದಿಂದ ಉಕ್ಕಿಬಂದ ಪ್ರೀತಿಯ ಭಾವ ತುಂಬಿಕೊಂಡು ಬಿಗಿಯಾಗಿ ಅಪ್ಪಿಕೊಂಡೆ. ಅವಳ ಕಂಗಳ ಮೇಲೆ ಮುತ್ತಿಡುತ್ತಾ, ನನ್ನ ಕಣ್ಣೀರನ್ನು ಮರೆಸಿದೆ. ಆದರೂ ಅವಳು ಅದನ್ನು ಗುರುತಿಸಿದಳು. ಅವಳ ಕೈಗಳು ನನ್ನ ಕಂಬನಿಯನ್ನು ಮೃದುವಾಗಿ ಒರೆಸಿದಾಗ ನಾನು ಸಂಪೂರ್ಣ ಸೋತು ಹೋಗಿದ್ದೆ ಆ ಪ್ರೀತಿಗೆ.
'ಈ ಪ್ರಪಂಚವೇ ಉರುಳಿದರೂ, ನನ್ನನ್ನು ಇಷ್ಟೊಂದು ಪ್ರೀತಿಸುವ ಈ ಜೀವಕ್ಕೆ ನಾನು ಇನ್ನೆಂದೂ ನೋವು ಕೊಡಲಾರೆ. ಒಂದು ಸಣ್ಣ ಮುನಿಸು ಕೂಡ ನಮ್ಮ ಮಧ್ಯೆ ಬಾರದಂತೆ ಕಣ್ಣಿನ ರೆಪ್ಪೆಯಂತೆ ನಾನು ಅವಳನ್ನು ಕಾಯುತ್ತೇನೆ' ಎಂದು ಮನದಲ್ಲೇ ಪ್ರತಿಜ್ಞೆ ಮಾಡಿದೆ. ಒಲವೆಂಬ ಕಾಮನಬಿಲ್ಲಿನಲ್ಲಿ ಅಡಗಿರುವ ಪ್ರೀತಿಯ ರಂಗು ನಮ್ಮ ಬದುಕಿನ ಹಾದಿಗೆ ರಂಗವಲ್ಲಿಯ ಚಿತ್ತಾರ ಬಿಡಿಸುತ್ತಿತ್ತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


