ಯುಗಾದಿ ಕೇವಲ ಹಬ್ಬವಲ್ಲ, ಪ್ರಕೃತಿಯೇ ನಳನಳಿಸಿ ಸಂಭ್ರಮಿಸುವ ಪರ್ವಕಾಲ

Upayuktha
0


ಹಿಂದೂ ಸನಾತನ ಧರ್ಮವು ಅತ್ಯಂತ ಪ್ರಾಚೀನ ಧರ್ಮವಾಗಿದೆ, ಹಾಗೂ ಅತ್ಯಂತ ಶ್ರೀಮಂತ ಸಂಪ್ರದಾಯಗಳನ್ನು ಹೊಂದಿದೆ. ಅದಕ್ಕಾಗಿಯೇ ಈ ಧರ್ಮದಲ್ಲಿ ವ್ರತ ಮತ್ತು ಹಬ್ಬಗಳು ಜಾತ್ರೆಗಳು ಇತ್ಯಾದಿಗಳು ಹೆಚ್ಚು. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಆಚರಣೆ, ಪದ್ಧತಿ ಇದ್ದರೂ ಕೆಲವು ಹಬ್ಬಗಳು ಅನೇಕ ವಿಶಿಷ್ಠತೆಯನ್ನು ಹೊಂದಿರುತ್ತವೆ, ಅವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಂತಹ ವಿಶಿಷ್ಟ ಪೂರ್ಣ ಹಬ್ಬಗಳಲ್ಲಿ ಯುಗಾದಿ ಕೂಡ ಒಂದು.


ಯುಗಾದಿ (ಯುಗ+ಆದಿ) ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯಮಿಯಂದು ಆಚರಿಸಲಾಗುವ ಹಿಂದೂಗಳ ಹೊಸ ವರ್ಷವಾಗಿದೆ. ಇದು ವಸಂತ ಋತುವಿನ ಆರಂಭ ಮತ್ತು ಪ್ರಕೃತಿಯ ನವೋಲ್ಲಾಸವನ್ನು ಸಂಕೇತಿಸುತ್ತದೆ. ಬೇವು-ಬೆಲ್ಲ ಸೇವನೆ, ಹೊಸ ಪಂಚಾಂಗದ ಪೂಜೆ, ಮನೆಗೆ ಮಾವಿನ ತೋರಣ ಕಟ್ಟಿ, ಹೋಳಿಗೆ-ಪಾಯಸದೂಟ ಮಾಡಿ ಸಂಭ್ರಮಿಸಲಾಗುತ್ತದೆ.


ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶದೊಂದಿಗೆ ಬೇವಿನ ಎಲೆ ಮತ್ತು ಬೆಲ್ಲವನ್ನು ಸೇವಿಸಲಾಗುತ್ತದೆ. ಇದು ಆರೋಗ್ಯ ಮತ್ತು ಸಮೃದ್ಧಿಯ ಸಂಕೇತ ಹೌದು. ದೀಪಾವಳಿಯಂತೆ ಯುಗಾದಿ ದಿನ ಕೂಡ ಮುಂಜಾನೆ ಎಣ್ಣೆ ಸ್ನಾನ ಮಾಡುವುದು ಶುಭ ಎಂದು ನಂಬಲಾಗಿದೆ. ಕೆಲವು ಭಾಗಗಳಲ್ಲಿ ಈ ಪದ್ದತಿಯನ್ನೂ ಕಾಣಬಹುದು. ಈ ದಿನ ವಿಶೇಷವಾಗಿ ಹೊಸ ವರ್ಷದ ಫಲಿತಾಂಶಗಳನ್ನು, ಮಳೆ, ಬೆಳೆ ಮತ್ತು ರಾಶಿ ಭವಿಷ್ಯವನ್ನು ಪಂಡಿತರಿಂದ ಕೇಳುವುದು ರೂಡಿಯಲ್ಲಿದೆ. ಈ ದಿನ ಮನೆಗಳ ಬಾಗಿಲಿಗೆ ಮಾವಿನ ಎಲೆಗಳನ್ನು ತೋರಣವಾಗಿ ಕಟ್ಟಿ, ಮನೆ ಮುಂದೆ ಹೆಂಗಳೆಯರು ರಂಗೋಲಿ ಬಿಡಿಸಿ ಹೊಸದಿನವನ್ನು ಆಹ್ವಾನಿಸುತ್ತಾರೆ. ಹಬ್ವದ ಊಟದ ನಂತರ ಅನೇಕ ಕಡೆಗಳಲ್ಲಿ ಮನರಂಜನೆಗಾಗಿ ಜನಪದ ಆಟಗಳನ್ನು ಆಡಿ ಸಂಭ್ರಮಿಸುತ್ತಾರೆ. ಇತ್ತೀಚೆಗೆ ಇಂತಹ ಆಟಗಳು ಮಾಯವಾಗುತ್ತಿದೆ.


ಯುಗಾದಿ ಕನ್ನಡಿಗರು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರಿಗೆ ಅತ್ಯಂತ ಪ್ರಮುಖವಾದ ಹಿಂದೂ ಹೊಸ ವರ್ಷದ ಹಬ್ಬವಾಗಿದೆ.  ಈ ಭಾಗಗಳಲ್ಲಿ  ಜನರು ಮನೆ ದೇವರ ಪೂಜೆ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಿ ಹೊಸ ವರ್ಷಕ್ಕೆ ದೇವರ ಆಶೀರ್ವಾದ ಪಡೆಯುತ್ತಾರೆ.


ಈ ದಿನ ಅನೇಕ ಪೌರಾಣಿಕ ಮಹತ್ವದ ದಿನವೂ ಹೌದು. ಪುರಾಣಗಳ ಪ್ರಕಾರ, ಬ್ರಹ್ಮನು ಈ ದಿನದಂದು ಜಗತ್ತನ್ನು ಸೃಷ್ಟಿಸಿದನು ಎಂಬ ನಂಬಿಕೆ ಇದೆ. ಇದು ವಸಂತ ಋತುವಿನ ಆರಂಭ, ಪ್ರಕೃತಿಯ ನವಚೈತನ್ಯ ಮತ್ತು ಜೀವನದಲ್ಲಿ ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂದೇಶವನ್ನು ನೀಡುವ ಪವಿತ್ರ ದಿನವಾಗಿದೆ.


ಶ್ರೀರಾಮನು ಲಂಕೆಯ ಅಧಿಪತಿ ರಾವಣನನ್ನು ಸಂಹರಿಸಿ ಅಯೋಧ್ಯೆಗೆ ಮರಳಿ, ಪಟ್ಟಾಭಿಷಿಕ್ತನಾದ ದಿನವಿದು ಎಂದು ನಂಬಲಾಗಿದೆ. ಅಲ್ಲದೇ  ಭಗವಾನ್ ವಿಷ್ಣುವು 'ಮತ್ಸ್ಯಾವತಾರ' ಧರಿಸಿ ವೇದಗಳನ್ನು ರಕ್ಷಿಸಿದ ದಿನ ಮತ್ತು ಯುಗಗಳನ್ನು ಆರಂಭಿಸಿದ ದಿನವೆಂದು ಕರೆಯಲಾಗುತ್ತದೆ.


‌12ನೇ ಶತಮಾನದ ಭಾರತೀಯ ಶ್ರೇಷ್ಠ ಗಣಿತಜ್ಞ ಹಾಗೂ ಖಗೋಳಶಾಸ್ತ್ರಜ್ಞ ನಮ್ಮ ಕರ್ನಾಟಕದ ವಿಜಯಪುರದ ಭಾಸ್ಕರಾಚಾರ್ಯರು ಯುಗಾದಿಯ ಸೂರ್ಯೋದಯದಿಂದಲೇ ಹೊಸ ವರ್ಷ, ಹೊಸ ತಿಂಗಳು ಮತ್ತು ಹೊಸ ದಿನ ಆರಂಭವಾಗುತ್ತದೆ ಎಂದು ಲೆಕ್ಕಾಚಾರ ಹಾಕಿದ್ದರು ಎಂದು ಅನೇಕ ಐತಿಹ್ಯಗಳು ತಿಳಿಸಿಕೊಡುತ್ತದೆ.


ಒಟ್ಟಿನಲ್ಲಿ ಹೇಳುವುದಾದರೆ ಯುಗಾದಿಯು ಕೇವಲ ಹಬ್ಬವಲ್ಲ. ಪ್ರಕೃತಿಯಲ್ಲಿಯೇ ಹೊಸ ಚೈತನ್ಯ ತುಂಬಬಲ್ಲ, ಪ್ರಕೃತಿಯೇ ಹೊಸತನಕ್ಕಾಗಿ ಸಿದ್ದಗೊಳ್ಳುವ ಬಾಹ್ಯ ಮತ್ತು ಆಂತರಿಕ ಬದಲಾವಣೆಯ ಹಬ್ಬವಾಗಿದೆ. ಇದು ನಕಾರಾತ್ಮಕತೆಯನ್ನು ಹೋಗಲಾಡಿಸಿ, ಹೊಸ ಆಲೋಚನೆಗಳು ಮತ್ತು ಭರವಸೆಯೊಂದಿಗೆ ಜೀವನವನ್ನು ಪ್ರಾರಂಭಿಸಲು ಪ್ರೇರೇಪಿಸುತ್ತದೆ.




Post a Comment

0 Comments
Post a Comment (0)
To Top