ಅಂದು ಕಾಲೇಜಿನಲ್ಲಿ ತರಗತಿಗಳನ್ನು ಬೇಗನೆ ಮುಗಿಸಿಕೊಂಡು ಹೊರಟೆ. ಸ್ವಲ್ಪ ಮುಂಚಿತವಾಗಿ ಬಂದರೂ, ಬಸ್ ಮಾತ್ರ ತಡವಾಗಿ ಬಂದು ಕಾಯಿಸಿತು. ಬಸ್ ಸ್ಟ್ಯಾಂಡ್‌ನಲ್ಲಿ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ನಿಂತುಕೊಂಡೇ ಮೊಬೈಲ್‌ನಲ್ಲಿ ಸಮಯ ಕಳೆಯುತ್ತಿದ್ದೆ. ನಿಧಾನವಾಗಿ ಅಲ್ಲಿಗೆ ಬರುವ ಸಹಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು.
ಇದಾಗಿಯೇ ಒಂದು ರಿಕ್ಷಾ ಬಂದು ನಿಂತಿತು. ಅದರಿಂದ ಒಂದು ಪುಟ್ಟ ಮಗು, ಅದರ ತಾಯಿ ಹಾಗೂ ಆಕೆಯ ಗೆಳತಿ - ಒಟ್ಟು ಮೂವರು ಇಳಿದರು. ಮಗುವಿಗೆ ನಾಲ್ಕರಿಂದ ಐದು ವರ್ಷ ವಯಸ್ಸಿರಬಹುದು. ಅವರ ದಿರಿಸು ನೋಡಿದರೆ ಯಾವುದೋ ಸಮಾರಂಭದಿಂದ ಬಂದವರಂತೆ ಕಾಣುತ್ತಿದ್ದರು.
ಆ ಇಬ್ಬರು ಮಹಿಳೆಯರು ಮಾತನಾಡುತ್ತಿರಲಾಗಿ, ಆ ಪುಟ್ಟ ಮಗು ಎದುರಿನಿಂದ ಸಾಗುತ್ತಿದ್ದ ಬಸ್ಸಿನ ಮೇಲೆ ಬರೆದಿದ್ದನ್ನು ನೋಡಿ ಕುತೂಹಲದಿಂದ ತನ್ನ ತಾಯಿಯನ್ನು ಕೇಳಿತು:
“ಅಮ್ಮ, ಅಲ್ಲಿ ಅದರ ಮೇಲೆ ಬರೆದಿರುವುದು ಏನಮ್ಮ?” ತಾಯಿ ಶಾಂತವಾಗಿ ಉತ್ತರಿಸಿದರು: “ಅದು ಕೆ.ಎಸ್.ಆರ್.ಟಿ.ಸಿ.”
ಆ ಕ್ಷಣ ನನಗೆ ತುಂಬ ಖುಷಿಯಾಯಿತು. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ‘ತಾಯಿಯೇ ಮೊದಲ ಗುರು’ ಎಂಬ ಮಾತು ಇನ್ನೂ ಜೀವಂತವಾಗಿದೆಯೆಂದು ಭಾಸವಾಯಿತು. ಆದರೆ ಆ ಖುಷಿ ಹೆಚ್ಚು ಹೊತ್ತಿಗೆ ಉಳಿಯಲಿಲ್ಲ.
ತಕ್ಷಣವೇ ಆ ತಾಯಿ ತನ್ನ ಗೆಳತಿಯತ್ತ ಒಂದು ಬಾರಿ ನೋಡಿ, ಮಗುವಿಗೆ, “ನಿನಗೆ ಅಷ್ಟು ಗೊತ್ತಿಲ್ಲವಾ? ಅದನ್ನು ಓದೋಕೆ ಬರಲ್ವಾ?” ಎಂದು ಗದರಿಸಿದರು.
ಆ ಕ್ಷಣ ನನಗೆ ಒಂದು ವಿಚಾರ ಸ್ಪಷ್ಟವಾಯಿತು. ಹಿಂದಿನ ಕಾಲದಲ್ಲಿ ಪೋಷಕರಿಗೆ ಹೆಚ್ಚಿನ ವಿಷಯಗಳ ಅರಿವು ಇರದ ಕಾರಣ, ಮಕ್ಕಳು ಪ್ರಶ್ನೆ ಕೇಳಿದರೆ ಗೊತ್ತಿಲ್ಲದೆ ಬೈದು ಸುಮ್ಮನಿರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಪೋಷಕರು ವಿದ್ಯಾವಂತರಾಗಿದ್ದಾರೆ, ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವೂ ಇದೆ. ಆದರೂ, ಕೆಲವೊಮ್ಮೆ ಬೇರೆಯವರ ಮುಂದೆ ತಮ್ಮ ಮಕ್ಕಳನ್ನು ‘ಶ್ರೇಷ್ಠ’ ಎಂದು ತೋರಿಸಲು ಹೋಗಿ, ಅವರ ಸಹಜ ಕಲಿಕೆಯ ಪ್ರಕ್ರಿಯೆಯನ್ನೇ ಅಡ್ಡಿಪಡಿಸುತ್ತಾರೆ.
ಅಷ್ಟಕ್ಕೂ ಆ ಮಗುವಿಗೆ ಐದು ವರ್ಷಕ್ಕೂ ಕಡಿಮೆ ವಯಸ್ಸು. ಇಂತಹ ವಯಸ್ಸಿನಲ್ಲಿ ಏನಾದರೂ ಮರೆಯುವುದು, ಅಥವಾ ಹೊಸದಾಗಿ ಕಂಡದ್ದನ್ನು ಕುತೂಹಲದಿಂದ ಕೇಳಿ ತಿಳಿದುಕೊಳ್ಳುವುದು — ಇದು ಸಹಜ. ಪ್ರಶ್ನೆ ಕೇಳುವುದು ದುರ್ಬಲತೆ ಅಲ್ಲ; ಅದು ಕಲಿಕೆಯ ಮೊದಲ ಹೆಜ್ಜೆ.
ನಿಜವಾಗಿ ನೋಡಿದರೆ, ಕಲಿಕೆಯ ಅಸಲಿ ಸ್ವರೂಪವೇ ಇದು-
ತಪ್ಪುಮಾಡುವುದು, ಎಡವುವುದು, ಮತ್ತೆ ಪ್ರಯತ್ನಿಸುವುದು, ಪ್ರಶ್ನೆ ಕೇಳುವುದು.
ಹಾಗಾದರೆ, ಎಡವಿದ ಮೇಲೆಯೇ ತಾನೇ ಕಲಿಯುವುದೇ ಕಲಿಕೆಯ ನಿಜವಾದ ಲಕ್ಷಣವಲ್ಲವೇ?
- ಪ್ರಿಯಾ ಶ್ರೀವಿಧಿ
ದ್ವಿತೀಯ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ, ಪುತ್ತೂರು
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


