ಕಥೆ: ಬದುಕಿನ ಬಿಂಬ

Upayuktha
0



- ಪ್ರಸನ್ನಾ ವಿ. ಚೆಕ್ಕೆಮನೆ


ಫೀಸಿಗೆ ಹೊರಡುವ ಮುನ್ನ ಪ್ರತಿ ದಿನದಂತೆ ಪ್ರೀತಿಯ ಮುದ್ರೆಯೊತ್ತಲು ​ಗೋಡೆಯ ಬಳಿ ಅವಳನ್ನು ನಿಲ್ಲಿಸಿ, ಅವಳ ಸುಂದರ ಮುಖದ ಹತ್ತಿರ ನನ್ನ ತುಟಿಗಳನ್ನು ಕೊಂಡೊಯ್ದಿದ್ದೆ. ​ಮದುವೆಯಾದ ಮೊದಲ ದಿನದಿಂದಲೂ ಇದು ನಮ್ಮಿಬ್ಬರ ನಡುವಿನ ಒಂದು ಪವಿತ್ರ ಆಚರಣೆ. ಬೆಳಗ್ಗೆ ಎದ್ದಾಗಿನಿಂದ ಅಡುಗೆ ಮಾಡುವುದು, ತಿಂಡಿ ಸಿದ್ಧಪಡಿಸುವುದು, ಮಕ್ಕಳನ್ನು ಶಾಲೆಗೆ ಕಳುಹಿಸುವ ಧಾವಂತದಲ್ಲಿ ಅವಳಿಗೆ ಉಸಿರಾಡಲು ಬಿಡುವಿಲ್ಲದ ಕೆಲಸ. ದಣಿವಿನಿಂದ ಅವಳ ಮುಖ ಬಾಡಿದಂತೆ ಕಂಡರೂ, ನಾನು ಆಫೀಸಿಗೆ ಹೊರಡುವ ಆ ಕ್ಷಣಕ್ಕಾಗಿ ಅವಳು ಕಾಯುತ್ತಿರುತ್ತಾಳೆ ಎಂಬುದು ನನಗೆ ಗೊತ್ತು.


ಅವಳು ಅಡುಗೆ ಮನೆಯಲ್ಲಿದ್ದರೂ ಸರಿಯೇ, ಕೈ ಹಿಡಿದು ನಮ್ಮ ಕೋಣೆಯ ಬಾಗಿಲಿನ ಗೋಡೆಯ ಬಳಿ ಕರೆತಂದು, ಮೆಲ್ಲನೆ ಒರಗಿಸಿ ನಿಲ್ಲಿಸುತ್ತೇನೆ. ನಂತರ ಅವಳ ಹಣೆಯ ಮೇಲೆ ನನ್ನ ತುಟಿಗಳಿಂದ ಪ್ರೀತಿಯ ಮುದ್ರೆಯೊತ್ತುತ್ತೇನೆ. ಆ ಒಂದು ಕ್ಷಣದಲ್ಲಿ ಅವಳ ಇಡೀ ದಿನದ ದಣಿವು ಮಾಯವಾಗಿ ಮುಖದಲ್ಲಿ ಹೊಸ ಚೈತನ್ಯ ಮೂಡುತ್ತದೆ. ನನಗಂತೂ ಇಡೀ ದಿನ ಆಫೀಸಿನ ಒತ್ತಡದ ನಡುವೆ ಕೆಲಸ ಮಾಡಲು ಅದು ಒಂದು ಶಕ್ತಿವರ್ಧಕ ಟಾನಿಕಿನಂತೆ ಕೆಲಸ ಮಾಡುತ್ತದೆ. 


ಇಂದೂ ಹಾಗೆಯೇ.. ಎಂದಿನಂತೆ ನಾನು ಆಫೀಸಿಗೆ ಹೊರಡುವ ಮುನ್ನ ಅವಳನ್ನು ಬಳಸಿ ಹಿಡಿದುಕೊಂಡದ್ದಷ್ಟೇ. ಅವಳ ಕಣ್ಣುಗಳಲ್ಲಿ ನಾಚಿಕೆ ಮತ್ತು ಪ್ರೀತಿಯ ಮಿಶ್ರಣದ ಹೊಳಪು ಮೂಡಿತ್ತು. ನಮ್ಮ ಉಸಿರುಗಳು ಬೆರೆತು, ಆ ಮಧುರ ಸವಿಯ ಅನುಭೂತಿಯನ್ನು ಸವಿಯಲು ಮನಸ್ಸು ಸಿದ್ಧವಾಗುವಷ್ಟರಲ್ಲಿ, ಮನೆಯ 'ಕಾಲಿಂಗ್ ಬೆಲ್' ಶಬ್ದ ನಮ್ಮ ತಲ್ಲಣಕ್ಕೆ ಕಾರಣವಾಯಿತು.


​ಪ್ರಪಂಚವೇ ನಿಂತಂತಿದ್ದ ಆ ಸುಂದರ ಕ್ಷಣಕ್ಕೆ ತಣ್ಣೀರು ಸುರಿದಂತಾಯಿತು. ನನ್ನ ಮುಖದಲ್ಲಿ ಕಿರಿಕಿರಿ ಸ್ಪಷ್ಟವಾಗಿತ್ತು. ದಿನಚರಿಯ ಕೆಲಸಗಳಿಗೂ ಅಡ್ಡಿ ಬಂದರೆ ಸಿಟ್ಟು ಬರುವುದು ಸಹಜ, ಅದರಲ್ಲೂ ಇಂತಹ ಮಧುರ ಕ್ಷಣಗಳಿಗೆ ಅಡ್ಡಿಯಾಗುವುದನ್ನು ಯಾರಿಂದಾದರೂ ಸಹಿಸಲು ಸಾಧ್ಯವೇ ? 


ಆದರೂ ಮುಖದಲ್ಲಿ ಆ ಕಿರಿಕಿರಿ ತೋರಿಸದೆ ಬಾಗಿಲು ತೆಗೆದಾಗ, ಎದುರಿಗೆ ಒಬ್ಬ ಅಪರಿಚಿತ ವ್ಯಕ್ತಿ ನಿಂತಿದ್ದ. ಸಾಧಾರಣ ನನ್ನದೇ ವಯಸ್ಸಿನ ವ್ಯಕ್ತಿಯಾದರೂ ನನಗೆ ಅವನ ಪರಿಚಯವಿರಲಿಲ್ಲ. ಯಾರು ಎಂಬಂತೆ ಕುತೂಹಲದಿಂದ ಅವನ ಮುಖವನ್ನು ನೋಡಿದೆ ನನ್ನ ರಸಮಯ ಕ್ಷಣವನ್ನು ಹಾಳುಗೆಡವಿದ ವ್ಯಕ್ತಿ ಎಂಬ ಅಸಹನೆ ನನ್ನ ಮುಖದಲ್ಲಿ ತೇಲುತ್ತಿತ್ತೋ ಎಂದು ನನಗೆ ಅರಿವಾಗಲಿಲ್ಲ.


​"ವಿಜಯ್...?" ಅವನ ಧ್ವನಿಯಲ್ಲಿ ಅನಿಶ್ಚಿತತೆ ಇತ್ತು. ​"ಹೌದು, ನಾನು ವಿಜಯ್. ಹೇಳಿ, ಯಾರು ನೀವು?" ನನ್ನ ಧ್ವನಿಯಲ್ಲಿನ ಗಡಸುತನ ಅವನಿಗೆ ತಲುಪಿತು.


​ಅಷ್ಟರಲ್ಲೇ "ಯಾರು ವಿಜಯ್?" ಎಂದು ಕೇಳುತ್ತಾ ಅಡುಗೆ ಮನೆಯಿಂದ ಶೋಭಾ ಹೊರಬಂದಳು. ಆಕೆ ಬಾಗಿಲ ಬಳಿ ಬಂದು ಆ ವ್ಯಕ್ತಿಯನ್ನು ನೋಡುತ್ತಿದ್ದಂತೆಯೇ, ಆಕೆಯ ಮುಖದ ಬಣ್ಣ ಬದಲಾಯಿತು. ಕಣ್ಣುಗಳಲ್ಲಿ ಭಯ, ಆತಂಕ ಮತ್ತು ಅರಿವಿಲ್ಲದೆಯೇ ತಲೆ ತಗ್ಗಿಸಿದ ಆಕೆಯ ರೀತಿ ಕಂಡಾಗ ಅವರಿಬ್ಬರಿಗೂ ಪರಿಚಯವಿದೆ ಎಂಬುದನ್ನು ನನ್ನ ಮನಸ್ಸು ದೃಢಪಡಿಸಿತು.


​"ನಿಮಗೆ ಪರಿಚಯವೇ?" ಎಂದು ನಾನು ಕೇಳಿದಾಗ, ಇಬ್ಬರೂ ಮೌನವಾಗಿದ್ದರು. ಕೊನೆಗೆ ಆ ವ್ಯಕ್ತಿ, "ಒಳಗೆ ಕುಳಿತು ಮಾತನಾಡೋಣವೇ?" ಎಂದ. ವಿಷಯ ಗಂಭೀರವಾಗಿದೆ ಎಂದು ಅರ್ಥವಾಯಿತು.


ಶೋಭಾ ಮೌನವಾಗಿ ಒಳಕೋಣೆಗೆ ಸರಿದಳು. ಅವನ ಮನಸ್ಸಿನಲ್ಲಿ ಯಾವುದೋ ತಳಮಳ ತಲ್ಲಣ ಅಡಗಿದೆ ಎಂದು ನನಗೆ ಅನಿಸಿತು. ಅವನು ನನ್ನಲ್ಲಿ ಮಾತನಾಡಲು ತುಂಬಾ ಸಂಕೋಚಪಡುತ್ತಿದ್ದ. ಹೇಗೆ ಆರಂಭಿಸಬೇಕು ಎಂದು ತಿಳಿಯದೆ ಅವನು ತೊಳಲಾಡುತ್ತಿದ್ದಾನೆ ಎಂದು ತಿಳಿದಾಗ ನಾನೇ ಮಾತಿಗಾರಂಭಿಸಿದೆ.

"ಹೇಳಿ, ಏನಾಗಬೇಕು?" ನಾನು ನೇರವಾಗಿ ಕೇಳಿದೆ. ಆದಷ್ಟು ಬೇಗನೆ ಅವನನ್ನು ಅಲ್ಲಿಂದ ಕಳುಹಿಸಿಬಿಡಬೇಕು ಎಂಬ ಧಾವಂತ ನನ್ನಲ್ಲಿ ಮನೆ ಮಾಡಿತ್ತು


​"ನನಗೆ ನಿಮ್ಮ ಹೆಂಡತಿಯ ಜೊತೆ ಮಾತನಾಡಬೇಕಿದೆ..." ಅವನ ಮಾತು ನನ್ನಲ್ಲಿ ಅನುಮಾನದ ಕಿಡಿ ಹೊತ್ತಿಸಿತು. 

'ನನ್ನ ಹೆಂಡತಿಯ ಹತ್ತಿರ ಇವನಿಗೇನು ಕೆಲಸ? ನನ್ನ ರಕ್ತ ಕುದಿಯತೊಡಗಿತು. 


"ಶೋಭಾ!" ಎಂದು ಗದರಿದಂತೆ ಕರೆದೆ. ಅವಳು ನಡುಗುತ್ತಲೇ ಹೊರಬಂದಳು.


​"ಈಗ ಹೇಳಿ, ನನ್ನ ಹೆಂಡತಿಗೆ ಏನು ಹೇಳಬೇಕಿದೆ?"


​ಆ ಕ್ಷಣ ನನ್ನ ಮನಸ್ಸಿನಲ್ಲಿ ಆಲೋಚನೆಗಳ ಸುನಾಮಿಯೇ ಎದ್ದಿತ್ತು. 'ಇವರ ನಡುವೆ ಏನಾದರೂ ಸಂಬಂಧ ಇದೆಯೇ? ಶೋಭಾ ನನ್ನನ್ನು ಮೋಸ ಮಾಡುತ್ತಿದ್ದಾಳೆಯೇ?' ಎಂಬ ಅನುಮಾನ ಮಾಡಿತು.


ಮದುವೆಯಾದಂದಿನಿಂದಲೂ ಅವಳಿಗೆ ಯಾವುದೇ ಕೊರತೆಯಾಗದಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿರುವ ನನಗೆ ಅವಳು ಮೋಸ ಮಾಡಬಹುದೇ? ಇಂದಿನ ದಿನಗಳಲ್ಲಿ ಪತ್ರಿಕೆಗಳಲ್ಲಿ ಬರುವ ಸುದ್ದಿಗಳನ್ನೆಲ್ಲ ನೋಡಿ ಅಭ್ಯಾಸವಾದ ನನ್ನ ಮನಸ್ಸು ಆ ರೀತಿಯಲ್ಲಿ ಯೋಚಿಸಿದ್ದು ತಪ್ಪಾಗಿರಲಿಲ್ಲ.


ಪಕ್ಕದ ಮೇಜಿನ ಮೇಲಿದ್ದ ಹಣ್ಣು ಕತ್ತರಿಸುವ ಚೂರಿಯ ಮೇಲೆ ನನ್ನ ನೋಟ ಸ್ಥಿರವಾಯಿತು. ನನ್ನ ಆತಂಕ ನಿಜವಾಗಿದ್ದರೆ... ನಾನು ಏನು ಮಾಡಬೇಕು? ಒಂದು ಕ್ಷಣಕ್ಕೆ ಜೀವವೇ ನಿಂತು ಹೋದಂತಾಯಿತು. ನನಗೆ ಸಾಧ್ಯವೇ ಯಾರನ್ನಾದರೂ ಕೊಲೆ ಮಾಡಲು? ಅಥವಾ ಆ ವ್ಯಕ್ತಿ ನನ್ನ ಕೊಲೆ ಮಾಡಬಹುದು ಎಂಬ ಭಯವು ಮೂಡಿತು ಇಂದಿನ ದಿನಗಳಲ್ಲಿ ನಮ್ಮ ನೆರಳನ್ನೇ ನಂಬುವಂತಿಲ್ಲ ಹಾಗಿರುವಾಗ ಯಾರನ್ನು ನಂಬಲಿ? ನನ್ನ ಮಾನಸಿಕ ತೊಳಲಾಟಗಳಿಗೆ ಮುಕ್ತಿ ನೀಡುವಂತೆ ಅವನು ಮಾತನಾಡಲಾರಂಭಿಸಿದ.


​"ನನ್ನ ಹೆಸರು ಅರವಿಂದ್. ಸುಜಾತಾಳ ಗಂಡ."


​ಆ ಹೆಸರು ಕೇಳುತ್ತಿದ್ದಂತೆ ನನ್ನ ಉಸಿರು ಸರಾಗವಾಯಿತು. ಸುಜಾತ' ಶೋಭಾಳ ಫ್ರೆಂಡ್. ಎಷ್ಟೋ ಬಾರಿ ಅವಳ ವಿಚಾರ ಶೋಭಾ ಹೇಳುವುದು ನನ್ನ ಗಮನಕ್ಕೆ ಬಂದಿದೆ. ಶೋಭಾ ಹೇಳಿದ ವಿಚಾರಗಳು ನೆನಪಿನಲ್ಲಿ ಇಲ್ಲದಿದ್ದರೂ ಸುಜಾತಾ ಎಂಬ ಹೆಸರು ನನ್ನ ಮನದಲ್ಲಿ ಇರುವ ಕಾರಣ ನನ್ನ ಆತಂಕ ಕಡಿಮೆಯಾಯಿತು.


ಸುಜಾತಾಳ ವಿಷಯವಾಗಿ ಶೋಭಾಳೊಂದಿಗೆ ಅರವಿಂದ್ ಮಾತನಾಡಲು ಬಂದಿದ್ದಾನೆ ಎಂಬುದು ಸ್ಪಷ್ಟವಾಯಿತು. "ಒಳಗೆ ಬನ್ನಿ ಇಲ್ಲಿ ಕುಳಿತುಕೊಂಡು ಮಾತನಾಡಬಹುದು ಎಂದು ಹೇಳಿದೆ. ಆದರೆ ಆತ ಒಳಗೆ ಬರಲಿಲ್ಲ. ಅಲ್ಲಿಯೇ ನಿಂತು  ಮಾತು ಮುಂದುವರಿಸಿದ, ಅವನ ಕಂಗಳಲ್ಲಿ ನೀರು ತುಂಬಿತ್ತು. 


"ನಮಸ್ತೆ ಸರ್, ಬೆಳಗಿನ ಹೊತ್ತಿನಲ್ಲಿ ನಿಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಲು ನಾನು ಬಂದಿದ್ದೇನೆ ಎಂದು ಭಾವಿಸಬೇಡಿ. ಯಾಕೆಂದರೆ ಇದು ನನ್ನ ಜೀವನದ ಪ್ರಶ್ನೆ. ನಾನು ದಿನಗೂಲಿ ನೌಕರ. ಬೆಳಗ್ಗೆ ಹೊರಟರೆ ಸಂಜೆ ಮನೆಗೆ ಬರುವುದು. ಬದುಕಿನ ಒತ್ತಡದಲ್ಲಿ ನನ್ನ ಹೆಂಡತಿಗೆ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಬಡತನವೇ ಹಾಸಿ ಹೊದ್ದುಕೊಂಡು ಬದುಕುವವರಿಗೆ ಪ್ರೀತಿಸಲು ಸ್ವಲ್ಪ ಕಷ್ಟವಾಗುತ್ತದೆ. ಯಾಕೆಂದರೆ ಜೀವನದ ಒಂದೊಂದು ಕರ್ತವ್ಯಗಳನ್ನು ಆದ್ಯತೆಯ ಮೇರೆಗೆ ನಿರ್ವಹಿಸಬೇಕಾಗುತ್ತದೆ. ನಿಮ್ಮ ಹೆಂಡತಿಯ ಸ್ನೇಹಕ್ಕೆ ಬಿದ್ದ ಮೇಲೆ ಸುಜಾತಾ ಸಂಪೂರ್ಣ ಬದಲಾಗಿದ್ದಾಳೆ. ಅವಳಿಗೀಗ ನನ್ನ ಮೇಲೆ ಮೊದಲಿನ ಪ್ರೀತಿಯಿಲ್ಲ, ಕೇವಲ ದೂರುಗಳಿವೆ. ಪ್ರತಿದಿನ ಅವಳು ನಿಮ್ಮ ಮನೆಯಲ್ಲಿ ನಡೆಯುವ ವಿಷಯಗಳನ್ನು ಹೇಳಿ, 'ವಿಜಯ್ ನೋಡಿ, ಅವರು ಶೋಭಾಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ, ನೀವು ಹಾಗೆ ಏಕೆ ಇಲ್ಲ?' ಎಂದು ಕೇಳುತ್ತಾಳೆ. ದಯವಿಟ್ಟು, ನಿಮ್ಮ ಬದುಕಿನ ವಿಷಯಗಳನ್ನು ಅವಳ ತಲೆಗೆ ತುಂಬಬೇಡಿ. ಮೊದಲು ಅವಳು ಹಾಗೆ ಇರಲಿಲ್ಲ. ಇತ್ತೀಚೆಗೆ ಅವಳು ಬದಲಾಗಿದ್ದು. ಹಾಗಾಗಿ ನಾನು ನಿಮ್ಮಲ್ಲಿ ಈ ವಿಚಾರವನ್ನು ಹೇಳಲು ಬಂದಿದ್ದು. ನಮಗೆ ನೆಮ್ಮದಿಯ ಬದುಕು ಬೇಕು" ​ಅವನ ಮಾತು ಕೇಳಿ ನನಗೆ ನಗು ಬಂತು. 


ಎಂತಹ ವಿಚಿತ್ರ ಪರಿಸ್ಥಿತಿ! ಶೋಭಾ ತನ್ನ ಸಂಸಾರದ ಖುಷಿಯನ್ನು ಹಂಚಿಕೊಳ್ಳಲು ಹೋಗಿ, ಇನ್ನೊಂದು ಸಂಸಾರದ ತಳಪಾಯವನ್ನೇ ಅಲ್ಲಾಡಿಸಿದ್ದಾಳೆ. ಪ್ರಪಂಚದಲ್ಲಿ ಹೀಗೂ ನಡೆಯಬಹುದಲ್ಲವೇ! ಜಾಲತಾಣಗಳ ಅಪರಿಮಿತ ಉಪಯೋಗದಲ್ಲಿ ಅದೆಷ್ಟು ಮಂದಿಯ ಬದುಕು ಹಾಳಾಗುತ್ತಿದೆ ಎಂದೆನಿಸಿತು ನನಗೆ.


​"ಅರವಿಂದ್, ಇವೆಲ್ಲವನ್ನೂ ನೀನು ಸುಜಾತಾ ಬಳಿಯೇ ಹೇಳಬೇಕಲ್ಲವೇ? ಇಲ್ಲಿ ಬಂದು ಹೇಳಿ ಏನು ಪ್ರಯೋಜನ?" ಎಂದೆ. ಅವನು ಆ ವಿಚಾರಗಳನ್ನೆಲ್ಲ ಇಲ್ಲಿ ಬಂದು ಯಾಕೆ ಹೇಳಿದ ಎಂದು ನನಗೂ ಅರ್ಥವಾಗಲಿಲ್ಲ.


​"ಅವಳಿಗೆ ನನ್ನ ಮಾತು ಅರ್ಥವಾಗುತ್ತಿಲ್ಲ. ನಿಮ್ಮ ಜೀವನ ಅವಳಿಗೆ ಒಂದು ಮಾದರಿಯಾಗಿದೆ. ಏನು ಹೇಳಿದರೂ ನಿಮ್ಮನ್ನೇ ಹೇಳುತ್ತಿದ್ದಾಳೆ. ನಿಮ್ಮನ್ನೇ ಅನುಸರಿಸಲು ಅವಳ ಒತ್ತಡ. ಆದರೆ ನಾನೇನು ಮಾಡಲಿ ಹೇಳಿ ? ನನ್ನ ಕೆಲಸದ ವಿಧಾನವೇ ಹಾಗೆ. ಅವಳನ್ನು ಪ್ರೀತಿಸುತ್ತಾ ನಾನು ಮನೆಯಲ್ಲಿ ಉಳಿದರೆ ನನ್ನ ಹೊಟ್ಟೆ ತುಂಬದು. ನಮಗೆ ವಾಹನವಿಲ್ಲ. ಬೆಳಗ್ಗೆ ಕೆಲಸದ ನಡುವೆ ಅವಳನ್ನು ಪ್ರೀತಿಸುತ್ತಾನೆ ಇದ್ದರೆ ನನಗೆ ಬಸ್ಸು ತಪ್ಪುತ್ತದೆ. ದಿನಗೂಲಿ ವೇತನವಾದ ಕಾರಣ ನಾನು ಅಲ್ಲಿ ತಲುಪುವಾಗ ತಡವಾದರೆ ಅರ್ಥ ದಿನದ ಸಂಬಳವೂ ನಷ್ಟವಾಗುತ್ತದೆ. ನಮ್ಮ ಬದುಕಿನ ರೀತಿಯೇ ಬೇರೆ. ನಿಮ್ಮಂತೆ ನಮಗೆ ಬದುಕಲು ಸಾಧ್ಯವಿಲ್ಲ. ನಮ್ಮದು, ನಿಮ್ಮದು ಎಂದಲ್ಲ, ಪ್ರಪಂಚದ ಪ್ರತಿಯೊಬ್ಬರ ಜೀವನ ವಿಧಾನವು ಬೇರೆ ಬೇರೆಯಲ್ಲವೇ? ಒಬ್ಬರಂತೆ ಒಬ್ಬರು ಬದುಕಲು ಖಂಡಿತ ಸಾಧ್ಯವಿಲ್ಲ ಎಂಬುದನ್ನು ಅವಳಿಗೆ ತಿಳಿಸಿ ಹೇಳುವುದೇ ನನಗೆ ಕಷ್ಟವಾಗುತ್ತಿದೆ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ದಯವಿಟ್ಟು ಶೋಭಾಗೆ ಹೇಳಿ, ನಮ್ಮ ಸಂಸಾರ ಹಾಳು ಮಾಡಬೇಡಿ ಎಂದು..." ಅರವಿಂದ್ ಕಣ್ಣೀರು ಒರೆಸಿಕೊಂಡು ಹೊರನಡೆದ. ಅವನು ಹೋಗುವಾಗಲೂ ಕಣ್ಣೀರು ಒರೆಸುವುದು ಕಂಡು ನನಗೆ ಅಯ್ಯೋ ಎಂದೆನಿಸಿತು. 


'ಜೀವನದಲ್ಲಿ ಹೀಗೂ ನಡೆಯಬಹುದಲ್ಲ' ಪ್ರಪಂಚ ಎಷ್ಟು ವಿಚಿತ್ರವಾಗಿದೆ, ಅವನಿಗೆ ಒಂದು ಲೋಟ ನೀರನ್ನು ಕೊಡಲಾಗಲಿಲ್ಲ ಎಂದು ಸಂಕೋಚ ಪಟ್ಟುಕೊಂಡು ​ಬಾಗಿಲು ಮುಚ್ಚಿ ಒಳಗೆ ತಿರುಗಿದರೆ ಮನೆಯಲ್ಲಿ ಸ್ಮಶಾನ ಮೌನ. ನಾನು ಶೋಭಾ ಕಡೆ ನೋಡಿದೆ. ಅವಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.


​"ಶೋಭಾ, ನಿನ್ನ ಆ ಇನ್‌ಸ್ಟಾಗ್ರಾಂ ಫೋಟೋಗಳು, ನಿನ್ನ ಆ ಫೋನ್ ಸಂಭಾಷಣೆಗಳು ಇನ್ನೊಬ್ಬರ ಪಾಲಿಗೆ ವಿಷವಾಗಿವೆ. ನಮ್ಮ ಬದುಕನ್ನು ನಾವು ಪ್ರೀತಿಸಬೇಕು, ಅದನ್ನು ಪ್ರದರ್ಶನಕ್ಕಿಡಬಾರದು. ಇನ್ನೊಬ್ಬರ ಬದುಕನ್ನು ನಕಲು ಮಾಡಹೊರಟರೆ, ತಮಗೆ ಸಿಗುವ ಸುಂದರ ಕ್ಷಣಗಳೂ ಮಾಯವಾಗುತ್ತವೆ. ಸುಜಾತಳ ಗಂಡ ಹೇಳಿದ ವಿಚಾರದ ಬಗ್ಗೆ ಯೋಚಿಸು ನೀನು" ಎಂದೆ.


​ಅವಳು ನನ್ನ ಹತ್ತಿರ ಬಂದು ಕೈ ಹಿಡಿದುಕೊಂಡಳು. "ಸುಜಾತಾಳಿಗೆ ಜೀವನದಲ್ಲಿ ಆಸೆಗಳೇ ಇರಲಿಲ್ಲ. ಅವಳು ಬಡವಳು, ಆದರೆ ಪ್ರೀತಿಗಾಗಿ ಹಪಹಪಿಸುತ್ತಿದ್ದಳು. ನಾನು ಅವಳಿಗೆ ಸ್ವಲ್ಪ ಸಾಂತ್ವನ ಹೇಳಲು ಹೋಗಿ, ನಮ್ಮ ಪ್ರೀತಿಯ ವಿಷಯಗಳನ್ನು ಹೇಳಿದೆ. ಇಷ್ಟು ದೊಡ್ಡ ರಾದ್ಧಾಂತವಾಗುತ್ತದೆ ಎಂದು ಗೊತ್ತಿರಲಿಲ್ಲ. ನೀವು ಬೆಳಗ್ಗೆ ಹೊರಡುವ ಮುನ್ನ ನನಗೆ ಹೀಗೆ ಪ್ರೀತಿಯ ಉಡುಗೊರೆ ಕೊಡುತ್ತೀರಿ' ಎಂದು ಹೇಳಿದೆ. ಅದು ತಪ್ಪೇ?, ನಮ್ಮ ಬದುಕಿನಲ್ಲಿ ನಾವು ಪಾಲಿಸುತ್ತಿರುವ ಪ್ರೀತಿಯ ನಿಯಮಗಳು ತಪ್ಪಾಗಬಹುದು ಎಂದು ನನಗೆ ತಿಳಿದಿರಲಿಲ್ಲ. ಖಂಡಿತ ಇನ್ನು ಮುಂದೆ ನಾನು ಯಾರಿಗೂ ಇಂತಹ ಸಲಹೆ ಕೊಡಲು ಹೋಗುವುದಿಲ್ಲ. ನನ್ನನ್ನು ಕ್ಷಮಿಸಿ" ಎಂದು ಕ್ಷಮೆ ಕೇಳಿದಾಗ ನನಗೆ ಅವಳ ಮೇಲಿದ್ದ ಕೋಪ ಮಾಯವಾಯಿತು.


ಅವಳ ಮನಸ್ಸು ನನಗಲ್ಲದೆ ಬೇರೆ ಯಾರಿಗೆ ತಾನೇ ಇಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯ, ಅವಳ ನೋವು ಅರ್ಥವಾದಾಗ ಅವಳ ಮುಖವನ್ನು ನನ್ನ ಬೊಗಸೆಯಲ್ಲಿ ತುಂಬಿಕೊಂಡು ಆ ಕಣ್ಣೀರು ಒರೆಸಿದೆ. ಅವಳು ನನ್ನ ಕೈಗಳಿಗೆ ತನ್ನ ಕೆನ್ನೆಯನ್ನು ಒತ್ತಿಕೊಂಡಳು. ಆ ಹಳೆಯ ಬೆಚ್ಚಗಿನ ಅನುಭವ ಮತ್ತೆ ಮರುಕಳಿಸಿತು.


'​ನಾವು ಮಾನವರು, ಬದುಕು ನಮಗೆ ಸಿಕ್ಕ ಸುಂದರ ಉಡುಗೊರೆ. ಅದನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುತ್ತಾ ಹಾಳು ಮಾಡಿಕೊಳ್ಳುವುದಕ್ಕಿಂತ, ನಮ್ಮ ಕೈಯಲ್ಲಿರುವ ಪ್ರೀತಿಯನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಧನೆ. ಹಾಗಾಗಿ ಶೋಭಾಗೆ ನಾನೇನು ಹೇಳಲಿಲ್ಲ. ಸುಜಾತಳ ವಿಷಯವನ್ನು ನಮ್ಮ ನಡುವೆ ಎಳೆದು ತಂದು ನಮ್ಮ ಬದುಕಿನ ಸಂತಸವನ್ನು ಹಾಳು ಮಾಡಲು ನನಗೆ ಇಷ್ಟವಿರಲಿಲ್ಲ. ಶೋಭಾಗೆ ಅರ್ಥವಾಗಿದೆ ಎಂದು ನನಗೆ ತಿಳಿದಿತ್ತು. ನಾನು ಅವಳನ್ನು ಮತ್ತೆ ಆ ಗೋಡೆಯ ಬಳಿ ಕರೆದೊಯ್ದೆ. ಸ್ವಲ್ಪ ಮೊದಲು ಆ ಕಾಲಿಂಗ್ ಬೆಲ್ ತಡೆದಿದ್ದ ಮುತ್ತಿನ ಉಡುಗೊರೆ ಈಗ ಸಂದಾಯವಾಗುತ್ತಿತ್ತು.


​ಬದುಕು ಒಂದು ಪಾಠ, ಅದನ್ನು ಅರ್ಥಮಾಡಿಕೊಂಡವರಿಗೆ ಮಾತ್ರ ಸಂತೋಷದ ಕ್ಷಣಗಳನ್ನು ಅನುಭವಿಸಲು ಸಾಧ್ಯ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top