ಶ್ರೀ ಸುಧೀಂದ್ರ ತೀರ್ಥ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ– ವೃಂದಾವನದಲ್ಲಿ ವಿಶೇಷ ಪೂಜೆ

Upayuktha
0


ಉಡುಪಿ: ಶ್ರೀಪುತ್ತಿಗೆ ಮಠದ ಪರಮಪೂಜ್ಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಗುರುಗಳಾದ, ಅಭಿನವ ಋಷ್ಯಶೃಂಗ, ಅಕ್ಷರಕೋಟಿ ಕೃಷ್ಣಮಂತ್ರೋಪಾಸಕ, ಯತಿಕುಲ ಚಕ್ರವರ್ತಿ, ತಪಶ್ಚಕ್ರವರ್ತಿ ಮೊದಲಾದ ಅನೇಕ ಬಿರುದಾಂಕಿತ ಶತಾಯುಷಿ ಅನಂತಶ್ರೀ ವಿಭೂಷಿತ ಪರಮಪೂಜ್ಯ ಶ್ರೀ ಸುಧೀಂದ್ರ ತೀರ್ಥ ಮಹಾಸ್ವಾಮಿಗಳ ಆರಾಧನಾ ಮಹೋತ್ಸವವು ಭಕ್ತಿಭಾವಪೂರ್ಣವಾಗಿ ನೆರವೇರಿತು.


ಈ ಪ್ರಯುಕ್ತ ಉಡುಪಿಯ ಶ್ರೀಕೃಷ್ಣ ಮಠದ ಸಮುಚ್ಚಯದಲ್ಲಿರುವ ಶ್ರೀ ಸುಧೀಂದ್ರ ತೀರ್ಥ ಮಹಾಸ್ವಾಮಿಗಳ ವೃಂದಾವನದಲ್ಲಿ ವಿಶೇಷ ಪೂಜೆ ನಡೆಯಿತು. ಶ್ರೀಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಪ್ರಸ್ತುತ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಶೀರೂರು ಮಠದ ಶ್ರೀಪಾದರು ವೃಂದಾವನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗುರುಸ್ಮರಣೆ ಮಾಡಿದರು.


ಶ್ರೀಮದಾಚಾರ್ಯರ ಸನ್ಯಾಸಿ ಶಿಷ್ಯವರ್ಗದಲ್ಲಿ ದೃಢಕಾಯರೆಂದು ಪ್ರಸಿದ್ಧರಾದ ಮಹಾಜ್ಞಾನಿಗಳಾದ ಶ್ರೀಮದುಪೇಂದ್ರತೀರ್ಥರ ಪೀಠವಾದ ಶ್ರೀಪುತ್ತಿಗೆ ಮಠದ ಯತಿಪರಂಪರೆಯಲ್ಲಿ ಮಾತ್ರವಲ್ಲದೆ ಉಡುಪಿಯ ಅಷ್ಟಮಠಗಳ ಯತಿಸಂತತಿಯಲ್ಲಿ ವಿಶಿಷ್ಟ ಸ್ಥಾನ ಪಡೆದ ಮಹಾತಪಸ್ವಿವರೇಣ್ಯರಾದ ಶ್ರೀ ಸುಧೀಂದ್ರ ತೀರ್ಥ ಮಹಾಸ್ವಾಮಿಗಳು ಭಕ್ತರಲ್ಲಿ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ.


ಶಾಪಾನುಗ್ರಹ ಸಮರ್ಥರಾಗಿದ್ದ ಈ ಮಹಾನ್ ಯತಿಶ್ರೇಷ್ಠರು ಶ್ರೀಕೃಷ್ಣ ದೇವರನ್ನು ಸನಕಾದಿ ಮುನಿಗಳು ಪೂಜಿಸುವುದನ್ನು ಸಾಕ್ಷಾತ್ತಾಗಿ ಕಂಡು, ಅವರ ಅನುಗ್ರಹದಿಂದ ಶ್ರೀಕೃಷ್ಣ ಸಾಕ್ಷಾತ್ಕಾರವನ್ನು ಪಡೆದವರು ಎಂಬ ಪಾರಂಪರಿಕ ನಂಬಿಕೆ ಇದೆ. ಶತಾಯುಷಿಗಳಾಗಿ ನಾಲ್ಕು ಬಾರಿ ಶ್ರೀಕೃಷ್ಣ ಪೂಜೆಯನ್ನು ನೆರವೇರಿಸಿದ ಮಹಾಸ್ವಾಮಿಗಳು ವೃಂದಾವನಸ್ಥರಾದ ನಂತರವೂ ಭಕ್ತರಿಗೆ ಅನುಗ್ರಹ ನೀಡುತ್ತಿರುವ ಮಹಾಕರುಣಾಳುಗಳೆಂದು ಭಕ್ತರು ಭಾವಿಸುತ್ತಾರೆ.


ಋಷ್ಯಶೃಂಗ ಮಹರ್ಷಿಗಳ ಅವತಾರರೆಂದು ಪ್ರಸಿದ್ಧರಾದ ಈ ಮಹನೀಯರ ಆರಾಧನಾ ಪರ್ವದ ಸಂದರ್ಭದಲ್ಲಿ ಅವರ ಅಂತರ್ಯಾಮಿಯಾದ ಭಗವಂತನ ಚರಣಕಮಲಗಳಿಗೆ ಭಕ್ತರು ಅನಂತ ನಮನಗಳನ್ನು ಸಲ್ಲಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top