ಬೆಂಗಳೂರು: ರಾಜಧಾನಿಯ ಹಳೆಯ ಬಡಾವಣೆಗಳಲ್ಲಿ ಒಂದಾದ ತ್ಯಾಗರಾಜನಗರದಲ್ಲಿ ಅಧ್ಯಾತ್ಮಿಕ ಕಂಪನ್ನು ಪಸರಿಸುತ್ತಿರುವ ಶ್ರೀ ಅಭಯ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ (ಶ್ರೀವಜ್ರಕ್ಷೇತ್ರ), ಮಾಚ್ 27ರ ಶ್ರೀ ರಾಮನವಮಿಯಂದು ಅತ್ಯಂತ ಅಪರೂಪದ ಹಾಗೂ ವೈಶಿಷ್ಟ್ಯಪೂರ್ಣ ‘ಪುಷ್ಪಯಾಗ’ ನೆರವೇರಲಿದೆ. ಸುಮಾರು 150 ವರ್ಷಗಳ ಇತಿಹಾಸವಿರುವ ಈ ಪುಣ್ಯಕ್ಷೇತ್ರದಲ್ಲಿ ದಶಕಗಳಿಂದಲೂ ಈ ಸಂಪ್ರದಾಯವನ್ನು ಭಕ್ತಿಭಾವದಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಏನಿದು ಪುಷ್ಪಯಾಗ? ಇದರ ಅಧ್ಯಾತ್ಮಿಕ ಮಹತ್ವವೇನು?
ನಮ್ಮ ಬದುಕಿನ ಸಂಕಲ್ಪಗಳು ಹೂವಿನ ಹಾರ ಎತ್ತಿದಷ್ಟೇ ಸುಲಭವಾಗಿ ಸಿದ್ಧಿಸಲಿ ಎಂಬ ಹಾರೈಕೆಯೊಂದಿಗೆ ಭಗವಂತನಿಗೆ ಪುಷ್ಪಗಳನ್ನು ಅರ್ಪಿಸುವುದು ಈ ಯಾಗದ ಮೂಲ ಉದ್ದೇಶ. ಪುಷ್ಪಯಾಗವೆಂದರೆ ಇಲ್ಲಿ ಅಗ್ನಿ ಕುಂಡಕ್ಕೆ ಹೂವುಗಳನ್ನು ಅರ್ಪಿಸುವುದಲ್ಲ; ಬದಲಾಗಿ ಮಂತ್ರಪೂರ್ವಕವಾಗಿ ವಿವಿಧ ಬಗೆಯ ಪರಿಮಳಯುಕ್ತ ಪುಷ್ಪಗಳನ್ನು ಭಗವಂತನಿಗೆ ಸಮರ್ಪಿಸುವ ಒಂದು ವಿಶಿಷ್ಟ ಯಜ್ಞವಿದು.
ಜಗನ್ನಾಥದಾಸರ ‘ಹರಿಕಥಾಮೃತಸಾರಾ’ ಕೃತಿಯಲ್ಲಿ ಉಲ್ಲೇಖಿಸಿರುವಂತೆ, ವಿಭಿನ್ನ ಪುಷ್ಪಗಳಲ್ಲಿ ಬೇರೆ ಬೇರೆ ದೇವತೆಗಳು ವಾಸಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೇದಗೆ, ಮಲ್ಲಿಗೆ, ಗುಲಾಬಿ, ತುಳಸಿ, ಸೇವಂತಿಗೆ ಸೇರಿದಂತೆ ಅಸಂಖ್ಯಾತ ಸುಗಂಧ ಭರಿತ ಪುಷ್ಪಗಳಿಂದ ಪಟ್ಟಾಭಿರಾಮನಿಗೆ ಅರ್ಚನೆ ಮಾಡಲಾಗುತ್ತದೆ. ಭಕ್ತಿಯಿಂದ ಅರ್ಪಿಸುವ ಒಂದೊಂದು ಪುಷ್ಪವೂ ಸುವರ್ಣ ಪುಷ್ಪಕ್ಕೆ ಸಮಾನ ಎಂಬ ನಂಬಿಕೆ ಇಲ್ಲಿದೆ.
ಪೂಜಾ ವಿವರ ಮತ್ತು ಸ್ಥಳ
ದಿನಾಂಕ: 27-03-2026 (ಶ್ರೀ ರಾಮನವಮಿ).
ಸ್ಥಳ: ಶ್ರೀ ಅಭಯ ಲಕ್ಷ್ಮೀನರಸಿಂಹ ಶ್ರೀ ಪಟ್ಟಾಭಿರಾಮ ದೇವಸ್ಥಾನ, #152/1, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು.
ವಿಶೇಷತೆ: ಐದು ಬಣ್ಣಗಳ ಹೂವಿನ ರಾಶಿಯಿಂದ ಪಟ್ಟಾಭಿರಾಮನಿಗೆ ಪೂಜೆ ಮತ್ತು ಪುಷ್ಪ ಸಮರ್ಪಣೆ.
ದೇವರಿಗೆ ಪುಷ್ಪಮಾಲೆ ಸಮರ್ಪಣೆಯ ವಿಶೇಷವೇನು?
ದೇವರಿಗೆ ಸಂಗೀತದ ಮೂಲಕ ಅರ್ಚನೆ ಮಾಡುವ ಪದ್ಧತಿ ಹಿಂದೆ ಇತ್ತು. ವರ್ಣ, ಅಲಂಕಾರ, ಮಾಲೆ ಅಂತೆಲ್ಲ ನೀವು ಕೇಳಿರಬಹುದು. ಆದರೆ ಬರಬರುತ್ತಾ ಎಲ್ಲರಿಗೂ ಅದನ್ನು ಮಾಡುವುದು ಕಷ್ಟ ಎಂಬ ನಿಟ್ಟಿನಲ್ಲಿ ಪುಷ್ಪಮಾಲೆಯ ಅಲಂಕಾರ ಮಾಡುವ ಪದ್ಧತಿ ಜಾರಿಗೆ ಬಂತು. ಭಗವಂತನಿಗೆ ಪುಷ್ಪ ಅಲಂಕಾರ ವಿಶೇಷ. ಸುವಾಸನೆಯುಕ್ತ ಪುಷ್ಪಗಳನ್ನು ಅರ್ಪಿಸುವುದರ ಹಿಂದೆ ಅಧ್ಯಾತ್ಮಿಕ ಕಾರಣ ಮಾತ್ರವಲ್ಲದೆ, ಔಷಧೀಯ ಹಿನ್ನೆಲೆ ಕೂಡ ಇದೆ. ಪುಷ್ಪಗಳಲ್ಲಿ ಔಷಧೀಯ ಗುಣವೂ ಇದೆ ಎಂದು ಅಭಯ ಲಕ್ಷ್ಮೀ ನರಸಿಂಹ ಶ್ರೀ ಪಟ್ಟಾಭಿರಾಮ ದೇವಸ್ಥಾನದ ಡಾ. ಎಸ್.ಆರ್. ವಾದಿರಾಜ ಆಚಾರ್ ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಪ್ರತಿ ವರ್ಷ ರಾಮ ನವಮಿಯಂದು ಪುಷ್ಪಯಾಗ ನಡೆಸಲಾಗುತ್ತಿದೆ. ದಶಕಗಳಿಂದ ಇದನ್ನು ನಡೆಸಿಕೊಂಡು ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

