ರಾಮೋ ವಿಗ್ರಹವಾನ್ ಧರ್ಮಃ

Upayuktha
0



-ಟಿ. ದೇವಿದಾಸ್

ಅವತಾರಗಳು ಮನುಷ್ಯ ಜನಾಂಗದ ಪ್ರಜ್ಞಾ ವಿಕಾಸದ ಕಥನಗಳು. ಏರುದಾರಿಯ ವಿಕಾಸದ ಪಥಗಳು. ಅವತಾರವೆಂದರೆ ಏರಿ‌ಇಳಿಯುವುದು. ಪೂರ್ಣಪ್ರಮಾಣದ ಮಾನುಷಾವತಾರವೆಂದರೆ ಪರಶುರಾಮ ಅವತಾರ. ದುಷ್ಟ ಸಂಹಾರದ ಆವೇಶ. ಕುಪಿತ‌ ಭಾರ್ಗವನ ಪರಶು ೨೧ ಬಾರಿ ಮೆರೆಯಿತು. ಐದು ಕೊಳಗಳು ರಕ್ತಮಯವಾದವು. ಯುಗಾಂತ್ಯವೊಂದರ ಅಂತ್ಯದಲ್ಲಿ ಕಾಣಿಸಿಕೊಳ್ಳುವ ಮನಃಸ್ಥಿತಿಯಿದು. ಈ ಆವೇಶದ ಅಂತ್ಯದಲ್ಲಿ ಹುಟ್ಟಿದ್ದೇ ಸ್ವಪ್ರಜ್ಞೆಯ ಶ್ರೀರಾಮಾವತಾರ. ನಾಗರಿಕತೆಯು ಪೂರ್ಣ ಅನಾವರಣಗೊಂದ ಅವತಾರವಿದು. ನಾಗರಿಕತೆಯ ಮೊದಲ ಸ್ಥಿತಿಯಿದು. ನಾಗರಿಕ ಪ್ರಪಂಚವು ಶ್ರೀರಾಮನನ್ನು ದೇವರು ಎಂದು ಆರಾಧಿಸುತ್ತಾರೆ. ದುಷ್ಟ ಸಂಹಾರವೇ ಈ ಅವತಾರದಲ್ಲಿದ್ದರೂ ಸಾರ್ವಕಾಲಿಕ ನಾಗರಿಕ ಜೀವನಮೌಲ್ಯಗಳನ್ನು ಇದು ನಿರ್ವಚಿಸುತ್ತದೆ. ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ, ಉದಾತ್ತ ಮಹಾಪುರುಷ, ರಾಜಾರಾಮ, ತ್ಯಾಗಮೂರ್ತಿ ಎಂದೆಲ್ಲ‌ ಕೊಂಡಾಡುತ್ತದೆ. ಶ್ರೀರಾಮ ವಿಶ್ವದ ಆರಾಧ್ಯಮೂರ್ತಿಯಾಗಿ ಬೆಳೆದ. ಬೆಳೆಯುತ್ತಲೇ ಇದ್ದಾನೆ.


ರಾವಣ ಸಂಹಾರವಾಗಿ ಸೀತಾಗ್ನಿಪ್ರವೇಶದ ಅನಂತರ ತನ್ನನ್ನು ದೇವರ ದೇವನೆಂದು ಹಾಡಿಹೊಗಳಿ ಪ್ರಾರ್ಥಿಸಿದ ಇಂದ್ರಾದಿ ದೇವತೆಗಳೊಡನೆ ಶ್ರೀರಾಮ‌ ಹೀಗೆ ಹೇಳುತ್ತಾನೆ: ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ - ನಾನು ಮನುಷ್ಯ. ನಾನು ರಾಮ. ನಾನು ದಶರಥನ‌ ಮಗ. ಇದು ನನ್ನ ತಿಳಿವಳಿಕೆ. ಇದಕ್ಕಿಂತ ಬೇರೆಯಿದ್ದರೆ ತಾವು ಹೇಳಬೇಕು ಎನ್ನುತ್ತಾನೆ. ಅನುಭವವನ್ನು ಬಿಟ್ಟುಕೊಡದ ಸ್ವಪ್ರಜ್ಞೆಯ ಅವತಾರವಿದು.


ಪ್ರಭು ಶ್ರೀರಾಮಚಂದ್ರನನ್ನು ಮನುಷ್ಯನ ನಿತ್ಯ ಬದುಕಿನ ಔನ್ನತ್ಯದ, ಉತ್ಕರ್ಷದ, ಉತ್ಕಟ ಸಾಕ್ಷಿಯಾಗಿ ನಾವು ಆರಾಧಿಸುತ್ತೇವೆ. ಶ್ರೀರಾಮನ‌‌ ಬದುಕಿನ ಆದರ್ಶಗಳನ್ನು ಅನುಸರಿಸುವಂತೆಯೂ ಅನುಕರಿಸುವಂತೆಯೂ ನಾವು ನಿತ್ಯದ ಬದುಕಲ್ಲಿ ಎಚ್ಚರವನ್ನು ವಹಿಸುತ್ತೇವೆ. 


ಶ್ರೀರಾಮಚಂದ್ರ ಈ‌ ನೆಲದ ನಂಬಿಕೆ, ಆತ್ಮ, ಆಧಾರ, ಚಿಂತನೆ,‌ ಪ್ರವಾಹ, ಚೈತನ್ಯ ಎಲ್ಲವೂ! ಪ್ರೀತಿ, ವಿಶ್ವಾಸ ಮತ್ತು ಭಕ್ತಿಯ ಪರಾಕಾಷ್ಠೆಯ‌ ಪ್ರತಿಯಾಗಿ ಅವನನ್ನು ಏಕವಚನದಲ್ಲಿ ಸಂಬೋಧಿಸುವ ಈ‌ ನೆಲದಲ್ಲಿ ಅವನ ಕುರಿತಾಗಿ ಯಾವ‌ ಕಾಲಕ್ಕೂ ಸಲ್ಲುವ ಎತ್ತರದ ಪೂಜ್ಯಭಾವವಿದೆ. ರಾಮೋ ವಿಗ್ರಹವಾನ್ ಧರ್ಮಃ- ಎಂದ ಮಾರೀಚನ ಮಾತೇ ಚಿರಂತನವಾದುದು.



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top