ಕನಕದಾಸರ ರಾಮಧಾನ್ಯ ಚರಿತೆ

Upayuktha
0



ಕೃತಿಕಾರ ಕನಕದಾಸರು:

ಹಾವೇರಿ ಜಿಲ್ಲೆಯ  ಬಾಡ ಗ್ರಾಮದ ಕುರುಬರ ಪ್ರಮುಖ ಬೀರಪ್ಪ ಮತ್ತು ಬಚ್ಚಮ್ಮ ದಂಪತಿಗಳಲ್ಲಿ 1508ರಲ್ಲಿ  ತಿಮ್ಮಪ್ಪ ನಾಯಕನಾಗಿ ಹುಟ್ಟಿದವರು ಕನಕದಾಸರು. ತಿರುಪತಿಯ ತಿಮ್ಮಪ್ಪನ ಅನುಗ್ರಹದಿಂದ ಹುಟ್ಟಿದ ತಿಮ್ಮಪ್ಪ ಎಂದೇ ಹೆಸರಿಟ್ಟರು. ಕೃಷ್ಣದೇವರಾಯನ ಆಡಳಿತ ಕಾಲದಲ್ಲಿ ವೀರ ಸೈನಿಕನಾಗಿದ್ದ ಬೀರಪ್ಪನಿಗೆ ಮಗ ತನ್ನಂತೆ ನಾಯಕನಾಗಿ ಆಡಳಿತ ನಡೆಸಬೇಕೆಂಬ ಹಂಬಲವಿತ್ತು. ಬಚ್ಚಮ್ಮನಿಗೆ ಮಗ ವಿದ್ಯೆಯನ್ನು ಕಲಿತು ಶಾಸ್ತ್ರದ ಜ್ಞಾನವನ್ನು ತಿಳಿಯಲಿ ಎಂಬ ಆಸೆಯಿಂದ ಶ್ರೀನಿವಾಸ ಆಚಾರ್ಯರ ಬಳಿ ಶಾಸ್ತ್ರದ ಪಾಠವನ್ನು ಕಲಿಸಿದರು. ತಿಮ್ಮಪ್ಪನಾಯಕರು ಸಣ್ಣ ವಯಸ್ಸಿರುವಾಗಲೇ ಅವರ ತಂದೆಯ ಅಕಾಲ ಮೈತ್ಯುವಾಗಿ ತಿಮ್ಮಪ್ಪನಾಯಕ ಸಮುದಾಯದ ನಾಯಕನಾಗಿ ಆಡಳಿತ ನಡೆಸಬೇಕಾಗಿ ಬಂತು.  ಆಗ ಒಮ್ಮೆ ತಿಮ್ಮಪ್ಪ ನಾಯಕರ ಕನಸಿನಲ್ಲಿ ತಿರುಪತಿಯ ವೆಂಕಟ ರಂಣ ಬಂದು ತನಗೆ ಒಂದು ದೇವಾಲಯವನ್ನು ಕಟ್ಟಿಸು ಎಂಬಂತೆ ಕನಸು ಬಿದ್ದು , ತಿಮ್ಮಪ್ಪ ನಾಯಕರು ದೇವಾಲಯದ ನಿರ್ಮಾಣಕ್ಕೆ ಪಾಯ ಹಾಕುವಾಗ ಏಳು ಕೊಪ್ಪರಿಗೆ ಹಣ ಮತ್ತು ವಿಗ್ರಹ ದೊರೆಯುತ್ತದೆ. ಅಲ್ಲಿಯವರೆಗೂ ತಿಮ್ಮಪ್ಪ ನಾಯಕರಾಗಿದ್ದವರು ಕನಕ ನಾಯಕರಾಗುತ್ತಾರೆ.  


ಸಿಕ್ಕ ಏಳು ಕೊಪ್ಪರಿಗೆ  ಧನ ಕನಕಗಳನ್ನು ಧಾರ್ಮಿಕ ಕಾರ್ಯಕ್ಕೆ ಬಡಬಗ್ಗರಿಗೆ ಬಳಸುತ್ತಾ ಆಡಳಿತ ನಡೆಸುತ್ತಿದ್ದ ಕಾಲದಲ್ಲಿ ಶತ್ರುವಿನ ದಾಳಿಯಾಗಿ ಯುದ್ಧ ಸಮಯದಲ್ಲಿ ಕನಕ ನಾಯಕರಿಗೆ ಬಹಳ ಗಾಯ ಪೆಟ್ಟು ಆದಾಗ ಕನಸಿನಲ್ಲಲಿ ಬಂದ ವೆಂಕಟರಮಣ ನಿನ್ನ ತಾಯಿ ಮಗುವಾದರೆ ನಿನ್ನ ದಾಸನನ್ನಾಗಿ ಮಾಡುತ್ತೇನೆ ಎಂದಿದ್ದಳು ನಿನ್ನ ಎಲ್ಲ ನೋವುಗಳು ಮಾಯವಾಗುತ್ತವೆ ಎಂದು ಹೇಳಿ ಹೋದಂತೆ ಭಾಸವಾಗಿ ಎದ್ದ ಕನಕ ನಾಯಕರು ಯೋಗ್ಯ ಗುರುವನ್ನು ಹುಡುಕುತ್ತಾ ಹೊರಟರು. ಅವರಿಗೆ ತಮ್ಮ  ಆತ್ಮದ ಉದ್ಧಾರಕ ಶ್ರೀವ್ಯಾಸರಾಜರಲ್ಲಿ ದೊರಕುತ್ತಾರೆ. ಶ್ರೀಕೃಷ್ಣದೇವರಾಯನ ಗುರುಗಳಾಗಿದ್ದ ವ್ಯಾಸರಾಜರಿಗೆ ದೀಕ್ಷೆಯನ್ನು ನೀಡಿ ಅವರ ಆಧ್ಯಾತ್ಮ ಸಾಧನೆಯಲ್ಲಿ ಅವರ ಮಾರ್ಗದಲ್ಲಿ ನಡೆಯಲು ಆರಂಭಿಸುತ್ತಾರೆ.  ಶ್ರೀವ್ಯಾಸರಾಜರ ಉಚ್ಛ ಕುಲದ ಶಿಷ್ಯರಿಗೆ ಕನಕದಾಸರ ಮೇಲೆ ಸಿಟ್ಟು ಮತ್ತು ಅಸೂಯೆ ಎರಡೂ ಇರುತ್ತದೆ.  ಒಮ್ಮೆ ಉಡುಪಿಗೆ ಹೋದಾಗ ಅವರಿಗೆ ದರ್ಶನವನ್ನು ನಿರಾಕರಿಸಲಾಗುತ್ತದೆ. ಆಗ ಕನಕದಾಸರು ದೇವಾಲಯದ ಹಿಂಭಾಗದಲ್ಲಿ ನಿಂತು ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ ಎಂದು ಹಾಡಿದಾಗ ಕೃಷ್ಣನ ಮೂರ್ತಿ ತಿರುಗಿ ಇಂತಿರುತ್ತದೆ. ಇಂದಿಗೂ ಕೂಡ ಉಡುಪಿ ಕೃಷ್ಣನ ಗುಡಿಯಲ್ಲಿ ಕನಕನ ಕಿಂಡಿಯನ್ನು ನಾವು ನೋಡಬಹುದಾಗಿದೆ. ಕನಕದಾಸರ ಅಂಕಿತನಾಮ ಕಾಗಿನೆಲೆ ಆದಿ ಕೇಶವರಾಯ,  ಕನಕದಾಸರು ಅನೇಕ ಪದಗಳನ್ನು, ಕೀರ್ತನೆಗಳನ್ನು ಮುಂಡಿಗೆಗಳನ್ನು ಬರೆದಿದ್ದಾರೆ. ಅಲ್ಲದೇ ಇವರ 5 ಪ್ರಮುಖ ರಚನೆಗಳು ಹರಿಭಕ್ತಿಸಾರ, ರಾಮಧಾನ್ಯಚರಿತೆ, ಮೋಹನ ತರಂಗಿಣಿ ಮತ್ತು ನಳಚರಿತೆಗಳಾಗಿವೆ. 


ರಾಮಧಾನ್ಯಚರಿತೆ 


ಕನಕದಾಸರು ರಚಿಸಿದ ರಾಮಧಾನ್ಯ ಚರಿತೆ ಭತ್ತ ಮತ್ತು ರಾಗಿಯ ನಡುವೆ ಯಾವುದು ಶ್ರೇಷ್ಠ ಎಂಬ ಸಂವಾದದ ಕಥೆಯಾಗಿದೆ. ಕನಕದಾಸರು ರಚಿಸಿದ ಈ ಕಾವ್ಯವು ಸಣ್ಣ ವಿಡಂಬನಾ ಕಾವ್ಯವಾಗಿದ್ದು ಇಲ್ಲಿ ಬಡವ ಮತ್ತು ಶ್ರೀಮಂತರ ನಡುವೆ ಹಾಗೂ ಗುಣ ಮತ್ತು ಸೌಂದರ್ಯದ ನಡುವೆ ಆಯ್ಕೆ ಮಾಡಿಕೊಳ್ಳುವುದರ ಬಗೆಗೆ ಕಾಲ್ಪನಿಕ ಕಥೆಯ ಮೂಲಕ ವಿಷಯವನ್ನು ಕನಕದಾಸರು ಬಹು ಸೊಗಸಾಗಿ ಗುಣದ ಶ್ರೇಷ್ಠತೆ ಹಾಗೂ ಕಷ್ಟ ಸುಖಗಳ ನಡುವೆಯೂ ಹೆಚ್ಚು ಕಾಲ ಬಾಳುವ ಮಹತ್ವವನ್ನು ಸಾರುವ ರಾಮಧಾನ್ಯ ಎಂದು ರಾಗಿಯನ್ನು ಕರೆದು ಅದರ ಶ್ರೇಷ್ಠತೆಯನ್ನು ಹೇಳುತ್ತಾರೆ. ರಾಮಧಾನ್ಯ ಚರಿತೆಯ ಕಥೆಯ ಆರಂಭದಲ್ಲಿ ಧರ್ಮರಾಯನು ವನವಾಸದಲ್ಲಿದ್ದಾಗ ಕಾಮ್ಯಕವನದಲ್ಲಿ ಶಾಂಡಿಲ್ಯ ಋಷಿಗಳ ಆಶ್ರಮದಲ್ಲಿ ಆತಿಥ್ಯ ಸ್ವೀಕರಿಸುವಾಗ ರಾಮಧಾನ್ಯದ ಚರಿತ್ರೆಯನ್ನು ಪಾಂಡವರಿಗೆ ಹೇಳುತ್ತಾರೆ. ರಾಮನು ರಾವಣಾಸುರನ ವಧೆಯ ನಂತರ ಅಯೋಧ್ಯೆಗೆ ಹಿಂತಿರುಗಿ ಬರುವಾಗ ನಡುವೆ ಗೌತಮ ಋಷಿಗಳ ಕುಟೀರಗಳಲ್ಲಿ ಆತಿಥ್ಯ ಸ್ವೀಕರಿಸುವಾಗ ಬೆಲ್ಲ ತುಪ್ಪ ಸಕ್ಕರೆ ರಸಾಯನಗಳು ವಿವಿಧ ಭಕ್ಷ್ಯಗಳನ್ನು ಮಾಡಿರುತ್ತಾರೆ. ಆಗ ಹನುಮಂತನೊಂದಿಗೆ ಮಾತನಾಡುವಾಗ ಧಾನ್ಯಗಳನ್ನು ತರಿಸಿ ನೋಡುವ ಇಚ್ಛೆಯನ್ನು ವ್ಯಕ್ತ ಪಡಿಸುತ್ತಾನೆ. ಆಗ ಮೊದಲಿಗೆ ಗೋದಿಯ ಬಗೆಗೆ ಹೇಳುತ್ತಾರೆ. ನಂತರ   ರಾಗಿ ಮತ್ತು ಭತ್ತ ಎರಡರಲ್ಲಿ ಯಾವುದು ಶ್ರೇಷ್ಠ ಎಂಬ ವಾದ ಹುಟ್ಟುತ್ತದೆ.   ಶ್ರೀಮಂತಿಕೆಯ ಪ್ರತೀಕವೆನಿಸುವ ಭತ್ತವು ದೇವತಾಕಾರ್ಯಗಳಿಗೆ ಉಪಯೋಗಿಸಲ್ಪಡುವುದರಿಂದ ತಾನೇ ಶ್ರೇಷ್ಠ ಎಂದು ಹೇಳಿಕೊಳ್ಳುತ್ತದೆ. ಬಡವರ ಧಾನ್ಯವಾದ ರಾಗಿಯು ನಾನು ಬಹಳ ಕಾಲ ಉಳಿಯುವುದರಿಂದ ತಾನೇ ಶ್ರೇಷ್ಠ ಎಂದು ತನ್ನ ಮಾತನ್ನು ಹೇಳುತ್ತದೆ.  ಗೌತಮರು ನಾವು ಈ ನ್ಯಾಯವನ್ನು ಮಾಡುವ ಸಾಮರ್ಥ್ಯ ಇಲ್ಲದೇ ಇರುವವರು ದೇವತೆಗಳನ್ನೆಲ್ಲಾ ಕರೆಸಿ ಅಯೋಧ್ಯೆಯಲ್ಲಿ ಈ ವಿಷಯದ ತೀರ್ಪು ಬರಲಿ ಎಂದು ಹೇಳುತ್ತಾರೆ. ಎರಡೂ ಧಾನ್ಯಗಳ ಪಕ್ಷವನ್ನು ಕೇಳಿದ  ಶ್ರೀರಾಮಚಂದ್ರನು,  ಎರಡೂ ಧಾನ್ಯಗಳನ್ನು ಆರು ತಿಂಗಳುಗಳ ಕಾಲ ಬಂಧಿಸಿಟ್ಟು ಪರೀಕ್ಷೆ ಮಾಡಿ ನಂತರ ನಿರ್ಧಾರ ಮಾಡುವುದಾಗಿ ಹೇಳುತ್ತಾನೆ. ಪರೀಕ್ಷಾ ಸಮಯದಲ್ಲಿ ಭತ್ತವು ಕಳೆಗುಂದಿ ಮುಗ್ಗಾಗಿ ನಾಶವಾಗುತ್ತದೆ. ಆದರೆ ರಾಗಿಯು ಮಳೆಗಾಳಿ ಬಿಸಿಲು ಎಲ್ಲ ಕಾಲದಲ್ಲಿಯೂ ತನ್ನ ಸತ್ವವನ್ನು ಕಾಪಾಡಿಕೊಂಡು ಪರರ ಉಪಕಾರಿಯಾಗುವ ರಾಗಿಯೇ ಶ್ರೇಷ್ಠ ಎಂಬ ತೀರ್ಪನ್ನು ಶ್ರೀರಾಮಚಂದ್ರನು ನೀಡುತ್ತಾನೆ. ಹೀಗಾಗಿ ರಾಗಿಯನ್ನು ರಾಮಧಾನ್ಯವೆಂದೂ ಕರೆಯಲಾಗುತ್ತದೆ. ಈ ಮೂಲಕ ಕನಕದಾಸರು ರಾಮನ ಭಕ್ತಿಯನ್ನು ಅವನ ನಿಷ್ಪಕ್ಷಪಾತ ನಿರ್ಣಯವನ್ನು ಹೇಳುತ್ತಾ ರಾಮಭಕ್ತಿಯನ್ನು ತೋರಿಸುತ್ತಾರೆ.


ಮಾಧುರಿ ದೇಶಪಾಂಡೆ, ಬೆಂಗಳೂರು


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top