ಮಾರ್ಚ್ 27 ಶ್ರೀರಾಮನವಮಿ
‘ದೇವರು ಮತ್ತು ಮನುಷ್ಯನದು ಒಂದೇ ಮಾತು, ಒಂದೇ ದಾರಿ’ ಎಂಬ ಗೂಢವನ್ನು ಅನುಭವಿಸುವ ಮನೋಧರ್ಮಕ್ಕೆ ಆಧ್ಯಾತ್ಮ ಎಂದು ಹೆಸರು.
ಅವತಾರಗಳಲ್ಲಿ ಪೂರ್ಣ ಪ್ರಮಾಣದ ಮಾನುಷಾವತಾರಗಳು ಪರಶುರಾಮಾವತಾರದಿಂದ ಮೊದಲಾಗಿವೆ. ಪರಶುರಾಮನಲ್ಲಿ ಒಂದು ಆವೇಶವನ್ನು ಕಾಣುತ್ತೇವೆ- ದುಷ್ಟದಮನದ ಆವೇಶ. ದುಷ್ಟದಮನವು ಸರಿ, ಆದರೆ ಅದೇ ಒಂದು ವ್ಯಸನವಾದಂತೆ ಕುಪಿತ ಭಾರ್ಗವನ ಕೈಯ ಕೂಡಲಿ ಇಪ್ಪತ್ತೊಂದು ಬಾರಿ ಮಸೆಯಿತು. ಯದು ಕೊಳಗಳು ನೆತ್ತರಿನಿಂದ ತುಂಬಿ ತುಳುಕಿದಂತೆ! ಇದು ಒಂದು ಯುಗವೇ ಕೊನೆಯಾಗುವ ಹೊತ್ತಿನಲ್ಲಿ ಕಾಣಿಸಿಕೊಳ್ಳುವ ಮನಸ್ಥಿತಿ - ಯುಗಾಂತದ ಆವೇಶ! ಆವೇಶದಲ್ಲಿ ರೌದ್ರರಸ!
ಆವೇಶವು ಸ್ವಪ್ರಜ್ಞೆಯ ಪೂರ್ವಸ್ಥಿತಿ. ಸ್ವಪ್ರಜ್ಞೆಯ ನಾಗರಿಕತೆಯ ಸ್ಥಿತಿ ಎಂದು ತಿಳಿದುಕೊಳ್ಳುವುವಾದರೆ, ಆವೇಶವು ನಾಗರಿಕತೆಯ ಪೂರ್ವಸ್ಥಿತಿ. ಆದ್ದರಿಂದಲೇ ಮುಂದಿನ ಅವತಾರವಾದ ರಾಮಾವತಾರವು ಒಂದು ನಾಗರಿಕತೆಯೇ ದೇವರೆಂದು ಬಗೆದು ಆರಾಧಿಸುವ ಅವತಾರವಾಗಿ ಬಿಟ್ಟಿದೆ. ಇದು ಹೊಸ ಯುಗ - ಯುಗಾರಂಭ! ಯುಗಾರಂಭದಲ್ಲಿ ಆದರ್ಶ, ಆವೇಶವಲ್ಲ. ದುಷ್ಟದಮನ ರಾಮಾವತಾರದಲ್ಲಿ ಇದೆ ಏನೋ ನಿಜ, ಆದರೆ ಅದಕ್ಕಿಂತಲೂ ಮುಖ್ಯವಾಗಿ ಲೋಕಸಂಗ್ರಹವು ನಾಗರಿಕ ಮೌಲ್ಯ.
ಮಾತಿನೊಳಗಿನ ಗುಟ್ಟು ರಾಮನದು ಸ್ವಪ್ರಜ್ಞೆಯ ಮಾತು; ಕೃಷ್ಣನದು ಮುಕ್ತಪ್ರಜ್ಞೆಯ ಮಾತು — ಸ್ವಪ್ರಜ್ಞೆಯ ಹಾಗಿಲ್ಲದ ಮಾತು. ಈ ಎರಡು ಮಾತುಗಳು ಅವತಾರಗಳಲ್ಲಿನ ಪ್ರಜ್ಞಾ ವಿಕಾಸದ ಕಥೆಯನ್ನು ಹೇಳುತ್ತವೆ. ಇವೆರಡನ್ನೂ ಅನ್ಯೋನ್ಯವಾಗಿ ಇಟ್ಟು ನೋಡಬೇಕು. ಕೃಷ್ಣನ ಮಾತುಗಳನ್ನು ಕೇಳಿದರೆ, ಅನುಭವದ ಜೊತೆಗೇ ಇರುವ ಮಾತಿಗೆ ಅನುಭವದ ಹಂಗೂ ಇಲ್ಲವೇನೋ ಅನ್ನಿಸುತ್ತದೆ! ಅವನಿಗೆ ಅವನ ಹಂಗೂ ಇಲ್ಲವೇನೋ! ಅವನೇ ಅವನಿಗಿಂತಲೂ ಮಿಗಿಲು ಎಂಬ ಬಣ್ಣನೆಗೆ ತಕ್ಕವನಾಗಬೇಕಾದರೆ ಅವನಿಗೆ ಅವನ ಹಂಗೂ ಇಲ್ಲ — ಇರದಿರಬೇಕು. ವಿವೇಕಾನಂದರು “ತನಗೆ ಮೋಕ್ಷ ಬೇಕಿಲ್ಲ” ಎಂದರಂತೆ. ಅದು ಮೋಕ್ಷ ಪಡೆದವರ ಮಾತು! ಮೋಕ್ಷಕ್ಕೆ ಮೋಕ್ಷದ ಹಂಗೇನು?
ರಾಮನ ಮಾತುಗಳನ್ನು ಕೇಳಿದರೆ: ದೇವರು ತಾನು ಮನುಷ್ಯನೆಂದು ಹಠ ಹಿಡಿಯಬಲ್ಲ; ಮನುಷ್ಯನೆಂದು ಹಠ ಹಿಡಿಯಬಲ್ಲವನೇ ದೇವರು! ತಾನು ಮನುಷ್ಯ ಮಾತ್ರದವನೆಂದು ದೇವರು ಮಾತ್ರ ಹಠ ಹಿಡಿಯಬಲ್ಲ! ಇದು ಅವತಾರದ ನಿಜ. ದೇವರಂತೆ ಮನುಷ್ಯ ವಿರಹವನ್ನು ಅನುಭವಿಸಲಾರ; ದೇವರಂತೆ ಮನುಷ್ಯ ಲೋಕವನ್ನು ಮುಗ್ಧನಾಗಿ ಹಿಂಬಾಲಿಸಲಾರ. ದೇವರಂತೆ ಎಂದಾಗ, ಮನುಷ್ಯನಾಗಿ ಬಂದ ದೇವರಂತೆ ಎಂದು.
ಒಂದು ರೀತಿಯಲ್ಲಿ ದೇವರು ಮನುಷ್ಯನಾಗುವುದೇ ಅವನಿಗಿಂತಲೂ ಮಿಗಿಲಾದ ತನ್ನ ಸ್ವರೂಪವನ್ನು ಸಾಧಿಸಲು, ಇದ್ದ ಮಾತಿಗೆ ಅನುಭವದ ಸಂಬಂಧವನ್ನು ಜೋಡಿಸಲು. ರಾಮನನ್ನು ‘ಸತ್ಯವಾಕ್ಯ’ ಎಂದು ವಾಲ್ಮೀಕಿ ಸುಮ್ಮನೆ ಕರೆದಿಲ್ಲ.
ಎರಡು ದಾರಿಗಳಿಲ್ಲ; ಎರಡು ಹೆಜ್ಜೆಗಳಿಲ್ಲ. ಇರುವುದು ಒಂದೇ ದಾರಿ, ಒಂದೇ ಹೆಜ್ಜೆ. ಇದು ಏರಿದವರಿಗೆ ಗೊತ್ತಿರಬೇಕು. ಗೊತ್ತಿರುವುದರಿಂದ ಅವನು ಏನನ್ನೂ ನಟಿಸಬಲ್ಲ; ನಟಿಸಿ ನಿಜವನ್ನು ಪಡೆಯಬಲ್ಲ. ಹೌದು — ನಟಿಸಿ ನಿಜವನ್ನು ಪಡೆಯುವುದು! ನಟಿಸಿ ನಿಜವನ್ನು ತೋರಿಸುವುದಲ್ಲ. ಮನುಷ್ಯರು ನಟಿಸಿ ನಿಜವನ್ನು ತೋರಿಸುವುದು; ದೇವರು ನಟಿಸಿ ನಿಜವನ್ನು ಪಡೆಯುವುದು.
ತುಳಸಿದಾಸರು ‘ಶ್ರೀರಾಮಚರಿತಮಾನಸ’ ಬರೆಯುವಾಗ, ರಾಮನನ್ನು ಯಾವುದಕ್ಕೆ ಹೋಲಿಸಲಿ ಎಂಬ ಸಂದಿಗ್ಧಕ್ಕೆ ಸಿಲುಕುತ್ತಾರೆ. ಸಂದಿಗ್ಧದಿಂದ ಹೊರಬರಲಾಗದೆ ಚಡಪಡಿಸುತ್ತಿದ್ದಾಗ ಕೊನೆಗೆ ಉತ್ತರ ಸಿಗುತ್ತದೆ — ರಾಮನಿಗೆ ರಾಮನೇ ಸಾಟಿ.
ಏಳರ ನಂಟು:
ಚೈತ್ರ ಶುದ್ಧ ನವಮಿಯಂದು ಶ್ರೀರಾಮನ ಜನ್ಮದಿನವಾಯಿತು. ‘ರಾಮ’ ಎನ್ನುವ ಎರಡಕ್ಷರಕ್ಕೂ ಏಳರ ಸಂಖ್ಯೆಗೆ ನಂಟಿದೆ. ‘ಕಟಪಯ’ ಸೂತ್ರದ ಪ್ರಕಾರ ‘ರಾಮ’ ಎನ್ನುವ ಸಂಖ್ಯೆ ಏಳನ್ನು ಸೂಚಿಸುತ್ತದೆ. ‘ರ’ ಯವರ್ಗದ ಎರಡನೆಯ ಅಕ್ಷರ, ‘ಮ’ ಪವರ್ಗದ ಐದನೇ ಅಕ್ಷರ — ಈ ಎರಡೂ ಸಂಖ್ಯೆಗಳ ಮೊತ್ತ ಏಳು. ದಶಾವತಾರಗಳಲ್ಲಿ ರಾಮಾವತಾರ ಏಳನೇ ಅವತಾರ. ವಾಲ್ಮೀಕಿ ರಾಮಾಯಣದಲ್ಲಿ ಒಟ್ಟು 7 ಕಾಂಡಗಳಿವೆ. ಶ್ರೀರಾಮನ ಜನನ ಏಳನೇ ನಕ್ಷತ್ರವಾದ ಪುನರ್ವಸು.
ವಾಲ್ಮೀಕಿ ರಾಮಾಯಣದ ಬಾಲಕಾಂಡದ 19ನೇ ಸರ್ಗದಲ್ಲಿ, 8ನೇ ಮತ್ತು 9ನೇ ಶ್ಲೋಕಗಳಲ್ಲಿ ಶ್ರೀರಾಮಚಂದ್ರನ ಜನನದ ವಿಚಾರವನ್ನು ಹೇಳಲಾಗಿದೆ. ಅದರಂತೆ ಶ್ರೀರಾಮ ಚೈತ್ರಮಾಸದ ನವಮಿ ತಿಥಿಯಂದು ಜನಿಸುತ್ತಾನೆ. ಆ ಸಂದರ್ಭದಲ್ಲಿದ್ದ ವಿವಿಧ ಗ್ರಹಗಳ ಸ್ಥಾನದ ಉಲ್ಲೇಖವೂ ಇದೆ. ಒಂದು ಲೆಕ್ಕಾಚಾರದಂತೆ, ಶ್ರೀರಾಮಚಂದ್ರನು ಹುಟ್ಟಿದ ಸಂದರ್ಭದಲ್ಲಿ ಅವನ ಜಾತಕದಲ್ಲಿ ಗಜಕೇಸರಿ ಯೋಗವಿತ್ತೆಂಬುದು ಕೆಲವರ ಅಭಿಪ್ರಾಯ.
ಪುನರ್ವಸು ನಕ್ಷತ್ರ:
ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಪುನರ್ವಸು ನಕ್ಷತ್ರದ ಉಲ್ಲೇಖವಿದೆ. ವಾಲ್ಮೀಕಿಯವರು ರಾಮನ ಜನ್ಮ ನಕ್ಷತ್ರದ ಉಲ್ಲೇಖ ಮಾಡುವಾಗ ‘ಅದಿತಿ’ ನಕ್ಷತ್ರದ ಹೆಸರನ್ನು ಬಳಸುತ್ತಾರೆ. ಆದರೆ ಭಾಗವತಾದಿ ಪುರಾಣಗಳಲ್ಲಿ ಮತ್ತು ಶ್ರೀನಾರಾಯಣ ಪಂಡಿತಾಚಾರ್ಯರ ಸಂಗ್ರಹ ರಾಮಾಯಣದಲ್ಲಿ ‘ಪುನರ್ವಸು’ ಶಬ್ದ ಪ್ರಯೋಗವಿದೆ. ನಕ್ಷತ್ರ ನಿಘಂಟು ಪ್ರಕಾರ, ಪುನರ್ವಸು ನಕ್ಷತ್ರಕ್ಕೆ ‘ಅದಿತಿ’, ‘ದೇವಮಾತಾ’ ಮತ್ತು ‘ಆದಿತ್ಯ’ ಎಂಬ ಸಮಾನಾರ್ಥಕ ಪದಗಳಿವೆ. ಪುನರ್ವಸು ನಕ್ಷತ್ರದ ಚಿಹ್ನೆ ಬಾಣ ಮತ್ತು ಧನಸ್ಸು.
ಉತ್ತಮೋತ್ತಮ ದಾಸ ಹನುಮಂತ - ಗಾಢ ಆಲಿಂಗನವೇ ಪ್ರತಿಫಲ:
ಹನುಮಂತ ಅತ್ಯುದ್ಭುತವಾದ ದಿವ್ಯ ಸೇವಾಕಾರ್ಯವನ್ನು ಮಾಡಿ ಶ್ರೀರಾಮನ ಪಾದಗಳಿಗೆ ಸಮರ್ಪಣೆ ಮಾಡಿದ್ದಾರೆ. ಲಂಕೆಗೆ ಹೋಗಿ, ಅಸುರರನ್ನು ಸಂಹರಿಸಿ, ಸೀತಾಮಾತೆಗೆ ಉಂಗುರವನ್ನು ನೀಡಿ, ಮತ್ತೆ ಹಿಂತಿರುಗಿ ಬಂದ ಹನುಮಂತನಿಗೆ ತಾನು ಪ್ರತಿಯಾಗಿ ಏನು ಕೊಡಲು ಸಾಧ್ಯ ಎಂಬುದಾಗಿ ಶ್ರೀರಾಮಚಂದ್ರ ಚಿಂತಿಸುತ್ತಾನೆ. ಕೊನೆಗೆ, ಪ್ರೀತಿಯಿಂದ, ಅನುಗ್ರಹಬುದ್ಧಿಯಿಂದ, ವಾತ್ಸಲ್ಯದಿಂದ ಗಾಢ ಆಲಿಂಗನವನ್ನು ನೀಡುತ್ತಾನೆ.
ಚಾಣೂರ ಮತ್ತು ಮುಷ್ಠಿಕರು ಕೃಷ್ಣನೊಂದಿಗೆ ಮಲ್ಲಯುದ್ಧ ಮಾಡುವಾಗ ಅವರಿಗೂ ಭಗವಂತನ ಅಂಗಸ್ಪರ್ಶ ದೊರಕಿತ್ತು. ಆದರೆ ಅದು ನಿಗ್ರಹದಿಂದಾದ ಸ್ಪರ್ಶ. ವಾತ್ಸಲ್ಯದಿಂದ, ಅನುಗ್ರಹದಿಂದ ದೊರಕುವ ಅಂಗಸ್ಪರ್ಶ ಅದಕ್ಕಿಂತಲೂ ಶ್ರೇಷ್ಠ. ಹನುಮಂತನಿಗೆ ಭಗವಂತ ತನ್ನ ಆಲಿಂಗನವನ್ನು ನೀಡಿದರೆ, ಅದು ಸಕಲ ಲೋಕಗಳ ಆಶ್ರಯವಾದ ದಿವ್ಯ ಅನುಗ್ರಹವೇ ಆಗುತ್ತದೆ.
ಭಕ್ತನ ಅಂತರಂಗ ಪ್ರವೃತ್ತಿಯಂತೆ, ಪ್ರಾತಃಕಾಲದಲ್ಲಿ ಶ್ರೀರಾಮನು ದೈವವಾಗಿರಬಹುದು; ಮಧ್ಯಾಹ್ನದಲ್ಲಿ ಧರ್ಮಸಂಕಟದಲ್ಲಿ ನಡವಳಿಕೆಗೆ ಗುರುವಾಗಬಹುದು; ರಾತ್ರಿ ಏಕಾಂತ ಧ್ಯಾನದಲ್ಲಿ ಪರಬ್ರಹ್ಮ ಪ್ರತೀಕವಾಗಬಹುದು.
- ಡಾ. ಗುರುರಾಜ ಪೋಶೆಟ್ಟಿಹಳ್ಳಿ
9739369621
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


