ಕವನ: ಪುಟ್ಟಗುಬ್ಬಿ

Upayuktha
0



ಪುಟ್ಟ ಗುಬ್ಬಿ ದೊಡ್ಡ ಸುದ್ದಿ 

ಮಾಡಿತಿಂದಿಗೆ | 

ನೆಟ್ಟ ನೋಟದಿಂದ ನೋಡಿ  

ಬಂದಿತಿಲ್ಲಿಗೆ ||  


ಕಾಳು ಕಡ್ಡಿ ಕೊಟ್ಟು ನಾನು 

ತಿನ್ನಲೆಂದೆನು | 

ನಾಳೆ ನಿನಗೆ ಬಣ್ಣದಂಗಿ  

ತರುವೆನೆಂದೆನು ||  


ಗುಬ್ಬಿ ನಿನ್ನ ಗೂಡಿನಲ್ಲಿ 

ನಾನು ಸಲಹುವೆ | 

ಹಬ್ಬಕೆಂದು ನಿನಗೆ ನಾನು  

ತಿಂಡಿ ಮಾಡುವೆ || 


ನಿನ್ನ ಮರಿಯ ಮುದ್ದು ಮಾಡಿ 

ಗುಟುಕು ನೀಡುವೆ | 

ಅನ್ನ ಸಾರು ಎಲ್ಲ ಬಡಿಸಿ 

ತಿನಲು ಹೇಳುವೆ ||  


ಗುಬ್ಬಿ ನೀನು ಬಹಳ ಚಂದ  

ನಿನ್ನ ಮರೆಯೆನು | 

ಸುಬ್ಬಿಯೆಂದು ಕರೆದು ನಿನ್ನ 

ಮುದ್ದು ಗೈವೆನು ||  


ಇಂದು ನಿನ್ನ ಹುಟ್ಟುಹಬ್ಬ  

ಮಾಡಿ ನಲಿವೆನು | 

ಮುಂದೆ ನಿನ್ನ ನೆನಪಿನಲ್ಲಿ 

ನಾನು ಇರುವೆನು || 


(ಗುಬ್ಬಚ್ಚಿಯ ನೆನಪಿಗಾಗಿ ಶಿಶುಗೀತೆ) 

ವಿ.ಬಿ. ಕುಳಮರ್ವ, ಕುಂಬ್ಳೆ


Tags

Post a Comment

0 Comments
Post a Comment (0)
To Top