3ಡಿ ತಂತ್ರಜ್ಞಾನದಲ್ಲಿ ‘ಕೊರಗಜ್ಜ’: ಯುಗಾದಿಗೆ ಚಿತ್ರತಂಡದಿಂದ ವಿಶೇಷ ಘೋಷಣೆ

Upayuktha
0


ಮಂಗಳೂರು: ನಿರ್ದೇಶಕ ಸುಧೀರ್ ಅತ್ತಾವರ್ ಅವರ ಬಹುನಿರೀಕ್ಷಿತ ‘ಕೊರಗಜ್ಜ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೂ, ಅಂತಿಮ ಹಂತದಲ್ಲಿ ಮತ್ತೊಮ್ಮೆ ಮುಂದೂಡಿಕೆಯಾಗಿದೆ. ಆದರೆ ಇದೇ ಸಂದರ್ಭದಲ್ಲಿ ಚಿತ್ರತಂಡ ಯುಗಾದಿ ಹಬ್ಬದ ಅಂಗವಾಗಿ ಮಹತ್ವದ ಅಪ್ಡೇಟ್‌ ನೀಡಿದ್ದು, ಈ ಚಿತ್ರವನ್ನು ಇದೀಗ ಆಧುನಿಕ 3ಡಿ ತಂತ್ರಜ್ಞಾನದಲ್ಲಿ ರೂಪಿಸಲಾಗುತ್ತಿದೆ ಎಂಬುದು ಗಮನಾರ್ಹ ಬೆಳವಣಿಗೆಯಾಗಿದೆ.


ಸಾಮಾನ್ಯವಾಗಿ 3ಡಿ ಚಿತ್ರಗಳನ್ನು ಚಿತ್ರೀಕರಣದ ಹಂತದಲ್ಲೇ ಆ ತಂತ್ರಜ್ಞಾನದೊಂದಿಗೆ ನಿರ್ಮಿಸುವುದು ರೂಢಿ. ಆದರೆ ‘ಕೊರಗಜ್ಜ’ ಚಿತ್ರವನ್ನು ಮೊದಲಿಗೆ 2ಡಿ ಯಲ್ಲಿ ಚಿತ್ರೀಕರಿಸಿ ಬಳಿಕ 3ಡಿ ಗೆ ಪರಿವರ್ತಿಸಲು ನಿರ್ಧರಿಸಲಾಗಿದೆ. ಇದು ಹೆಚ್ಚಿನ ವೆಚ್ಚದ ಪ್ರಕ್ರಿಯೆಯಾಗಿದ್ದರೂ, ಚಿತ್ರದ ಗುಣಮಟ್ಟ ಮತ್ತು ಮೇಕಿಂಗ್ ಗಮನಿಸಿದ ಅಂತಾರಾಷ್ಟ್ರೀಯ ವಿತರಣಾ ಸಂಸ್ಥೆಯೊಂದು, ಈ ಚಿತ್ರವನ್ನು ವಿಶ್ವಮಟ್ಟದ ದೃಶ್ಯಕಾವ್ಯವಾಗಿ ರೂಪಿಸುವಂತೆ ಸಲಹೆ ನೀಡಿರುವುದು ತಿಳಿದುಬಂದಿದೆ. ಈ ಮೂಲಕ ಭಾಷಾ ಅಡ್ಡಿಗಳನ್ನು ಮೀರಿ ಜಾಗತಿಕ ಪ್ರೇಕ್ಷಕರನ್ನು ಸೆಳೆಯುವ ಸಾಧ್ಯತೆಗಳು ಹೆಚ್ಚಾಗಿವೆ.


3ಡಿ ತಂತ್ರಜ್ಞಾನ ಬಳಕೆಯಿಂದ ವೀಕ್ಷಕರಿಗೆ ಹೆಚ್ಚು ಆಳವಾದ ದೃಶ್ಯಾನುಭವ ದೊರಕುವುದರ ಜೊತೆಗೆ ಭಾವನಾತ್ಮಕ ಸಂಪರ್ಕವೂ ಗಟ್ಟಿಯಾಗಲಿದೆ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಅವರು ‘ತ್ರಿವಿಕ್ರಮ ಸಿನಿಮಾಸ್’ ಹಾಗೂ ‘ಸಕ್ಸಸ್ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು 2ಡಿ ಜೊತೆಗೆ 3ಡಿ ರೂಪದಲ್ಲೂ ಬಿಡುಗಡೆ ಮಾಡಲು ಮುಂದಾಗಿದ್ದಾರೆ.


ಚಿತ್ರದ ವಿಶೇಷ ಆಕರ್ಷಣೆಯಾಗಿ ಅಂಡರ್‌ವಾಟರ್ ಕ್ಲೈಮ್ಯಾಕ್ಸ್ ರೂಪುಗೊಂಡಿದೆ. ಈ ಭಾಗಕ್ಕಾಗಿ ಈಗಾಗಲೇ ಸುಮಾರು 40 ಮಂದಿ ತಾಂತ್ರಿಕ ತಂಡ ಕಾರ್ಯನಿರ್ವಹಿಸಿದ್ದು, ಕೆಲವು ದೃಶ್ಯಗಳನ್ನು ಪುನಃ ಚಿತ್ರೀಕರಿಸಲಾಗಿದೆ. ಕೇರಳದ ತಿರುವನಂತಪುರಂ ನಗರದಲ್ಲಿರುವ ವಿಸ್ಮಯ ಸ್ಟುಡಿಯೋದಲ್ಲಿ ವಿಶೇಷ ಅಂಡರ್‌ವಾಟರ್ ಸೆಟ್ ನಿರ್ಮಿಸಿ ಚಿತ್ರೀಕರಣ ನಡೆಸಲಾಗಿದೆ. ಈ ಸ್ಟುಡಿಯೋ ಖ್ಯಾತ ನಟ ಮೋಹನ್ ಲಾಲ್ ಅವರ ಸ್ವಾಮ್ಯದಲ್ಲಿದೆ.


ನಟಿ ಶೃತಿ ಅವರು ಈ ಚಿತ್ರದಲ್ಲಿ ಅಂಡರ್‌ವಾಟರ್ ದೃಶ್ಯಗಳಲ್ಲಿ ಸಾಹಸಾತ್ಮಕವಾಗಿ ಅಭಿನಯಿಸಿರುವುದು ವಿಶೇಷವಾಗಿದೆ. ಕನ್ನಡ ಚಿತ್ರರಂಗದಲ್ಲಿ ಇಂತಹ ಅಪಾಯಕಾರಿ ದೃಶ್ಯಗಳಲ್ಲಿ ನಟಿಯೊಬ್ಬರು ಭಾಗವಹಿಸಿರುವುದು ಅಪರೂಪವೆಂದು ಹೇಳಲಾಗುತ್ತಿದೆ. ಶೂಟಿಂಗ್‌ಗೂ ಮುನ್ನ ಅವರು ಸುಮಾರು 15 ದಿನಗಳ ತರಬೇತಿ ಪಡೆದಿದ್ದು, ಸೆಟ್‌ನಲ್ಲಿ ಸ್ಕ್ಯೂಬಾ ಡೈವರ್ಸ್‌, ವೈದ್ಯಕೀಯ ತಂಡ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಲಾಗಿತ್ತು.


ಸುಮಾರು 30 ಅಡಿ ಎತ್ತರದಿಂದ ನೀರಿಗೆ ಜಿಗಿದು ಮರುಹಾರಾಟ ಮಾಡುವ ಸಾಹಸ ದೃಶ್ಯದಲ್ಲೂ ಶೃತಿ ಸ್ವತಃ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ, 22 ಸೆಕೆಂಡ್‌ಗಳ ಕಾಲ ಯಾವುದೇ ಆಮ್ಲಜನಕದ ಸಹಾಯವಿಲ್ಲದೆ ನೀರಿನೊಳಗೆ ಅಭಿನಯಿಸಿರುವುದು ಚಿತ್ರತಂಡದವರಲ್ಲಿ ಆಶ್ಚರ್ಯ ಹುಟ್ಟಿಸಿದೆ.


ಈ ಎಲ್ಲ ಅಂಶಗಳಿಂದ ಚಿತ್ರದ ವೆಚ್ಚವೂ ಹೆಚ್ಚಾಗಿದ್ದು, ಒಟ್ಟು ಬಜೆಟ್ ಸುಮಾರು 12 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top