ಬಿರುಬಿಸಿಲ ಬೇಗೆಯಿಂ,
ಕಂಗೆಟ್ಟಿಹಳು ವಸುಧೆ
ಕರುಕಲಾಗಿದೆ ಒಡಲು
ಕಾದು ಬಸವಳಿದು..!
ಉರಿಬಿಸಿಲು ಸಾಕಾಗಿ
ಬಳಲಿರುವ ಲತಿಕೆಗಳು
ಮಳೆಹನಿಯ ಸ್ಪರ್ಶಕ್ಕೆ
ಕಾಯುತಿಹುದು..!!
ಮಹಿ ಬೆಂದು, ಬರಡಾಗಿ
ನೊಂದು ನಿಟ್ಟುಸಿರಡಲು,
ಎದೆಬಡಿತ ಅನುರಣಿಸಿ
ಸುರಿಯುತಿದೆ ಬೆವರು..!
ಕುಳಿರ್ಗಾಳಿಯಲಿ ಮೀಟಿ
ಜೀವ ಭಾವಗಳನ್ನು,
ಸಿಂಪಡಿಸು ಸೋನೆಮಳೆ
ಕೊನರಲೀ ಹಸಿರು..!
ಹೂವರಳಿ ನಗುತಿರಲಿ
ತರುಲತೆಗಳೆಲ್ಲೆಲ್ಲು,
ವರ್ಷಧಾರೆಯು ಹರಿದು
ಮರೆಯಲೀ ಮುನಿಸು!
ಹಸಿರುಡಲಿ ಭೂತಾಯಿ
ನಿತ್ಯ ನೂತನೆಯಾಗಿ,
ಮುದದಿಂದ ಮೈಮನಸು
ಹಸಿರಾಗಿ ಕನಸು !!
ಚಿತ್ತಭಿತ್ತಿಯು ಹೊತ್ತಿ
ಜೀವಜಲ ಬತ್ತಿಹುದು
ಅಳಿದುಳಿದ ಹಸಿರುಸಿರ
ಮೈದಡವಿ ಹರಸು..!
ಹುಟ್ಟು ಸಾವುಗಳೆಂಬ
ಭಾವಯಾನದ ನಡುವೆ,
ತಟ್ಟೆಂದು ನೀ ಸುರಿದು
ಬುವಿಯೆದೆಯ ತಣಿಸು..!!
-ಪ್ರಮೀಳಾ ಚುಳ್ಳಿಕ್ಕಾನ
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


