ಬಜೆಟ್‌ನಲ್ಲಿ ಕಲಬುರಗಿ ಮೆಗಾ ಜವಳಿ ಪಾರ್ಕ್‌ಗೆ ಕೇವಲ 75 ಕೋಟಿ

Upayuktha
0

ಕೇಂದ್ರ ಜವಳಿ ಸಚಿವ- ಮುಖ್ಯಮಂತ್ರಿಗಳ ಭೇಟಿಗೆ ಡಾ.ಉಮೇಶ್ ಜಾಧವ್ ನಿರ್ಧಾರ




ಕಲಬುರಗಿ: ಪ್ರಧಾನಮಂತ್ರಿಯವರು ದೇಶದಾದ್ಯಂತ ಏಳು ಕಡೆಗಳಲ್ಲಿ ಪಿಎಂ ಮಿತ್ರ ಯೋಜನೆಯಡಿ ಶಿಲಾನ್ಯಾಸ ಮಾಡಿ ಚಾಲನೆ ನೀಡಿದ ಜವಳಿ ಪಾರ್ಕ್ ಗಳಲ್ಲಿ ಕಲಬುರಗಿಗೆ ಈ ಬಾರಿ ರಾಜ್ಯ ಬಜೆಟ್ ನಲ್ಲಿ ಕೇವಲ 75 ಕೋಟಿ ರೂ. ಮಾತ್ರ ಅನುದಾನ ಘೋಷಣೆ ಮಾಡಿದ್ದು ಇಡೀ ಯೋಜನೆಗೆ ಈಗ ಗ್ರಹಣ ಬಡಿದಂತಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಜವಳಿ ಸಚಿವರನ್ನು ಭೇಟಿ ಮಾಡಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ 17ನೇ ರಾಜ್ಯ ಬಜೆಟ್ ನಲ್ಲಿ ಕಲಬುರಗಿಯ ಮೆಗಾ ಜವಳಿ ಪಾರ್ಕ್ ಬಗ್ಗೆ ಪ್ರಸ್ತಾಪಿಸಿದ್ದು ಸಾವಿರ ಕೋಟಿ ರೂಪಾಯಿ ಕೇಂದ್ರ ನೆರವಿನ ಯೋಜನೆಗೆ ಕಲಬುರಗಿ ಸಮೀಪದ ಹೊನ್ನಕಿರಣಗಿಯಲ್ಲಿ ಸಾವಿರ ಎಕರೆ ಜಮೀನು ಈಗಾಗಲೇ ಹಂಚಿಕೆಯಾಗಿದ್ದು ಮೂಲಭೂತ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರದ ಪಾಲು 390 ಕೋಟಿ ರೂ.ಗಳಲ್ಲಿ 2026 - 27 ನೇ ಸಾಲಿಗೆ ಕೇವಲ 75 ಕೋಟಿ ಮಾತ್ರ ನೀಡಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದಾರೆ. ಇದರಿಂದಾಗಿ ಪ್ರತಿಷ್ಠಿತ ಯೋಜನೆಯು ಶೀಘ್ರ ಅನುಷ್ಠಾನಗೊಳ್ಳುವುದು ಸಂದೇಹಾಸ್ಪದವಾಗಿದ್ದು ರಾಜ್ಯ ಸರ್ಕಾರವು ಮೂಲಭೂತ ಸೌಲಭ್ಯ ಒದಗಿಸಿದರೆ ಕೇಂದ್ರ ಸರ್ಕಾರವು ಕೂಡಲೇ ತನ್ನ ಪಾಲಿನ ಹಣ ಬಿಡುಗಡೆ ಮಾಡಲಿದೆ ಎಂದು ಡಾ. ಜಾಧವ್ ಸುದ್ದಿಗಾರರಿಗೆ ತಿಳಿಸಿದರು.


ಕಲಬುರಗಿ ಮೆಗಾ ಜವಳಿ ಪಾರ್ಕ್ ಜೊತೆಗೆ ಶಿಲಾನ್ಯಾಸ ಮಾಡಿದ ಮಧ್ಯಪ್ರದೇಶದ ಧಾರ್, ಮಹಾರಾಷ್ಟ್ರದ ಅಮರಾವತಿ, ತಮಿಳುನಾಡಿನ ವಿರುಧ್ ನಗರ, ಉತ್ತರ ಪ್ರದೇಶದ ಲಕ್ನೋ, ಗುಜರಾತಿನ ನವಸಾರಿ ಹಾಗೂ ತೆಲಂಗಾಣದ ವಾರಂಗಲ್ ಮೆಗಾ ಜವಳಿ ಪಾರ್ಕ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಕಲಬುರಗಿಯಲ್ಲಿ ಮಾತ್ರ ಜಮೀನು ಹಂಚಿಕೆಯಾಗಿ ಈಗಲೂ 2024ರ ಸ್ಥಿತಿಯಲ್ಲಿಯೇ ಮುಂದುವರಿದಿದ್ದು ಈ ಬಗ್ಗೆ ಯೋಜನೆ ಶೀಘ್ರ ಅನುಷ್ಠಾನಕ್ಕಾಗಿ ಒತ್ತಾಯಿಸಲು ಕೇಂದ್ರದ ಜವಳಿ ಖಾತೆಯ ಸಚಿವರಾದ ಗಿರಿರಾಜ್ ಸಿಂಗ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೂಡಲೇ ಚರ್ಚಿಸಲಾಗುವುದು ಎಂದು ಡಾ. ಜಾಧವ್ ಹೇಳಿದರು.


ಮೆಗಾ ಜವಳಿ ಪಾರ್ಕ್ ಕಾರ್ಯ ಆರಂಭಿಸಿದರೆ ಒಂದು ಲಕ್ಷದಷ್ಟು ನೇರ ಹಾಗೂ ಎರಡು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಕಲ್ಯಾಣ ಕರ್ನಾಟಕ ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಲು ಈ ಯೋಜನೆ ಅನುಕೂಲವಾಗಲಿದೆ. ತಾನು ಸಂಸತ್ ಸದಸ್ಯನಾಗಿದ್ದಾಗ ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ಪೂರಕ ದಾಖಲೆ ಪತ್ರಗಳನ್ನು ಸಿದ್ಧಪಡಿಸಿ ಕೊಟ್ಟ ಪರಿಣಾಮವಾಗಿ ಪ್ರತಿಷ್ಠಿತ ಯೋಜನೆಗೆ ಪ್ರಧಾನಮಂತ್ರಿಗಳು ಮಂಜೂರಾತಿ ನೀಡಿ ಶಿಲಾನ್ಯಾಸ ಮಾಡಿದ್ದಾರೆ. ಆದರೆ ಎರಡು ವರ್ಷ ಕಳೆದರೂ ಯೋಜನೆ ಕಾರ್ಯ ಆಮೆಗತಿಯಲ್ಲಿದ್ದು ಗ್ರಹಣ ಬಡಿದು ಪ್ರಗತಿ ಶೂನ್ಯವಾಗಿದೆ ಎಂದು ಅವರು ತಿಳಿಸಿದರು.


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top