ಈಗ ಸರಕಾರಿ ಶಾಲೆಗಳ ಶಿಕ್ಷಕರು ಕೇವಲ ಪಾಠ ಮಾಡಲು ಇರುವವರಲ್ಲ...!

Upayuktha
0


"ಶಾಲಾ ಶಿಕ್ಷಕರೇ ಮೊಟ್ಟೆ ಖರೀದಿಸಿ, ಬೇಯಿಸಿ, ಸುಲಿದು ಮಕ್ಕಳಿಗೆ ಕೊಡಬೇಕು" ಮಕ್ಕಳಿಗೆ ಪೌಷ್ಟಿಕ ಆಹಾರವಾಗಿ ವಿತರಿಸಲು ಮೊಟ್ಟೆ ಬೇಯಿಸಲು ಇನ್ನುಮುಂದೆ ಆಯಾ ಶಾಲೆಗಳಲ್ಲಿಯೇ ಶಿಕ್ಷಕರ ಮುಂದಾಳತ್ವದಲ್ಲಿ ಮೊಟ್ಟೆ ಬೇಯಿಸಬೇಕಿದೆ! (ಕನ್ನಡಪ್ರಭ 24.03.26)


"ಸರ್ಕಾರಿ ಶಾಲಾ ಮಕ್ಕಳ ಬಿಸಿಯೂಟದಲ್ಲಿ ಮೀನು ಸಾರು ಕೊಡಬೇಕು ತಜ್ಞರ ಅಭಿಮತ" (ಕನ್ನಡಪ್ರಭ)

ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರ ನೇಮಿಸಲು ಹೊರಟ ಸರ್ಕಾರ ಹೊರಟ್ಟಿ ಆಕ್ರೋಶ (ಟಿವಿ 9- 10.03.2026)


***

ಮುಂದಿನ ಹಂತದಲ್ಲಿ, ಮಕ್ಕಳಿಗೆ ಉತ್ತಮ ತಳಿಯ ಮೊಟ್ಟೆ ಕೊಡಲು ಶಾಲೆಯಲ್ಲಿ ಶಿಕ್ಷಕರೇ ಕೋಳಿ ಸಾಕಾಣಿಕೆ ಮಾಡಬೇಕು! ಅಂತ ಬರಬಹುದು!! ಶಾಲೆಯಲ್ಲಿರುವ ಮಕ್ಕಳ ಸಂಖ್ಯೆಯನ್ನು ಆಧರಿಸಿ, ಮಕ್ಕಳಿಗೆ ಬೇಕಾದ ಮೊಟ್ಟೆಗಳು ಎಷ್ಟು ಬೇಕು ಅನ್ನುವುದನ್ನು ಲೆಕ್ಕ ಹಾಕಿ, ಅಗತ್ಯಕ್ಕನುಗುಣವಾಗಿ ಕೋಳಿಗಳನ್ನು ಶಿಕ್ಷಕರು ಶಾಲೆಯಲ್ಲಿ ಸಾಕಬೇಕು ಅಂತಾಗಬಹುದು. 


ಕೋಳಿ ಗಣತಿಗೆ, ದಿನವಹಿ ಕೋಳಿಗಳು ಇಡುವ ಮೊಟ್ಟೆಗಳ ಲೆಕ್ಕಕ್ಕೆ, ಅದನ್ನು ಬೇಯಿಸಿದ್ದಕ್ಕೆ, ಮೊಟ್ಟೆ ಸುಲಿದಿದ್ದಕ್ಕೆ, ಮಕ್ಕಳಿಗೆ ಮೊಟ್ಟ ಹಂಚಿದ್ದಕ್ಕೆ ಬೇರೆ ಬೇರೆ ರಿಜಿಸ್ಟರ್‌ಗಳನ್ನು ಇಟ್ಟು ಶಿಕ್ಷಕರು ಲೆಕ್ಕ ನಿರ್ವಹಿಸಬೇಕು.


ಪೌಷ್ಟಿಕ ಆಹಾರ ವಿತರಣೆಯಲ್ಲಿ ಈಗಾಗಲೆ ಇರುವ ಹಾಲು, ಬಿಸಿಯೂಟ, ಬಿಸಿಯೂಟಕ್ಕೆ ಬೇಕಾಗುವ ತೊಗರಿ ಬೇಳೆ, ಅಕ್ಕಿ, ಸಾಸಿವೆ, ಜೀರಿಗೆ, ಎಣ್ಣೆ, ಬೆಂಕಿಕಡ್ಡಿಗಳನ್ನು ಬಾಣಸಿಗರಿಗೆ ಕೊಡುವಾಗ ಜರ್ನಲ್ ಎಂಟ್ರಿ, ಲೆಡ್ಜರ್ ಎಂಟ್ರಿಗಳನ್ನು ಶಿಕ್ಷಕರು ಬರೆದಿಡಬೇಕು.


ಕಳೆದ ವಾರ ಜಾರಿಗೆ ಬಂದ ಬೀದಿ ನಾಯಿ ಗಣತಿ, ಅವುಗಳ ದೈನಂದಿನ ಮೇಲ್ವಿಚಾರಣೆ, ಅವುಗಳ ಆರೋಗ್ಯ ಸ್ಥಿತಿ, ಬೀದಿ ನಾಯಿಗಳಿಗೆ ಕೊಡುವ ಚಿಕನ್ ಬಿರಿಯಾನಿ ತೂಕದ ಲೆಕ್ಕಗಳನ್ನೂ ಲಾಂಗ್ ಎಕ್ಸಸೈಜ್ ಪುಸ್ತಕದಲ್ಲಿ ಪ್ರತಿನಿತ್ಯ ಬರೆದಿಡಬೇಕು.


ಶಿಕ್ಷಕರು ಮಾಡಬೇಕಾದ ಮತದಾರರ ಪಟ್ಟಿಯ ಮ್ಯಾಪಿಂಗ್, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR Special Intensive Revision), ಜಾತಿ ಗಣತಿ, ಜನ ಗಣತಿ ಲೆಕ್ಕ ದಾಖಲೆಗಳು ಎಂದಿನಂತೆ ಶಿಕ್ಷಕರು ಜವಾಬ್ದಾರಿ ಮುಂದುವರಿಯಲಿದೆ. ಅದೆಲ್ಲವನ್ನು ಘಮ್ ಎನ್ನುವ ಮೀನು ವಾಸನೆಯ ಶಾಲಾ ಕೊಠಡಿಯಲ್ಲಿ ಕುಳಿತು 'ಕ್ಲಾಸ್‌ವರ್ಕ್' ಮಾಡಬೇಕು.


ಶಾಲೆಗಳಲ್ಲಿ ಹದಿನಾರು ವರ್ಷದ ಒಳಗಿನ ಮಕ್ಕಳು ಮೊಬೈಲ್ ಬಳಸದಂತೆ ಕಾನೂನು ಬಿಗಿ ಗೊಳಿಸಿದ್ದು, ಪ್ರತಿ ದಿನ ಪ್ರತೀ ಮಕ್ಕಳ ಪಾಠಿಚೀಲ ಪರೀಕ್ಷಿಸಿ, ಮೊಬೈಲ್ ರಿಜಿಸ್ಟರ್‌ನಲ್ಲಿ ದಾಖಲಿಸುವುದು ಶಿಕ್ಷಕರ ಕಡ್ಡಾಯ ದಿನಚರಿ ಆಗಿರುತ್ತದೆ.


ಪ್ರತೀ ತಿಂಗಳು SDMC ಮೀಟಿಂಗ್, ಮಕ್ಕಳ ಪೋಷಕರೊಂದಿಗೆ ಸಂವಹನ ಕಾರ್ಯಕ್ರಮಗಳನ್ನು ಆಯೋಜನೆ ಮತ್ತು ಅವುಗಳ ದಾಖಲೀಕರಣ ಮಾಡುವುದು ಶಾಲಾ ಶಿಕ್ಷಕರ ಆದ್ಯತೆ ಕರ್ತವ್ಯವಾಗಿರುತ್ತದೆ. ದಾಖಲೀಕರಣ ಮಾಡಲು ಶಾಲೆಯಲ್ಲಿ ಸಮಯಾವಕಾಶ ಇಲ್ಲದಿದ್ದರೆ, ನೋಟ್‌ಬುಕ್‌ಗಳನ್ನು ಮನೆಗೆ ಕೊಂಡೊಯ್ದು, ಮನೆಯಲ್ಲಿ ಅಂದಂದಿನ ದಾಖಲೀಕರಣದ ಹೋಮ್‌ವರ್ಕ್ ಮಾಡಬೇಕು.


ಶಾಲೆಯ ಆವರಣದಲ್ಲಿ ಹೂವು ಹಣ್ಣುಗಳ ಗಿಡಗಳನ್ನು ನೆಡುವುದು, ಅವುಗಳ ನಿತ್ಯ ನಿರ್ವಹಣೆ, ಗಿಡ, ಹೂವು, ಹಣ್ಣುಗಳ ಲೆಕ್ಕದ ದಿನಚರಿಗಳನ್ನು ಶಿಕ್ಷಕರು ಸ್ವಯಂ ಸ್ಪೂರ್ತಿಯಿಂದ ನಿರ್ವಹಿಸುವುದನ್ನು ಕಡ್ಡಾಯ ಮಾಡಬೇಕಾಗುತ್ತದೆ.


ಎಲ್ಲ ದಾಖಲೆ, ದಿನಚರಿ ಪುಸ್ತಕ, ರಿಜಿಸ್ಟರ್‌ಗಳು, ಲೆಕ್ಕದ ಪುಸ್ತಕ, ಮಕ್ಕಳ-ನಾಯಿಗಳ-ಕೋಳಿಗಳ-ಮೀನುಗಳ ಅಟೆಂಡೆನ್ಸ್ ರಿಜಿಸ್ಟರ್‌ನ್ನು ತಿಂಗಳ ಅವಧಿಗೊಮ್ಮೆ BO ಕಛೇರಿಗೆ ಕೊಂಡೊಯ್ದು, BO ರವರಿಂದ ಪರಿಶೀಲನೆ ಮಾಡಿಸಿ ರುಜು ಪಡೆಯುವುದು ಶಿಕ್ಷಕರ ಮಾಸಿಕ ಜವಾಬ್ದಾರಿ ಆಗಿರುತ್ತದೆ.


ಇವಿಷ್ಟರ ಮಧ್ಯೆ ಶಿಕ್ಷಕರಿಗೆ ಮಕ್ಕಳಿಗೆ ಪಾಠ, ಮಕ್ಕಳಿಗೆ ಪರೀಕ್ಷೆ, ಮೌಲ್ಯಮಾಪನ, ವೀಕ್ ಇರುವ ಮಕ್ಕಳಿಗೆ ಎಕ್ಸ್‌ಸ್ಟ್ರಾ ಪೀರಿಯಡ್ ಕೋಚಿಂಗ್, ಮಕ್ಕಳ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳ ಗಮನ, ರಾಷ್ಟ್ರಿಯ ದಿನಾಚರಣೆಗೆ ಮಕ್ಕಳ ಸಿದ್ಧತೆ, ಫೀಸ್ ಕಲೆಕ್ಷನ್ -ಲೆಕ್ಕಾಚಾರ -ದಾಖಲೆ ಇಡುವುದು..... ಇವು ಎಂದಿನಂತೆ ಮುಂದುವರಿಯುತ್ತವೆ.


ಇವಿಷ್ಟು ಸರಕಾರಿ ಶಾಲೆಗಳ ಶಿಕ್ಷಕರಿಗೆ ಕೊಡಲ್ಪಟ್ಟ ಜವಾಬ್ದಾರಿಯುತ ಕೆಲಸಗಳು.  


ಇದರ ಜೊತೆಗೆ, ಶಿಕ್ಷಕರಿಗೆ ಇನ್ನಷ್ಟು ಹೊಸ ಜವಾಬ್ದಾರಿಯುತ ಕೆಲಸಗಳ ಸಂಯೋಜನೆಯು ಶಿಕ್ಷಣ ಇಲಾಖೆಯ ಮುಂದಿದ್ದು, ಸೂಕ್ತ ಪರಿಷ್ಕರಣೆಯೊಂದಿಗೆ ಮುಂದಿನ ದಿನಗಳಲ್ಲಿ ಅವುಗಳನ್ನು ಜಾರಿಗೆ ತರಲು ಸರಕಾರ ಗಂಭೀರ ಚಿಂತನೆ ನೆಡೆಸುತ್ತಿರಬಹುದು!!.

***

ಹಾಂ. ಶಿಕ್ಷಕರಿಗೆ ಇಷ್ಟೊಂದು ಜವಾಬ್ದಾರಿ, ಕೆಲಸ, ನಿರ್ವಹಣೆ, ಅಕೌಂಟಬಿಲಿಟಿಗಳನ್ನು ವಿಧಿಸುತ್ತಿರುವುದು ಏಕೆ!? ಎರಡು ಕಾರಣಗಳ ಸಾಧ್ಯತೆ ಇವೆ!!:


ಕಾರಣ ಒಂದು:

ಶಿಕ್ಷಕರು ಶಾಲೆಯಲ್ಲಿ ಪಾಠ ಮಾಡುವಾಗ ಹಿಂದಿನ ಬೇಂಚಿನ ಶೂನ್ಯ ಪ್ರತಿಭಾವಂತ ಹುಡುಗರಿಗೆ ಕೊಡುತ್ತಿದ್ದ 25 ಬಾರಿ ಬರೆಯುವ ಶಿಕ್ಷೆ, ವಿಪರೀತ ಹೋಮ್‌ವರ್ಕ್, ಸ್ಟ್ಯಾಂಡ್‌ಅಪ್ ಆನ್ ದಿ ಬೆಂಚ್, ಗೆಟೌಟ್ ಫ್ರಂ ಮೈ ಸ್ಕೂಲ್, ಡಿಬಾರ್ ಆದೇಶಗಳು!!!.....  ಇವುಗಳಿಂದ ಬೇಸತ್ತು, ವಿದ್ಯೆಯನ್ನೂ, ಸಾಮಾನ್ಯ ಜ್ಞಾನವನ್ನು ಕಲಿಯದೆ, ಶಿಕ್ಷಕ ಕಮ್ಯುನಿಟಿಯ ಮೇಲೆ ದ್ವೇಷ ಬೆಳೆಸಿಕೊಂಡು, ಶಾಲೆಯಿಂದ ಹೊರಬಂದ ಶೂನ್ಯ ಪ್ರತಿಭಾವಂತ ವಿದ್ಯಾರ್ಥಿ, ಜನ ಬೆಂಬಲದೊಂದಿಗೆ ಜನ ಪ್ರತಿನಿಧಿಯಾಗಿ ಗೆದ್ದು ಬಂದು, ರಾಜಕೀಯವಾಗಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಭೂತಿ ದುರಂಧರರು, ಶಿಕ್ಷಕರ ಮೇಲೆ ತೀರಿಸಿಕೊಳ್ಳುತ್ತಿರುವ ಸೇಡಿನ ಭಾಗ ಇರಬಹುದು ಎನ್ನುವುದು ಮೇಲ್ನೋಟಕ್ಕೆ ಕಾಣುವ ಶಂಕೆ!!! (ತಮಾಷೆಯಾಗಿ)


ಕಾರಣ ಎರಡು

ಸರಕಾರಿ ಶಾಲೆಗಳನ್ನು ಏನಾದರು ಮಾಡಿ ಮುಚ್ಚಬೇಕು. ಹಾಗೆ ಮುಚ್ಚುವುದರಿಂದ ತಮ್ಮದೇ ಖಾಸಗೀ ಶಾಲೆಗಳಿಗೆ ಡೊನೇಷನ್ ಹೆಚ್ಚು ಸಿಗುತ್ತದೆ ಎಂಬ ದೂರದೃಷ್ಟಿ ಹೊಂದಿರುವ ಶಾಲಾಡಳಿತ ಮತ್ತು ರಾಜ್ಯಾಡಳಿತ ಎರಡನ್ನೂ ನೆಡೆಸುತ್ತಿರುವ ಜನಪ್ರತಿನಿಧಿಗಳು! ಪೌಷ್ಟಿಕಾಂಶದ ನೆವದಲ್ಲಿ ಮೊಟ್ಟೆ, ಮೀನು ಸಾರು... ಗಳನ್ನು ಕೊಟ್ಟರೆ ಮೊಟ್ಟ, ಮೀನುಗಳನ್ನು ಕೈಯಲ್ಲೂ ಮುಟ್ಟದ ಕಮ್ಯುನಿಟಿಯವರು (ಜೈನ್, ಲಿಂಗಾಯತ್, ಮಾರ್ವಾಡಿ, ಬ್ರಾಹ್ಮಣ...) ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳಿಸಲಾರರು.  ಬೀದಿ ನಾಯಿ ನಿರ್ವಹಣೆ, ಮೊಟ್ಟೆ ಬೇಯಿಸುವ ಕೆಲಸ, ಮೀನು ಸಾರು ಮಾಡುವ ಉದ್ಯೋಗಗಳು ಶಿಕ್ಷಕರ ಶಾಲಾ ದಿನಚರಿಯಾದರೆ, ಸರಕಾರಿ ಶಾಲೆಯ ಶಿಕ್ಷಕ ಹುದ್ಧೆಗೆ ಮನುಷ್ಯರಾದವರು ಅರ್ಜಿ ಕೂಡ ಹಾಕುವುದಿಲ್ಲ! ಮಕ್ಕಳಿಲ್ಲದ, ಶಿಕ್ಷಕರಿಲ್ಲದ ಶಾಲೆಗಳನ್ನು ಮುಚ್ಚಿದರೆ... ಇರುವ ಮಕ್ಕಳೆಲ್ಲ ಡೊನೇಷನ್ನು, ಫೀಸು ಹಿಡ್ಕೊಂಡು ಖಾಸಗಿ ಶಾಲೆಗೆ ಬರ್ತಾರೆ.  


ಬಹುಷಃ ಇಂತಹ ಕ್ರಿಮಿನಲ್ ಐಡಿಯಾಗಳು ಶಾಲೆಯ ಲಾಸ್ಟ್ ಬೇಂಚಿಂದ ವಿಧಾನ ಸಭೆಯ ಫಸ್ಟ್ ಬೇಂಚಿಗೆ ಬಂದವರಿಗೆ ಬಂದಿರಬೇಕು!!?


ಇಷ್ಟಾದರೂ ಸರಕಾರಿ ಶಿಕ್ಷಕರು ಈ ಹೊಸ ಹೊಸ ಅಡಿಷನಲ್ ವರ್ಕ್‌ಗಳ ಬಗ್ಗೆ ಯಾಕೆ ಚಕಾರ ಎತ್ತುತ್ತಿಲ್ಲ ಅನ್ನುವುದು ಇನ್ನೊಂದು ಪ್ರಶ್ನೆ!!.


ಕೊನೇ ಬೇಂಚಲ್ಲಿ ಕುಳಿತ ಶೂನ್ಯ ಪ್ರತಿಭಾವಂತರಿಗೆ ಕೇಳಿದ ಎರಡು ಪ್ರಶ್ನೆ, ಕೊಟ್ಟ ಮೂರು ಹೋಮ್‌ವರ್ಕ್‌ಗೇ ಇಷ್ಟೆಲ್ಲಾ ಆಗಿದೆ, ಇನ್ನು ಹೊಸ ಹೊಸ ಅಡಿಷನಲ್ ವರ್ಕ್‌ಗಳ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮ ಗತಿ ಏನಾಗಬಹುದು ಅಂತ ಶಿಕ್ಷಕರು ಭಯ ಹೊಂದಿರಬಹುದಾ? "ಏನಾದರು ಹೊಸ ಹೊಸ ಬೋಧನೇತರ ಕೆಲಸ ಕೊಡಲಿ, ಹಂದಿ ಮಾಂಸ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ, ಅದನ್ನೂ ಶಿಕ್ಷಕರು ಬೇಯಿಸಿ ಮಕ್ಕಳಿಗೆ ಕೊಡಲಿ ಅಂತ ಕ್ಲಾಸ್‌ವರ್ಕ್ ಕೊಟ್ಟರೆ... ಅದನ್ನೂ ಮಾಡುತ್ತೇವೆ" ಅಂತ ಶಿಕ್ಷಕರು ಮೌನವಾಗಿ ಸಹಿಸಿಕೊಂಡಿದ್ದಾರಾ!?


ಏನೋಪ, ಈಗೀಗ ಸರಕಾರಿ ಶಿಕ್ಷಕರ ಜೊತೆ ಮಾತಾಡುವುದಕ್ಕೂ ಸಂಕೋಚ, ಬೇಜಾರು, ಅನುಕಂಪ ಎಲ್ಲ ಒಟ್ಟಿಗೆ ಉಂಟಾಗುತ್ತದೆ.


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top