ವಿಶ್ವ ರಂಗಭೂಮಿ ದಿನಾಚರಣೆ
-ಎನ್.ವ್ಹಿ.ರಮೇಶ್
ನಿವೃತ್ತ ಕಾರ್ಯಕ್ರಮ ಅಧಿಕಾರಿಗಳು
ಆಕಾಶವಾಣಿ
ವಿಶ್ವ ರಂಗಭೂಮಿ ದಿನವನ್ನು ಪ್ರತಿ ವರ್ಷ ಮಾರ್ಚ್ 27 ರಂದು ಆಚರಿಸಲಾಗುತ್ತದೆ. 1961 ರಲ್ಲಿ ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆ (ಐಟಿಐ) ಗೊತ್ತುಪಡಿಸಿದ ಈ ದಿನವು ರಂಗಭೂಮಿ ಕಲೆಗಳ ಸಾರ, ಸೌಂದರ್ಯ ಮತ್ತು ಪ್ರಾಮುಖ್ಯತೆ, ಮನರಂಜನೆಯಲ್ಲಿ ಅವುಗಳ ಮಹತ್ವದ ಪಾತ್ರ ಮತ್ತು ರಂಗಭೂಮಿ ಜೀವನದ ಮೇಲೆ ಬೀರುವ ಸಾಂಕೇತಿಕ ಪ್ರಭಾವವನ್ನು ಆಚರಿಸುತ್ತದೆ. ಈ ದಿನವು ಜನರಿಗೆ ರಂಗಭೂಮಿಯ ಮೌಲ್ಯ ಮತ್ತು ಆರ್ಥಿಕ ಬೆಳವಣಿಗೆಗೆ ಅದರ ಸಾಮರ್ಥ್ಯವನ್ನು ಇನ್ನೂ ಅರಿತುಕೊಳ್ಳದ ಸರ್ಕಾರಗಳು, ರಾಜಕಾರಣಿಗಳು, ಸಂಸ್ಥೆಗಳು ಮತ್ತು ಪ್ರಪಂಚದಾದ್ಯಂತದ ಪಾಲುದಾರರಿಗೆ ತಿಳಿಸಲು ಸಹ ಕಾರ್ಯನಿರ್ವಹಿಸುತ್ತದೆ.
ನಾನು 1958ರಿಂದ ಅಂದರೆ ನನ್ನ 7ನೇ ವರ್ಷದಿಂದ ಇದುವರೆಗೆ ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ, ಜಾನಪದ ರಂಗಭೂಮಿ ಇವೆಲ್ಲವುಗಳೊಂದಿಗೆ ಸಂಪರ್ಕ ಹೊಂದಿರಲು, 1936ರಿಂದ ಮೈಸೂರಿನ ಖಾಸಗಿ ಆಕಾಶವಾಣಿಯಲ್ಲಿದ್ದು , ಮುಂದೆ ಭಾರತ ಸರ್ಕಾರದ ಆಕಾಶವಾಣಿ ಸೇವೆಯಲ್ಲಿ ರೇಡಿಯೋ ನಾಟಕಗಳ ಅತ್ಯುತ್ತಮ ನಟ, ನಿರ್ದೇಶಕರಾಗಿದ್ದ ನನ್ನ ತಂದೆ ಎನ್.ಎಸ್. ವಾಮನ್ ಮುಖ್ಯ ಕಾರಣ. ಅವರು 40-50ರ ದಶಕದಲ್ಲಿ ಮೈಸೂರು ಆಕಾಶವಾಣಿಯ ವಾರದ ಎಲ್ಲ ಪ್ರಸಾರ ನಾಟಕಗಳಲ್ಲಿ ವಿವಿಧ ಕಲಾವಿದರಿಗೆ ತರಬೇತಿ ಕೊಡುತ್ತಿದ್ದ ಕಾಲದಲ್ಲಿ ಡಾ. ರಾಜ್‍ಕುಮಾರ್ ಬಾಲಕೃಷ್ಣ, ನರಸಿಂಹರಾಜು, ಜಿ.ವಿಅಯ್ಯರ್, ಬಿ ಸರೋಜಾದೇವಿ ಮುಂತಾದ ನೂರಾರು ಕಲಾವಿದರನ್ನು ನಿರ್ದೇಶಿಸಿದ್ದರು. ಕೆ.ಎಸ್ ಅಶ್ವಥ್, ಮಾಸ್ಟರ್ ಹಿರಣ್ಣಯ್ಯ ನನ್ನ ತಂದೆ ಪಟ್ಟ ಶಿಷ್ಯರು. ಮಾಸ್ಟರ್ ಹಿರಣ್ಣಯ್ಯ ಅವರು ವೃತ್ತಿ ರಂಗಭೂಮಿಯಲ್ಲಿ ಕ್ರಾಂತಿಯನ್ನೇ ಮಾಡಿದ ಲಂಚಾವತಾರ, ಭ್ರಷ್ಟಾಚಾರ ಮುಂತಾದ ನಾಟಕಗಳನ್ನ ಆಡಿ, ಅನೇಕರಿಗೆ ರಂಗಭೂಮಿಯ ಮೇಲಿಂದ ಮಾತಿನ ಚಾಟಿ ಏಟುಗಳನ್ನು ಕೊಟ್ಟವರು. ನಾನೂ ಸಹ ಚಿಕ್ಕಂದಿನಿಂದ ನಮ್ಮ ಮನೆಗೆ ಬರುತ್ತಿದ್ದ ಈ ಎಲ್ಲಾ ರಂಗಭೂಮಿಯ ಚಿತ್ರರಂಗದ ಕಲಾವಿದರು - ನಿರ್ದೇಶಕರು, ನಾಟಕಕಾರರನ್ನು ನೋಡಿದ್ದೇನೆ, ಅವರ ಅಭಿನಯವನ್ನು ಕಂಡು ಬೆಕ್ಕಸ ಬೆರಗಾಗಿದ್ದೇನೆ. ನಾನು ನೂರಾರು ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರನ್ನು, ಹಳೆಯ ಹಳ್ಳಿಯ ನಾಟಕ ಮೇಷ್ಟ್ರುಗಳನ್ನು ಸಂದರ್ಶಿಸಿದ್ದೇನೆ. ಅವುಗಳನ್ನು ನನ್ನ 36ವರ್ಷಗಳ ಆಕಾಶವಾಣಿ ಸೇವೆಯ ಕಾಲದಲ್ಲಿ ಪ್ರಸಾರ ಮಾಡಿದ್ದೇನೆ.
ನನ್ನ ತಂದೆ ಸುಮಾರು 500 ವೃತ್ತಿ ರಂಗಭೂಮಿ ನಾಟಕಗಳ ಬಾನುಲಿ ರೂಪ ಹಾಗೂ ಒಟ್ಟೂ 2,000 ಬಾನುಲಿ ನಾಟಕಗಳ ನಿರ್ದೇಶನ ಹಾಗೂ ಅಭಿನಯ ಮಾಡಿದ್ದಾರೆ. ನಾನೂ ಸುಮಾರು 10 ರಂಗಭೂಮಿ ನಾಟಕಗಳ ಬಾನುಲಿ ರೂಪ ಪ್ರಸಾರ ಮಾಡಿದ್ದಲ್ಲದೇ 500ಕ್ಕಿಂತ ಹೆಚ್ಚು ಬಾನುಲಿ ನಾಟಕಗಳ ನಿರ್ದೇಶನ ನಿರ್ಮಾಣ ಮಾಡಿದ್ದೇನೆ.
1958-59ರ ಕಾಲದಲ್ಲಿ ಗುಬ್ಬಿ ಕಂಪನಿಯ ಮೂಲಕ ಗುಬ್ಬಿ ವೀರಣ್ಣನವರು ಪ್ರದರ್ಶಿಸಿದ ಕುರುಕ್ಷೇತ್ರ ನಾಟಕವನ್ನು ನೋಡಿದ್ದೇನೆ. ಅದರಲ್ಲಿ ರಂಗದ ಮೇಲೆ ರಥಗಳು, ಕುದುರೆಗಳು ಬಂದಿದ್ದವು . ಹಾಗೆಯೇ ಮುಂದೆ ಸುಳ್ಯದ ದೇಸಾಯಿ ಅವೆರ ಕಂಪನಿಯ ಕಿತ್ತೂರು ಚೆನ್ನಮ್ಮ ನಾಟಕದಲ್ಲಿ ಹೆಚ್.ಪಿ ಸರೋಜ ಅವರು ಕಿತ್ತೂರು ಚೆನ್ನಮ್ಮ ಆಗಿ ರಂಗದ ಮೇಲೆ ಕುದುರೆ ಏರಿ ಬರುತ್ತಿದ್ದರು. ಒಮ್ಮೆ ರಂಗಭೂಮಿಯ ಮೇಲೆ ನಾಟಕಕ್ಕಾಗಿ ಆನೆಯೂ ಬಂದಿತ್ತು. ರಂಗಭೂಮಿಯಲ್ಲಿ ಅಕ್ಷರಾಭ್ಯಾಸವೇ ಮಾಡಿರದ ನಿರಕ್ಷರ ಕುಕ್ಷಿ ಕಲಾವಿದರು ತಮ್ಮ ಅವಿರತ ಪ್ರಯತ್ನ ಹಾಗೂ ಪ್ರಾಕ್ಟೀಸುಗಳಿಂದ ಹಳೆಗನ್ನಡದ ಸಂಸ್ಕøತ ಜನ್ಯ ಕನ್ನಡ ಭಾಷೆಯ ಮೂರು ನಾಲ್ಕು ಪುಟಗಳ ಸಂಭಾಷಣೆಯನ್ನು ಒಂದಕ್ಷರವೂ ತಪ್ಪಿಲ್ಲದಂತೆ ಹೇಳಿದುದನ್ನು ಕಂಡು ಬೆಕ್ಕಸ ಬೆರಗಾಗಿದ್ದೇನೆ. ತಾಳ ತಪ್ಪಿದ ಬಾಳು ಎಂಬ ವೀರೇಶ್ವರ ನಾಟಕ ಕಂಪನಿಯ ನಾಟಕದಲ್ಲಿ ಮುಂದೆ ಚಲನಚಿತ್ರ ಕಲಾವಿದರಾದ ಒಬ್ಬ ಕಲಾವಿದರು ಗ್ರಾಮೀಣ ಅಜ್ಜನ ಪಾತ್ರವನ್ನು ನಾಟಕದ ಮೊದಲ ಭಾಗದಲ್ಲಿ ಮಾಡಿ 2ನೇ ಭಾಗದಲ್ಲಿ ಆಧುನಿಕ ಬಾಸ್ ಪಾತ್ರ ಮಾಡಿದ್ದರು. ಗುಡಿಗೇರಿ ಬಸವರಾಜು ಅವರು ರೈತನ ಮಕ್ಕಳು ನಾಟಕದಲ್ಲಿ ಮರದ ದಿಮ್ಮಿಯನ್ನು ಕೊಡಲಿಯಿಂದ ಚೂರು ಚೂರು ಮಾಡುವ ಪಾತ್ರ ಮಾಡಿದ್ದರು. ಹಾಗೆಯೇ ಕೆ.ಎಸ್ ಅಶ್ವಥ್ ಅವರು ಬಂಜೆ ತೊಟ್ಟಿಲು, ಇದೆಂಥ ಸರ್ಕಾರ ಮುಂತಾದ ನಾಟಕಗಳಲ್ಲಿ ಬಳವಂತರಾಯ ಹಾಗೂ ಜಡ್ಜ್ ಪಾತ್ರ ಮಾಡಿದ್ದನ್ನು ನೋಡಿದ್ದೇನೆ, ಹಾಗೆಯೇ ಹಿಂದೆ ಎಂ ಪಂಢರೀಬಾಯಿ, ಕೆ.ಎಸ್ ಅಶ್ವಥ್, ರಾಮಚಂದ್ರಶಾಸ್ತ್ರಿ ಮುಂತಾದವರೊಂದಿಗೆ ಶಾಂತಿನಿವಾಸ ಹಾಗೂ ಭಕ್ತಮೀರ ನಾಟಕ ಮಾಡಿದ್ದರು. ಚಿಂದೋಡಿ ಲೀಲಾ ಅವರು ಕಲಾವಿದೆಯಾಗಿ ಕಂಪನಿ ಮಾಲೀಕರಾಗಿ, ಟಿಕೆಟ್ ಕೌಂಟರ್‍ನಲ್ಲಿ ಟಿಕೆಟ್‍ಗಳನ್ನು ಕೊಡುತ್ತಿದ್ದನ್ನು ನೋಡಿದ್ದೇನೆ.
ನನ್ನ ತಂದೆ ಹಾಗೂ ನಾನು ಎಚ್.ಎಲ್ ಎನ್ ಸಿಂಹ ಅವರು ಬರೆದ ಸಂಸಾರನೌಕ ನಾಟಕದ ಸುಂದರನ ಪಾತ್ರ ಅಭಿನಯಿಸಿದ್ದೇನೆ. ಹಾಗೆಯೇ ಎ.ಎನ್ ಮೂರ್ತಿರಾಯರು ಬರೆದ ಆಷಾಢಭೂತಿ ನಾಟಕದಲ್ಲಿ ನನ್ನ ತಂದೆ ಸುಬ್ಬಾಶಾಸ್ತ್ರೀ, ಪಾತ್ರ ವಹಿಸಿದ್ದರೆ ನಾನು ಕೆ.ಎಸ್ ಅಶ್ವಥ್ ಅವರು ತಂದೆ ಶಂಕರಪ್ಪ ಪಾತ್ರ ವಹಿಸಿದ್ದಾಗ ನಾನು ಅವರ ಮಗ ರಾಮುವಿನ ಪಾತ್ರವನ್ನು ಧಾರವಾಡ ಹುಬ್ಬಳ್ಳಿಗಳಲ್ಲಿ 65ರ ದಶಕದಲ್ಲಿ ಅಭಿನಯಿಸಿದ್ದೇವೆ.
ನಾನು ಡಾ.ರಾಜ್‍ಕುಮಾರ್ ಅವರ ಸಂದರ್ಶನವನ್ನು 3 ಬಾರಿ ಮಾಡಿದ್ದೇನೆ. ದಾದಾ ಸಾಹೆಭ್ ಫಾಲ್ಕೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ನಾನು ಮಾಡಿರುವ ಅವರ ಸಂದರ್ಶನದಲ್ಲಿ ಅವರ ನಾಟಕ ಕ್ಷೇತ್ರದ ಅನುಭವದ ಬಗ್ಗೆ ಅವರು ಹೇಳಿರುವುದನ್ನು ಇಲ್ಲಿ ನಿಮಗಾಗಿ ಬರೆಯುತ್ತಿದ್ದೇನೆ.
ಎನ್.ವ್ಹಿ ರಮೇಶ್ ಪ್ರಶ್ನೆ:- ನಾಟಕ ತಮ್ಮ ತವರು ಮನೆ ಅಂತ ಹೇಳ್ತಿರ. ಆ ನಾಟಕರಂಗದ ನೆನಪನ್ನ ಮಾಡಿಕೊಳ್ತೀರಾ?
ಡಾ. ರಾಜ್‍ಕುಮಾರ್ ;- 43-44 ವರ್ಷಗಳಾಯ್ತು, ಹೆಚ್ಚು ಕಡಿಮೆ ನಾನು ಈ ಚಿತ್ರರಂಗಕ್ಕೆ ಬಂದು. ಅದಕ್ಕೆ ಮುಂಚೆ, ನಮ್ಮ ಅಪ್ಪಾಜಿ ಅವರ ಜೊತೇಲಿ ನಾನು, ನನ್ನ ತಂಗಿ ಶಾರದಮ್ಮ, ನನ್ನ ತಮ್ಮ ವರದಪ್ಪ ಪಾತ್ರ ಮಾಡ್ತಿದ್ವಿ. ಇದೇ ಚಿಕ್ಕಮಗಳೂರಿಗೆ ಪ್ರಥಮ ಬಾರಿ ಬಂದಿದ್ದು, ನಮ್ಮ ಸುಬ್ಬಯ್ಯ ನಾಯಿಡು ಅವರ ಕಂಪನಿ ನಾಟಕಕ್ಕೆ. ಬಹುಶಃ 1952ರ ಸಂದರ್ಭ, ನಾ£ಲ್ಲಿಗೆ ಬಂದಿದ್ದು, ಆವಾಗ ಭಕ್ತ ಅಂಬರೀಷ ನಾಟಕಾನ್ನ ಆಡ್ತಿದ್ರು. ಸುಬ್ಬಯ್ಯ ನಾಯಿಡು ಕಂಪ£ೀಲಿ. ಅಂಬರೀಷನ ತಮ್ಮನಾಗಿ ನಾನು ಪಾತ್ರ ಮಾಡ್ತಿದ್ದೆ. ಆ ಪಾತ್ರಕ್ಕೆ ತುಂಬಾ ಒಳ್ಳೆ ಹೆಸರು. ಬಹುಶಃ ಬೇಡರ ಕಣ್ಣಪ್ಪ ಚಿತ್ರಕ್ಕೆ, ಬೇಡರ ಕಣ್ಣಪ್ಪನ ಪಾತ್ರಕ್ಕೆ ಹೋಗಬೇಕಾದ್ರೆ. ಆ ಅಂಬರೀಷ ನಾಟಕವೇ ಕಾರಣವಾಗಿತ್ತು. ಈ ಮನುಷ್ಯನ ಕರಕೊಂಡು ಹೋದರೆ, ಆ ಪಾತ್ರಕ್ಕೆ ಬಹಳ ಚೆನ್ನಾಗಿರುತ್ತೆ ಅಂತ ಹೇಳಿ, ನನ್ನನ್ನ ಆಯ್ಕೆ ಮಾಡಿ ಕರಕೊಂಡು ಹೋದಾಗಿ£ಂದ, ಇವತ್ತಿನವರೆಗೆ, ಇಲ್ಲಿ ಈ ಚಿತ್ರರಂಗದಲ್ಲಿ ಶಾಶ್ವತವಾಗಿ, ಭಗವಂತ ರಾಜಕುಮಾರ£ಗೆ ಏನು ಗೊತ್ತಿದೆಯೋ ಗೊತ್ತಿಲ್ವೋ! ಅಂತೂ ನಡೆಸಿಬಿಟ್ಟ. ಮತ್ತೆ £ಮಗೆ, ಏನು ರಾಜಕುಮಾರನ ಬಗ್ಗೆ ಅಗಾಧ ನಂಬಿಕೆ ಇದೆಯೋ, ಆ ನಂಬಿಕೇನೇ, ಈ ರಾಜಕುಮಾರನ್ನ ಇಷ್ಟು ಬೃಹದಾಕಾರಕ್ಕೆ ಬೆಳೆಸಿದೆ ಅನ್ನತಕ್ಕ ಭಾವನೆ ಈ ರಾಜಕುಮಾರಲ್ಲಿ ಕೊನೆ ಉಸಿರು ಇರೋವರೆಗೂ ಇರುತ್ತೆ.
ಎನ್.ವ್ಹಿ ರಮೇಶ್ ಪ್ರಶ್ನೆ:- £ಮ್ಮ ಬಾಲ್ಯದಲ್ಲಿ £ಮ್ಮ ತಂದೇವ್ರು ವೃತ್ತಿ ನಾಟಕ ಸಂಸ್ಥೇಲಿ ಇದ್ರಲ್ಲಾ, ಆ ಹಿನ್ನೆಲೇಲಿ ತಮ್ಮ ಮೇಲೆ ಯಾವ ರೀತಿ ನಾಟಕರಂಗದ ಪ್ರಭಾವ ಬೀರ್ತು, ಹೇಳ್ತೀರಾ?ನನಗೆ ಪ್ರಭಾವ ಯಾತಕ್ಕೆ ಬೀರ್ತು. ಹ್ಯಾಗೆ. ಬೀರ್ತು?
ಡಾ. ರಾಜ್‍ಕುಮಾರ್ ;- ಬಹಳ ಚಿಕ್ಕವಯಸ್ಸಿನಿಂದ, ಅವರು ಕೂಡ ಈ ರಂಗಭೂಮಿ ಸೇವೆ ಮಾಡಿದವ್ರು. ನಾಟಕಗಳಲ್ಲಿ ಅನೇಕ ಪಾತ್ರ ಮಾಡಿದವ್ರು. ಅವರ ಸಂಸ್ಥೆಗಳಲ್ಲೆಲ್ಲಾ, ನಮ್ಮ ತಂದೆ ಆ್ಯಕ್ಟ್ ಮಾಡ್ತಾ ಇದ್ರಂತೆ, ಕಲೆ, ಸಾಧಾರಣವಾಗಿ ಅವರ ಹುಟ್ಟು ಗುಣ ಅಂತಾನೇ ಹೇಳಬಹುದು. ಅವರ ತಾತ ಮುತ್ತಾತಂದಿರ ಕಾಲದಿಂದ ಕೂಡ, ಈ ಯಕ್ಷಗಾನ ಮುಂತಾದವುಗಳಿಂದ, ಅವರುಗಳು ಮುಂದೆ ಬಂದರೂಂತ ಹೇಳಬಹುದು. ಇದು ಪರಂಪರೆಯಿಂದ ಬಂದಿರೋದು. ಪ್ರಭಾವ ಹೇಗೆ ಬೀರ್ತೂಂತ ನನಗೇ ಗೊತ್ತಿಲ್ಲ. ನಾನು ಹೆಚ್ಚು ಓದಿದವನಲ್ಲ, ಎಷ್ಠೋ ಸಲ ಹೇಳಿದೀ£. ಬರೀ ಮೂರನೇ ಕ್ಲಾಸ್ ಓದಿದ
ನೆನಪು ಅಷ್ಟೇ. ನನಗೆ. ಇವತ್ತಿನ ಈ ವಿಚಿತ್ರಗಳನ್ನು ನೆನಸಿಕೊಂಡ್ರಿ. ಇಲ್ಲಿತನಕ ನಾನು ಹ್ಯಾಗೆ ಬಂದೆ ಅಂತನ್ನೋದು, ಪ್ರಶ್ನೆಯಾಗೇ ಉಳಿದಿದೆ ನನ್ನಲ್ಲಿ!
ಎನ್.ವ್ಹಿ ರಮೇಶ್ ಪ್ರಶ್ನೆ:- ಅಂದಹಾಗೆ ಕೇಳಿದೀನಿ ನೋಡಿದವ್ರಿಂದ. ನಮ್ಮ ತಂದೆ ಸಿಂಗಾನೆಲ್ಲೂರು ಪುಟ್ಟಸ್ವಾಮಯ್ಯ ನವರು, ರಾಕ್ಷಸನ ಪಾತ್ರದಲ್ಲಿ ರೋಷ, ಆವೇಶ ವ್ಯಕ್ತಪಡಿಸುತ್ತಿದ್ದರಂತೆ. ಆ ವೀರವಾಣಿ ಪ್ರೇಕ್ಷಕರನ್ನ ದಂಗುಬಡಿಸ್ತಾ ಇತ್ತಂತೆ, ಆ ಕಾಲದಲ್ಲಿ ಹುಣಸೂರು ಕೃಷ್ಣಮೂರ್ತಿ ಅವರು ಬರೆದ ಸ್ವರ್ಗ ಸಾಮ್ರಾಜ್ಯ ನಾಟಕದಲ್ಲಿ ವೃತ್ರಾಸುರನ ಪಾತ್ರದಲ್ಲಿ, ಅಮೋಘವಾಗಿ ಅಭಿನಯಿಸಿ, ಮೀಸೆ ಹುರಿ ಮಾಡುತ್ತಾ ರಂಗಪ್ರವೇಶ ಮಾಡ್ತಿದ್ರೆ ಪ್ರೇಕ್ಷಕರಲ್ಲಿ ಅದ್ಭುತ ಅನುಭವವಾಗಿ ಮಿಂಚಿನ ಸಂಚಾರ ಆಗ್ತಿತ್ತಂತೆ. ಈ ಅಭಿನಯ ಕಲೆ £ಮ್ಮಲ್ಲಿ ರಕ್ತಗತವಾಗಿ ಮುಂದುವರೆದಿದ್ದು ಹ್ಯಾಗೆ?
ಡಾ. ರಾಜ್‍ಕುಮಾರ್ ;- ಆಗ ಲೈಟ್‍ಗಳಿಲ್ಲದ ಕಾಲ ನೋಡಿ. ಗ್ಯಾಸ್ ಲೈಟ್ ಸಹ ಗೊತ್ತಿರಲಿಲ್ವಂತೆ ಜನರಿಗೆ. ಆಗ ನಮ್ಮ ಅಪ್ಪಾಜಿ ಹೇಳ್ತಿದ್ರು “ನಮ್ಮ ತಾತಾ ದೊಡ್ಡ ನಾಗೇಗೌಡ ಈ ಕೀಚಕ ವಧೆ ಡ್ರಾಮಾದಲ್ಲಿ, ಕೀಚಕನ ಪಾರ್ಟು ಮಾಡಿ, ಹಿಂದೀಲಿ ಒಂದು ಗಝಲ್‍ಹಾಡ್ತಿದ್ರಂತೆ” ಅಂತ (ನಗು). ಆ ಕಾಲದಲ್ಲಿ ಹಿಂದೀನೋ, ಇನ್ಯಾವುದೋ ಸಂಗೀತ ಬಹಳ ಮುಖ್ಯ (ನಗು).
ಸಾಧಾರಣವಾಗಿ ನಮ್ಮ ಚಿಕ್ಕಪ್ಪ ಸಹ, ಕಾಳಿದಾಸನ ಪಾರ್ಟ್ ಮಾಡ್ತಿದ್ರಂತೆ.ಹಾಗಾದ್ರೆ ಅಭಿನಯ ಕಲೆಗೆ ಪ್ರೇರೇಪಣೆ, ಪ್ರೋತ್ಸಾಹ, ನಮ್ಮ ಕುಟುಂಬದಿಂದಲೇ ಬಂತೂಂತ ಹೇಳಿ.ಪ್ರೇರೇಪಣೆ ಅಂದ್ರೆ, ನಮ್ಮ ಅಪ್ಪಾಜೀನೇ ನನ್ನ ಮೊದಲನೇ ಗುರು.
ಎನ್.ವ್ಹಿ ರಮೇಶ್ ಪ್ರಶ್ನೆ:- ಅಂದಹಾಗೆ £ಮ್ಮ ಬಾಲ್ಯದಲ್ಲಿ, ಟಿ.ಎನ್. ಬಾಲಕೃಷ್ಣ ಅಂದ್ರೆ ಬಾಲಣ್ಣ, ನಮಗೆ ಗುರು ಆಗಿದ್ರಂತೆ!ಬಹಳ ಚಿಕ್ಕಂದಿನಲ್ಲಿ,
ಡಾ. ರಾಜ್‍ಕುಮಾರ್ ;- ನನಗೆ ಆಗ ಸುಮಾರು 7-8 ವರ್ಷ, ವಯಸ್ಸಿರಬಹುದು. ಆವಾಗ ಅ.ಆ.ಇ.ಈ., ಬಾಲಶಿಕ್ಷಣ ಪುಸ್ತಕ, ಅವೆಲ್ಲಾ ಬರೆಸ್ತಾ ಇದ್ರು. ಆಗಿನಿಂದಲೂ ವಿದ್ಯೆ ಮೇಲೆ ಅಷ್ಟು ಆಸಕ್ತಿ ಇಲ್ಲ. ಮಟ್ಟ ತಲೆ. ನನ್ನ ನೋಡಿದ ನಮ್ಮ ಕೆಲ ಹಿರಿಯರು, ತಾಂತದಿರೆಲ್ಲ, “ಸ್ವಲ್ಪ ಕೂಡಾ ಬುದ್ಧಿ ಇಲ್ವಲ್ಲೋ? ಯಾವ ಕಾಲದಲ್ಲಿ ಏನು ದೊಡ್ಡ ಮನುಷ್ಯ ಆಗೋದು? ಅಮ್ಮ ಅಪ್ಪನಿಗೆ ತಕ್ಕ ಹಾಗೆ ಬುದ್ಧಿ ಬರ್ಲಿಲ್ವಲ್ಲೋ?” ಅಂತ ಪ್ರತಿಯೊಬ್ಬರೂ ನನ್ನ ಹಿಯ್ಯಾಳಿಸ್ತಾ ಇದ್ರು. ಅವರು ಪ್ರತಿಯೊಬ್ಬರೂ ನನ್ನ ಹಿಯ್ಯಾಳಿಸ್ತಿದ್ದುದು ಕೇಳಿ ಕೇಳಿ, ನನಗೂ ರೂಢಿಯಾಗಿಟ್ಟು ಒಂದು ತರಹ ಏನು ಜವಾಬು ಹೇಳಬೇಕು ಗೊತ್ತಾಗ್ತಿರಲಿಲ್ಲ. ಅದು ದಡ್ಡತನ ಅಂತೀರಾ? ಜಾಣತನ ಅಂತೀರಾ? (ನಗು)
ಎನ್.ವ್ಹಿ ರಮೇಶ್ ಪ್ರಶ್ನೆ:-.ರಂಗಭೂಮಿಯಿಂದ ತಾವು ಚಿತ್ರರಂಗಕ್ಕೆ, ಅಂದ್ರೆ ಮುತ್ತುರಾಜ ಅವರು ರಾಜಕುಮಾರ್ ಆಗಿ, ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸೋ ಮೊದಲು ಹ್ಯಾಗಿತ್ತು
ಡಾ. ರಾಜ್‍ಕುಮಾರ್ ;- ರಂಗಭೂಮಿ ಸೇವೆ, £ಮ್ಮ ರಂಗಭೂಮಿ ಅನುಭವ ಏನು? ಬಹಳ ಚೆನ್ನಾಗಿತ್ತು. ಹಳೇದೂ ಯಾವತ್ತು ಚೆನ್ನಾಗಿರುತ್ತೆ. ರಂಗಭೂಮಿ ಅನ್ನೋದು, ಅದು ತಾಯಿ ಮನೆ ನಮಗೆ. ತಾಯಿ ಮನೆಯಿಂದ ಚಿತ್ರರಂಗಕ್ಕೆ ಬಂದಿದ್ದು, ತಾಯಿ ಮನೆಯಿಂದ ಚಿಕ್ಕಮ್ಮನ ಮನೆಗೆ ಬಂದ ಹಾಗೆ ಇದು ಲೆಕ್ಕ! ಯಾಕೆಂದ್ರೆ ಈಗ ತರಬೇತಿ ಕೇಂದ್ರಾಂತ, ನಾಟಕ ಚಲನಚಿತ್ರಕ್ಕೆ ಮಾಡ್ಕೊಂಡಿದ್ದಾರೆ. ಆ ತರಹ ಯಾವ ಅನುಭವಾನೂ ನಮಗಿರಲಿಲ್ಲ. ಅಂದ್ರೆ ಆ ಕಾಲದಲ್ಲಿ ತರಬೇತಿ ಅಂದ್ರೆ, ಪ್ರಾಕ್ಟಿಕಲ್ಸ್ ಅಷ್ಟೇ, ಹೊರತು ಓದಿಸಿ, ಅದರ ಬಗ್ಗೆ ತರಬೇತಿ ಇರ್ಲಿಲ್ಲ.ಹೌದು ನಾಟಕರಂಗವೇ ಮೂಲ. ಪಾತ್ರಗಳು ಸಹ ಹೇಳ್ಕೋಳ್ಳೋ ಅಂತಹ ದೊಡ್ಡ ಪಾತ್ರಗಳನ್ನು ನಾನೇನೂ ಮಾಡದೇ ಹೋದ್ರೂ, ನಮ್ಮ ತಂದೇವ್ರು ಕಾಲವಾಗೋಕೆ 1-1 1/2 ವರ್ಷ ಮೊದಲು, ಸ್ವಲ್ಪ ಉತ್ತಮವಾದ ಪಾತ್ರಗಳನ್ನ ಮಾಡೋವಂಥ ಅವಕಾಶ ನನಗೆ ಸಿಕ್ತು. ನಮ್ಮ ಸುಬ್ಬಯ್ಯನಾಯಿಡು ಅವರ ಕ ನೀಲೂ ಇದ್ದೆ ನಾನು. ಭಕ್ತ ಅಂಬರೀಷದಂತಹ ನಾಟಕ ಮಾಡ್ತಿದ್ದೆ.
ಸುಬ್ಬಯ್ಯನಾಯಿಡು ಅವರು ಅಂಬರೀಷನ ಪಾತ್ರ ಆ್ಯಕ್ಟ್ ಮಾಡ್ತಿದ್ರು ಅವರ ತಮ್ಮನಾಗಿ ನಾನು ಪಾತ್ರ ಮಾಡ್ತಿದ್ದೆ.ರಮಾಕಾಂತನ ಪಾತ್ರ? ಹೌದು. ಆ ಪಾತ್ರ ಒಳ್ಳೇ ಹೆಸರು ಸಂಪಾದಿಸ್ತು. ಶಿವಮೊಗ್ಗಾದಲ್ಲಿ ಕೂಡ ಆ ನಾಟಕ ಆಡಿದ್ರು. ಸುಮಾರು 1952ನೇ ಇಸವಿ.ನಮಗೆ ಕಲೆಯಲ್ಲಿ ಶ್ರದ್ಧೆ, ಪ್ರೇಕ್ಷಕರಲ್ಲಿ ಭಕ್ತಿ! ಅದೇ ನಮ್ಮ ಶಕ್ತಿ ಅನಿಸುತ್ತೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


