ಮಲೆನಾಡಿನಲ್ಲಿ ಖನಿಜ ಸಮೀಕ್ಷೆ: ಅಭಿವೃದ್ಧಿಯ ಹೆಸರಿನಲ್ಲಿ ಗುಪ್ತ ಕಾರ್ಯಸೂಚಿಯೇ?

Upayuktha
0


ಜಮೀನಿನಲ್ಲಿ ತೆಂಗಿನ ಕಾಯಿ ಹಿಡಿದು ನೀರಿನ ಲಭ್ಯತೆಯ ಸಮೀಕ್ಷೆ ಮಾಡವುದರ ಹಿಂದೆ ಇರುವ ಉದ್ದೇಶ ಬಾವಿ ತೆಗೆಸುವುದಲ್ಲದೆ ಬೇರೆ ಏನಿರಲು ಸಾಧ್ಯ!!?


ನೀರು ಇರುವಿಕೆಯನ್ನು ಶೋಧಿಸುವ ವಿಜ್ಞಾನ ತಜ್ಞರು ಅಥವಾ ತೆಂಗಿನ ಕಾಯಿ ಹಿಡಿದು ನೀರು ಸಿಗುವ ಸಾಧ್ಯತೆ, ಆಳ, ಸಿಗುವ ನೀರಿನ ಪ್ರಮಾಣಗಳನ್ನು ಯಾರಾದರು ಪರೀಕ್ಷಿಸುತ್ತಿದ್ದಾರೆ ಅಂತಾದರೆ... ಅವರಿಗೆ ಬಾವಿ/ಬೋರ್‌ವೆಲ್ ತೋಡಿಸಿ, ನೀರು ಹೊರ ತೆಗೆಯುವ ಉದ್ದೇಶ ಇದೆ ಅಂತ ಅರ್ಥ ಅಲ್ಲವೆ? ನೀರು ಸಿಗುತ್ತದೆ ಅಂತಾದಾಗ ಖಂಡಿತವಾಗಿ ಬಾವಿ/ಬೋರ್‌ವೆಲ್ ತೋಡಿಸಿಯೇ ತೋಡಿಸುತ್ತಾರೆ ಅಲ್ಲವೆ?


ಅದೇ ರೀತಿ, ಖನಿಜ ನಿಕ್ಷೇಪ ಇರುವಿಕೆಯನ್ನು ವೈಮಾನಿಕ ಸಮೀಕ್ಷೆಯೊಂದಿಗೆ ಗುರುತಿಸುವಿಕೆಯ ಹಿನ್ನಲೆಯೂ ಇದೇ ಇರುವುದು ಎನ್ನುವುದು ಸ್ಪಷ್ಟ.  ಒಂದು ವೇಳೆ ತುಂಬ ಅಮೂಲ್ಯವಾದ ಖನಿಜ ಪಶ್ಚಿಮ ಘಟ್ಟದಲ್ಲಿ ಇರುವಿಕೆಯು ವೈಮಾನಿಕ ಸಮೀಕ್ಷೆಯಿಂದ ಗೊತ್ತಾದರೆ, ಅದನ್ನು ಹೊರ ತೆಗೆಯುವ ಪ್ರಯತ್ನ ಶುರುವಾಗಿಯೇ ಆಗುತ್ತದೆ ಹೊರೆತು, ಕೇವಲ ನಾಲ್ಕನೇ ತರಗತಿಯ ಭೂಗೋಳ ಪಠ್ಯದಲ್ಲಿ ಖನಿಜ ನಿಕ್ಷೇಪದ ಅರ್ಧ ಪುಟ ಪಾಠ ಸೇರಿಸುವುದಕ್ಕಲ್ಲ ಎಂಬುದು ಇವತ್ತಿನ ಎರಡನೇ ತರಗತಿಯ ಆಲ್ಫಾ ಹುಡುಗರಿಗೂ ಅರ್ಥವಾಗುತ್ತದೆ!!


1) ಪಶ್ಚಿಮ ಘಟ್ಟದಲ್ಲಿ ಧಾರಣಾ ಶಕ್ತಿ ಕುಸಿಯುತ್ತಿದೆ, ಜೀವ ವೈವಿಧ್ಯತೆ ಕ್ಷೀಣಿಸುತ್ತಿದೆ ಎಂಬಲ್ಲ ವರದಿ ತಯಾರಿಕೆಯ ಹಿನ್ನಲೆ....


2) ಮಲೆನಾಡಿನ ನೆಲವಾಸಿಗಳ ಜೀವನಾಧಾರ ಒತ್ತುವರಿಗೆ ಹಕ್ಕು ಪತ್ರ ಕೊಡದೆ, ಸೆಕ್ಷನ್ 4, ಸುಪ್ರಿಮ್ ಕೋರ್ಟ್ ಸಲಹೆ, ಗೋಮಾಳ-ಸಪ್ಪಿನ ಬೆಟ್ಟ-ಖಾನು ಇತ್ಯಾದಿಗಳ ಗೊಂದಲಗಳನ್ನು ಮುಂದಿಟ್ಟು ಸತಾಯಿಸುತ್ತಿರುವುದು....


3) ಕಾಡು ಪ್ರಾಣಿ-ಮಾನವ ಸಂಘರ್ಷಕ್ಕೆ ಉದ್ದೇಶ ಪೂರ್ವಕವಾಗಿ ಶಾಶ್ವತ ಪರಿಹಾರ ಒದಗಿಸದೆ, ಘರ್ಷಣೆ, ಕೃಷಿ ಭೂಮಿ-ಬೆಳೆ ನಾಶ, ಮಾನವ ಸಾವುಗಳನ್ನು ಯಥಾಸ್ಥಿತಿಯಲ್ಲಿ ಇರಿಸಿರುವುದು..., ಯಥಾಸ್ಥಿತಿಯಲ್ಲಿ ಇಟ್ಟು ಆನೆ ಪಡೆ, ಹುಲಿ ಪಡೆಗಳನ್ನು ನಿಯೋಜಿಸುತ್ತಿರುವುದು... 


4) ಮಲೆನಾಡಿನಲ್ಲಿ ಜೀವನಾಡಿ ಬೆಳೆಯಾದ ಅಡಿಕೆ, ಕಾಫಿ, ಭತ್ತಗಳಿಗೆ ಎಲೆಚುಕ್ಕಿ ರೋಗ, ಹಳದಿ ರೋಗ, ಬೆಂಕಿರೋಗಗಳ ತೀವ್ರತೆಗೆ ವೈಜ್ಞಾನಿಕ ಸಂಶೋಧನೆ - ಅಧ್ಯಯನ - ಶಾಶ್ವತ ಪರಿಹಾರ ಮಾರ್ಗಗಳನ್ನು ನೀಡದಿರುವುದು....


5) ಮಲೆನಾಡಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸ್ಥಗಿತಗೊಳಿಸುತ್ತಿರುವುದು ಮತ್ತು ಅದೇ ಸಮಯದಲ್ಲಿ ಮಲೆನಾಡಿಗೆ ಮಾರಕವಾಗುವ, ಮಲೆನಾಡಿನ ನೆಲವಾಸಿಗಳಿಗೆ ಯಾವ ಉಪಯೋಗವೂ ಇಲ್ಲದ ದೊಡ್ಡ ದೊಡ್ಡ ನಗರ ಮುಖಿ ಅನುಕೂಲಗಳ ಯೋಜನೆಗಳನ್ನು ಸಾಕಷ್ಟು ವಿರೋಧ ಇದ್ದರೂ ಮಲೆನಾಡಿನ ಮೇಲೆ ಹೇರುತ್ತಿರುವುದು...


6) ವಿಸ್ತರಿಸುತ್ತಿರುವ ಜೀವ ವಿರೋಧಿ ಅಕೇಶಿಯ ಕಾಡುಗಳನ್ನು ನೋಡಿಯೂ ನೋಡದಂತೆ ಇಲಾಖೆ, ಸರಕಾರಗಳ ನಿರ್ಲಿಪ್ತತೆ...


ಇತ್ಯಾದಿಗಳೆಲ್ಲವನ್ನು ಗಮನಿಸಿದಾಗ... ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಮಲೆನಾಡ ನೆಲವಾಸಿಗಳ ಬದುಕನ್ನು ಅಸಹನೀಯಗೊಳಿಸಿ, ಮಲೆನಾಡನಲ್ಲಿ ಸಾಮಾನ್ಯ ಜನರು ಬದುಕಲಾರದೆ ವಲಸೆ ಹೋಗುವಂತೆ ಮಾಡಿ... ನಂತರ ಮಲೆನಾಡನ್ನು ದೊಗೆದು,  ಇರಬಹುದಾದ ಖನಿಜ ನಿಕ್ಷೇಪಗಳನ್ನು ಹೊರ ತೆಗೆಯುವ ರಣ ಭೀಕರ ಉದ್ದೇಶ ಸರಕಾರಗಳ ಮುಂದೆ (ಹಿಂದೆ!!?) ಇರುಬಹುದಲ್ಲವೆ?  ಅದಲ್ಲ ಅಂತಾದರೆ, ಪದೇ ಪದೇ ವೈಮಾನಿಕ ಸಮೀಕ್ಷೆ ಯಾಕೆ?  


ಮಲೆನಾಡ ಜಮೀನಿನಲ್ಲಿ ತೆಂಗಿನ ಕಾಯಿ ಹಿಡಿದು ನೀರಿನ ಲಭ್ಯತೆಯ ಸಮೀಕ್ಷೆ ಮಾಡುವಂತೆ ವೈಮಾನಿಕ ಖನಿಜ ನಿಕ್ಷೇಪ ಸಮೀಕ್ಷೆ ಮಾಡುತ್ತಿರುವುದರ ಹಿಂದೆ ಬೇರೆ ಏನು ಉದ್ದೇಶ ಇರಲು ಸಾಧ್ಯ!!?  


ಈ ವೈಮಾನಿಕ ಸಮೀಕ್ಷೆ ಮತ್ತು ನಾಳೆ ಖನಿಜ ಅಗೆಯುವಲ್ಲಿ ರಾಜ್ಯ ಮತ್ತು ಕೇಂದ್ರ ಎರಡೂ ಸರಕಾರಗಳ ಹುನ್ನಾರ ಇದೆ ಅನ್ನುವುದು ಸ್ಪಷ್ಟ.  


ಚುಕ್ಕಿ ಗುರುತಿನ ಪ್ರಶ್ನೆ, ಚುಕ್ಕಿ ಗುರುತಿಲ್ಲದ ಪ್ರಶ್ನೆಗಳಿಗೆ ಉತ್ತರ ಪಡೆದ ಮೇಲೆ, ವಿಧಾನ ಸಭೆ ಮತ್ತು ಪರಿಷತ್‌ಗಳಲ್ಲಿ ವೈಮಾನಿಕ ಖನಿಜ ನಿಕ್ಷೇಪಗಳ ಸಮೀಕ್ಷೆಗಳ ನಂತರ ಸಮೀಕ್ಷೆಗಳ ಹಿಂದಿನ ಉದ್ದೇಶಗಳೂ ಚರ್ಚೆಯಾಗಿ ಹೊರಬರಲಿ.


ಒಟ್ಟಿನಲ್ಲಿ ಮಲೆನಾಡಿಗೆ ಇನ್ನಷ್ಟು JCB ಗಳು ಸದ್ದು ಮಾಡುತ್ತ ಲಗ್ಗೆ ಇಡುವ ದಿನಗಳು ಹತ್ತಿರ ಬರುತ್ತಿವೆ ಅನಿಸುತ್ತಿದೆ.  


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top