ಇಂದು ಕುಂಟಾರು ಸಾಹಿತ್ಯೋತ್ಸವ

Upayuktha
0

ಪಂಡಿತ ಮಂಡಲದಿಂದ ಶ್ರೀಸಾಮಾನ್ಯರಂಗಳಕ್ಕೆ ಸಾಹಿತ್ಯ ಸಂಪದ



ಕಾಡೆಮಿಕ್‌ ಶಿಸ್ತಿನ ಸಾಹಿತ್ಯಗೋಷ್ಠಿಗಳು, ಚರ್ಚೆ ಕಾರ್ಯಾಗಾರಗಳು ಸಾಮಾನ್ಯವಾಗಿ ವಿಶ್ವವಿದ್ಯಾಲಯದ ನಾಲ್ಕುಗೋಡೆಗಳ ಮಧ್ಯೆ ಅಥವಾ ಪಂಡಿತರೆನಿಸಿಕೊಂಡವರ ವಲಯದಲ್ಲಿ ನಡೆಯುತ್ತವೆ. ಶೈಕ್ಷಣಿಕವಾಗಿ ಅತ್ಯುನ್ನತ ಪದವಿ ಪಡೆದವರು ಮತ್ತು ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಉನ್ನತ ಹುದ್ದೆಯಲ್ಲಿರುವವರು ತಮ್ಮದು ಪಾಂಡಿತ್ಯಪೂರ್ಣವಾದ ಉಪನ್ಯಾಸವೆನಿಸಬೇಕೆಂಬ ವ್ಯಾಮೋಹದಿಂದ ಎಲ್ಲವನ್ನೂ ವಿದೇಶಮೂಲ ದೃಷ್ಟಿಕೋನದಿಂದಲೇ ನೋಡಿ ವಿವೇಚಿಸುವುದಿದೆ.


ಹೀಗಿದ್ದರೆ ಮಾತ್ರ ಅದು ಘನಗಾಂಭೀರ್ಯವೆನಿಸುವ ಉಪನ್ಯಾಸವಾಗುತ್ತದೆ ಎಂಬ ತಪ್ಪುಕಲ್ಪನೆಯಿಂದ, ವಿಷಯದ ವಾಸ್ತವಕೋನಗಳಿಂದ ಹೊರತಾಗಿ ಮಾತನಾಡುತ್ತಾರೆ. ಭಾಷಾಬಳಕೆಯಲ್ಲಿಯೂ ಇವರು ಪಾಂಡಿತ್ಯದ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಇದರಿಂದಾಗಿ ಅಕಾಡೆಮಿಕ್‌ ವಲಯದಲ್ಲಿರುವ ವಿದ್ಯಾರ್ಥಿಗಳು ಯಾವ ನಿರೀಕ್ಷೆಯಿಂದ ಕೇಳುಗರಾಗಿ ಬಂದಿರುವರೋ ಅವರ ಅಧ್ಯಯನ, ಆಸ್ವಾದನೆ ಮತ್ತು ಅಭಿರುಚಿಗಳಿಗೆ ಬಹುತೇಕ ಗೋಷ್ಠಿಗಳು, ಸಾಹಿತ್ಯ ಸಮ್ಮೇಳನಗಳು ತಣ್ಣೀರೆರಚುವ ಪ್ರಸಂಗಗಳಾಗುತ್ತವೆ. ಸಾಹಿತ್ಯದ ಸೂಕ್ಷ್ಮವಿಷಯಗಳು, ಸಾಹಿತ್ಯದಲ್ಲಿ ಪದವಿ, ಉದ್ಯೋಗ ಪಡೆದವರಿಗೆ ಮಾತ್ರ ಸೀಮಿತವೆಂದೂ ಅವು ಪಿಎಚ್.ಡಿ ಯಂತಹ ಪದವಿ ಪಡೆಯುವವರಿಗೆ ಸಂಶೋಧನೆಗೆ ವಸ್ತುವಾಗಬೇಕಾದುದು ಮಾತ್ರವೆಂದು ಜನಸಾಮಾನ್ಯರೂ ಭಾವಿಸಿಕೊಂಡಿರುತ್ತಾರೆ. ಹೀಗಿರುವ ಕಾರಣ ಸಾಹಿತ್ಯಾಭಿರುಚಿಯಿರುವ ಜನಸಾಮಾನ್ಯರು ಇಂತಹ ಕಾರ್ಯಕ್ರಮಗಳಿಂದ ದೂರವೇ ಇರುತ್ತಾರೆ.


ಇತ್ತೀಚೆಗಿನ ಬಹುತೇಕ ಸಾಹಿತ್ಯ ಸಂಶೋಧಕರು ಪದವಿ ಗಳಿಸುವ ಗುರಿಯನ್ನು ಮುಖ್ಯವಾಗಿ ಲಕ್ಷ್ಯವಾಗಿರಿಸುವುದರಿಂದ ʼಹತ್ತು ಪುಸ್ತಕ ಓದಿ ಒಂದು ಮಹಾಪ್ರಬಂಧ ಸಿದ್ಧಪಡಿಸುವುʼದರಲ್ಲಿ ತಲ್ಲೀನರಾಗಿಬಿಡುತ್ತಾರೆ. ಹೇಗಾದರೂ ಪಿ.ಎಚ್ಡಿ ಆದರೆ ಸಾಕೆಂಬ ನಿಲುವು, ಉನ್ನತ ಶಿಕ್ಷಣಸಂಸ್ಥೆಯಲ್ಲಿ ಘನತೆವೆತ್ತ ಉದ್ಯೋಗಿಗಳಲ್ಲಿಯೂ ಕಂಡುಬರುತ್ತಿದೆ.


ಇತ್ತೀಚೆಗಿನ ದಶಕಗಳಲ್ಲಿ ಕಂಡುಬರುತ್ತಿರುವ ಇಂತಹ ಋಣಾತ್ಮಕ ಅಂಶಗಳನ್ನು ಅನುಭವದಿಂದ ಕಂಡುಕೊಂಡ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಸಂಶೋಧನ ಮಾರ್ಗದರ್ಶಕ ಡಾ. ಮೋಹನ ಕುಂಟಾರ್‌ ಅವರು ವೃತ್ತಿಯಿಂದ ನಿವೃತ್ತಿ ಬದುಕಿಗೆ ಕಾಲಿರಿಸಿದ ತಕ್ಷಣ ತಮ್ಮ ಹುಟ್ಟೂರಿಗೆ ಬಂದು ಹೊಸತೊಂದು ‘ಮಾರ್ಗ’ಕ್ಕೆ ಮುನ್ನುಡಿ ಬರೆಯಲು ಮೊದಲ ಹೆಜ್ಜೆಯನ್ನಿರಿಸಿದ್ದಾರೆ.


ಜನಸಾಮಾನ್ಯರಿಗೆ ಸಾಹಿತ್ಯ ಮತ್ತು ಸಂಶೋಧನೆಯ ನಿಜಸ್ವಾದವನ್ನು ಹಂತಹಂತವಾಗಿ ತಿಳಿಸಿ  ಅವರನ್ನು ಸಾಹಿತ್ಯ ಮತ್ತು ಸಂಶೋಧನವಾಹಿನಿಗೆ ಕೈಹಿಡಿದುಕೊಂಡು ಕರೆತರುವ ಸಾಹಸವಿದು. ಸಾಮಾನ್ಯವಾಗಿ ಶೈಕ್ಷಣಿಕ ಮಟ್ಟದ ಬಿಳಿಕಾಲರ್‌ ಹುದ್ದೆಯಲ್ಲಿರುವವರು ಸಮಾಜ ಹಾಗೂ ಪ್ರಕೃತಿಯಿಂದ ದೂರವೇ ಇದ್ದು ಜನಸಾಮಾನ್ಯರೆದುರು ಗಜಗಾಂಭೀರ್ಯದಿಂದ ಮೆರೆಯುತ್ತಾ ತಮ್ಮ ಉಪನ್ಯಾಸ ಹಾಗೂ ಬರವಣಿಗೆಗಳಲ್ಲಿ ಸಾಮಾಜಿಕ ಒಡಂಬಡಿಕೆ, ಪರಿಸರ ಸಂರಕ್ಷಣೆ ಹಾಗೂ ಮಾನವತಾವಾದದ ಬಗ್ಗೆ ಮಾತನಾಡುತ್ತಾರೆ ಅಥವಾ ಸುಧೀರ್ಘವಾಗಿ ಬರೆಯುತ್ತಾರೆ. ಆದರೆ ವೈಯಕ್ತಿಕವಾಗಿ ಇವುಗಳ ಕ್ರಿಯಾತ್ಮಕ ರೂಪದಿಂದ ದೂರವೇ ಇದ್ದುಬಿಡುತ್ತಾರೆ. ಬದುಕಿನ ನಡೆಯಲ್ಲಿ ಇವರು ಇರಿಸಿಕೊಂಡಿರುವ ಈ ಅಂತರವನ್ನು ಅವರು ತಮ್ಮ ಸ್ಥಾನಮಾನದ ನೆಲೆಬೆಲೆಯೆಂದು ಬಲವಾಗಿ ನಂಬಿಬಿಟ್ಟಿರುತ್ತಾರೆ.


ವಿದ್ಯಾರ್ಥಿಕೇಂದ್ರಿತ ಅಥವಾ ಸಮಾಜ ಕೇಂದ್ರಿತ ಶಿಕ್ಷಣದ ಈ ಸಂದರ್ಭಗಳಲ್ಲಿ ಈ ಪ್ರವಣತೆ ಆರೋಗ್ಯಪೂರ್ಣವಾದುದಲ್ಲ. ಈ ಹಿನ್ನೆಲೆಯಲ್ಲಿ ಡಾ. ಮೋಹನ ಕುಂಟಾರ್‌ ಅವರು ತಮ್ಮೂರಿನ ಸಹೃದಯಿ ಶ್ರೀಸಾಮಾನ್ಯರನ್ನು ಜತೆಯಾಗಿರಿಸಿಕೊಂಡು ಇದೇ ಬರುವ ಮಾರ್ಚ್‌ ಹದಿನೈದರಂದು ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದ ಕುಂಟಾರಿನಲ್ಲಿ ʼಜನಸಾಮಾನ್ಯರೆಡೆಗೆ ಸಾಹಿತ್ಯʼ ಎಂಬ ಆಶಯದೊಡನೆ ಆಯೋಜಿಸಿರುವಂತಹ ಕುಂಟಾರು ಸಾಹಿತ್ಯೋತ್ಸವವು "ಜನತಾಂತ್ರೀಕರಣ"(Democratization of Literature)ದ ದೃಷ್ಟಿಯಿಂದ ಮಹತ್ವದ್ದಾಗುತ್ತದೆ.


ಕಾಸರಗೋಡು ಗಡಿನಾಡು ಪ್ರದೇಶ. ಕೇವಲ ಐವತ್ತು ಕಿಲೋಮೀಟರ್‌ ವ್ಯಾಪ್ತಿಯೊಳಗೆ ತುಳು, ಮಲೆಯಾಳ, ಹವ್ಯಕ, ಕರ್ಹಾಡ, ಮರಾಠಿ, ಕೊಂಕಣಿ ಹೀಗೆ ಹಲವು ಭಾಷೆಗಳು ಇಂದಿಗೂ ಜನರ ಬದುಕಿನ ಭಾಗವಾಗಿರುವ ಮಿಶ್ರಸಂಸ್ಕೃತಿಯ ಕೇಂದ್ರ. ಇಲ್ಲಿನ ಈ ಬಹುಭಾಷೆ, ಬಹುಸಂಸ್ಕೃತಿಗೆ ಕನ್ನಡವು ಶತಮಾನಗಳಿಂದ ತಾಯಿಬೇರಾಗಿದೆ ಎಂಬುದೇ ಇಲ್ಲಿನ ಅನನ್ಯತೆ. ಇಲ್ಲಿ ಹುಟ್ಟಿ ಬೆಳೆದವರಿಗೆ ಮಾತ್ರ ಕಾಸರಗೋಡಿನ ಭಾಷೆ,ಕಲೆ,ಜಾನಪದ ಮತ್ತು ಸಂಸ್ಕೃತಿಯ ಒಳಸೂಕ್ಷ್ಮಗಳನ್ನು ಸರಿಯಾಗಿ ಅರ್ಥಮಾಡಲು ಸಾಧ್ಯ. ಜನಸಾಮಾನ್ಯರಿಂದಲೇ ಬೆಳೆದುಬಂದ ಯಕ್ಷಗಾನ, ಭೂತಾರಾಧನೆ ಮತ್ತು ನೆಲಮೂಲ ಸಮುದಾಯದ ಜನಪದೀಯ ಆಚಾರ ವಿಚಾರಗಳ ಒಳಪದರಗಳಿಗೆ ಸಾಗಿದಾಗ ಮಾತ್ರ ಕಾಸರಗೋಡಿನ ಅನಕ್ಷರಸ್ಥರ ಪ್ರತಿಭೆ ಮತ್ತು ಕೌಶಲ್ಯಗಳನ್ನು ಅರ್ಥಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಕುಂಟಾರು ಸಾಹಿತ್ಯೋತ್ಸವವನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಆಗ ಮಾತ್ರ ಇಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಕೇವಲ ಹವ್ಯಾಸವಲ್ಲ, ಅದೊಂದು ಬದ್ಧತೆ ಎಂಬ ಪ್ರಜ್ಞಾವಂತಿಕೆ ಮೂಡಿಬರಲು ಸಾಧ್ಯ. ಆದ ಕಾರಣ ಈ ಸಾಹಿತ್ಯೋತ್ಸವದುದ್ದಕ್ಕೂ ನಡೆಯುವ ಉಪನ್ಯಾಸಗಳು ಇವು ಕೇವಲ ತಾಂತ್ರಿಕ ಚರ್ಚೆಯಾಗದೆ, ಜೀವನದ ಮೌಲ್ಯಗಳನ್ನು ಜನರಿಗೆ ಅರ್ಥವಾಗುವಂತೆ ವಿವರಿಸುವ ಕಲೆಗಾರಿಕೆಯಾಗಿ ಮಾರ್ಪಡುತ್ತವೆ. ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕೇವಲ ಮನೋರಂಜನೆಯಾಗದೆ ಸಾಹಿತ್ಯದ ಆಶಯಗಳನ್ನು ಜನರಿಗೆ ತಲುಪಿಸುವ ವಾಹಕಗಳಾಗುತ್ತವೆ. ಸಾಹಿತ್ಯವು ಆಸ್ವಾದನೆಯ ಮೂಲಕ ಹೊಸ ಅಧ್ಯಯನಕ್ಕೆ ದಾರಿಮಾಡಿಕೊಡಬಲ್ಲುದು ಮತ್ತು ಶ್ರೀಸಾಮಾನ್ಯನ ದೃಷ್ಟಿಕೋನಗಳಿಗೂ ಬೆಲೆಕಲ್ಪಿಸಬಹುದು ಎಂಬುದುನ್ನು ಈ ಆಶಯವು ರುಜುಗೊಳಿಸುತ್ತದೆ. ಹಳ್ಳಿಗಳಲ್ಲಿ ಇದು ನಡೆದಾಗ ಅಲ್ಲಿನ ಯುವಜನತೆಗೆ ಮತ್ತು ಮಕ್ಕಳಿಗೆ ಪ್ರೇರಣೆ ಸಿಗುತ್ತದೆ. ಟಿವಿ, ಮೊಬೈಲ್‌ಗಳ ಅಬ್ಬರದ ನಡುವೆ ಪುಸ್ತಕ, ಮಾತು ಮತ್ತು ಕಲೆಗಳ ಬಗ್ಗೆ ಅಭಿರುಚಿ ಬೆಳೆಸುವುದು ಒಂದು ರೀತಿಯ ಬೌದ್ಧಿಕ ಕ್ರಾಂತಿಯಿದ್ದಂತೆ. ಇದು ಜನರ ನಡುವೆ ಸಂವಾದವನ್ನು ಸಮಾನಭಾವವನ್ನು ಬೆಳೆಸುತ್ತದೆ. ಗ್ರಾಮೀಣ ಭಾಗದಲ್ಲಿ ಬೌದ್ಧಿಕ ಜಾಗೃತಿಯನ್ನುಂಟುಮಾಡುತ್ತದೆ. ಕಾರ್ಯಕ್ರಮವು ಕೇವಲ ಒಂದು ಸಮಾರಂಭವಾಗದೆ ಅದೊಂದು ಸಾಂಸ್ಕೃತಿಕ ಆಂದೋಲನವಾಗಿ ಮಾರ್ಪಡುತ್ತದೆ. ಒಬ್ಬ ವ್ಯಕ್ತಿ ತನ್ನ ಜ್ಞಾನವನ್ನು ಸಮಾಜಕ್ಕೆ ಮರಳಿಸಬೇಕು ಎಂಬ ಉದಾತ್ತ ಉದ್ದೇಶದಿಂದ ಮಾಡುವ ಇಂತಹ ಕೆಲಸಗಳು ಸಮಾಜದ ಒಟ್ಟಾರೆ ಸಾಂಸ್ಕೃತಿಕ ಮಟ್ಟವನ್ನು ಏರಿಸುತ್ತವೆ. ಸಾಹಿತ್ಯವು ಕೇವಲ ಪರೀಕ್ಷೆ ಬರೆಯಲು ಅಥವಾ ಪದವಿ ಪಡೆಯಲು ಸೀಮಿತವಾಗದೆ, ಬದುಕಿನ ಸಂಭ್ರಮವಾಗಬೇಕು ಎಂಬ ಆಶಯಕ್ಕೆ ಇಲ್ಲಿ ಒತ್ತು ಬೀಳುತ್ತದೆ. ಮಾರ್ಚ್‌ ಹದಿನೈದರಂದು ಬೆಳಗ್ಗೆ 9.30 ಕ್ಕೆ ಕುಂಟಾರು ಎ ಯು ಪಿ ಶಾಲೆಯಲ್ಲಿ ʼಕುಂಟಾರು ಸಾಹಿತ್ಯೋತ್ಸವʼವು ನಡೆಯಲಿದೆ. ಸಾಹಿತ್ಯೋತ್ಸವದ ಉದ್ಘಾಟನೆಯನ್ನು ಡಾ. ತಾಳ್ತಜೆ ವಸಂತ ಕುಮಾರ ಇವರು ನೆರವೇರಿಸಲಿದ್ದು, ಡಾ. ಕೆ. ಕಮಲಾಕ್ಷ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.


ಸಾಹಿತ್ಯೋತ್ಸವದಲ್ಲಿ ಪುಸ್ತಕ ಬಿಡುಗಡೆ, ವಸ್ತು ಪ್ರದರ್ಶನ, ಚಿತ್ರ ಮತ್ತು ವ್ಯಂಗ್ಯ ಚಿತ್ರ ಪ್ರದರ್ಶನ ನಡೆಯಲಿದೆ. ಹಳೆಗನ್ನಡದ ಪಂಪನಿಂದ ತೊಡಗಿ ಹೊಸಗನ್ನಡ ಸಾಹಿತ್ಯದ ವಿವಿಧ ಮಗ್ಗುಲುಗಳಿಗೆ ಸಂಬಂಧಿಸಿದ ಉಪನ್ಯಾಸಗಳಿವೆ. ಸಾಹಿತ್ಯಕ್ಕೆ ಸಂಬಂಧಿಸಿ ವ್ಯಕ್ತಿತ್ವ ವಿಕಾಸ, ಕೃಷಿ, ಜನಪದ ಈ ವಿಷಯಗಳನ್ನು ಅಳವಡಿಸಲಾಗಿದೆ. “ಪ್ರತಿಯೊಂದು ಉಪನ್ಯಾಸವೂ ಸರಳವಾಗಿರಬೇಕು. ಜನಸಾಮಾನ್ಯರಿಗೆ ಆಸ್ವಾದನೆಗೆ ದಕ್ಕುವಂತೆ ಆಕರ್ಷಣೀಯವಾಗಿರಬೇಕು ಮತ್ತು ಅವರಿಗೆ ಸುಲಭದಲ್ಲಿ ಗ್ರಾಹ್ಯವಾಗುವ ರೀತಿಯಲ್ಲಿ ಸ್ವಾದಭರಿತವಾಗಿರಬೇಕು” ಎಂಬ ಸೂಚನೆಯನ್ನು ಒಂಬತ್ತು ಮಂದಿ ಉಪನ್ಯಾಸಕರಿಗೆ ನೀಡಲಾಗಿದೆ. ಸಂಜೆ ಮೂರು ಗಂಟೆಯ ಬಳಿಕ ರಾಧಾಕೃಷ್ಣ ಉಳಿಯತ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ಹನ್ನೊಂದು ಮಂದಿ ಕವಿಗಳು ಭಾಗವಹಿಸುವರು.


ಸಂಜೆ ನಾಲ್ಕು ಗಂಟೆಗೆ ಸಮಾರೋಪ ಸಮಾರಂಭದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಔತಣವಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರಿಗೂ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ದೀನದಲಿತರಿಗೆ ನೆರವಾಗಿ, ನಾಡಿನ ಏಳ್ಗೆಗಾಗಿ ಶ್ರಮಿಸಿ ಸಾಂಸ್ಕೃತಿಕ ಜಾಗೃತಿ ಮೂಡಿಸುತ್ತ ಕ್ರಿಯಾಶೀಲರಾಗಿರುವಾಗಲೇ ಅಕಾಲಿಕ ಮರಣಕ್ಕೆ ತುತ್ತಾದ ದಿ.ಯು.ಕೇಶವ ಕುಣಿಕುಳ್ಳಾಯ ಹಾಗೂ ದಿ. ಮಾಟೆಡ್ಕ ಪುರುಷೋತ್ತಮ ರಾವ್ ಇವರನ್ನು ಸ್ಮರಿಸುವ ಸಲುವಾಗಿ ಸಾಹಿತ್ಯೋತ್ಸವದ ವೇದಿಕೆ ಮತ್ತು ದ್ವಾರಕ್ಕೆ ಈ ಮಹನೀಯರ ಹೆಸರನ್ನು ಇರಿಸಲಾಗಿದೆ. ಸಾಹಿತ್ಯೋತ್ಸವದಲ್ಲಿ ಪುಸ್ತಕ ಪ್ರದರ್ಶನ ವ್ಯವಸ್ಥೆಯಿದೆ. ಈ ಪ್ರದರ್ಶನಕ್ಕಾಗಿ ಕುಂಟಾರು ನಿವಾಸಿಗಳಾದ ಸಹೃದಯರು ತಮ್ಮ ಮನೆಗಳಲ್ಲಿರುವ ಪಠ್ಯ ಪುಸ್ತಕಗಳನ್ನು ಬಿಟ್ಟು ಎಲ್ಲಾ ಬಗೆಯ ಇತರ ಪುಸ್ತಕಗಳನ್ನು ಕಾರ್ಯಕ್ರಮದ ಮೊದಲ ದಿನ ತಂದು ಕೊಡಬೇಕೆಂದು ಊರವರಲ್ಲಿ ವಿನಂತಿಸಲಾಗಿದೆ. ಅದೇ ರೀತಿಯಲ್ಲಿ ಸ್ಥಳೀಯ ಮನೆಯಲ್ಲಿರುವ ಅಪೂರ್ವ ಪ್ರಾಚ್ಯ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲು ಅನುವು ಮಾಡಲಾಗಿದೆ. ಕಾರ್ಯಕ್ರಮದ ನಂತರ ಪುಸ್ತಕಗಳನ್ನು ಮತ್ತು ಇತರ ವಸ್ತುಗಳನ್ನು ವಾರಿಸುದಾರರಿಗೆ ಮರಳಿ ನೀಡುವ ಶಿಸ್ತುಬದ್ಧ ವ್ಯವಸ್ಥೆಯಿದೆ.


ಹೀಗೆ ಜನರಲ್ಲಿ ವಾಚನಾಭಿರುಚಿಯನ್ನು ಹೆಚ್ಚಿಸುವ ಹಾಗೂ ಪರಂಪರಾಗತ ಜೀವನ ವಿಧಾನದ ಬಗೆಯನ್ನು ಹೊಸತಲೆಮಾರಿಗೆ ತಿಳಿಸುವ ಪ್ರಯತ್ನವು ಕುಂಟಾರು ಸಾಹಿತ್ಯೋತ್ಸವದಲ್ಲಿ ನಡೆಯಲಿದೆ. ಡಾ. ಮೋಹನ ಕುಂಟಾರ್‌ ನಿರ್ದೇಶಕರಾಗಿರುವ ಕನ್ನಡ ಸಂಶೋಧನ ಕೇಂದ್ರ, ಕಾಸರಗೋಡು, ಮುಳ್ಳೇರಿಯಾ, ಇದರ ನೇತೃತ್ವದಲ್ಲಿ, ಕುಂಟಾರು ಎ.ಯು.ಪಿ ಶಾಲೆಯ ವ್ಯವಸ್ಥಾಪಕರ ಹಾಗೂ ಶಿಕ್ಷಕರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ. ಶತಮಾನ ಸಂಭ್ರಮಕ್ಕೆ ಸಾಕ್ಷಿಯಾಗಿರುವ ಕುಂಟಾರು ಎ.ಯು.ಪಿ ಶಾಲೆಯು ಹಲವಾರು ಪ್ರತಿಭಾವಂತರನ್ನು ನಾಡಿಗೆ ನೀಡಿದ ಗ್ರಾಮೀಣ ಪ್ರದೇಶದ ಹಿರಿಮೆಯ ಹಳೆಯ ವಿದ್ಯಾಲಯ. ಜನಸಾಮಾನ್ಯರೆಡೆಗೆ ಸಾಹಿತ್ಯಸ್ವಾದವನ್ನು ಕೊಂಡೊಯ್ಯಯುತ್ತಿರುವ ಕುಂಟಾರು ಸಾಹಿತ್ಯೋತ್ಸವದ ರೂವಾರಿ ಡಾ. ಮೋಹನ ಕುಂಟಾರು ಅವರಂತವರನ್ನು ರೂಪಿಸಿದ ಶಾಲೆಯಿದು. ಇದಲ್ಲದೆ ಕನ್ನಡಪರ ಸಂಘಸಂಸ್ಥೆಗಳು ಈ ಸಂಭ್ರಮಕ್ಕೆ ನೈತಿಕ ಬೆಂಬಲ ನೀಡಿವೆ.


ಕುಂಟಾರಿನ ಸಾಹಿತ್ಯಾಭಿಮಾನಿಗಳು ಈ ಸಡಗರಕ್ಕೆ ಕೈತಾಂಗು ನೀಡುತ್ತಿರುವುದು ಈ ಕಾರ್ಯಕ್ರಮದ ಮುಖ್ಯ ಆಶಯಕ್ಕೆ ಸಂದ ಗೆಲುವು. ಕುಂಟಾರು ಸಾಹಿತ್ಯೋತ್ಸವದ ರೂವಾರಿ ಡಾ. ಮೋಹನ ಕುಂಟಾರ್‌ ಅವರು ಸಾಹಿತ್ಯೋತ್ಸವದ ಬಗ್ಗೆ ಈ ರೀತಿ ನುಡಿಯುತ್ತಾರೆ. “ಕನ್ನಡಕ್ಕೆ ಶ್ರೀಮಂತವಾದ ಸಾಂಸ್ಕೃತಿಕ ಪರಂಪರೆಯಿದೆ. ಅದನ್ನು ಗ್ರಾಮೀಣ ಪ್ರದೇಶಗಳ ಜನ ಸಾಮಾನ್ಯರಿಗೂ ತಿಳಿಯಪಡಿಸುವುದು ಸಾಹಿತ್ಯಪ್ರಿಯರ ಕರ್ತವ್ಯಗಳಲ್ಲಿ ಒಂದು.ತಂತ್ರಜ್ಞಾನವೇ ಮೇಲ್ಮೆ ವಹಿಸುತ್ತಿರುವ ಇಂದಿನ ದಿನಗಳಲ್ಲಿ ಹೃದಯದ ಭಾಷೆಯಾದ ಸಾಹಿತ್ಯವು ಸಮಾಜದಲ್ಲಿ ಮಾನವೀಯತೆಯ ಒರತೆ ಬತ್ತದಂತೆ ನೋಡಿಕೊಳ್ಳಬಲ್ಲುದು. ಸಾಹಿತ್ಯದ ಸತ್ವ,ಸ್ವಾರಸ್ಯಗಳು ಮನೆ,ಮನಗಳನ್ನು ಸಂಭ್ರಮಿಸುವಂತೆ ಮಾಡಬೇಕೆಂಬ ಅಪೇಕ್ಷೆಯಿದೆ. ಸಾಹಿತ್ಯದ ಮೂಲಕ ಜೀವನ ಮೌಲ್ಯಗಳನ್ನು ತಿಳಿಸಿ ಸಮಾಜವನ್ನು ವೈಚಾರಿಕವಾಗಿ ಜಾಗೃತಗೊಳಿಸುವುದು ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗಬಹುದು ಎಂಬ ನಂಬಿಕೆ ನನ್ನದು. “


ಕಾಸರಗೋಡು ಹಲವು ರೀತಿಯ ಹೊಸತನಗಳಿಗೆ ಭಾಷ್ಯ ಬರೆದ ನಾಡು. ಜನಸಾಮಾನ್ಯರಿಗೆ ಸಾಹಿತ್ಯ ಎಂಬ ಪರಿಕಲ್ಪನೆಯು ಸಾಮಾಜಿಕ ಕಳಕಳಿಯ ದ್ಯೋತಕ. ಈ ಸಂಭ್ರಮವು ಮುಂದುವರಿಯಬೇಕು. ಕುಂಟಾರನ್ನು ಮಾದರಿಯಾಗಿಟ್ಟುಕೊಂಡು ಪ್ರತಿ ಗ್ರಾಮೀಣ ಪ್ರದೇಶಗಳಲ್ಲೂ ಈ ಸಂಭ್ರಮ ಮುಂದುವರಿಯಲಿ ಎಂಬ ಹಾರೈಕೆ ನಮ್ಮದು.

-ಡಾ. ರತ್ನಾಕರ ಮಲ್ಲಮೂಲೆ



ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top