ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಡಿ.ಎಡ್. ಹಾಗೂ ಬಿ.ಎಡ್. ಶಿಕ್ಷಣ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪಡ್ಲಾಡಿ ಲಾಯಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಬಿ.ಎಸ್. ರಾಜೇಶ್ವರಿ ಅವರು ಮಾತನಾಡಿ, ಜಗತ್ತಿನಾದ್ಯಂತ ಮಾರ್ಚ್ 8ರಂದು ಮಹಿಳಾ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು. “ಹೆಣ್ಣು ಜಗದ ಕಣ್ಣು” ಎನ್ನುವ ಮಾತಿನಂತೆ ಮಹಿಳೆಯರು ಸಮಾಜದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದ್ದಾರೆ. ಮಹಿಳೆ ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ ಹಾಗೂ ಸಹೋದರಿಯಾಗಿ ಅನೇಕ ಪಾತ್ರಗಳನ್ನು ನಿಭಾಯಿಸುತ್ತಾ ಕುಟುಂಬ ಮತ್ತು ಸಮಾಜದ ಬೆಳವಣಿಗೆಯಲ್ಲಿ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಾಳೆ ಎಂದು ಹೇಳಿದರು.
ಇಂದು ಮಹಿಳೆಯರು ಶಿಕ್ಷಣ, ವಿಜ್ಞಾನ, ಕ್ರೀಡೆ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ತಮ್ಮ ಶಿಕ್ಷಕ ವೃತ್ತಿಯ ಅನುಭವಗಳನ್ನು ಹಂಚಿಕೊಂಡ ಅವರು, ಶಿಕ್ಷಕರು ಸಮಾಜದ ದಾರಿದೀಪರಾಗಿದ್ದು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂತೋಷ್ ಸಲ್ಡಾನ ಅವರು ಮಾತನಾಡಿ, ಒಂದು ಕಾಲದಲ್ಲಿ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಮಹಿಳೆ ಇಂದು ಬಾಹ್ಯಾಕಾಶವನ್ನೂ ಮುಟ್ಟುವ ಮಟ್ಟಿಗೆ ಪ್ರಗತಿ ಸಾಧಿಸಿದ್ದಾಳೆ. ಕ್ರೀಡೆ, ವಿಜ್ಞಾನ, ರಕ್ಷಣಾ ಕ್ಷೇತ್ರ, ಉದ್ಯಮ ಹಾಗೂ ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ಅಸ್ಮಿತೆಯನ್ನು ಸ್ಥಾಪಿಸುತ್ತಿದ್ದಾರೆ ಎಂದು ಹೇಳಿದರು. ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಅಪಾರವಾಗಿದ್ದು, ಅವರ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಮಹಿಳೆಯರ ಹಕ್ಕುಗಳ ರಕ್ಷಣೆ ಮತ್ತು ಸಮಾನ ಅವಕಾಶಗಳ ಒದಗಿಸುವುದು ಇಂದಿನ ಸಮಾಜದ ಪ್ರಮುಖ ಹೊಣೆಗಾರಿಕೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕಿಯರಾದ ಸಾಯಿಧೃತಿ ಶೆಟ್ಟಿ ಮತ್ತು ರಂಝಿಯಾ ಬಾನು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಹ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ಬಿ.ಎಡ್. ಮತ್ತು ಡಿ.ಎಡ್. ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ದ್ವಿತೀಯ ಬಿ.ಎಡ್. ಪ್ರಶಿಕ್ಷಣಾರ್ಥಿ ಸಾಯಿಧೃತಿ ಮತ್ತು ಬಳಗದವರು ಪ್ರಾರ್ಥನೆ ಸಲ್ಲಿಸಿದರು. ಡಿ.ಎಡ್. ಪ್ರಶಿಕ್ಷಣಾರ್ಥಿ ಆಯಿಶಾತ್ ನಾಫಿಯಾ ಸ್ವಾಗತಿಸಿ, ಅನ್ವಿತಾ ಕೆ. ವಂದಿಸಿದರು. ಶ್ವೇತಾ ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

