ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ
ಮಂಗಳೂರು: “ಜಗತ್ತಿನಲ್ಲಿ ಹೆಣ್ಣು ಇಲ್ಲದೇ ಇರುತ್ತಿದ್ದರೆ ಸೃಷ್ಟಿಯೇ ಇರುತ್ತಿರಲಿಲ್ಲ. ಜಗದ ನಿರ್ಮಾಣಕ್ಕೆ ಹೆಣ್ಣೇ ಕಾರಣವಾದರೂ, ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ” ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಚ್. ಆರ್. ತಿಮ್ಮಯ ಅಭಿಪ್ರಾಯಪಟ್ಟರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾಲೇಜಿನ ಮಹಿಳಾ ವಿಂಗ್, ಮಹಿಳಾ ಕೋಶ ಹಾಗೂ ಆಂತರಿಕ ಗುಣಮಟ್ಟ ಖಾತರಿಕೋಶದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಹೆಣ್ಣಿನ ಪಾತ್ರ ಪ್ರಮುಖವಾಗಿರುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು, ಉತ್ತಮ ಪೋಷಕಾಂಶವಿರುವ ಆಹಾರ ಸೇವಿಸಬೇಕು. ಮಹಿಳೆಯರಲ್ಲಿ ಅನೇಕ ಸಮಸ್ಯೆಗಳು ಕಂಡುಬರಲು ಒತ್ತಡವೇ ಕಾರಣವಾಗಿದೆ. ಒತ್ತಡ ಕಡಿಮೆ ಮಾಡಿಕೊಂಡರೆ ಹಲವು ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿಗೌಡ, ಇತ್ತೀಚಿನ ಸಮಾಜದಲ್ಲಿ ಹೆಣ್ಣು ಭ್ರೂಣ ಹತ್ಯೆ ಕೃತ್ಯ ನಡೆಯುತ್ತಿರುವುದು ಅಮಾನುಷವಾಗಿದೆ. ಇಂದಿನ ಯುವಜನತೆ ಭ್ರೂಣಹತ್ಯೆಯಂತಹ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೆ.ಎಂ.ಸಿ ಆಸ್ಫತ್ರೆಯ ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞೆ ಡಾ. ನೂತನ್ ಕಾಮತ್ ಮಹಿಳೆಯರ ಆರೋಗ್ಯದ ಕುರಿತಾಗಿ ಜಾಗೃತಿ ಮೂಡಿಸಿದರು.
ಇದೇ ಸಂದರ್ಭದಲ್ಲಿ ಮಂಗಳೂರು ಉತ್ತರ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ವಿದ್ಯಾಥಿ೯ನಿಯರ ಬಳಕೆಗಾಗಿ ನ್ಯಾಪ್ಕಿನ್ ದಹನ ಯಂತ್ರವನ್ನು ಕಾಲೇಜಿಗೆ ಕೊಡುಗೆಯಾಗಿ ನೀಡಲಾಯಿತು. ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಡಾ.ಅಮೃತಾ ಭಂಡಾರಿ, ಮಂಗಳೂರು ಉತ್ತರ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಅರುಣಾ ಜಲನ್, ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಾರತಿಪ್ರಕಾಶ್, ಮಹಿಳಾ ವಿಂಗ್ ಸಂಚಾಲಕಿ ಪ್ರೊ. ಸುಭಾಷಿಣಿ ಶ್ರೀವತ್ಸ ಮತ್ತು ಮಹಿಳಾ ಕೋಶ ಸಂಯೋಜಕಿ ಪ್ರೊ. ನಾಗರತ್ನ ಎನ್. ರಾವ್, ಉಪಸ್ಥಿತರಿದ್ದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಭಿತ್ತಿಚಿತ್ರ ಮತ್ತು ಘೋಷವಾಕ್ಯ ರಚನೆ ಸ್ಪರ್ಧೆಯಲ್ಲಿ ಜಿಲ್ಲೆಯ 30 ಕಾಲೇಜಿನ ವಿದ್ಯಾಥಿ೯ಗಳು ಭಾಗವಹಿಸಿದರು. ಭಿತ್ತಿಚಿತ್ರ ಸ್ವಧೆಯಲ್ಲಿ ಸುರತ್ಕಲ್ ಗೋವಿಂದದಾಸ ಕಾಲೇಜಿನ, ಕು. ಇಶಿಕಾ ಮತ್ತು ಅನನ್ಯಾ ತೃತೀಯ ಬಹುಮಾನ, ಹಿತೇಶ್ ಕೆ. ಡಿ ಮತ್ತು ಆಕಾಶ್ ಎ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ ದ್ವಿತೀಯ ಬಹುಮಾನ, ಸ್ವಾತಿ ಕೃಷ್ಣ ಕೊಟಾರಿ ಮತ್ತು ಕೃತಿಕಾ, ಡಾ. ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಇವರು ಪ್ರಥಮ ಬಹುಮಾನಗಳನ್ನು ಗಳಿಸಿದರು ಅಂತೆಯೇ ಜಿಲ್ಲಾ ಮಟ್ಟದ ಘೊಷಣಾ ವಾಕ್ಯ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ನವ್ಯ ಹೆಬ್ಬಾರ್ ಪ್ರಥಮ ಬಹುಮಾನ, ಮಿಲಾಗ್ರಿಸ್ ಕಾಲೇಜಿನ ಕು. ಶ್ರಾವಣಿ ದ್ವಿತೀಯ ಬಹುಮಾನವನ್ನು ಹಾಗೂ ಶ್ರೀ ಕುಕ್ಕೆ ಸುಬ್ರಮಣ್ಯ ಕಾಲೇಜಿನ ವಿದ್ಯಾರ್ಥಿನಿ ಕು. ಪಲ್ಲವಿ ಇವರಗಳು ತೃತೀಯ ಬಹುಮಾನಗಳನ್ನು ಗಳಿಸಿದರು.
ಭಾಗವಹಿಸಿದ ಎಲ್ಲಾ ವಿದ್ಯಾಥಿ೯ಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


