ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಂಸ್ಕೃತಿ ಉತ್ಸವ – ‘ಅನಾದ್ಯಂತ-2026’

Upayuktha
0


ಬೆಂಗಳೂರು: ‘ತಂತ್ರಜ್ಞಾನ ಮತ್ತು ಸಂಸ್ಕೃತಿ ಒಟ್ಟಿಗೇ ಅವಿನಾಭಾವದಿಂದ ಸಾಗಿದಾಗ ಮಾತ್ರ ಭಾರತದಂತಹ ರಾಷ್ಟ್ರಗಳನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಬಲ್ಲೆವು. ನಮ್ಮ ದೇಶ ಈಗ ಇಡೀ ಜಗತ್ತಿನಲ್ಲಿಯೇ ತಂತ್ರಜ್ಞಾನದ ಶಕ್ತಿಕೇಂದ್ರವಾಗುವತ್ತ ದಾಪುಗಾಲುಗಳನ್ನಿಡುತ್ತಿದೆ. ಇದಕ್ಕೆ ಕಾರಣಗಳು - ಸಂಸ್ಕೃತಿಯ ನಿರಂತರ ಸಾಂಗತ್ಯ ಹಾಗೂ ಸ್ವದೇಶೀಕರಣದ ಪ್ರಕ್ರಿಯೆ. ನಮ್ಮ ನೆಲದ ಔದಾರ್ಯ, ಪರಂಪರಾಗತ ಅರಿವು ಮತ್ತು ಬಹುತ್ವದ ಪ್ರತಿಪಾದನೆ ಭಾರತದ ತಂತ್ರಜ್ಞಾನದ ಆವಿಷ್ಕಾರಗಳಲ್ಲಿ ಬಿಂಬಿತವಾಗಿರುತ್ತಿರುವುದರಿಂದಲೇ ಇದು ವಿಭಿನ್ನ ಹಾಗೂ ವಿಶಿಷ್ಟ ಸ್ಥಾನವನ್ನು ವಿಶ್ವಮಟ್ಟದಲ್ಲಿ ಗಳಿಸಿದೆ’, ಎಂದು ಜಿಇ ಹೆಲ್ತ್‍ಕೇರ್ ಸಂಸ್ಥೆಯ ಉಪಾಧ್ಯಕ್ಷ ವಿವಾಸ್ವನ್ ಶಾಸ್ತ್ರಿ ನುಡಿದರು. ಅವರು  ಬೆಂಗಳೂರಿನ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಹಾಗೂ ಸಂಸ್ಕೃತಿ ಉತ್ಸವ – ‘ಅನಾದ್ಯಂತ-2026’ ಅನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ವಿವಿಧೆಡೆಗಳಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳನ್ನು ಪ್ರತಿನಿಧಿಸಿ ಆರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ತಂತ್ರಜ್ಞಾನದ ವಿದ್ಯಾರ್ಥಿಗಳು ಪಾಲ್ಗೊಂಡಿರುವ ಈ ಎರಡು-ದಿನಗಳ ಉತ್ಸವ ತಂತ್ರಜ್ಞಾನ ಹಾಗೂ ಸಂಸ್ಕೃತಿ ಕ್ಷೇತ್ರಗಳಲ್ಲಿನ ಅನೇಕ ಸ್ಪರ್ಧೆಗಳನ್ನು ಒಳಗೊಂಡಿದೆ.


ಮುಂದುವರಿದು ಶ್ರೀಯುತರು – ‘ಪ್ರತಿಯೊಬ್ಬ ತಂತ್ರಜ್ಞಾನದ ವಿದ್ಯಾರ್ಥಿಯೂ ತನ್ನ ಶಕ್ತಿಯನ್ನು ಗುರುತಿಸಿ, ಅಲ್ಲಿ ತನ್ಮಯತೆಯಿಂದ ಗಮನವನ್ನು ಕೇಂದ್ರೀಕರಿಸಿಕೊಂಡು ಮುಂದಡಿಯಿಡಬೇಕು. ಆಗ ವೈಯಕ್ತಿಕ ಶಕ್ತಿಯೊಡನೆ ಕೌಶಲ್ಯಗಳೂ ಒಗ್ಗೂಡುತ್ತವೆ, ಮಾತ್ರವಲ್ಲದೆ ಒಬ್ಬ ವ್ಯಕ್ತಿಯನ್ನು ಹಿಂದೆ ದೂಡುವಂತೆ ಮಾಡಬಲ್ಲ ದೌರ್ಬಲ್ಯಗಳನ್ನೂ ನಿಯಂತ್ರಿಸುತ್ತವೆ. ಆಗ ಮಾತ್ರ ಯಶಸ್ಸು ಸಾಧ್ಯ’, ಎಂದು ನುಡಿದರು.


ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಂಡಿದ್ದವರು ಕನ್ನಡ ಚಲನಚಿತ್ರ ಹಾಗೂ ಕಿರುತೆರೆ ಯಶಸ್ವೀ ನಟ ವಿರಾಟ್. ಅವರು ತಮ್ಮ ಭಾಷಣದಲ್ಲಿ – ‘ಸ್ವತಃ ಇಂಜಿನಿಯರಿಂಗ್ ಪದವೀಧರನಾದ ನಾನು ಕಲಾರಂಗದಲ್ಲಿ ಸದೃಢ ಹೆಜ್ಜೆಗಳನ್ನಿಡಲು ತಂತ್ರಜ್ಞಾನದ ಅರಿವು ಹಾಗೂ ತಾರ್ಕಿಕ ದೃಷ್ಟಿಕೋನಗಳು ನೆರವಾದವು. ವಿಜ್ಞಾನ ಹಾಗೂ ತಂತ್ರಜ್ಞಾನಗಳ ಕಲಿಕೆ ಯಾವ ಕಾರಣಕ್ಕೂ ನಾವು ಕಂಗೆಡದೆ ಮುಂದಡಿಯಿಡಲು ಪ್ರೇರೇಪಿಸುತ್ತದೆ’, ಎಂದು ವಿವರಿಸಿದರು.


ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಚ್.ಸಿ. ನಾಗರಾಜ್ ಅವರು, ಸಂಸ್ಥೆಯ ಸಾಧನೆಗಳನ್ನು ಹಾಗೂ ಅನಾದ್ಯಂತ ಉತ್ಸವ ರಾಷ್ಟ್ರದ ಗಮನ ಸೆಳೆಯುವಂತಹ ಹಂತಕ್ಕೆ ತಲುಪಿದ ಬಗೆಯನ್ನು ತಮ್ಮ ಸ್ವಾಗತ ಭಾಷಣದಲ್ಲಿ ವಿವರಿಸಿದರು.


ಅಧ್ಯಕ್ಷತೆ ವಹಿಸಿದ್ದವರು ನಿಟ್ಟೆ ಶಿಕ್ಷಣ ಸಂಸ್ಥೆಯ ಟ್ರಸ್ಟಿ ರೋಹಿತ್ ಪೂಂಜ. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ, ‘ಅನಾದ್ಯಂತದಂತಹ ತಂತ್ರಜ್ಞಾನ-ಸಾಂಸ್ಕೃತಿಕ ಉತ್ಸವಗಳು ವಿದ್ಯಾರ್ಥಿಗಳನ್ನು ಉತ್ತಮ ಅನ್ವೇಷಕರನ್ನಾಗಿಸುವ ನಿಟ್ಟಿನಲ್ಲಿ ವೇಗವರ್ಧಕಗಳಂತೆ ಕೆಲಸ ಮಾಡಲಿವೆ’, ಎಂದು ಆಶಯ ವ್ಯಕ್ತಪಡಿಸಿದರು.


ಉತ್ಸವದ ಸಂಯೋಜಕರುಗಳಾದ ವಿದ್ಯಾರ್ಥಿ ಕಲ್ಯಾಣ ವಿಭಾದ ಮುಖ್ಯಸ್ಥೆ ಡಾ. ಹಿತಾ ಡಿ. ಶೆಟ್ಟಿ ಹಾಗೂ ಡಾ. ರಾಮಚಂದ್ರ ಎ.ಸಿ., ಪಠ್ಯಕ್ರಮ ಅಭಿವೃದ್ಧಿ ಮತ್ತು ಶೈಕ್ಷಣಿಕ ನಿರ್ದೇಶಕ ಡಾ. ಜೆ. ಸುಧೀರ್ ರೆಡ್ಡಿ, ಉತ್ಸವದ ವಿದ್ಯಾರ್ಥಿ ಸಂಯೋಜಕರುಗಳಾದ ಅನುಶ್ರವ ಹಾಗೂ ಹೃದ್ಯಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಈ ಎರಡು ದಿನಗಳ ಉತ್ಸವದ ಅವಧಿಯಲ್ಲಿ ತಂತ್ರಜ್ಞಾನ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅನೇಕ ಸ್ಪರ್ಧೆಗಳು ನಡೆಯಲಿವೆ. ಅಲ್ಲದೆ, ಕೊರಿಯೋ ನೈಟ್, ಫ್ಯಾಶನ್ ಶೋ, ಕ್ವಿಜ್ ಮತ್ತು ಕವನ ರಚನೆ, ರೀಲ್ ಮೇಕಿಂಗ್, ಮೊಬೈಲ್ ಫೋಟೋಗ್ರಾಫಿ, ಏಕವ್ಯಕ್ತಿ ಗಾಯನ ಮತ್ತು ನರ್ತನ, ಏಕಪಾತ್ರ ಅಭಿನಯ, ಫ್ರೋ ಶೋ, ಡಿಬೇಟ್, ಡಿಜೆ ನೈಟ್ ಇತ್ಯಾದಿ ಕಾರ್ಯಕ್ರಮಗಳು ಜರುಗಲಿವೆ. 



 ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top