ಇರಾನ್‌ನಲ್ಲಿ ಮಹಿಳಾ ಸ್ವಾತಂತ್ರ್ಯದ ಜ್ವಾಲೆ: ಅಹೂ ದರಾಯೈ ಪ್ರತಿಭಟನೆ ಮತ್ತೆ ಚರ್ಚೆಯಲ್ಲಿ

Upayuktha
0


ಅಂದು ನವೆಂಬರ್ ಮೂರು, 2024. ಇರಾನಿನ ಮಹಿಳಾ ಹಕ್ಕುಗಳ ಹೋರಾಟಕ್ಕೆ ಕಟ್ಟರ್ ಮುಸ್ಲಿಂ ಸಂಪ್ರದಾಯದ ದೇಶವಾದ ಇರಾನಿನ ಟೆಹ್ರಾನಿನ ರಾಜಬೀದಿಯಲ್ಲಿ ಬಿಕಿನಿಯನ್ನು ಧರಿಸಿಕೊಂಡು ಕಟ್ಟುನಿಟ್ಟಾದ ಇಸ್ಲಾಮಿಕ್ ಉಡುಗೆ ನಿಯಮಗಳನ್ನು ವಿರೋಧಿಸುತ್ತ ಒಬ್ಬಾಕೆ ರಾಜಾರೋಷವಾಗಿ ಓಡಾಡುತ್ತಿದ್ದಳು. ಅವಳ ಹೆಸರು ಅಹೂ ದರಾಯೈ. ಅವಳ ಈ ಧೈರ್ಯಶಾಲಿ ಅಭಿವ್ಯಕ್ತಿಯು ಇರಾನ್ ಮಹಿಳೆಯರ ಮೇಲೆ ಆಗುತ್ತಿರುವ ದಬ್ಬಾಳಿಕೆ ಮತ್ತು ಹಿಜಾಬ್ ನಿಯಮಗಳ ವಿರುದ್ಧದ ಹೋರಾಟಕ್ಕೆ ಪ್ರಬಲ ಪ್ರೇರಣಾ ಶಕ್ತಿಯಾಯಿತು. ಅಂದಿನಿಂದ, ಇರಾನ್‌ನಲ್ಲಿ ಮಹಿಳಾ ಸ್ವಾತಂತ್ರ್ಯಕ್ಕಾಗಿ ನಿರಂತರ ಹೋರಾಟಗಳು ನಡೆಯುತ್ತಿವೆ, ಮತ್ತದು ಜಾಗತಿಕವಾಗಿ ಗಮನ ಸೆಳೆಯುತ್ತಲೂ ಇವೆ. ಅಹೂ ದರಾಯೈ ಎಂಬ ಧೈರ್ಯವಂತ ಹೆಣ್ಣುಮಗಳು ಇರಾನಿನ ಮುಸ್ಲಿಂ ಹೆಣ್ಣುಮಕ್ಕಳ ಹೋರಾಟಕ್ಕೆ ಒಂದು ಹೊಸ ತಿರುವು ನೀಡಿದಳು. ಮುಸ್ಲಿಂ ಸಂಪ್ರದಾಯಸ್ಥರ ಕಣ್ಣು ಕೋರೈಸುವಂಥ ಅಭಿವ್ಯಕ್ತಿಯಿದು ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ!


ಕೆಲವೊಂದು ಹೋರಾಟಗಳೇ ಹಾಗೆ. ಒಂದು ಶಾಶ್ವತ ನೆಲೆಯಲ್ಲಿ ಬದಲಾವಣೆಗಳನ್ನು ತಂದು ಬಿಡುತ್ತದೆ. ಅಥವಾ ತರಲು ಪ್ರಯತ್ನಿಸುತ್ತಲೇ ಇರುತ್ತದೆ. ಇರಾನ್ನಲ್ಲಿ ಇದೀಗ ನಡೆಯುತ್ತಿರುವುದು ಇದೇ. ಇಡಿಯ ವಿಶ್ವವೇ ಭಯಪಡುವಂತೆ ಇರಾನ್ನಲ್ಲಿ ಭಾರೀ ದೊಡ್ಡದಾದ ಸಂಘರ್ಷ ಕಳೆದ ಫೆಬ್ರವರಿ 28ರಿಂದ ಶುರುವಾಗಿದೆ. ಒಂದು ಕಡೆಯಿಂದ ಇಸ್ರೇಲ್, ಇನ್ನೊಂದು ಕಡೆಯಿಂದ ಅಮೆರಿಕ ನಿರಂತರ ದಾಳಿ ಮಾಡುತ್ತಿದ್ದರೆ ಒಳಮಗ್ಗುಲಿನಲ್ಲಿ ಇರಾನಿನ ಮಹಿಳೆಯರೇ ತಮ್ಮ ಮೇಲಿನ ದಬ್ಬಾಳಿಕೆ ವಿರುದ್ಧ ದಂಗೆ ಎದ್ದಿದ್ದಾರೆ. ಈ ದಂಗೆಗೆ ಕಾರಣವೇ ಅಹೂ ದರಾಯೈ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇಡೀ ಜಗತ್ತು ಇದೀಗ ಇರಾನ್ ಕಡೆ ನೋಡಲು ಈ ಹುಡುಗಿಯೇ ಕಾರಣ ಎಂದು ಸೋಶಿಯಲ್ ಮೀಡಿಯಾ ಅಬ್ಬರಿಸುತ್ತಿದೆ. ಅಂದು ಈ ಹುಡುಗಿ ನಡೆಸಿದ ಹೋರಾಟದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ 2024 ನವೆಂಬರ್ 3ರಂದು ನಡೆದ ಘಟನೆಯಾದರೂ ಏನು? ಟೆಹ್ರಾನಿನ ರಸ್ತೆಯ ಮಧ್ಯದಲ್ಲಿ ಈ ಅಹೂ ದರಾಯೈ ಮಾಡಿದ್ದಾದರೂ ಏನು? ಇಂದು ಇರಾನ್ ಈ ಸ್ಥಿತಿಗೆ ಬರಲು ಈ ಮಹಿಳೆ ಕಾರಣವೇ ಎಂಬೆಲ್ಲ ಪ್ರಶ್ನೆಗಳು ಮೂಡಿದೆ. ಇದೀಗ ಮತ್ತೆ ಈ ಹುಡುಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾಳೆ.


2024 ನವೆಂಬರ್ ಮೂರು, ಭಾನುವಾರದಂದು ಟೆಹ್ರಾನಿನ ರಸ್ತೆಯ ಮಧ್ಯದಲ್ಲಿ ತನ್ನ ಬಟ್ಟೆಗಳನ್ನು ತೆಗೆದು ಬಿಕಿನಿಯಲ್ಲಿ ಪ್ರತಿಭಟಿಸಿದ ಇರಾನಿನ ಅಹೂ ದರಾಯೈ ಎಂಬ ಹುಡುಗಿ ದೇಶದ ಕಟ್ಟುನಿಟ್ಟಾದ ಇಸ್ಲಾಮಿಕ್ ಡ್ರೆಸ್ ಕೋಡ್ ವಿರುದ್ಧ ಪ್ರತಿಭಟನೆ ನಡೆಸಿದ್ದಳು. ಅಹೂ ದರಾಯೈ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದ ನಿಯಮ ಹಾಗೂ ಹಿಂಸೆಯನ್ನು ವಿರೋಧಿಸಲು ತನ್ನ ಬಟ್ಟೆಗಳನ್ನು ತೆಗೆದು ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಳು ಎಂದು ವರದಿಗಳು ಹೇಳುತ್ತವೆ. ಇಲ್ಲಿಂದಲ್ಲೇ ಇರಾನ್ ಪತನಕ್ಕೆ ನಾಂದಿಯಾಯಿತು ಎಂದು ಸೋಷಿಯಲ್ ಮೀಡಿಯಾದಲ್ಲಿ ಮಾತುಗಳು ಜಾಗತಿಕವಾಗಿ ಹುಟ್ಟಿಕೊಂಡಿವೆ.


ಟೆಹ್ರಾನಿನ ರಸ್ತೆಯ ಮಧ್ಯ ತನ್ನ ಬಟ್ಟೆಗಳು ಎಸೆದು, ಸಾರ್ವಜನಿಕವಾಗಿ ಸರ್ಕಾರ ಹಾಗೂ ಇಸ್ಲಾಮಿಕ್ ಆಜಾದ್ ವಿಶ್ವವಿದ್ಯಾಲಯದ ವಿರುದ್ಧ ಪ್ರತಿಭಟನೆ ಮಾಡಿದ್ದನ್ನು ನೋಡಿದ ಅಲ್ಲಿನ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಈಕೆಯನ್ನು ಅತ್ಯಾಚಾರ ಮಾಡಲಾಗಿದೆ ಎಂದು ಸುದ್ದಿಯನ್ನು ಕೂಡ ಕೆಲವು ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಹರಡಿವೆ. ಆದರೆ ಈ ಸುದ್ದಿಯನ್ನು ಅಲ್ಲಿನ ಪೊಲೀಸರು ತಳ್ಳಿಹಾಕಿದ್ದರು. ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ಬಿಬಿಸಿ (BBC) ಮತ್ತು ಅಮ್ನೆಸ್ಟಿ ಇಂಟರ್ನ್ಯಾಷನಲ್ ಪ್ರಕಾರ, ಆಕೆಯನ್ನು ಪೊಲೀಸರು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಿದ್ದಾರೆ ಎಂದು ಹೇಳಲಾಗಿತ್ತು.


ಇರಾನಿನ ನ್ಯಾಯಾಂಗ ಇಲಾಖೆಯ ಇತ್ತೀಚಿನ ಮಾಹಿತಿಯ ಪ್ರಕಾರ, ಆಕೆಗೆ ಯಾವುದೇ ಶಿಕ್ಷೆ ವಿಧಿಸದೆ ಆಕೆಯ ಕುಟುಂಬದ ಜೊತೆ ಕಳುಹಿಸಲಾಗಿದೆ ಎಂದು ಹೇಳಲಾಗಿದೆ. ಆದರೆ, ಇರಾನಿನಂತಹ ದೇಶಗಳಲ್ಲಿ ಇಂತಹ ಮಾಹಿತಿಗಳ ಪಾರದರ್ಶಕತೆಯ ಬಗ್ಗೆ ಮಾನವ ಹಕ್ಕುಗಳ ಹೋರಾಟಗಾರರು ಇಂದಿಗೂ ಸಂಶಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇರಾನಿನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ ಮತ್ತು ಕಟ್ಟುನಿಟ್ಟಿನ ಹಿಜಾಬ್ ನಿಯಮಗಳ ವಿರುದ್ಧದ ಹೋರಾಟಕ್ಕೆ ಅಹೂ ದರಾಯೈ ಈಗ ಒಂದು ಪ್ರಬಲ ಶಕ್ತಿಯಾಗಿದ್ದಾರೆ ಎಂದು ಮಹಿಳೆಯರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಇರಾನಿನಲ್ಲಿ ಇಂದಿಗೂ ಮಹಿಳೆಯರ ಮೇಲಿನ ದಬ್ಬಾಳಿಕೆ ಮತ್ತು ಕಟ್ಟುನಿಟ್ಟಿನ ಹಿಜಾಬ್ ನಿಯಮದ ಬಗ್ಗೆ ಹೋರಾಟಗಳು ನಡೆಯುತ್ತಿವೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಕೂಡ ಅಲ್ಲಿನ ಮಹಿಳೆಯರ ಹಕ್ಕಿಗಾಗಿ ಹಾಗೂ ರಕ್ಷಣೆಗಾಗಿ ಈ ಯುದ್ಧ ಎಂದು ಹೇಳಿದ್ದು ಕೂಡ ಅದನ್ನೇ ಪುಷ್ಟೀಕರಿಸುತ್ತದೆ.


- ಟಿ. ದೇವಿದಾಸ್


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top