ವಂದೇ ಮಾತರಂನ 150 ವರ್ಷಗಳು

Upayuktha
0



- ಟಿ. ದೇವಿದಾಸ್


ಶ್ರೀ ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು 1876ನೆಯ ಇಸವಿಯಲ್ಲಿ ಬರೆದ "ಆನಂದಮಠ" ಎಂಬ ಕಾದಂಬರಿಯಲ್ಲಿ ಬಂದ ದೇಶಭಕ್ತಿ ಗೀತೆಯೇ ಈ ವಂದೇ ಮಾತರಂ. 1857ರ ನವೆಂಬರ್ ಏಳರಂದು ಬಂಗಾಳಿ ಸಾಹಿತ್ಯ ನಿಯತಕಾಲಿಕೆಯಾದ "ಬಂಗದರ್ಶನ್‌"ನಲ್ಲಿ ಈ ಗೀತೆಯನ್ನು ಪ್ರಕಟ ಮಾಡಲಾಗಿತ್ತು. ಹಚ್ಚಹಸುರಿನ ನಡುವಿನ ಮಾರ್ಗದಲ್ಲಿ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಬಂಕಿಮಚಂದ್ರ ಚಟ್ಟೂ ಉಪಾಧ್ಯಾಯರ ಮನಸ್ಸಿನಲ್ಲಿ ಹುಟ್ಟಿದ ಕಾವ್ಯಲಹರಿಯ ಸ್ಪುರಣವಾಗಿ ಮಾತೆಯನ್ನು ಸ್ಮರಿಸುತ್ತ ವಂದಿಸಿದಂತೆ "ವಂದೇ ಮಾತರಂ ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ" ಎಂಬ ಚರಣ ಒಡಮೂಡಿತು. ಬಂಕಿಮರ ಎದೆಯಲ್ಲಿ ಸ್ವಾತಂತ್ರ್ಯಾಗ್ನಿಯ ಕಾವು ತಾಯಿ ಭಾರತಿಯನ್ನು ಬಿಡಿಸಲು ಸದಾ ಹಂಬಲಿಸುತ್ತಿತ್ತು. ಆಕೆಯನ್ನು ದುರ್ಗೆಯ ರೂಪದಲ್ಲಿ ಭಾವಿಸಿ ಮುಂದಿನ ಚರಣಗಳನ್ನು ಅವರು ಬರೆಯುತ್ತಾರೆ. ಅದುವೇ ವಂದೇ ಮಾತರಂ.



ಈ ಗೀತೆಯನ್ನು ಮೊಟ್ಟಮೊದಲು ಹಾಡಿದ್ದು ಖುದ್ದು ರವೀಂದ್ರನಾಥ ಠಾಗೋರ್ ಅವರೇ! ಅದೂ ಅತ್ಯಂತ ಹೆಮ್ಮೆಯಿಂದ. ಅಂದಿನ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಹೋರಾಟದ ಅಂತಃಶ್ಶಕ್ತಿಯಾಗಿ, ಸ್ವಾತಂತ್ರ್ಯಪ್ರಾಪ್ತಿಯ ಉತ್ಕಟ ಸ್ಫೂರ್ತಿಯಾಗಿ ವಂದೇ ಮಾತರಂ ಗೀತೆಯನ್ನು ಉಪಯೋಗಿಸಿಕೊಂಡರು. ಇಡೀ ದೇಶವೇ ಮೈಮರೆತು ಈ ಗೀತೆಯನ್ನು ಧ್ಯಾನಿಸಿತು. ಧೇನಿಸಿತು. ಏರುಸ್ಥಾಯಿಯಲ್ಲಿ ಮೈಮರೆತು ಹಾಡಿತು. ಸಾಹಿತ್ಯದ ಮೂಲಕ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಲು ಬಂಕಿಮರು ಬರೆದ ಆನಂದ ಮಠ ಕಾದಂಬರಿಯಲ್ಲಿ ಸಂತಾಲರು ಎಂಬ ಜನಾಂಗವು ತಮ್ಮ ಮಾತೆಯ ಬಿಡುಗಡೆಗಾಗಿ ಹಾಡಿದ ಹಾಡಿನಂತೆ ವಂದೇ ಮಾತರಂ ಗೀತೆಯನ್ನು ನಾಟಕದಲ್ಲಿ ಬಳಸಲಾಯಿತು. ಪ್ರಾಯಃ ಬಂಕಿಮಚಂದ್ರರಿಗೂ ಇದು ಮುಂದೆ ಒಂದು ಕ್ರಾಂತಿ ಗೀತೆಯಾಗಿ, ರಣಮಂತ್ರವಾಗಿ ಹೊರಹೊಮ್ಮಬಹುದು ಎಂದು ಕನಸಲ್ಲೂ ಅನಿಸಿರಲಿಕ್ಕಿಲ್ಲ.



ಅಂದು 1923ರ ಕಾಕಿನಾಡ ಅಧಿವೇಶನದಲ್ಲಿ ವಿಷ್ಣು ದಿಗಂಬರ ಪಲುಸ್ಕರ್‌ ಎದ್ದುನಿಂತು ಹಾಡುವಾಗ ಮುಸ್ಲಿಂ ನಾಯಕರ ವಿರೋಧ ಹುಟ್ಟಿಕೊಂಡಿತ್ತು. ಅದು, 1937ರ ಸಮಯ. ದೇಶ ವಿಭಜನೆ ಮಾಡುವ ಹುನ್ನಾರದ ರೂವಾರಿಗಳಲ್ಲಿ ಒಬ್ಬರಾದ ಮೊಹಮ್ಮದ್ ಆಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್ ಈ ಗೀತೆಯನ್ನು ಮೊಟ್ಟಮೊದಲು ವಿರೋಧಿಸಿತು. ಸಮಗ್ರ ದೇಶವನ್ನು ಒಂದುಗೂಡಿಸುವ, ಸ್ವಾತಂತ್ರ್ಯಪ್ರಾಪ್ತಿಯ ಹೋರಾಟಕ್ಕೆ ಚೈತನ್ಯ ತುಂಬಿದ ಈ ಗೀತೆ ಭರತಮಾತೆಯನ್ನು ದುರ್ಗೆಗೆ, ಲಕ್ಷ್ಮೀಗೆ ಹೋಲಿಸಿ ಸ್ತುತಿಸುತ್ತದೆ ಎಂಬುದು ವಿರೋಧದ ಹಿಂದಿನ ಆರೋಪ. ಆದರೆ, 1937ರಲ್ಲಿ, ಗಾಂಧಿ ನೇತೃತ್ವದಲ್ಲಿ ಮೌಲಾನಾ ಆಜಾದ್, ನೆಹರೂ, ಸುಭಾಶ್ಚಂದ್ರ ಬೋಸ್, ಠಾಗೋರ್ ಅವರನ್ನು ಒಳಗೊಂಡ ಸಮಿತಿಯ ಶಿಫಾರಸ್ಸಿನ ಮೇರೆಗೆ ವಸಾಹತುಷಾಹಿ ಆಳ್ವಿಕೆಯಿಂದ ಮುಕ್ತಿಪಡೆಯಲು ಈ ಗೀತೆಯನ್ನು ಭಾರತದ ರಾಷ್ಟ್ರಗೀತೆಯಾಗಿ ಸ್ವೀಕಾರ ಮಾಡಲಾಯಿತು. ಆದರೆ, ಓಲೈಕೆ ರಾಜಕೀಯದಿಂದಾಗಿಯೂ, ಠಾಗೋರರ ಸಲಹೆಯ ಮೇರೆಗೂ ಮಾತೃಭೂಮಿಯ ಸೌಂದರ್ಯವನ್ನು ವರ್ಣಿಸುವ ಮೊದಲೆರಡು ಪ್ಯಾರಾವನ್ನು ಮಾತ್ರ ದೇಶಭಕ್ತಿಗೀತೆ ಎಂದು ಸಮಿತಿಯಿಂದ ಘೋಷಿಸಲಾಯಿತು. ಇದಕ್ಕೆ ನೆಹರೂ ಮೂಲಕ ಜಿನ್ನಾ ಅವರು ಗಾಂಧಿ ಮೇಲೆ ಒತ್ತಡ ತಂದರು ಎಂಬ ಆರೋಪವೂ ಇದೆ. ಗೀತೆಯ ವಿಭಜನೆಗೆ ಠಾಗೋರರ ಅಭಿಪ್ರಾಯವನ್ನು ಬೋಸರು ಕೇಳಿದ್ದರು. ಠಾಗೋರರು ಸರಿಯೆಂದು ನಂಬಿದ್ದರು. ಹಾಗಂತ, 1896ರ ಕಾಂಗ್ರೆಸ್ ಅಧಿವೇಶನದಲ್ಲಿ ಈ ಗೀತೆಯನ್ನು ಮೊದಲ ಬಾರಿಗೆ ದೇಶ್ ರಾಗದಲ್ಲಿ ಹಾಡಿದವರೂ ರವೀಂದ್ರನಾಥ ಠಾಗೋರರೇ.



ಈ ಹೊತ್ತಿನವರೆಗೂ ವಂದೇ ಮಾತರಂ ಗೀತೆಯನ್ನು ಪೂರ್ತಿಯಾಗಿ ಎಲ್ಲಿಯೂ ಹಾಡಲಾಗುವುದಿಲ್ಲ ಎಂದರೆ ಅಚ್ಚರಿಪಡಬೇಕಿಲ್ಲ. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರಣಗಳಿಂದಾಗಿ ಮೊದಲು ವಂದೇ ಮಾತರಂ ತುಂಡಾಯ್ತು. ಆಮೇಲೆ ದೇಶವೂ ತುಂಡಾಯ್ತು. ಮಜಾ ಏನೆಂದರೆ, ತುಂಡಾದ ದೇಶಗಳಿಗೆ ನೆಹರೂ ಮತ್ತು ಜಿನ್ನಾ ಮೊಟ್ಟಮೊದಲ ಪ್ರಧಾನಿಗಳಾದರು.



ಜನೆವರಿ 24, 1950 ರಂದು ಸಂವಿಧಾನ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ರಾಜೇಂದ್ರ ಪ್ರಸಾದ್ ಅವರ ಈ ಹೇಳಿಕೆ ಮಹತ್ತ್ವವಾದುದು. ಇದನ್ನು ಈ ವಿಷಯದ ಬಗ್ಗೆ ಅಂತಿಮ ನಿರ್ಧಾರವಾಗಿಯೂ ಅಂಗೀಕರಿಸಲಾಯಿತು: ... ಜನ ಗಣ ಮನ ಎಂದು ಕರೆಯಲ್ಪಡುವ ಪದಗಳು ಮತ್ತು ಸಂಗೀತವನ್ನು ಒಳಗೊಂಡಿರುವ ಸಂಯೋಜನೆಯು ಭಾರತದ ರಾಷ್ಟ್ರಗೀತೆಯಾಗಿದ್ದು, ಸರ್ಕಾರವು ಸಂದರ್ಭ ಬಂದಾಗ ಪದಗಳಲ್ಲಿ ಬದಲಾವಣೆಗಳನ್ನು ಮಾಡಬಹುದು; ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರವಹಿಸಿರುವ "ವಂದೇ ಮಾತರಂ" ಗೀತೆಯನ್ನು ಜನ ಗಣ ಮನದೊಂದಿಗೆ ಸಮಾನವಾಗಿ ಗೌರವಿಸಲಾಗುತ್ತದೆ ಮತ್ತು ಅದರೊಂದಿಗೆ ಸಮಾನ ಸ್ಥಾನಮಾನವನ್ನು ಹೊಂದಿರುತ್ತದೆ. ಇದು ಸದಸ್ಯರನ್ನು ತೃಪ್ತಿಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ.



ಇದನ್ನೇ ಮೊನ್ನೆ ಮೋದಿಯವರು ಹೇಳಿದ್ದು; ದೇಶ ವಿಭಜನೆಗೊಳ್ಳಲು ಜಿನ್ನಾಂಗೆ ಸಾಥ್ ಕೊಟ್ಟದ್ದು ನೆಹರೂ ಅಂತ.  ವಂದೇ ಮಾತರಂ ವಿಭಜನೆಯೇ ದೇಶ ವಿಭಜನೆಗೆ ಬೀಜ ಬಿತ್ತಿತು ಎಂದ ಮೋದಿಯ ಮಾತಲ್ಲಿ ಅಸತ್ಯವಂತೂ ಇಲ್ಲವೇ ಇಲ್ಲ! ಆದರೆ, ನೆಹರೂ ಕುಟುಂಬದ ನಾಲ್ಕನೆಯ ತಲೆಮಾರು ಮೋದಿಗೇ ಬುದ್ಧಿವಾದವನ್ನು ಹೇಳುವಂತಿದೆ. ಯಾರ್ಯಾರಿಗೆ ಯಾವಾಗ ಬುದ್ಧಿ ಬರುತ್ತದೋ! ಯಾವಾಗ ಕೆಡುತ್ತದೋ! ದೇವರೇ ಬಲ್ಲ. ಇರಲಿಬಿಡಿ, ಇನ್ನೂ ಕಾಲ ಮಿಂಚಿಲ್ಲ.


ಬದುಕುವುದಕ್ಕೆ ಭಾರತದ ನೆಲ, ಗಾಳಿ, ನೀರು, ಸಂಪತ್ತು ಬೇಕು. ನಮ್ಮ ಇರವಿಗೆ ಅನುಕೂಲಕರ ಅಂತಾದರೆ ಸಂವಿಧಾನವೂ ಇರಲಿ. ಕಾಯ್ದೆ ಕಾನೂನುಗಳೂ ಇರಲಿ ಎನ್ನುವವರು ಜಾತಿ ಮತ ಪಂಥ ಧರ್ಮ ಎಲ್ಲ ಬಗೆಯ ತುಷ್ಟೀಕರಣದ ಹೊಲಸು ರಾಜಕೀಯದಿಂದ ಹೊರಬಂದು, ಈ ನೆಲವನ್ನು ತಾಯಿ ಸ್ವರೂಪದಲ್ಲಿ ಕಂಡು ಆರಾಧಿಸುವ ವಂದೇ ಮಾತರಂ ಗೀತೆಯನ್ನು ನಿತ್ಯವೂ ಏರುದನಿಯಲ್ಲಿ ಪಠಿಸಬೇಕಿದೆ. ಆಗ ಮಾತ್ರ ಭಾರತ ನಿಜವಾದ ಜಾತ್ಯತೀತ ರಾಷ್ಟ್ರ ಎನಿಸುತ್ತದೆ.



ವಂದೇ ಮಾತರಂ ಗೀತೆಯ ಪೂರ್ಣರೂಪವಿದು:


ವಂದೇಮಾತರಂ


ಸುಜಲಾಂ ಸುಫಲಾಂ ಮಲಯಜ ಶೀತಲಾಂ ಸಸ್ಯ ಶ್ಯಾಮಲಾಂ ಮಾತರಂ ॥ವಂದೇ॥


ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ

ಪುಲ್ಲಕುಸುಮಿತ ದ್ರುಮದಲ ಶೋಭಿನೀಂ ಸುಹಾಸಿನೀಂ ಸುಮಧುರ ಭಾಷಿಣೀಂ ಸುಖದಾಂ ವರದಾಂ ಮಾತರಂ ॥ ವಂದೇ ॥


ಕೋಟಿಕೋಟಿ ಕಂಠ ಕಲಕಲ ನಿನಾದ-ಕರಾಲೇ

ಕೋಟಿ ಕೋಟಿ ಭುಜೈರ್ಧೃತ-ಖರ-ಕರವಾಲೇ

ಕೇ ಬಲೆ ಮಾ ತುಮಿ ಅಬಲೇ

ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ-ವಾರಿಣೀಂ ಮಾತರಂ ॥ವಂದೇ॥


ತುಮಿ ವಿದ್ಯಾ ತುಮಿ ಧರ್ಮ


ತುಮಿ ಹೃದಿ ತುಮಿ ಮರ್ಮ

ತ್ವಂ ಹಿ ಪ್ರಾಣಾಃ ಶರೀರೇ

ಬಾಹು ತೇ ತುಮಿ ಮಾ ಶಕ್ತಿ

ಹೃದಯೇ ತುಮಿ ಮಾ ಭಕ್ತಿ

ತೋ ಮಾರಯಿ ಪ್ರತಿಮಾ ಗಡಿ ಮಂದಿರೇ, ಮಂದಿರೇ ॥ ವಂದೇ ॥


ತ್ವಂ ಹಿ ದುರ್ಗಾ ದಶ-ಪ್ರಹರಣ-ಧಾರಿಣೀ

ಕಮಲಾ ಕಮಲದಲ ವಿಹಾರಿಣೀ

ವಾಣೀ ವಿದ್ಯಾದಾಯಿನೀ

ನಮಾಮಿ ತ್ವಾಂ ನಮಾಮಿ ಕಮಲಾಂ


ಅಮಲಾಂ ಅತುಲಾಂ

ಸುಜಲಾಂ ಸುಫಲಾಂ ಮಾತರಮ್ ॥ ವಂದೇ ॥


ಶ್ಯಾಮಲಾಂ ಸರಲಾಂ


ಸುಸ್ಮಿತಾಂ ಸ ಭೂಷಿತಾಂ

ಧರಣೀಂ ಭರಣೀಂ ಮಾತರಂ


ವಂದೇಮಾತರಂ ವಂದೇಮಾತರಂ ವಂದೇಮಾತರಂ


ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top