ಉಜಿರೆ: ಜೀವನದಲ್ಲಿ ಸಾರ್ಥಕ್ಯ ಭಾವವನ್ನು ಮನುಷ್ಯತ್ವ ಹಾಗೂ ಆತ್ಮೋನ್ನತಿ ಮೂಲಕ ಕಂಡುಕೊಳ್ಳಬಹುದು ಎಂದು ಮಂಗಳೂರಿನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಶನಿವಾರ ಸಂಜೆ ಸುದರ್ಶನ ಸಭಾಭವನದಲ್ಲಿ ಐದನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು. "ಅಂಧಕಾರದ ಪ್ರಜ್ಞೆಯಿಂದ ಇರುವಂತಹ ಅಹಂ ಪ್ರಜ್ಞೆಯ ಭಾವದ ಕಾರಣ ಮನುಷ್ಯ ತನ್ನ ತನವನ್ನು ಮರೆತುಕೊಂಡು ಡಾಂಭಿಕ ಬದುಕನ್ನು ನಡೆಸುತ್ತಿದ್ದಾನೆ. ಆದ್ದರಿಂದ ನಿಜ ಜೀವನವೇ ಬೇರೆ ಎಂದು ಸಾರುವುದಕ್ಕೆ ಧಾರ್ಮಿಕ ಪರಂಪರೆಯಲ್ಲಿ ಊರಿಗೊಂದು ದೇವಾಲಯವಿದ್ದರೆ ದೇವರಿಗೆ ಹೃದಯಸ್ತಂಭವಿದ್ದ ಹಾಗೆ. ಮನೆಗೆ ದೇವರ ಕೋಣೆ ಹೃದಯಸ್ತಂಭವಿದ್ದಂತೆ. ಮನುಷ್ಯನ ಶರೀರಕ್ಕೂ ಹೃದಯಸ್ತಂಭವಿದೆ. ಪರಂಪರೆಯೊಳಗೆ ಪ್ರಕೃತಿ ಆರಾಧನೆಗಳಿವೆ. ಒಂದು ಶಕ್ತಿಯನ್ನು ನಾನಾ ರೂಪದಲ್ಲಿ ಉಪಾಸನೆ ಮಾಡುವಂತಹ ಧಾರ್ಮಿಕ ಚೌಕಟ್ಟನ್ನು ಸನಾತನ ಪರಂಪರೆ ಹಾಕಿಕೊಟ್ಟಿದೆ. ಈ ಪರಂಪರೆಯಲ್ಲಿ ದೇವರು ಎಲ್ಲಾ ಕಡೆಯೂ ನೆಲೆಸಿದ್ದಾನೆ ಎಂದು ಹೇಳುತ್ತೇವೆ. ನಮ್ಮಲ್ಲಿರುವಂತಹ ದೇವರನ್ನು ನಾವು ಕಾಣುವುದಕ್ಕೆ ಕ್ರಮವಿದೆ. ನಮ್ಮ ಅರಿಷಡ್ವರ್ಗಗಳನ್ನು ತ್ಯಜಿಸಬೇಕು. ಪಂಚೇಂದ್ರಿಯಗಳನ್ನು ಹಾಗೂ ಸಕಲೇಂದ್ರಿಯಗಳನ್ನು ಅಂತರ್ಮುಖಿಯಾಗಿ ತೆಗೆದುಕೊಳ್ಳಬೇಕು. ಆಗ ಆಂತರ್ಯದಲ್ಲಿ ಬೆಳಗುತ್ತಿರುವ ಜ್ಯೋತಿ ನಮಗೆ ತಿಳಿಯುತ್ತದೆ ಮತ್ತು ನಾವು ಯಾರೆಂಬುದು ಅರಿವಾಗುತ್ತದೆ. ಬದುಕಿನ ಯಥಾರ್ಥ ಜ್ಞಾನವನ್ನು ತಿಳಿಸುವಂತಹ ಬ್ರಹ್ಮಕಲಶೋತ್ಸವಗಳು ದಕ್ಷಿಣ ಕನ್ನಡದಲ್ಲಿ ವೈಶಿಷ್ಟ್ಯಪೂರ್ಣವಾಗಿ ನಡೆಯುತ್ತಿವೆ. ಈ ಕ್ಷೇತ್ರಕ್ಕೆ ಬಂದು ಪುಣ್ಯವನ್ನು ಸಂಪಾದಿಸಿಕೊಂಡು ಹೋಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಭ್ಯಾಗತರಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿ ಮಾತನಾಡಿದರು. ಪ್ರಕೃತಿಯಲ್ಲಿರುವ ಎಲ್ಲಾ ವಸ್ತುಗಳನ್ನು ದೇವರಾಗಿ ಕಾಣಲಾಗುತ್ತದೆ. ಬ್ರಹ್ಮಕಲಶೋತ್ಸವ ಕೇವಲ ಕಣ್ಣಿಗೆ ಜಾತ್ರೆಯಲ್ಲ, ಬದಲಿಗೆ ಸಂಸ್ಕøತಿ, ಶ್ರದ್ಧೆ, ಭಕ್ತಿ ಹಾಗೂ ಮನಸ್ಸನ್ನು ಶುದ್ಧೀಕರಿಸುವ ಪವಿತ್ರ ಕ್ಷಣ. ದೇವರೆಂದರೆ ಕೇವಲ ಕಲ್ಲು ಬಂಡೆ ಮಾತ್ರವಲ್ಲ, ನಮ್ಮ ಸಂಸ್ಕೃತಿಯನ್ನು ಉಳಿಸುವಂತಹ ಕೇಂದ್ರಬಿಂದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಳ್ತಂಗಡಿಯ ವಕೀಲರಾದ ಬಿ.ಕೆ. ಧನಂಜಯ ರಾವ್ ಮಾತನಾಡಿದರು. ಧಾರ್ಮಿಕ ಆಚರಣೆಯಾದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ 12 ವರ್ಷಗಳಿಗೊಮ್ಮೆ ಏರ್ಪಡುತ್ತದೆ. ಶ್ರದ್ಧಾ ಕೇಂದ್ರವನ್ನು ಪುನರುತ್ಥಾನಗೊಳಿಸಿ ಎಲ್ಲರೂ ಬ್ರಹ್ಮಕಲಶದ ಭಕ್ತಿ ಪುಳಕದಲ್ಲಿ ಮಿಂದೇಳುತ್ತಾರೆ. ಇದರ ಹಿಂದೆ ಇಟ್ಟಿರುವಂತಹ ಸತ್ಯದ ಅರಿವನ್ನು ನಾವು ತಿಳಿದುಕೊಳ್ಳಬೇಕಾಗಿದೆ. ನಾವೆಲ್ಲರೂ ದೇವರಲ್ಲಿ ನಂಬಿಕೆ ಇಟ್ಟಿರುವುದರಿಂದ ನಮ್ಮ ಆತ್ಮದಲ್ಲಿ ದೇವರಿದ್ದಾನೆ, ನಮ್ಮ ಆತ್ಮ ಜಾಗೃತಿಯಾಗಬೇಕು. ಬದುಕಿದ್ದಾಗ ನಾವು ಹೇಗೆ ಬದುಕಿದ್ದೇವೆ ಎಂಬುದು ಮುಖ್ಯ. ತತ್ವ, ಆದರ್ಶ ಹಾಗೂ ನಿಯಮಗಳಿಂದ ಬದುಕಿದರೆ ನಮ್ಮ ದೇಹ ನಷ್ಟವಾದ ನಂತರವೂ ಶಾಶ್ವತವಾದ ಸ್ಥಾನವನ್ನು ಪಡೆಯುತ್ತದೆ ಎಂದು ವಿಜಯರಾಘವ ಪಡ್ಡೆಟ್ನಾಯರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅದರ ಪ್ರತೀಕವೇ ಈ ವಿಜಯ ಗೋಪುರ ನಮ್ಮೆಲ್ಲರ ಮುಂದೆ ಹೆಮ್ಮೆಯಾಗಿ ನಿಂತಿದೆ ಎಂದು ಹೇಳಿದರು.
ಎಸ್ ಡಿ ಎಮ್ ಶಿಕ್ಷಣ ಸಂಸ್ಥೆಯ ಐಟಿ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರಣ್ ವರ್ಮ ಮಾತನಾಡಿದರು. ಇತ್ತೀಚೆಗೆ ವಿಜಯ ಗೋಪುರ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಪೂಜ್ಯ ಖಾವಂದರು ಬ್ರಹ್ಮಕಲಶೋತ್ಸವದಿಂದ ಗ್ರಾಮದಲ್ಲಿ ಧಾರ್ಮಿಕತೆ ಹೆಚ್ಚಾಗುತ್ತದೆ ಎಂದು ಭಾಷಣದಲ್ಲಿ ಹೇಳಿದ್ದರು. ಅವರ ಮಾತನ್ನು ನಾವು ಆಳವಾಗಿ ಯೋಚಿಸಿದರೆ ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ ಧಾರ್ಮಿಕತೆಯನ್ನು ಹೆಚ್ಚಿಸುತ್ತವೆ. ಏಕೆಂದರೆ ಅತ್ಯಂತ ವೇಗದಲ್ಲಿ ಬದಲಾಗುತ್ತಿರುವ ಪ್ರಪಂಚದಲ್ಲಿ ಹೊಸ ತಂತ್ರಜ್ಞಾನಗಳು ಮೂಡುತ್ತಿವೆ. ಮನುಷ್ಯ ದಿನಪೂರ್ತಿ ಕಾರ್ಯನಿರತನಾಗಿರುತ್ತಾನೆ. ಇಂತಹ ಸಂದರ್ಭದಲ್ಲಿ ಮನುಷ್ಯ ತನ್ನ ಮೂಲವನ್ನು ಮರೆತುಬಿಡುತ್ತಾನೆ. ಧರ್ಮ ಯಾವಾಗಲೂ ನಮ್ಮ ಅಂತರಂಗದಲ್ಲಿ ಇರಬೇಕು ಜೊತೆಗೆ ನಮ್ಮ ನಡತೆಯಲ್ಲಿ ಧರ್ಮವನ್ನು ಕಾಣಬೇಕು. ಧರ್ಮ ಹೆಚ್ಚಾಗಬೇಕೆಂದರೆ ಬ್ರಹ್ಮಕಲಶೋತ್ಸವ ಅಗತ್ಯ" ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಗಳನ್ನಾಡಿದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕೆ. ಪ್ರತಾಪ್ ಸಿಂಹ ನಾಯಕ್, "ಆಧ್ಯಾತ್ಮಿಕ ಪರಂಪರೆಯ ಈ ಭೂಮಿಯಲ್ಲಿ ನಮಗೆ ತಿಳಿಯದ ಹಾಗೆ ದೇವರು ಬೇರೆ ಬೇರೆ ರೀತಿಯಲ್ಲಿ ಸೂಚನೆಗಳನ್ನು ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಉಜಿರೆಯ ಜನ ಇಷ್ಟು ದೊಡ್ಡ ಭಕ್ತ ಸಮೂಹವನ್ನು ಕಂಡಿರಲಿಲ್ಲ. ಅತ್ಯಂತ ಸಂಭ್ರಮದಲ್ಲಿ ಭೂಮಿಯ ಒಡೆಯ ಜನಾರ್ದನ ಸ್ವಾಮಿಯನ್ನು ಭಕ್ತಿ ಭಾವದಲ್ಲಿ ಸ್ವಾಗತಿಸಿರುವುದು ನಮಗೆಲ್ಲರಿಗೂ ಆನಂದದ ಕ್ಷಣ" ಎಂದರು.
ಈ ಸಂದರ್ಭದಲ್ಲಿ ಶಶಿಧರ್ ಶೆಟ್ಟಿ ಬರೋಡ ನಿರ್ಮಾಣದ ಶ್ರೀ ಜನಾರ್ದನ ಸ್ವಾಮಿಯ ಕುರಿತು ರಚಿತವಾದ "ಉಜಿರೆಯೊಡೆಯ" ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು. ಪಾಶ್ರ್ವನಾಥ ಜೈನ್ ಕಕ್ಯಪದವು ಸಾಹಿತ್ಯ ಮತ್ತು ರಾಗ ಕಲ್ಪನೆ ಮಾಡಿದ್ದು, ಝೀ ಕನ್ನಡ ಸರಿಗಮಪ ಖ್ಯಾತಿಯ ಕ್ಷಿತಿ ರೈ ಧರ್ಮಸ್ಥಳ ಹಾಗೂ ವಿಜಯ್ ಶೆಟ್ಟಿ ಮೂಡುಬೆಳ್ಳೆ ಗಾಯನ, ಸಂದೀಪ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿದೆ. ಜೊತೆಗೆ ತುಳು ಭಾಷೆಯಲ್ಲಿ ಪ್ರತಾಪ್ ಸಿಂಹ ನಾಯಕ್ ನಿರ್ಮಾಣದ, ಸಂತೋಷ್ ಆಚಾರ್ಯ ಹಾಗೂ ವತ್ಸಲ ಸುರೇಶ್ ಗಾಯನದ "ನಂದಾದೀಪ" ಧ್ವನಿ ಸುರುಳಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಜಿರೆಯ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಪ್ರತಾಪ್ ಸಿಂಹ ನಾಯಕ್ ಸ್ವಾಮೀಜಿಯವರಿಗೆ ಗೌರವ ಕಾಣಿಕೆ ಸಮರ್ಪಿಸಿದರು, ಜೊತೆಗೆ ವೇದಿಕೆಯಲ್ಲಿ ಆಸೀನರಾದಂತಹ ಅತಿಥಿಗಳಿಗೆ ಗೌರವ ಕಾಣಿಕೆ ನೀಡಲಾಯಿತು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರು ನವಶಕ್ತಿ ಬರೋಡ ಶಶಿಧರ ಶೆಟ್ಟಿ, ಬೆಳ್ತಂಗಡಿ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ನವೀನ್ ಕುಮಾರ್ ಜೈನ್, ಮಹಿಳಾ ವಿವಿಧೋದ್ದೇಶ ಸಂಘದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ದೇವಪ್ಪ ಗೌಡ, ರಂಜನ್ ಗೌಡ ಶ್ರೀ ಕಾಲಭೈರವೇಶ್ವರ ಕ್ರೆಡಿಟ್ ಕೋಪರೇಟಿವ್ ಸೊಸೈಟಿ, ರಾಜ್ಯ ಪತ್ರಕರ್ತ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀ ಮಾರಿಕಾಂಬ ಭಜನಾ ಮಂಡಳಿ ಪ್ರಾರ್ಥನೆ ನೆರವೇರಿಸಿದರು. ರಾಜಗೋಪುರ ನಿರ್ಮಾಣ ಸಮಿತಿಯ ಕಾರ್ಯದರ್ಶಿಗಳಾದ ರವೀಂದ್ರ ಶೆಟ್ಟಿ ಸುರಭಿ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಶಿವಪ್ರಸಾದ್ ಸೂರ್ಯ ವಂದಿಸಿದರು. ಉಜಿರೆಯ ಎಸ್ ಡಿ ಎಮ್ ಕಾಲೇಜಿನ ಉಪನ್ಯಾಸಕರಾದ ದೀಕ್ಷಿತ್ ರೈ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


