ಸಾಗರ: ಹವಿಗನ್ನಡ ಭಾಷೆಯ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ರಾಜ್ಯ ಸರ್ಕಾರವು “ಹವ್ಯಕ ಭಾಷಾ ಅಕಾಡೆಮಿ”ಯನ್ನು ಸ್ಥಾಪಿಸಲು ಕೈಗೊಂಡಿರುವ ನಿರ್ಧಾರವನ್ನು ಶ್ರೀರಾಮಚಂದ್ರಾಪುರ ಮಠವು ಸ್ವಾಗತಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.
ಭಾಷೆ ಮತ್ತು ಸಂಸ್ಕೃತಿಗೆ ಅವಿನಾಭಾವ ಸಂಬಂಧವಿದ್ದು, ಭಾಷೆಯನ್ನು ಉಳಿಸಿ ಬೆಳೆಸುವ ಮೂಲಕ ಸಂಸ್ಕೃತಿಯನ್ನೂ ಸಂರಕ್ಷಿಸಬಹುದಾಗಿದೆ ಎಂದು ಶ್ರೀಮಠ ತಿಳಿಸಿದೆ. ಪ್ರಾಂತ್ಯವಾರು ವೈವಿಧ್ಯತೆ ಮತ್ತು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಹವಿಗನ್ನಡದ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಈ ಕ್ರಮ ಪ್ರಶಂಸನೀಯವಾಗಿದೆ ಎಂದು ಮಠ ಅಭಿಪ್ರಾಯಪಟ್ಟಿದೆ.
ಮಾತೃಭಾಷೆಯ ಉಳಿವು ಮತ್ತು ಜಾಗೃತಿಗಾಗಿ ಕಳೆದ ವರ್ಷ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಮ್ಮ ಚಾತುರ್ಮಾಸ್ಯವನ್ನು ‘ಸ್ವಭಾಷಾ ಚಾತುರ್ಮಾಸ್ಯ’ವಾಗಿ ಆಚರಿಸಿ ನಾಡಿನಾದ್ಯಂತ ಭಾಷಾ ಜಾಗೃತಿ ಮೂಡಿಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು ಎಂದು ತಿಳಿಸಿದೆ.
ಸರ್ಕಾರದ ಈ ನಿರ್ಧಾರವು ಹವ್ಯಕ ಭಾಷೆಯ ಉಳಿವು, ಬೆಳವಣಿಗೆ, ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಉತ್ತೇಜನ ನೀಡಲಿದ್ದು, ಅಕಾಡೆಮಿಯ ಮೂಲಕ ಭಾಷೆಯ ಪ್ರಚಾರ ಮತ್ತು ಯುವಪೀಳಿಗೆಗೆ ಅದರ ಮಹತ್ವವನ್ನು ಪರಿಚಯಿಸುವ ಕಾರ್ಯಗಳು ಮತ್ತಷ್ಟು ವೇಗ ಪಡೆಯಲಿವೆ ಎಂಬ ಆಶಯವನ್ನು ಶ್ರೀರಾಮಚಂದ್ರಾಪುರ ಮಠ ವ್ಯಕ್ತಪಡಿಸಿದೆ.
ಹವ್ಯಕ ಭಾಷೆಯ ಉಳಿವು ಮತ್ತು ಅಭಿವೃದ್ಧಿಗೆ ಮುನ್ನುಡಿ ಬರೆದ ಶ್ರೀ ಅಖಿಲ ಹವ್ಯಕ ಮಹಾಸಭೆ ಹಾಗೂ ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೂ ಶ್ರೀಮಠವು ಶುಭಾಶಯಗಳನ್ನು ತಿಳಿಸಿದೆ.
ಉಪಯುಕ್ತ ನ್ಯೂಸ್ ಈಗ ಸ್ವದೇಶಿ ಸಾಮಾಜಿಕ ಜಾಲತಾಣ Arattai ನಲ್ಲಿ... ನಮ್ಮ ಚಾನೆಲ್‌ಗೆ ನೀವೂ ಜಾಯಿನ್ ಆಗಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

